ಹಾಸನ: ಒಂದ್ಕಡೆ ಕೊರೊನಾ ಅನ್ನೋ ಸಂಕಷ್ಟ. ಲಾಕ್ಡೌನ್ನಿಂದಾಗಿ ತುತ್ತೂಟಕ್ಕೂ ಪರದಾಟ. ಅದೆಷ್ಟೋ ಜನರು ಕಣ್ಣೀರ ಕೂಪಕ್ಕೆ ಬಿದ್ದಿದ್ದಾರೆ. ದುಡಿದು ತಿನ್ನಬೇಕಾದ ಕೈಗಳು ಕಟ್ಟಿ ಹಾಕಿದೆ. ಇಡೀ ದೇಶವೇ ಆರ್ಥಿಕ ಮುಗ್ಗಟ್ಟಿನ ಆಪತ್ತಿಗೆ ಸಿಲುಕಿದೆ. ಇಂತಹ ಸಂಕಷ್ಟದ ಸಮಯದಲ್ಲೂ ವಿಕಲಚೇತನ ಔದಾರ್ಯ ಮೆರೆದಿದ್ದಾನೆ. ಪ್ರಧಾನಿ ಪರಿಹಾರ ನಿಧಿಗೆ ನೆರವು ನೀಡಿ ಒಡೆಯನಾಗಿದ್ದಾನೆ.
ಪ್ರಧಾನಿ ಪರಿಹಾರ ನಿಧಿಗೆ ವಿಕಲಚೇತನ ಧನ ಸಹಾಯ!
ಯೆಸ್.. ಸಹಾಯ ಮಾಡೋಕೆ ಕೋಟಿ ಕೋಟಿ ಹಣವೇ ಬೇಕಿಲ್ಲ. ಲಕ್ಷಾಧಿಪತಿಯೆಂಬ ಹಣೆಪಟ್ಟಿಯೂ ಗಿಟ್ಟಿಸಿಕೊಂಡಿರ್ಬೇಕಿಲ್ಲ. ನೆರವಾಗೋ ನಾಯಕತ್ವ ಇದ್ದರೆ ಸಾಕು. ಕೊಡುವ ಮಸ್ಸಿದ್ದರೆ ಸಾಕು ಅದೆ ದಾರಿದೀಪ. ಎಲ್ಲದಕ್ಕಿಂತ ಮಾದರಿ ಹಾಸನ ಜಿಲ್ಲೆ ದುದ್ದ ಸಮೀಪದ ಕಾರೆಬರೆ ಕಾವಲ್ ಗ್ರಾಮದ ವಿಕಲಚೇತನ ಮಧುವನ್.
ಬಡ ಯುವಕ ಮಧುವನ್ ಹುಟ್ಟುತ್ತಲೇ ವಿಕಲಚೇತನನಾಗಿದ್ದಾನೆ. ಇರೋ ತುಂಡು ಜಮೀನಿನಲ್ಲೇ ಕುಟುಂಬದ ಬಂಡಿ ಸಾಗ್ಬೇಕು. ಆದ್ರೆ ಪ್ರತಿನಿತ್ಯ ಕೊರೊನಾ ಸಂಕಷ್ಟದಿಂದ ಜನರ ನರಳಾಟ, ಕಣ್ಣೀರು, ವಾರಿಯರ್ಸ್ಗಳ ಹೋರಾಟವನ್ನ ಟಿವಿಗಳಲ್ಲಿ ನೋಡಿ, ಪೇಪರ್ನಲ್ಲಿ ಓದುತ್ತಿದ್ದ. ಸಂಕಷ್ಟದಲ್ಲಿರುವವರ ನೆರವಿಗೆ ತಾನೂ ಸಹಾಯ ಮಾಡ್ಬೇಕು ಅಂತ ಮಧುವನ್ ನಿರ್ಧರಿಸಿದ್ದಾನೆ.
