ಸೂಕ್ತ ಪರಿಹಾರ ಕೊಡಿಸಿ ಇಲ್ಲವೇ ದಯಾಮರಣ ಕೊಡಿ; ತಾಯಿ ಮತ್ತು ಮಗನಿಂದ ರಾಷ್ಟ್ರಪತಿಗೆ ಪತ್ರ

ಇದ್ದ ಮನೆಯೊಂದು ಮಹಾ ಮಳೆಗೆ ಕುಸಿದು ಬಿದ್ದಿದೆ. ಇತ್ತ ಪರಿಹಾರ ಕೇಳಿದರೆ ಅಧಿಕಾರಿಗಳು ಸೂಕ್ತ ಪರಿಹಾರ ಕೊಡುತ್ತಿಲ್ಲ ಎಂದು ಆರೋಪಿಸಿ ತಾಯಿ ಮತ್ತು ಮಗ ದಯಾಮರಣ ಕೋರಿ ರಾಷ್ಟ್ರಪತಿಯವರಿಗೆ ಪತ್ರ ಬರೆದಿದ್ದಾರೆ.

ಸೂಕ್ತ ಪರಿಹಾರ ಕೊಡಿಸಿ ಇಲ್ಲವೇ ದಯಾಮರಣ ಕೊಡಿ; ತಾಯಿ ಮತ್ತು ಮಗನಿಂದ ರಾಷ್ಟ್ರಪತಿಗೆ ಪತ್ರ
ದಯಾಮರಣ ಕೋರಿ ತಾಯಿ ಮತ್ತು ಮಗನಿಂದ ರಾಷ್ಟ್ರಪತಿಗೆ ಪತ್ರ
Edited By:

Updated on: Nov 08, 2022 | 1:14 PM

ಹಾವೇರಿ: ಇದ್ದ ಮನೆಯೊಂದು ಕೆಲವು ದಿನಗಳ ಹಿಂದೆ ಸುರಿದ ಮಳೆಗೆ ಕುಸಿದು ಬಿದ್ದಿದೆ. ಹೀಗಾಗಿ ಪರಿಹಾರ ಕೋರಿ ತಾಯಿ ಮತ್ತು ಮಗ ಅರ್ಜಿ ಸಲ್ಲಿಸಿದರೆ ಅಧಿಕಾರಿಗಳು ಅವರಿಗೆ ಸೂಕ್ತ ಪರಿಹಾರ ದೊರಕಿಸಿಕೊಡುತ್ತಿಲ್ಲ ಎಂದು ಆರೋಪಿಸಿದ್ದಾರೆ. ಹೀಗಾಗಿ ನಮಗೆ ಸೂಕ್ತ ಪರಿಹಾರ ಕೊಡಿಸಿ, ಇಲ್ಲವಏ ದಯಾಮರಣ ಕೊಡಿ ಅಂತಾ ತಾಯಿ ಮತ್ತು ಮಗ ರಾಷ್ಟ್ರಪತಿಗಳಿಗೆ ದಯಾಮರಣ ಪತ್ರ ಬರೆದಿದ್ದಾರೆ.
ಹಾವೇರಿ ತಾಲೂಕಿನ ಹೊಸಳ್ಳಿ ಗ್ರಾಮದ ಶಾಂತವ್ವ ನಿಂಬಕ್ಕನವರ ಮತ್ತು ಮಗ ಪ್ರಕಾಶ ನಿಂಬಕ್ಕನವರ ಅವರ ಮನೆ ಸುರಿದ ಭಾರಿ ಮಳೆಗೆ ಕುಸಿದು ಬಿದ್ದಿದೆ. ಇನ್ನೊಂದೆಡೆ ಜಮೀನಿನಲ್ಲಿ ಬೆಳೆದಿದ್ದ ಬೆಳೆಗಳೆಲ್ಲವೂ ಸಂಪೂರ್ಣ ಹಾಳಾಗಿ ಹೋಗಿವೆ. ದಿಕ್ಕು ತೋಚದೆ ಶಾಂತವ್ವ ಮತ್ತು ಮಗ ಮನೆ ನಿರ್ಮಾಣಕ್ಕೆ ಸೂಕ್ತ ಪರಿಹಾರ ನೀಡುವಂತೆ ಅರ್ಜಿ ಸಲ್ಲಿಸಿದ್ದರು. ಮನೆ ಬಹುತೇಕ ಪ್ರಮಾಣದಲ್ಲಿ ಹಾಳಾಗಿದ್ದರೂ ಅಧಿಕಾರಿಗಳು ಮಾತ್ರ ಮನೆ ಹಾನಿಗೆ ಸಿ ಗ್ರೇಡ್ ನೀಡಿ ಕೇವಲ 50 ಸಾವಿರ ರೂಪಾಯಿ ಪರಿಹಾರದ ಹಣ ಖಾತೆಗೆ ಜಮಾ ಮಾಡಿದ್ದಾರೆ‌. ಇದು ಮನೆ ಕಳೆದುಕೊಂಡ ಶಾಂತವ್ವ ಹಾಗೂ ಆಕೆಯ ಪುತ್ರನನ್ನು ಕಂಗಾಲಾಗಿಸಿದೆ. ಹೀಗಾಗಿ ಕೊಡುವುದಾದರೆ ಸೂಕ್ತ ಪರಿಹಾರ ಕೊಡಿಸಿ, ಇಲ್ಲವಾದರೆ ನಮಗೆ ದಯಾಮರಣ ಕೊಡಿ ಅಂತಾ ಶಾಂತವ್ವಳ ಕುಟುಂಬ ದಯಾಮರಣ ಕೋರಿ ರಾಷ್ಟ್ರಪತಿಗಳಿಗೆ ಪತ್ರ ಬರೆದಿದೆ.

