ಬೇಲೂರು ಚನ್ನಕೇಶವಸ್ವಾಮಿ ರಥೋತ್ಸವದ ವೇಳೆ ಕುರಾನ್​ ಪಠಣಕ್ಕೆ ಅವಕಾಶ; ಸರ್ಕಾರದಿಂದ ಸುತ್ತೋಲೆ

ಹಿಂದೂ ಪರ ಸಂಘಟನೆಗಳಿಂದ ತೀವ್ರ ವಿರೋಧ ವ್ಯಕ್ತವಾಗಿರುವುದನ್ನೂ ಲೆಕ್ಕಿಸದೆ ರಾಜ್ಯ ಸರ್ಕಾರ ಬೇಲೂರಿನ ಐತಿಹಾಸಿಕ ಶ್ರೀ ಚನ್ನಕೇಶವ ಸ್ವಾಮಿ ರಥೋತ್ಸವ ವೇಳೆ ಕುರಾನ್ ಪಠಣಕ್ಕೆ ಅನುಮತಿ ನೀಡಿ ಸೋಮವಾರ ಸುತ್ತೋಲೆ ಹೊರಡಿಸಿದೆ.

ಬೇಲೂರು ಚನ್ನಕೇಶವಸ್ವಾಮಿ ರಥೋತ್ಸವದ ವೇಳೆ ಕುರಾನ್​ ಪಠಣಕ್ಕೆ ಅವಕಾಶ; ಸರ್ಕಾರದಿಂದ ಸುತ್ತೋಲೆ
ಬೇಲೂರು ಚೆನ್ನಕೇಶವ ಸ್ವಾಮಿ ದೇವಸ್ಥಾನ
Follow us
|

Updated on: Apr 03, 2023 | 7:51 PM

ಹಾಸನ: ಹಿಂದೂ ಪರ ಸಂಘಟನೆಗಳಿಂದ ತೀವ್ರ ವಿರೋಧ ವ್ಯಕ್ತವಾಗಿರುವುದನ್ನೂ ಲೆಕ್ಕಿಸದೆ ರಾಜ್ಯ ಸರ್ಕಾರ ಬೇಲೂರಿನ ಐತಿಹಾಸಿಕ ಶ್ರೀ ಚನ್ನಕೇಶವ ಸ್ವಾಮಿ  (Beluru Channakeshava Temple) ರಥೋತ್ಸವ ವೇಳೆ ಕುರಾನ್  (Quran)​ ಪಠಣಕ್ಕೆ ಅನುಮತಿ ನೀಡಿ ಸೋಮವಾರ ಸುತ್ತೋಲೆ ಹೊರಡಿಸಿದೆ. ಆದರೆ, ರಥದ ಎದುರು ಕುರಾನ್ ಓದುವ ಬದಲಾಗಿ ಆರು ವರ್ಷಗಳ ಹಿಂದೆ ಆಚರಣೆಯಲ್ಲಿದ್ದಂತೆ ದೇಗುಲದ ಮೆಟ್ಟಿಲಮೇಲೆ ಕುರಾನ್ ಓದಲು ಅವಕಾಶ ಕಲ್ಪಿಸಲಾಗಿದೆ. ಈ ವಿಚಾರವಾಗಿ ‘ಟಿವಿ9’ಗೆ ಜಿಲ್ಲಾಧಿಕಾರಿ ಎಂಎಸ್ ಅರ್ಚನಾ ಮಾಹಿತಿ ನೀಡಿದ್ದಾರೆ. ಕುರಾನ್ ಪಠಣಕ್ಕೆ ಹಿಂದೂ ಪರ ಸಂಘಟನೆಗಳ ವಿರೋಧದ ಬೆನ್ನಲ್ಲೇ ರಾಜ್ಯ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ದರ್ಮಾದಾಯ ದತ್ತಿಗಳ ಇಲಾಖೆ ಹೊಸ ಸುತ್ತೋಲೆಯನ್ನು ಹೊರಡಿಸಿದೆ.

ಸುತ್ತೋಲೆಯಲ್ಲಿ ಏನಿದೆ?

ದೇವಾಲಯದ ಮ್ಯಾನ್ಯುಯಲ್​ನಲ್ಲಿ ದೇಗುಲಕ್ಕೆ ಬ್ರಾಹ್ಮಣರ ಜೊತೆಗೆ ಇತರೆ ವರ್ಗದ ಭಕ್ತರು ಇರುವ ಬಗ್ಗೆ ಉಲ್ಲೇಖವಿದೆ. ರಥೋತ್ಸವ ಕಾಲದಲ್ಲಿ ಮುಸಲ್ಮಾನ್ ಜನಗಳ ಪ್ರತಿನಿದಿಯಾಗಿ ಖಾಜಿ ಸಾಹೇಬರು ಬಂದು ದೇವಸ್ಥಾನದಿಂದ ಕೆಲವು ಮರ್ಯಾದೆ ಸ್ವೀಕಾರ ಮಾಡಿ ದೇವರಿಗೆ ವಂದನೆ ಸಲ್ಲಿಸುವ ವಾಡಿಕೆ ಇದೆ ಎಂಬ ಉಲ್ಲೇಖವಿದೆ. ಬೇಲೂರು ಶ್ರಿ ಚನ್ನಕೇಶವ ದೇವಾಲಯದ ಮ್ಯಾನ್ಯುಯಲ್ ಕೈಪಿಡಿಯಂತೆ ರಥೋತ್ಸವ ದಿನದಂದು ಮೇದೂರಿನ ಖಾಜಿ ಸಾಹೇಬರ ಕುಟುಂಬ ಸದಸ್ಯರು ದೇಗುಲದಿಂದ ಗೌರವ ಕಾಣಿಕೆ ಸ್ವೀಕಾರ ಮಾಡಬೇಕು. ಧಾನ್ಯ ಕಾಣಿಕೆ ಸ್ವೀಕರಿಸಿ ದೇವರಿಗೆ ವಂದಿಸಬೇಕು ಎಂದು ಸುತ್ತೋಲೆಯಲ್ಲಿ ಉಲ್ಲೇಖಿಸಲಾಗಿದೆ.