ಬಳಿಕ ತನಗೆ ಬರೋ ಅತ್ಯಲ್ಪ ಗೌರವಧನ ಅಂದ್ರೆ, 1 ತಿಂಗಳ ವೇತನವನ್ನ ಪ್ರಧಾನಿ ಮೋದಿ ಪರಿಹಾರ ನೀಧಿಗೆ ನೀಡಿದ್ದಾನೆ. ಮಾಡಿರೋದು ಸಣ್ಣ ಸಹಾಯವಾದ್ರೂ ಎಲ್ಲರಿಗಿಂತ ದೊಡ್ಡವನಾಗಿದ್ದಾನೆ. ಸರ್ಕಾರ ಕೈಗೊಂಡ ತೀರ್ಮಾನ ಕಟ್ಟುನಿಟ್ಟಾಗಿ ಪಾಲಿಸಿ ಎಂದು ಕರೆ ನೀಡಿ, ಕೊರೊನಾ ವಾರಿಯರ್ಸ್ ಕಣ್ಣಲ್ಲಿ ನೀರು ತರಿಸಬೇಡಿ ಅಂತ ಕೈ ಮುಗಿದು ಮನವಿ ಮಾಡಿ ಎಲ್ಲರಿಗೂ ಮಾದರಿಯಾಗಿದ್ದಾನೆ.
ಇನ್ನು, ಕಳೆದ ಒಂದೂವರೆ ತಿಂಗಳಿನಿಂದ ಕೊರೊನಾ ತಂದೊಡ್ಡಿಡೋ ಸಂಕಷ್ಟ. ಬಡವರು ಅವರ ಮಕ್ಕಳ ಪರದಾಟವನ್ನ ಕಂಡು ಮಧುವನ್ ಹೃದಯ ಮಮ್ಮಲ ಮರುಗಿದೆ. ಸ್ಥಳೀಯ ಪೋಸ್ಟ್ಮನ್ 3 ತಿಂಗಳ ಮಸಾಶನದ ಜೊತೆಗೆ ಈತನ ನಿವಾಸಕ್ಕೆ ಆಗಮಿಸಿದ್ರಂತೆ. ಬಳಿಕ 2 ತಿಂಗಳ ಮಾಸಾಶನ ಪಡೆದು ಉಳಿದ 1 ತಿಂಗಳ ಮಾಶಾಸನವನ್ನ ಪ್ರಧಾನಿ ಮೋದಿ ಪರಿಹಾರ ನಿಧಿಗೆ ನೀಡಿದ್ದಾರೆ. ಪೋಸ್ಟ್ಮನ್ ಮೂಲಕ ಹಣ ಸಂದಾಯ ಮಾಡಿಸಿ ಸಂಕಷ್ಟದಲ್ಲಿರೋರಿಗೆ ನೆರವಾಗಿದ್ದಾರೆ.
ಒಟ್ನಲ್ಲಿ, ಕೈ ಕಾಲು ಗಟ್ಟಿ ಇದ್ರೂ ಕೋಟಿ ಕೋಟಿ ಹಣ ಇದ್ರೂ ಸಂಕಷ್ಟದಲ್ಲಿ ನೆರವಾಗೋಕೆ ಕೆಲವ್ರು ಹಿಂದೆ ಮುಂದೆ ನೋಡ್ತಾರೆ. ಕ್ಯಾಮರಾಗೆ ಫೋಸ್ ಕೊಟ್ಟು ಪಬ್ಲಿಸಿಟಿ ಗಿಟ್ಟಿಸಿಕೊಳ್ಳೋರು, ಇದ್ದೂ ಇಲ್ಲದಂತೆ ನಟಿಸೋರೆ ಹೆಚ್ಚು. ಅಂತದ್ರಲ್ಲಿ ಕೊಡೋ ಕೈಗಳೇ ಶ್ರೇಷ್ಟ ಅನ್ನೋದನ್ನ ವಿಕಚೇತನ ಸಾಬೀತು ಮಾಡಿದ್ದಾನೆ. ಕೊರೊನ ವಿರುದ್ಧ ದೇಶವೇ ಒಗ್ಗಟ್ಟಾಗಿ ಹೋರಾಡೋವಾಗ ವಿಕಲಚೇತನನ ನೆರವು ಮಾದರಿಯಾಗಿದೆ.