ರಮೇಶ್ ಜಾರಕಿಹೊಳಿ-ಬಾಲಚಂದ್ರ ಜಾರಕಿಹೊಳಿ ಅಜ್ಞಾತ ಸ್ಥಳದಲ್ಲಿ ಚರ್ಚೆ; ಗೋಕಾಕ್​ನಲ್ಲಿ ಭುಗಿಲೆದ್ದ ಆಕ್ರೋಶ

|

Updated on: Mar 03, 2021 | 4:13 PM

ಕೆಎಂಎಫ್​ ಅಧ್ಯಕ್ಷರಾಗಿರುವ ಬಾಲಚಂದ್ರ ಜಾರಕಿಹೊಳಿಯನ್ನು ರಮೇಶ್ ಜಾರಕಿಹೊಳಿ ಭೇಟಿ ಮಾಡಿದ್ದಾರೆ. ಅಜ್ಞಾತ ಸ್ಥಳದಲ್ಲಿ ಈ ಭೇಟಿ ನಡೆದಿದೆ.

ರಮೇಶ್ ಜಾರಕಿಹೊಳಿ-ಬಾಲಚಂದ್ರ ಜಾರಕಿಹೊಳಿ ಅಜ್ಞಾತ ಸ್ಥಳದಲ್ಲಿ ಚರ್ಚೆ; ಗೋಕಾಕ್​ನಲ್ಲಿ ಭುಗಿಲೆದ್ದ ಆಕ್ರೋಶ
ಗೋಕಾಕ್​ ಬಂದ್​ಗೆ ಕರೆ ನೀಡುತ್ತಿರುವ ಬೆಂಬಲಿಗರು
Follow us on

ಗೋಕಾಕ್​ (ಮಾ.03): ಕಾಂಗ್ರೆಸ್​-ಜೆಡಿಎಸ್​ ಮೈತ್ರಿ ಸರ್ಕಾರ ಬೀಳಿಸಿ ಬಿಜೆಪಿಯನ್ನು ಅಧಿಕಾರಕ್ಕೆ ತರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ರಮೇಶ್​ ಜಾರಕಿಹೊಳಿ. ಆದರೆ, ಈಗ ಅವರ ಅಶ್ಲೀಲ ಸಿಡಿ ಪ್ರಕರಣ ರಾಜ್ಯ ರಾಜಕಾರಣದಲ್ಲಿ ಭಾರೀ ಕೋಲಾಹಲ ಎಬ್ಬಿಸಿದೆ. ಇದರ ಜತೆಗೆ ನೀರಾವರಿ ಸಚಿವ ಸ್ಥಾನ ಪಟ್ಟ ಪಡೆದ ಒಂದೇ ವರ್ಷಕ್ಕೆ ರಮೇಶ್​ ಜಾರಕಿಹೊಳಿ ರಾಜೀನಾಮೆ ನೀಡುವಂತಾಗಿದೆ. ಬಿಜೆಪಿ ಸರ್ಕಾರಕ್ಕೆ ಸಾರ್ವಜನಿಕರು ಛೀಮಾರಿ ಹಾಕುತ್ತಿದ್ದಾರೆ. ಈ ಬೆಳವಣಿಗೆಯಿಂದ ಕಂಗೆಟ್ಟಿರುವ ರಮೇಶ್​ ಜಾರಕಿಹೊಳಿ, ಅಣ್ಣ ಬಾಲಚಂದ್ರ ಜಾರಕಿಹೊಳಿಯನ್ನು ಭೇಟಿ ಮಾಡಿದ್ದಾರೆ.

ಕೆಎಂಎಫ್​ ಅಧ್ಯಕ್ಷರಾಗಿರುವ ಬಾಲಚಂದ್ರ ಜಾರಕಿಹೊಳಿ ಅವರನ್ನು ರಮೇಶ್ ಜಾರಕಿಹೊಳಿ ಇಂದು ಭೇಟಿ ಮಾಡಿದ್ದಾರೆ. ಅಜ್ಞಾತ ಸ್ಥಳದಲ್ಲಿ ಈ ಭೇಟಿ ನಡೆದಿದೆ.ಮುಂದಿನ ನಡೆ ಕುರಿತು
ಜಾರಕಿಹೊಳಿ ಬ್ರದರ್ಸ್​ ಮಾತುಕತೆ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಮುಂದಿನ ರಾಜಕೀಯ ನಡೆ, ಪ್ರಕರಣ ಯಾವ ರೀತಿ, ಹೇಗೆ ನಿಭಾಯಿಸಬೇಕು, ಸಿಡಿ ರಿಲೀಸ್​ ಹಿಂದೆ ಯಾರ ಕೈವಾಡವಿರಬಹುದು ಎನ್ನುವ ಬಗ್ಗೆ ಚರ್ಚೆ ನಡೆದಿದೆ ಎಂದು ಮೂಲಗಳು ತಿಳಿಸಿವೆ.

