ಹಾಸನ: ಜಿಲ್ಲೆಯ ಬೇಲೂರಿನ ಚನ್ನಕೇಶವಸ್ವಾಮಿ (Belur Chennakeshava Swamy) ರಥೋತ್ಸವದ ಸಂದರ್ಭದಲ್ಲಿ, ರಥದ ಎದುರು ಖುರಾನ್ ಪಠಣ ಮಾಡುವ ವಿಚಾರವಾಗಿ ಸಾಕಷ್ಟು ವಿವಾದ ಸೃಷ್ಟಿಯಾಗಿತ್ತು. ಈಗ ಚನ್ನಕೇಶವಸ್ವಾಮಿ ರಥೋತ್ಸವ (Chariot Festival) ನಡೆದಿದ್ದು, ಬಿಗಿ ಪೊಲೀಸ್ ಭದ್ರತೆ ನಡುವೆ ಸಂಪ್ರದಾಯದಂತೆ ದೇವಸ್ಥಾನದ ಮೆಟ್ಟಿಲಿನ ಸಮೀಪ, ದೊಡ್ಡಮೇದೂರು ಗ್ರಾಮದ ಸಯ್ಯದ್ ಸಜ್ಜಾದ್ ಭಾಷಾ ಖಾದ್ರಿ ಅವರು ಕುರಾನ್ (Quran) ಪಠಣ ಮಾಡಿದ್ದಾರೆ. ಬಳಿಕ ಭಕ್ತರು ಚನ್ನಕೇಶವಸ್ವಾಮಿ ರಥವನ್ನು ಎಳೆದರು. ಆದರೆ ಈ ಬಗ್ಗೆ ಗೊಂದಲ ವ್ಯಕ್ತವಾಗಿದ್ದು, ಕುರಾನ್ ಪಠಣ ಮಾಡಿದ್ದಾರೋ ಅಥವಾ ಇಲ್ಲವೋ ಎಂಬುವುದು ಸ್ಪಷ್ಟವಾಗಿಲ್ಲ. ಈ ಬಾರಿ ರಥದ ಬದಲಿಗೆ ದೇಗುಲದ ಮೆಟ್ಟಿಲು ಮೇಲೆ ನಿಂತು ಖುರಾನ್ ಓದಲು ಅವಕಾಶ ಮಾಡಿಕೊಡಲಾಗಿತ್ತು. ಇನ್ನು ಕುರಾನ್ ಪಠಣವನ್ನು ವಿರೋಧಿಸಿ ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರು ರಥದ ಬಳಿ ಜೈಶ್ರೀರಾಮ್, ಗೋವಿಂದ, ಗೋವಿಂದ ಎಂದು ಘೋಷಣೆ ಕೂಗಿದ ಪ್ರಸಂಗವೂ ನಡೆಯಿತು.
ಈ ವಿಚಾರವಾಗಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ದೇವಾಲಯದ ವ್ಯವಸ್ಥಾಪನಾ ಸಮಿತಿ ಅದ್ಯಕ್ಷ ಡಾ.ನಾರಾಯಣ ಸ್ವಾಮಿ, ಖಾದ್ರಿಯವರು ಖುರಾನ್ ಪಠಣ ಮಾಡಿಲ್ಲ ಕೇವಲ ಪ್ರಾರ್ಥನೆ ಮಾಡಿದ್ದಾರೆ. ಈ ಮೂಲಕ ಯಾವುದೇ ಗೊಂದಲ ಆಗಿಲ್ಲ. ತಾನು ಖುರಾನ್ ಪಠಣ ಮಾಡಿಲ್ಲ ಪ್ರಾರ್ಥನೆ ಮಾಡಿ ಗೌರವ ಸ್ವೀಕಾರ ಮಾಡಿದ್ದೇನೆ ಎಂದು ಖಾಜಿಯವರು ಬರೆದು ಸಹಿಮಾಡಿಕೊಟ್ಟಿದ್ದಾರೆ ಎಂದು ಹೇಳಿದರು.
ಧಾರ್ಮಿಕ ದತ್ತಿ ಆಯುಕ್ತರ ಆದೇಶದಂತೆ ದೇವರಿಗೆ ಶ್ಲೋಕ ಹೇಳಿದ್ದೇನೆ. ನಮ್ಮ ರೀತಿಯಲ್ಲಿ ದೇವರಿಗೆ ಶ್ಲೋಕ ಹೇಳಿ ವಂದನೆ ಸಮರ್ಪಿಸಿದ್ದೇನೆ. ಈ ದಿನ ಕುರಾನ್ ಪಠಣ ಮಾಡಿಲ್ಲ ಎಂದು ತಿಳಿಯಬಯಸುತ್ತೇನೆ. ದೇವಾಲಯದ ವತಿಯಿಂದ ನೀಡಿದ ಮರ್ಯಾದೆಯನ್ನು ಸ್ವೀಕರಿಸುತ್ತೇನೆ. ರಥದ ಎದುರು ಮುಸ್ಲಿಂ ಧಾರ್ಮಿಕ ವಿದಿಯಂತೆ ನಮಿಸಿದ್ದೇನೆ ಎಂದು ಸೈಯದ್ ಬಾಷಾ ಖಾದ್ರಿ ದೇವಾಲಯದ ಲೆಟರ್ ಹೆಡ್ನಲ್ಲಿ ಬರೆದು ಸಹಿ ಮಾಡಿಕೊಟ್ಟಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:44 pm, Tue, 4 April 23