ಹಾಸನ ಜಿಲ್ಲಾ ಕಾರಾಗೃಹದೊಳಗೆ ನಡೆಯುತ್ತೆ ಗಾಂಜಾ ಮಾರಾಟ, ವಿಡಿಯೋ ವೈರಲ್

| Updated By: ಕಿರಣ್ ಹನುಮಂತ್​ ಮಾದಾರ್

Updated on: Aug 20, 2023 | 3:33 PM

ಹಾಸನ ಜಿಲ್ಲಾ ಕಾರಾಗೃಹದ ಮೇಲೆ ಆಗಸ್ಟ್​ 18 ರಾತ್ರಿ 11 ಗಂಟೆ ಸುಮಾರಿನಲ್ಲಿ ಹಾಸನದ ಪೊಲೀಸ್ ಇಲಾಖೆ ವತಿಯಿಂದ ದಿಢೀರ್ ದಾಳಿ ನಡೆಸಲಾಗಿತ್ತು. ಈ ವೇಳೆ ಪರಿಶೀಲನೆ ನಡೆಸಿದಾಗ ಬರೊಬ್ಬರಿ 7 ಸ್ಮಾರ್ಟ್ ಫೋನ್ ಸೇರಿ 18 ಮೊಬೈಲ್​​ಗಳು ಪತ್ತೆಯಾಗಿತ್ತು. ಅಷ್ಟೇ ಅಲ್ಲದೇ ಇದರ ಜೊತೆಗೆ20 ಗ್ರಾಂ ಗಾಂಜಾ ಕೂಡ ಸಿಕ್ಕಿತ್ತು. ಇದೀಗ ಗಾಂಜಾ ಮಾರಾಟದ ವಿಡಿಯೋ ವೈರಲ್ ​ಆಗುತ್ತಿದೆ. ​

ಹಾಸನ, ಆ.20: ಹಿಂಡಲಗಾ, ಶಿವಮೊಗ್ಗ ಜೈಲು ಆಯ್ತು ಇದೀಗ ಹಾಸನ ಜಿಲ್ಲಾ ಜಿಲ್ಲಾ ಕಾರಾಗೃಹದಲ್ಲಿನ (Hassan District Jail) ಅಕ್ರಮ ಬಯಲಾಗಿದೆ. ಹೌದು, ಆಗಸ್ಟ್​ 18ರ ರಾತ್ರಿ ಜೈಲಿನಲ್ಲಿ ಅಕ್ರಮವಾಗಿ ಮೊಬೈಲ್​ ಉಪಯೋಗಿಸಲಾಗುತ್ತಿದೆ ಎಂದು ಪೊಲೀಸರು ಜೈಲಿನ ಮೇಲೆ ದಿಢೀರ್ ದಾಳಿ ಮಾಡಿದ್ದರು. ಈ ವೇಳೆ ಜೈಲಿನಲ್ಲಿ ಫೋನ್​ ಸಮೇತ 20 ಗ್ರಾಂ ಗಾಂಜಾ ಸಿಕ್ಕಿತ್ತು. ಇದು ಪೊಲೀಸರಿಗೆ ಶಾಕ್​ ಆಗಿದ್ದು, ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ಮಾಡುವಂತೆ ಎಸ್ಪಿ ಹರಿರಾಮ್ ಶಂಕರ್ ಖಡಕ್ ಎಚ್ಚರಿಕೆ ನೀಡಿದ್ದರು. ಅದರಂತೆ ಇದೀಗ ಪೊಲೀಸರ ರೇಡ್ ಬೆನ್ನಲ್ಲೇ ಜೈಲಿನ ಕರ್ಮಕಾಂಡದ ವಿಡಿಯೋ ವೈರಲ್ ಆಗಿದೆ.

