ಬೆಂಗಳೂರು: ನಾಳೆಯಿಂದ (ಏಪ್ರಿಲ್ 12) ಎಂದಿನಂತೆ ಬಸ್ ಸಂಚಾರ ಆರಂಭವಾಗುವ ಸಾಧ್ಯತೆಯಿದೆ. ಇಂದು ಸಂಜೆ ವೇಳೆಗೆ ರಾಜ್ಯದ 4 ನಿಗಮಗಳಿಂದ 4 ಸಾವಿರ ಬಸ್ ಸಂಚರಿಸಲಿವೆ. ಮುಷ್ಕರದ ಮಧ್ಯೆ ಹಲವು ನೌಕರರು ಕರ್ತವ್ಯಕ್ಕೆ ಹಾಜರಾಗುತ್ತಿದ್ದು, ದಿನೇ ದಿನೆ ಕರ್ತವ್ಯಕ್ಕೆ ಬರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಸಾರಿಗೆ ಸಿಬ್ಬಂದಿ ಮುಷ್ಕರದ ಮೊದಲು ಮತ್ತು ಎರಡನೇ ದಿನ ಮೊಬೈಲ್ ಸ್ವಿಚ್ ಆಫ್ ಮಾಡಿದ್ದರು. ಆದರೆ ಇಂದು ಎಲ್ಲಾ ನೌಕರರು ಮೊಬೈಲ್ ಆನ್ ಮಾಡಿದ್ದಾರೆ ಎಂದು ಬೆಂಗಳೂರಿನಲ್ಲಿ ಕೆಎಸ್‌ಆರ್‌ಟಿಸಿ ಸಂಚಾರ ವಿಭಾಗದ ಮುಖ್ಯ ವ್ಯವಸ್ಥಾಪಕ ಪ್ರಭಾಕರ್ ರೆಡ್ಡಿ ಹೇಳಿದರು.
ಉತ್ತರ ಕರ್ನಾಟಕದಲ್ಲಿ ಹೆಚ್ಚು ಬಸ್‌ಗಳು ಸಂಚರಿಸುತ್ತಿವೆ. ಇಂದು 2 ಸಾವಿರ ಸಾರಿಗೆ ನೌಕರರು ಕರ್ತವ್ಯಕ್ಕೆ ಹಾಜರಾಗಿದ್ದಾರೆ. ರಾಜ್ಯದಲ್ಲಿ ಶೇ 20ರಷ್ಟು ಬಸ್‌ಗಳು ಕಾರ್ಯಾಚರಣೆ ಮಾಡುತ್ತಿವೆ. ಕರ್ತವ್ಯಕ್ಕೆ ಬಾರದ ಸಾರಿಗೆ ನೌಕರರಿಗೆ ಸಂಬಳ ನೀಡುತ್ತಿಲ್ಲ. ಈಗಲೂ ಸಮಯ ಮೀರಿಲ್ಲ. ಎಲ್ಲ ಸಿಬ್ಬಂದಿಗಳೂ ಕರ್ತವ್ಯ ಬನ್ನಿ ಎಂದು ಅವರು ಮನವಿ ಮಾಡಿಕೊಂಡರು.
ಮುಂದಿನ ಎರಡರಿಂದ ಮೂರು ದಿನಗಳಲ್ಲಿ ಎಲ್ಲವೂ ಯಥಾಸ್ಥಿತಿಗೆ ಬರಲಿದೆ. ಇವತ್ತು ಸಂಜೆಯೊಳಗೆ ಎರಡು ಸಾವಿರ ಬಸ್ ಸಂಚಾರ ಮಾಡಲಿವೆ. ನಾಳೆ 3ರಿಂದ4 ಸಾವಿರ ಬಸ್‌ಗಳು ಸಂಚಾರ ನಡೆಸಲಿವೆ. ನಾಡಿದ್ದು 5 ಸಾವಿರಕ್ಕೂ ಹೆಚ್ಚು ಬಸ್‌ಗಳು ಸಂಚರಿಸಲಿವೆ ಎಂದು ಬೀದರ್ ಜಿಲ್ಲೆಯ ಬಸವಕಲ್ಯಾಣದಲ್ಲಿ ಸಾರಿಗೆ ಸಚಿವ ಲಕ್ಷ್ಮಣ ಸವದಿ ವಿಶ್ವಾಸ ವ್ಯಕ್ತಪಡಿಸಿದರು.
ನಿಜಕ್ಕೂ ಇಂದು ಸಂಚರಿಸಿದ ಬಸ್ಗಳೆಷ್ಟು?
ಮುಷ್ಕರದ ನಡುವೆಯೂ ರಾಜ್ಯದಲ್ಲಿ ಕೆಲ ಬಸ್‌ಗಳ ಸಂಚರಿಸಿವೆ. ಇಂದು ಮಧ್ಯಾಹ್ನ 2 ಗಂಟೆಯವರೆಗೆ 2,110 ಬಸ್‌ಗಳು ಸಂಚಾರ ಮಾಡಿವೆ. 1,000 ಕೆಎಸ್‌ಆರ್‌ಟಿಸಿ, 521 ಎನ್‌ಇಕೆಆರ್‌ಟಿಸಿ, 253 ಬಿಎಂಟಿಸಿ, 336 ಎನ್ಡಬ್ಲ್ಯುಕೆಆರ್ಟಿಸಿ ಬಸ್‌ಗಳು ಸಂಚರಿಸಿವೆ.
