ಹಾಸನ, ಜು.28: ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ಸುರಿದ ಮಳೆಯಿಂದ ರಸ್ತೆಗಳು ಹದಗೆಟ್ಟಿದ್ದು, ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅದರಂತೆ ಮತ್ತಷ್ಟು ಮಳೆ ಹೆಚ್ಚಾಗುವ ಆತಂಕದಿಂದ ಜಿಲ್ಲೆಯ ಶಾಲೆಗಳಿಗೆ ಇವತ್ತೀನವರೆಗೂ ರಜೆ ಘೋಷಿಸಲಾಗಿತ್ತು. ಆದ್ರೆ, ವಸತಿ ಶಾಲೆಗಳಲ್ಲಿ ನೆಲೆಸಿರುವ ಮಕ್ಕಳಿಗೂ ಮಳೆ ಅವಾಂತರದ ಬಿಸಿ ತಟ್ಟಿದ್ದು, ಹಾಸನ ಜಿಲ್ಲೆಯ ಸಕಲೇಶಪುರ(Sakleshpur) ತಾಲ್ಲೂಕಿನ ಹೆತ್ತೂರು ಗ್ರಾಮದಲ್ಲಿರುವ ಕಿತ್ತೂರು ರಾಣಿ ಚೆನ್ನಮ್ಮ ಬಾಲಕಿಯರ ವಸತಿ ಶಾಲೆ(Girls Residential School)ಯಲ್ಲಿ ಅವ್ಯವಸ್ಥೆಗಳ ಆಗರದ ಜೊತೆಗೆ ಮಳೆಯಿಂದ ಸೋರುವಂತಹ ಕೊಠಡಿಗಳಲ್ಲಿ ಮಕ್ಕಳು ಪಾಠ ಕಲಿಯಬೇಕಾದ ದುಸ್ಥಿತಿ ಎದುರಾಗಿದ್ದು, ಸೂಕ್ತ ವ್ಯವಸ್ಥೆ ಮಾಡದ ಆಧಿಕಾರಿಗಳು ವಿರುದ್ದ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹೌದು, ಕಳೆದ ಹಲವು ವರ್ಷಗಳಿಂದ ಸ್ವಂತ ಕಟ್ಟಡ ಇಲ್ಲದೆ ಬಾಡಿಗೆ ಕಟ್ಟಡದಲ್ಲಿ ವಸತಿ ಶಾಲೆ ನಡೆಸಲಾಗುತ್ತಿದೆ. ವಸತಿ ಶಾಲೆಯಲ್ಲಿ ಯಾವಾಗಬೇಕಿದ್ದರೂ ಕುಸಿದು ಬೀಳುವ ಸ್ಥಿತಿಯ ಕಟ್ಟಡದಲ್ಲಿ ಮಕ್ಕಳು ಆತಂಕದ ನಡುವೆ ದಿನ ದೂಡುತ್ತಿದ್ದಾರೆ. 160 ವಿದ್ಯಾರ್ಥಿನಿಯರು ನೆಲೆಸಿರುವ ಈ ವಸತಿ ಶಾಲೆಯಲ್ಲಿ ಕೇವಲ 5 ಶೌಚಾಲಯ ಇದೆ. ಅದರಲ್ಲಿ ಎರಡಕ್ಕೆ ಬಾಗಿಲೇ ಇಲ್ಲವೆನ್ನುವ ಆಘಾತಕಾರಿ ವಿಚಾರ ಇದೀಗ ಬೆಳಕಿಗೆ ಬಂದಿದೆ. 6 ತರಗತಿಯಿಂದ 10ನೇ ತರಗತಿವರೆಗೆ ಮಕ್ಕಳು ಇಲ್ಲಿ ನೆಲೆಸಿದ್ದು, ಒಂದೇ ಕೋಠಡಿಯಲ್ಲಿ ವಾಸ, ನೆಲದ ಮೇಲೆ ಕೂತು ಊಟ ಮಾಡಬೇಕಾದ ಪರಿಸ್ಥೀತಿ ಇದೆ.
