ಕ್ರೈಸ್ತ ಧರ್ಮಕ್ಕೆ ಬಲವಂತದ ಮತಾಂತರ ಯತ್ನ ಆರೋಪ: ಆರೋಪಿಗಳ ಪ್ರಕರಣ ರದ್ದತಿಗೆ ಹೈಕೋರ್ಟ್ ನಕಾರ
ಕ್ರೈಸ್ತ ಧರ್ಮಕ್ಕೆ ಬಲವಂತದ ಮತಾಂತರಕ್ಕೆ ಯತ್ನಿಸಿದ ಆರೋಪ ಸಂಬಂಧ ನಾಲ್ವರು ಆರೋಪಿಗಳ ಪ್ರಕರಣ ರದ್ದತಿಗೆ ಹೈಕೋರ್ಟ್ ನಿರಾಕಿಸಿದ್ದು, ಪ್ರಕರಣ ರದ್ದು ಕೋರಿದ್ದ ನಾಲ್ವರು ಆರೋಪಿಗಳ ಅರ್ಜಿ ವಜಾಗೊಳಿಸಿದೆ.
ಬೆಂಗಳೂರು: ಕ್ರೈಸ್ತ ಧರ್ಮಕ್ಕೆ ಬಲವಂತದ ಮತಾಂತರಕ್ಕೆ ಯತ್ನಿಸಿದ (Attempts to forcibly convert to Christianity) ಆರೋಪ ಸಂಬಂಧ ತಮ್ಮ ವಿರುದ್ಧ ದಾಖಲಾದ ಪ್ರಕರಣ ರದ್ದು ಪಡಿಸುವಂತೆ ಕೋರಿ ಸಲ್ಲಿಸದ್ದ ನಾಲ್ವರು ಆರೋಪಿಗಳ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ (Karnataka High Court) ವಜಾಗೊಳಿಸಿದೆ. ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿಯಲ್ಲಿ ಹಿಂದೂ ವ್ಯಕ್ತಿಯೊಬ್ಬರ ಮನೆಯಲ್ಲಿ ಬೈಬಲ್ ಕೊಟ್ಟು ಬಲವಂತವಾಗಿ ಮತಾಂತರ ನಡೆಸಲು ಮುಂದಾಗಿದ್ದ ಆರೋಪಿಗಳಾದ ಕೆ.ಜೆ.ಕುಂಜುಮೋನ್, ಲೇನಿ ಕುಂಜುಮೋನ್, ಪಿ.ಜೆ.ಸೈನು, ಮೇರಿ ಕೆ.ಜಾನ್ ಎಂಬವರು ಪ್ರಕರಣ ರದ್ದತಿ ಕೋರಿ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ.ನಟರಾಜನ್ ಅವರಿದ್ದ ಏಕಸದಸ್ಯ ಪೀಠ, ಪ್ರಕರಣ ರದ್ದತಿಗೆ ನಿರಾಕರಿಸಿ ಆರೋಪಿಗಳ ಅರ್ಜಿಯನ್ನು ವಜಾಗೊಳಿಸಿದೆ.
ಉಪ್ಪಿನಂಗಡಿಯಲ್ಲಿ ಹಿಂದೂ ವ್ಯಕ್ತಿಯ ಮನೆಗೆ ಹೋದ ಕೆ.ಜೆ.ಕುಂಜುಮೋನ್, ಲೇನಿ ಕುಂಜುಮೋನ್, ಪಿ.ಜೆ.ಸೈನು, ಮೇರಿ ಕೆ.ಜಾನ್ ಬೈಬಲ್ ಕೊಟ್ಟು ಕ್ರಿಸ್ತನೊಬ್ಬನೇ ದೇವರೆಂದು ಬೋಧಿಸಿ ಹಿಂದೂ ದೇವರನ್ನು ನಂಬದಂತೆ ಒತ್ತಾಯಿಸಿದ್ದರು. ಮತಾಂತರದ ಬಗ್ಗೆ ಪ್ರಶ್ನಿಸಿದಾಗ ಹಲ್ಲೆ ನಡೆಸಿರುವುದಾಗಿ ಆರೋಪಿಸಲಾಗಿತ್ತು. ಘಟನೆ ಸಂಬಂಧ 2011ರಲ್ಲಿ ಪುತ್ತೂರು ತಾಲೂಕಿನ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:51 pm, Fri, 17 February 23