ರೈತರ ದಿಲ್ಲಿ ಚಲೋ ಪ್ರತಿಭಟನೆ ರಾಜಕೀಯ ಸ್ವರೂಪ ಪಡೆಯಲಾರಂಭಿಸಿದೆ!
ರಾಷ್ಟ್ರೀಯ ಲೋಕತಾಂತ್ರಿಕ್ ಪಕ್ಷದ ಅಧ್ಯಕ್ಷ ಹನುಮಾನ್ ಬೆನಿವಾಲ್ ಕೇಂದ್ರ ಸರ್ಕಾರವು ಪ್ರತಿಭಟನೆ ನಡೆಸುತ್ತಿರುವ ರೈತರೊಂದಿಗೆ ಸೂಕ್ತವಾದ ರೀತಿಯಲ್ಲಿ ಮಾತುಕತೆ ನಡೆಸಿ ಜಾರಿಗೊಳಿಸಿರುವ ಕೃಷಿ ಕಾಯಿದೆಗಳನ್ನು ಹಿಂಪಡೆಯದಿದ್ದರೆ, ತಾವು ಸರ್ಕಾರಕ್ಕೆ ನೀಡಿರುವ ಬೆಂಬಲವನ್ನು ಪುನರ್ಪರಿಶೀಲಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಮೂರು ನೂತನ ಕೃಷಿ ಕಾಯಿದೆಗಳ ವಿರುದ್ಧ ಸಿಡಿದೆದ್ದಿರುವ ಉತ್ತರ ಭಾರತದ ರೈತಾಪಿ ವರ್ಗ ದಿಲ್ಲಿ ಚಲೋ ಆಂದೋಲನ ನಡೆಸುತ್ತಿರುವುದರ ಹಿಂದೆ ಯಾವುದೇ ರಾಜಕೀಯ ಪಕ್ಷದ ಕೈವಾಡವಿಲ್ಲವೆಂದು ಸ್ಪಷ್ಟಪಡಿಸಿದರೂ ಅವರ ಈ ಮುಷ್ಕರ ರಾಜಕೀಯ ಬಣ್ಣಪಡೆದುಕೊಳ್ಳುವ ಸೂಚನೆಗಳು ನಿಚ್ಚಳವಾಗಿ ಕಾಣುತ್ತಿವೆ.
ಕೇಂದ್ರದಲ್ಲ್ಲಿ ಎನ್ಡಿಎ ಸರ್ಕಾರಕ್ಕೆ ಬೆಂಬಲ ನೀಡಿರುವ ರಾಷ್ಟ್ರೀಯ ಲೋಕತಾಂತ್ರಿಕ್ ಪಕ್ಷದ ಅಧ್ಯಕ್ಷ ಹನುಮಾನ್ ಬೆನಿವಾಲ್ ಅವರು ಗೃಹ ಸಚಿವ ಅಮಿತ್ ಶಾ ಪ್ರತಿಭಟನೆ ನಡೆಸುತ್ತಿರುವ ರೈತರೊಂದಿಗೆ ಸೂಕ್ತವಾದ ರೀತಿಯಲ್ಲಿ ಮಾತುಕತೆ ನಡೆಸಿ ಜಾರಿಗೊಳಿಸಿರುವ ಕೃಷಿ ಕಾಯಿದೆಗಳನ್ನು ಹಿಂಪಡೆಯದಿದ್ದರೆ, ತಾವು ಸರ್ಕಾರಕ್ಕೆ ನೀಡಿರುವ ಬೆಂಬಲವನ್ನು ಪುನರ್ಪರಿಶೀಲಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ. ಹಾಗೆಯೇ, ಸ್ವಾಮಿನಾಥನ್ ಆಯೋಗದ ಶಿಫಾರಸ್ಸುಗಳನ್ನು ಜಾರಿಗೊಳಿಸಬೇಕೆಂದು ಸಹ ಅವರು ಗೃಹ ಸಚಿವರನ್ನು ಒತ್ತಾಯಿಸಿದ್ದಾರೆ.