ಇರುವ ಮೂರು ನಾಲ್ಕು ವರ್ಷದ ಸೇವಾ ಅವಧಿಯಲ್ಲಿ ವರ್ಗಾವಣೆ ಆಗಲು ಸಾಧ್ಯವಿಲ್ಲ
ಶಿವಮೊಗ್ಗ ವಿಭಾಗದಲ್ಲಿ ಈಗಾಗಲೇ 10 ಕ್ಕೂ ನೌಕರರನ್ನು ವರ್ಗಾವಣೆ ಮಾಡಲಾಗಿದೆ. ಇರುವ ಮೂರು ನಾಲ್ಕು ವರ್ಷದ ಸೇವಾ ಅವಧಿಯಲ್ಲಿ ವರ್ಗಾವಣೆ ಆಗಲು ಸಾಧ್ಯವಿಲ್ಲ. ಈ ಹಿನ್ನೆಲೆಯಲ್ಲಿ ಇಂದಿನಿಂದ ನಾನು ಕರ್ತವ್ಯಕ್ಕೆ ಹಾಜರಾಗಿರುವೆ. ಬೆಳಗ್ಗೆಯಿಂದ 10 ಸಾರಿಗೆ ಬಸ್‌ಗಳ ಸಂಚಾರ ಆಗಿದೆ . ರಾತ್ರಿ ಬೆಂಗಳೂರಿಗೆ 4 ಬಸ್‌ಗಳು ತೆರಳುತ್ತವೆ. ಮುಷ್ಕರ ಐದನೇ ದಿನಕ್ಕೆ ಕಾಲಿಟ್ಟಿದೆ. ಇದರಿಂದ ಪ್ರಯಾಣಿಕರಿಗೆ ಸಾಕಷ್ಟು ಸಮಸ್ಯೆ ಆಗುತ್ತಿದೆ . ಯುಗಾದಿ ಹಬ್ಬ ಕೂಡಾ ಇದೆ. ಹೀಗಾಗಿ ಸಂಸ್ಥೆ ಮತ್ತು ಪ್ರಯಾಣಿಕರ ಹಿತದೃಷ್ಟಿಯಿಂದ ನೌಕರರು ಕರ್ತವ್ಯಕ್ಕೆ ಹಾಜರಾಗುತ್ತಿದ್ದಾರೆ. ನಾಳೆ ಇನ್ನು ಹೆಚ್ಚಿನ ಸಂಖ್ಯೆಯಲ್ಲಿ ಸಾರಿಗೆ ಬಸ್ ಗಳು ಸಂಚರಿಸಲಿವೆ. ಸಿಎಂ ಯಡಿಯೂರಪ್ಪ ಆದಷ್ಟು ಬೇಗನೆ ಸಾರಿಗೆ ಸಂಘಟನೆಯ ಕಾರ್ಮಿಕರ ಮುಖಂಡರ ಜೊತೆ ಮಾತುಕತೆ ಮಾಡಬೇಕಿದೆ. ಈ ಮೂಲಕ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು ಎಂದು ಶಿವಮೊಗ್ಗ ಕೆಎಸ್ ಆರ್ ಟಿಸಿ ಬಸ್ ಚಾಲಕ ಹಾಗೂ ಎಐಟಿಸಿ ಸಂಘನೆಯ ಅಧ್ಯಕ್ಷ ಗುರುರಾಜ್ ಅಡಿಗ್ ತಿಳಿಸಿದರು.
ಬಿಎಂಟಿಸಿ ಬಸ್ಗಳಿಗೆ ಅಡ್ಡವಾಗಿ ಮಲಗಿದ ನೌಕರರು
ಮುಷ್ಕರ ನಡುವೆ ಕೆಲ ನೌಕರರು ಬಸ್ ಸಂಚಾರಕ್ಕೆ ಅನುವು ಮಾಡಿಕೊಡಲು ಪ್ರಯತ್ನಿಸಿದರು. ಇದೇ ವೇಳೆ ಬಸ್ ಕಾರ್ಯಾಚರಣೆಗೆ ವಿರೋಧ ವ್ಯಕ್ತಪಡಿಸಿ ಮುಷ್ಕತನಿರತ ನೌಕರರು ಬಸ್ಸ್ಗಳಿಗೆ ಅಡ್ಡಲಾಗಿ ಮಲಗಿದರು.
ಇದನ್ನೂ ಓದಿ: Ugadi 2021: ಯುಗಾದಿ ಹಬ್ಬ, ಸಾರಿಗೆ ಸಿಬ್ಬಂದಿ ಮುಷ್ಕರ: ಸಾರ್ವಜನಿಕರ ನೆರವಿಗೆ ನೈರುತ್ಯ ರೈಲ್ವೆಯಿಂದ 20 ವಿಶೇಷ ರೈಲು
ನಾಳೆ ತಟ್ಟೆ ಲೋಟ ಬಡಿಯುವುದರ ಮೂಲಕ ರಾಜ್ಯಾದ್ಯಂತ ಚಳವಳಿ ನಡೆಸುತ್ತೇವೆ -ಕೋಡಿಹಳ್ಳಿ ಚಂದ್ರಶೇಖರ್
(From tomorrow KSRTC BMTC buses are starting properly says Transport minister Laxman Savadi)