ಇದನ್ನೂ ಓದಿ: ಬೇಲೂರು ಚನ್ನಕೇಶವಸ್ವಾಮಿ ರಥೋತ್ಸವದ ವೇಳೆ ಕುರಾನ್​ ಪಠಣ; ವಾಸ್ತವಾಂಶ ತಿಳಿಯಲು ದೇಗುಲಕ್ಕೆ ಆಗಮ ಪಂಡಿತರ ತಂಡ ಭೇಟಿ

ಮುಂದುವರೆದು, ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಕಾಯಿದೆ 1997 ಅಧಿನಿಯಮ 2022ರ ಸೆಕ್ಷೆನ್ 58 ಅನ್ನು ಉಲ್ಲೇಖಿಸಲಾಗಿದೆ. ಸೆಕ್ಷೆನ್ 58 ರ ಪ್ರಕಾರ, ದೇವಾಲಯದಲ್ಲಿ ಹಿಂದಿನಿಂದಲೂ ನಡೆದು ಬರುತ್ತಿರುವ ರೂಢಿ ಹಾಗೂ ಪದ್ಧತಿಗಳಲ್ಲಿ ಯಾವುದೇ ವ್ಯತ್ಯಾಸ ಆಗದಂತೆ ಕ್ರಮ ವಹಿಸಿ ಎಂದೂ ಸುತ್ತೋಲೆಯಲ್ಲಿ ಸೂಚಿಸಲಾಗಿದೆ. ಮಾರ್ಚ್ 30ರಂದು ದೇಗುಲಕ್ಕೆ ಭೇಟಿ ನೀಡಿದ್ದ ಹಿರಿಯ ಆಗಮ ಪಂಡಿತರ ವರದಿ ಆಧರಿಸಿ ಸುತ್ತೋಲೆ ಹೊರಡಿಸಲಾಗಿದೆ ಎಂದು ಸರ್ಕಾರ ತಿಳಿಸಿದೆ.

ರಥೋತ್ಸವಕ್ಕೆ ಬಿಗಿ ಭದ್ರತೆ

ಕುರಾನ್ ಪಠಣಕ್ಕೆ ಅವಕಾಶ ನೀಡಿದರೆ ಸುಮ್ಮನಿರುವುದಿಲ್ಲ ಎಂದು ಹಿಂದೂ ಪರ ಸಂಘಟನೆಗಳು ಈಗಾಗಲೇ ಎಚ್ಚರಿಕೆ ನೀಡಿವೆ. ಹೀಗಾಗಿ ದೇಗುಲದ ಆವರಣದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ರಥೋತ್ಸವಕ್ಕೆ ಹೆಚ್ಚಿನ ಭದ್ರತೆ ಕಲ್ಪಿಸಲಾಗಿದೆ.

ನಾಳೆ, ನಾಡಿದ್ದು ರಥೋತ್ಸವ

ಏಪ್ರಿಲ್ 4 ಮತ್ತು 5ರಂದು ಚನ್ನಕೇಶವಸ್ವಾಮಿ ರಥೋತ್ಸವ ನಡೆಯಲಿದೆ. ಪ್ರತಿವರ್ಷದಂತೆ ಈ ವರ್ಷವೂ ರಥೋತ್ಸವಕ್ಕೂ ಮುನ್ನ ಕುರಾನ್ ಪಠಣ ನಡೆಸಿ ನಂತರ ರಥ ಎಳೆಯಲು ಸಿದ್ಧತೆ ನಡೆಸಲಾಗುತ್ತಿತ್ತು. ಆದರೆ, ಇದಕ್ಕೆ ಹಿಂದೂ ಪರ ಸಂಘಟನೆಗಳಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ಹೀಗಾಗಿ ವಾಸ್ತವಾಂಶ ತಿಳಿಯಲು ಆಗಮ ಪಂಡಿತರ ತಂಡವನ್ನು ಮಾರ್ಚ್ 30ರಂದು ದೇವಾಲಯಕ್ಕೆ ಕಳುಹಿಸಲಾಗಿತ್ತು. ಈ ತಂಡವು ದೇವಸ್ಥಾನದ ಅರ್ಚಕರು, ಅಧಿಕಾರಿಗಳು ಹಾಗೂ ವ್ಯವಸ್ಥಾಪನಾ ಸಮಿತಿಯಿಂದ ಮಾಹಿತಿ ಸಂಗ್ರಹ ಮಾಡಿತ್ತು. ಇದನ್ನು ಆಧರಿಸಿ ಇದೀಗ ಸರ್ಕಾರ ಸುತ್ತೋಲೆ ಹೊರಡಿಸಿದೆ.

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