ರಾಜಸ್ತಾನದ ನಗೌರ್ ಲೋಕಸಭಾ ಕ್ಷೇತ್ರದಿಂದ ಸಂಸತ್ತಿಗೆ ಆಯ್ಕೆಯಾಗಿರುವ ಬೆನಿವಾಲ್ ಮೊದಲು ಬಿಜೆಪಿಯಲ್ಲಿದ್ದರು. 2018ರಲ್ಲಿ ಪಕ್ಷವನ್ನು ತೊರೆದು ತಮ್ಮದೇ ಆದ ರಾಷ್ಟ್ರೀಯ ಲೋಕತಾಂತ್ರಿಕ್ ಪಕ್ಷವನ್ನು ಸ್ಥಾಪಿಸಿದರಾದರೂ 2019ರ ಸಾರ್ವತ್ರಿಕ ಚುನಾವಣೆಯಲ್ಲಿ ಎನ್ಡಿಎ ಕೂಟವನ್ನು ಸೇರಿದರು. ಅವರ ಪಕ್ಷ ರಾಜಸ್ತಾನದ ವಿಧಾನಸಭಾ ಚುನಾವಣೆಯಲ್ಲಿ 3 ಸ್ಥಾನಗಳನ್ನು ಗೆದ್ದಿದ್ದೂ ಅಲ್ಲದೆ ರಾಷ್ಟ್ರೀಯ ಪಕ್ಷಗಳಿಗೆ ಉತ್ತಮ ಪೈಪೋಟಿಯನ್ನೊಡ್ಡಿತ್ತು.
ನೂತನ ಕೃಷಿ ಕಾಯಿದೆಗಳು ರೈತ-ಸ್ನೇಹಿಯಾಗಿವೆ ಎಂಧು ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಶಾ ಅವರು ಪದೇಪದೆ ಹೇಳುತ್ತಿದ್ದರೂ ಉತ್ತರ ಭಾರತದ ರೈತರು ಅವುಗಳನ್ನು ಹಿಂಪಡೆಯುವವರೆಗೆ ಚಳುವಳಿ ನಿಲ್ಲಿಸುವುದಿಲ್ಲವೆಂದು ಹೇಳಿದ್ದಾರೆ. ದಿಲ್ಲಿ ಚಲೋ ಪ್ರತಿಭಟನೆಯನ್ನು ನವೆಂಬರ್ 27 ರಂದು ಆರಂಭಿಸಿರುವ ರೈತರು ರಾಷ್ಟ್ರ ರಾಜಧಾನಿಯ ಹೊರವಲಯ ಮತ್ತು ಬುರಾರಿ ಮೈದಾನದಲ್ಲಿ ಬೀಡುಬಿಟ್ಟಿದ್ದಾರೆ. ಸದರಿ ಆಂದೋಲನವನ್ನು ಶುರು ಮಾಡಿದ್ದು ಪಂಜಾಬಿನ ರೈತರಾದರೂ ಕ್ರಮೇಣವಾಗಿ ಉತ್ತರ ಭಾರತದ ಇತರ ರಾಜ್ಯಗಳ ರೈತರು ಸಹ ಇದರಲ್ಲಿ ಪಾಲ್ಗೊಳ್ಳಲಾರಂಭಿಸಿದರು.
ರೈತರ ಪ್ರತಿಭಟನೆ ಕುರಿತು ಈಗಾಗಲೆ ಹರಿಯಾಣ ಮತ್ತು ಪಂಜಾಬ್ ಮುಖ್ಯಮಂತ್ರಿಗಳ ನಡುವೆ ವಾಕ್ಸಮರ ಶುರುವಾಗಿದೆ. ಹಲವಾರು ಪ್ರಾದೇಶಿಕ ಪಕ್ಷಗಳು ಸಹ ನೂತನ ಕೃಷಿ ಕಾಯಿದೆಗಳು ರೈತರ ಹಿತಾಸಕ್ತಿಗಳಿಗೆ ಮಾರಕವಾಗಿವೆಯೆಂದು ವಾದಿಸುತ್ತಿವೆ.