ಇದನ್ನೂ ಓದಿ:Chikkaballapur: ಬಾಲಕಿಯರ ವಸತಿ ನಿಲಯಕ್ಕೆ ಬೀದಿ ಕಾಮಣ್ಣರ ಕಾಟ! ಹಾಸ್ಟೆಲ್ ಸಿಬ್ಬಂದಿಯ ವಿರುದ್ದ ಸ್ಥಳೀಯರ ಪ್ರತಿಭಟನೆ
ಕಳೆದ ಒಂದು ವಾರಗಳಿಂದ ಸತತವಾಗಿ ಹೆತ್ತೂರು ಭಾಗದಲ್ಲಿ ಅತಿ ಹೆಚ್ಚಿನ ಪ್ರಮಾಣದ ಮಳೆ ಸುರಿಯುತ್ತಿದ್ದು, ಸ್ನಾನಕ್ಕೆ ಬಿಸಿನೀರು ಸಿಗುತ್ತಿಲ್ಲ. ಶಾಲಾ ಕೊಠಡಿ, ಡೈನಿಂಗ್ ಹಾಲ್, ವಾಸದ ಮನೆ ಎಲ್ಲವೂ ಸೋರುತ್ತಿದೆ. ಹಲವು ತಿಂಗಳಿನಿಂದ ಇದೇ ಸ್ಥಿತಿ ಇದ್ದರೂ ಕೂಡ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ ಎನ್ನುವುದು ಪೋಷಕರ ಆಕ್ರೋಶಕ್ಕೆ ಕಾರಣವಾಗಿದೆ. ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಯ ಈ ಹಾಸ್ಟೆಲ್ಗೆ ಸ್ವಂತ ಕಟ್ಟಡ ಇಲ್ಲ. ಲಕ್ಷ ಲಕ್ಷ ಬಾಡಿಗೆ ಹಣ ಕೊಟ್ಟು ಖಾಸಗಿ ಕಟ್ಟಡದಲ್ಲಿ ಹಾಸ್ಟೆಲ್ ನಡೆಸಲಾಗುತ್ತಿದೆ. ಆದ್ರೆ, ಯಾವುದೇ ಕನಿಷ್ಟ ಮೂಲಸೌಲಭ್ಯ ಇಲ್ಲದ ಕಡೆಯಲ್ಲಿ, ಹೇಗೆ ಹೆಣ್ಣು ಮಕ್ಕಳನ್ನು ಉಳಿದುಕೊಳ್ಳಲು ಅಧಿಕಾರಿಗಳು ವ್ಯವಸ್ಥೆ ಮಾಡಿದ್ದಾರೆ ಎಂದು ಪೋಷಕರು ಅಸಮಧಾನ ಹೊರ ಹಾಕಿದ್ದಾರೆ.
ಇದರಿಂದ ಬೇಸತ್ತ ಮಕ್ಕಳು ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದು, ಮಕ್ಕಳ ಹಕ್ಕುಗಳ ಸಮಿತಿ ಸಂಘಟನೆ ಕಾರ್ಯಕರ್ತರು ಕೂಡಲೇ ಸಮಸ್ಯೆಯ ಸುಳಿಗೆ ಸಿಲುಕಿರುವ ಮಕ್ಕಳಿಗೆ ಯಾವುದೇ ಅಪಾಯ ಆಗುವ ಮೊದಲು ಮಕ್ಕಳಿಗೆ ಸುಸಜ್ಜಿತ ಕಟ್ಟಡಕ್ಕೆ ಸ್ಥಳಾಂತರ ಮಾಡಿ ಹಾಗೂ ಶೀಘ್ರವಾಗಿ ಸ್ವಂತ ಕಟ್ಟಡ ನಿರ್ಮಾಣ ಮಾಡಿ ಎಂದು ಆಗ್ರಹಿಸಿದ್ದಾರೆ.
ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