ಜೈಲಿನೊಳಗೆ ಗಾಂಜಾ, ಚರಸ್ ಮಾರಾಟ ಬಗ್ಗೆ ಕೈದಿಗಳಿಂದ ಮಾಹಿತಿ

ಕಡಿಮೆ ಹಣಕ್ಕೆ ಗಾಂಜಾ ತರಿಸಿಕೊಂಡು, ಜೈಲಿನೊಳಗೆ ದುಬಾರಿ ಬೆಲೆಗೆ ಮಾರಾಟ ಮಾಡಲಾಗುತ್ತಿದೆ. ಈ ಕುರಿತು ಕೈದಿಗಳೇ ಮಾಹಿತಿ ನೀಡಿದ್ದು, ಜೈಲಿನ ಸೆಲ್​ ಒಳಗಿಂದಲೇ ವಿಡಿಯೋ ಮಾಡಿ ತಮ್ಮ ಕುಟುಂಬಸ್ಥರಿಗೆ ರವಾನೆ ಮಾಡಲಾಗಿದೆ. ಹೌದು, ಎರಡು ಸಾವಿರ ರೂ.ಗೆ ಒಂದು ಪಾಕೇಟ್ ಗಾಂಜಾ ತರಿಸಿಕೊಂಡು ಅದನ್ನು 5 ರಿಂದ12 ಸಾವಿರಕ್ಕೆ ಮಾರಾಟ ಮಾಡಿದ ಆರೋಪದ ಜೊತೆಗೆ ಜೈಲು ಸಿಬ್ಬಂದಿ, ಅಧಿಕಾರಿಗಳು ಕೂಡ ಇದರಲ್ಲಿ ಶಾಮೀಲಾಗಿರುವ ಬಗ್ಗೆ ವಿಚಾರಣಾಧೀನ ಖೈದಿಗಳಿಂದ ಗಂಭೀರ ಆರೋಪ ಕೇಳಿಬಂದಿದೆ.

ಇದನ್ನೂ ಓದಿ:ಪರಪ್ಪನ ಅಗ್ರಹಾರ ಜೈಲಿನಲ್ಲಿ ಒಳ ಉಡುಪಿನಲ್ಲಿ ಬಚ್ಚಿಟ್ಟುಕೊಂಡು ಕೈದಿಗೆ ಮೊಬೈಲ್ ನೀಡಲು ಹೋದ ಸಿಬ್ಬಂದಿ ಅರೆಸ್ಟ್

ಅಧಿಕಾರಿಗಳ ಕಣ್ತಪ್ಪಿಸಿ ಗಾಂಜಾ ಮಾರಾಟ ಹಾಗೂ ಮೊಬೈಲ್​ ಬಳಕೆ ಸಾಧ್ಯವೇ

ಇತ್ತೀಚೆಗಷ್ಟೆ ಅಂದರೆ ಜನವರಿ ತಿಂಗಳಲ್ಲಿ ದಾಳಿ ನಡೆಸಿದಾಗ ಒಂದೆರಡು ಕಿಪ್ಯಾಡ್ ಫೋನ್​ಗಳು ಪತ್ತೆಯಾಗಿತ್ತು. ಅದಾದ ಮೇಲೆ ಇದೀಗ ಗಾಂಜಾ ಮಾರಾಟ ದಂಧೆ ಜೈಲಿನಲ್ಲಿಯೇ ನಡೆಯುತ್ತಿದ್ದು, ಪೊಲೀಸರಿಗೆ ಶಾಕ್​ ಆಗಿದೆ. ಇನ್ನು ಜೈಲು ಅಧಿಕಾರಿಗಳ ಕಣ್ಣು ತಪ್ಪಿಸಿ ಆಗಿರುವ ಘಟನೆಯೇ ಅಥವಾ ಜೈಲಿನೊಳಗೆ ಇದ್ದುಕೊಂಡು ಅಲ್ಲಿನ ಸಿಬ್ಬಂದಿಗೆ ಗೊತ್ತೇ ಆಗದಂತೆ ಸ್ಮಾರ್ಟ್ ಫೋನ್ ಬಳಕೆ ಮಾಡಲು ಸಾಧ್ಯವೇ ಎನ್ನುವ ಪ್ರಶ್ನೆ ಮೂಡಿದೆ. ಈ ಎಲ್ಲ ಬೆಳವಣಿಗೆ ಹಿಂದೆ ಜೈಲು ಅಧಿಕಾರಿ ಸಿಬ್ಬಂದಿ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯ ಇರುವುದು ಮೇಲ್ನೋಟಕ್ಕೆ ಖಾತ್ರಿಯಾಗುತ್ತಿದೆ. ಹಾಗಾಗಿಯೇ ಈ ಬಗ್ಗೆ ವಿಚಾರಣೆಯನ್ನು ಗಂಭೀರವಾಗಿ ತೆಗೆದುಕೊಂಡಿದ್ದು, ತಪ್ಪು ಕಂಡರೆ ಅಲ್ಲಿನ ಸಿಬ್ಬಂದಿಗಳ ವಿರುದ್ದ ಕೂಡ ಕೇಸ್ ದಾಖಲಿಸಲಾಗುತ್ತೆ ಎಂದು ಎಸ್ಪಿ ಹರಿರಾಮ್ ಶಂಕರ್ ಖಡಕ್ ಎಚ್ಚರಿಕೆ ನೀಡಿದ್ದರು.

ಮತ್ತಷ್ಟು ರಾಜ್ಯ ಸುದ್ದಿಗಳನ್ನುಓದಲು ಇಲ್ಲಿ ಕ್ಲಿಕ್ ಮಾಡಿ