ಬೂದಿ ಮುಚ್ಚಿದ ಕೆಂಡದಂತಾದ ಗೋಕಾಕ್​
ರಮೇಶ್​ ಜಾರಕಿಹೊಳಿ ರಾಜೀನಾಮೆ ನೀಡುತ್ತಿದ್ದಂತೆ ಸ್ವಕ್ಷೇತ್ರ ಗೋಕಾಕ್​ ಬೂದಿ ಮುಚ್ಚಿದ ಕೆಂಡದಂತಾಗಿದೆ. ರಮೇಶ್​ ಜಾರಕಿಹೊಳಿ ಅಭಿಮಾನಿಗಳು ಒತ್ತಾಯಪೂರ್ವಕವಾಗಿ ಗೋಕಾಕ್ ಮಾರುಕಟ್ಟೆಯನ್ನು ಬಂದ್‌ ಮಾಡುತ್ತಿದ್ದಾರೆ. ಕೈಯಲ್ಲಿ ಕಲ್ಲು ಹಿಡಿದುಕೊಂಡು ನಿಂತು ಮಾರುಕಟ್ಟೆ ಬಂದ್ ಮಾಡಿಸುತ್ತಿದ್ದಾರೆ. ಟಾಯರ್​ಗಳಿಗೆ ಬೆಂಕಿ ಹಚ್ಚಲಾಗಿದೆ. ಸದ್ಯ, ಬೆಳಗಾವಿ ಜಿಲ್ಲೆಯ ಗೋಕಾಕ್ ನಗರದ ಮಾರುಕಟ್ಟೆ ಬಂದ್ ಮಾಡಲಾಗಿದೆ. ಬೆಂಬಲಿಗರನ್ನು ನಿಭಾಯಿಸಲು ಪೊಲೀಸರಿಂದ ಹರಸಾಹಸ ಪಡುತ್ತಿದ್ದಾರೆ.  ಈ ಎಲ್ಲಾ ಬೆಳವಣಿಗೆಯಿಂದ ಗೋಕಾಕ್ ನಗರ‌ ಬೂದಿಮುಚ್ಚಿದ ಕೆಂಡದಂತಾಗಿದೆ.

ರಮಶ್​ ಜಾರಕಿಹೊಳಿ ರಾಜೀನಾಮೆ
ಅಶ್ಲೀಲ ಸಿಡಿ ವಿಚಾರಕ್ಕೆ ಸಂಬಂಧಿಸಿದಂತೆ ಸರ್ಕಾರಕ್ಕೆ ಮುಜುಗರ ತಪ್ಪಿಸಲು ರಮೇಶ್​ ಜಾರಕಿಹೊಳಿ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ರಾಜೀನಾಮೆ ಪತ್ರವನ್ನು ಸಿಎಂ ಬಿ.ಎಸ್.ಯಡಿಯೂರಪ್ಪಗೆ ಪತ್ರ ರವಾನೆ ಮಾಡಿದ್ದು ತಮ್ಮ ನಿಲುವನ್ನು ತಿಳಿಸಿದ್ದಾರೆ. ಪಂಚ ರಾಜ್ಯಗಳ ಚುನಾವಣೆಯೂ ಸಮೀಪಿಸುತ್ತಿರುವುದರಿಂದ ಪಕ್ಷಕ್ಕೆ ತೊಂದರೆಯಾಗಬಾರದೆಂದು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿದ್ದೇನೆ ಎಂದು ತಿಳಿಸಿರುವ ರಮೇಶ್​ ಜಾರಕಿಹೊಳಿ, ಸಂಪುಟ ಸಭೆಗೂ ಮುನ್ನ ರಾಜೀನಾಮೆ ನೀಡಿದ್ದು ಆರೋಪಮುಕ್ತರಾಗಿ ಬಂದ ಬಳಿಕ ಸಚಿವ ಸ್ಥಾನ ನೀಡಿ ಎಂದು ರಾಜೀನಾಮೆ ಪತ್ರದಲ್ಲಿ ಉಲ್ಲೇಖ ಮಾಡಿರುವುದು ತಿಳಿದುಬಂದಿದೆ.

ಇದನ್ನೂ ಓದಿ: ಸರ್ಕಾರಕ್ಕೆ ಮಾನ, ಮರ್ಯಾದೆ ಇದ್ದರೆ ರಮೇಶ್​ ಜಾರಕಿಹೊಳಿ ರಾಜೀನಾಮೆ ಪಡೆಯಲಿ, ನಾವು ಮೇಟಿಯಿಂದ ರಾಜೀನಾಮೆ ಕೊಡಿಸಿರಲಿಲ್ವಾ? – ಸಿದ್ದರಾಮಯ್ಯ

Published On - 4:11 pm, Wed, 3 March 21