ಗದಗ, ಆ.10: ಗದಗ(Gadag) ನಗರಸಭೆಯಲ್ಲಿ ಕಂದಾಯ ಅಧಿಕಾರಿಯಾಗಿದ್ದ ಮಹೇಶ್ ಹಡಪದ ಎಂಬುವವರು ಸಸ್ಪೆಂಡ್ ಆಗಿ, ಹದಿನೈದು ದಿನಗಳಲ್ಲಿಯೇ ಮುಖ್ಯಾಧಿಕಾರಿ ಹುದ್ದೆಗೆ ಬಡ್ತಿ ಹೊಂದಿದ ಅಪರೂಪದ ಘಟನೆ ನಡೆದಿದೆ. ಇನ್ನು ಮಹೇಶ್ ಹಡಪದ ಅವರನ್ನು ಕರ್ತವ್ಯ ಲೋಪ ಹಾಗೂ ಬೇಜವಾಬ್ದಾರಿತನ ಎಸಗಿದ ಆರೋಪದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ಜುಲೈ 25 ರಂದು ಅಮಾನತು(Suspension)ಮಾಡಿ ಆದೇಶ ಹೊರಡಿಸಿದ್ದರು. ಇದೀಗ ಕೇವಲ 15 ದಿನಗಳಲ್ಲಿ ಮುಖ್ಯಾಧಿಕಾರಿಯಾಗಿ ಬಡ್ತಿ ಹೊಂದಿದ್ದಾರೆ.
ಇನ್ನು ಮಹೇಶ್ ಅವರು ಸಾರ್ವಜನಿಕರಿಗೆ ಫಾರ್ಮ್ ನಂ.3 ವಿತರಣೆಯಲ್ಲಿ ವಿಳಂಬ ಹಾಗೂ 1063 ನಿವೇಶನಗಳಿಗೆ ನಿರಪೇಕ್ಷಣಾ ಪತ್ರ ಪಡೆಯದೇ ಫಾರ್ಮ್ ನಂ.3 ವಿತರಣೆ ಮಾಡಿದ ಆರೋಪ ಮಹೇಶ್ ಹಡಪದ ಅವರ ಮೇಲಿತ್ತು. ಹೀಗಾಗಿ ನಗರಸಭೆ ಸದಸ್ಯರಾದ ಬರಕತ್ ಅಲಿ ಮುಲ್ಲಾ ಹಾಗೂ ಲಕ್ಷ್ಮಿ ಅನಿಲಕುಮಾರ್ ಸಿದ್ಷಮ್ಮನಹಳ್ಳಿ ದೂರು ನೀಡಿದ ಹಿನ್ನೆಲೆಯಲ್ಲಿ ಅಪರ ಜಿಲ್ಲಾಧಿಕಾರಿ ಅನ್ನಪೂರ್ಣ ಅವರು ತನಿಖೆ ಮಾಡಿ ಜಿಲ್ಲಾಧಿಕಾರಿ ಅವರಿಗೆ ವರದಿ ಸಲ್ಲಿಸಿದ್ದರು.
ಇದನ್ನೂ ಓದಿ:ಚಿತ್ರದುರ್ಗದಲ್ಲಿ ಕಲುಷಿತ ನೀರು ಸೇವಿಸಿ ನಾಲ್ವರು ಸಾವು ಪ್ರಕರಣ; ನಗರಸಭೆ ಎಇಇ, ಜೆಇ, ವಾಲ್ವ್ಮ್ಯಾನ್ ಅಮಾನತು
ಹೌದು, ಅಪರ ಜಿಲ್ಲಾಧಿಕಾರಿಗಳ ವರದಿ ಆಧರಿಸಿ ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್ ಅವರು ಅಮಾನತು ಮಾಡಿ ಆದೇಶ ಹೊರಡಿಸಿದ್ದರು. ಇದೀಗ ಸಸ್ಪೆಂಡ್ ಆಗಿದ್ದ ಹದಿನೈದು ದಿನಗಳಲ್ಲಿ ಸರಕಾರ ಇದೀಗ ಬಾಗಲಕೋಟೆ ಜಿಲ್ಲೆಯ ಕೆರೂರ ಪಟ್ಟಣ ಪಂಚಾಯತಿಗೆ ಮಹೇಶ್ ಹಡಪದ ಅವರನ್ನು ಮುಖ್ಯಾಧಿಕಾರಿಯಾಗಿ ಬಡ್ತಿ ನೀಡಿ, ನಿಯೋಜನೆ ಮಾಡಿ ಆದೇಶ ಹೊರಡಿಸಿದೆ.
ನಿಯಮ ಉಲ್ಲಂಘಿಸಿ ಸಾವಿರಾರು ಫಾರ್ಮ್-3 ವಿತರಣೆ ಮಾಡಿದ್ದಾರೆ. ಈ ಕುರಿತು ಅಪರ ಜಿಲ್ಲಾಧಿಕಾರಿ ಅನ್ನಪೂರ್ಣ ತನಿಖೆ ಮಾಡಿ ವರದಿ ನೀಡಿದ್ದಾರೆ. ಈ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿಯವರು ಅಮಾನತು ಮಾಡಿದ್ದಾರೆ. ಇಂಥಹ ಅಧಿಕಾರಿಗೆ ಸರ್ಕಾರ ಬಡ್ತಿ ನೀಡಿ ವರ್ಗಾವಣೆ ಮಾಡಿದ್ದು, ಎಷ್ಟು ಸರಿ ಎಂದು ಗದಗ-ಬೆಟಗೇರಿ ಅವಳಿ ನಗರದ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜೊತೆಗೆ ಸರ್ಕಾರ ವರ್ಗಾವಣೆ ದಂಧೆಯಲ್ಲಿ ಮುಳುಗಿದೆ ಎನ್ನುವ ವಿಪಕ್ಷಗಳ ಆರೋಪಕ್ಕೆ ಈ ಪ್ರಕರಣ ತಾಜಾ ಉದಾಹರಣೆ ಎಂದು ಗದಗ ಜನರು ಕಿಡಿಕಾರಿದ್ದಾರೆ.
ಇದನ್ನೂ ಓದಿ:ಪತ್ನಿ ಹೆಸರಲ್ಲಿ ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದ ಪತಿ, ಜೈಪುರ ಮೇಯರ್ ಮುನೇಶ್ ಗುರ್ಜರ್ ಅಮಾನತು
ಇನ್ನು ಈ ಕುರಿತು ಗದಗ ನಗರಸಭೆ ಆಯಕ್ತ ರಮೇಶ್ ಸುಣಗಾರ ಅವರನ್ನು ಕೇಳಿದರೆ ‘ಮಹೇಶ್ ಹಡಪದ ಅವರನ್ನು ಜಿಲ್ಲಾಧಿಕಾರಿಗಳು ಇಲಾಖೆ ತನಿಖೆ ಬಾಕಿ ಇಟ್ಟು ಅಮಾನತು ಮಾಡಿದ್ದಾರೆ. ಇನ್ನೂ ಕೂಡ ಅಮಾನತ್ತಿನಲ್ಲಿದ್ದಾರೆ. ಆದರೆ, ವರ್ಗಾವಣೆ, ಬಡ್ತಿ ಬಗ್ಗೆ ಮಾಹಿತಿ ಇಲ್ಲ ಎಂದು ಟಿವಿ9 ಡಿಜಿಟಲ್ಗೆ ಮಾಹಿತಿ ನೀಡಿದ್ದಾರೆ.
ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 2:42 pm, Thu, 10 August 23