ಮಳೆಗೆ ಮನೆ ಬಹುತೇಕ ಪ್ರಮಾಣದಲ್ಲಿ ಹಾನಿಯಾಗಿದ್ದರೂ ಸಿ ಗ್ರೇಡ್ ನೀಡಿ ಐವತ್ತು ಸಾವಿರ ರುಪಾಯಿ ಪರಿಹಾರದ ಹಣ ಹಾಕಿದ್ದಾರೆ. ಅಧಿಕಾರಿಗಳು ಸರಕಾರದಿಂದ ಮಂಜೂರು ಮಾಡಿಸಿದ ಐವತ್ತು ಸಾವಿರ ರುಪಾಯಿ ಪರಿಹಾರದ ಹಣ ನಮಗೆ ಬೇಡ. ಮನೆ ಹಾನಿಗೆ ಸೂಕ್ತ ಪರಿಹಾರ ಕೊಡಿ, ಇಲ್ಲದಿದ್ದರೆ ನೀವೇ ನಮಗೆ ಮನೆ ಕಟ್ಟಿಸಿಕೊಡಿ ಅಂತಾ ಮನೆ ಕಳೆದುಕೊಂಡ ಶಾಂತವ್ವ ಹಾಗೂ ಶಾಂತವ್ವಳ ಪುತ್ರ ಪ್ರಕಾಶ ಅವರು ಜಿಲ್ಲಾಧಿಕಾರಿ ಕಚೇರಿ ಹಾಗೂ ತಹಶೀಲ್ದಾರ್ ಕಚೇರಿ ಎಂದು ನಿತ್ಯ ಅಲೆದಾಡುತ್ತಿದ್ದಾರೆ. ಅಲ್ಲಿಂದ ಇಲ್ಲಿಗೆ, ಇಲ್ಲಿಂದ ಅಲ್ಲಿಗೆ ಅಂತಾ ಕಚೇರಿ ಕಚೇರಿ ಅಲೆದಾಡಿಸುತ್ತಿರುವುದು ಬಿಟ್ಟರೆ ಯಾರಿಂದಲೂ ಸೂಕ್ತ ಪರಿಹಾರದ ಭರವಸೆ ಸಿಗುತ್ತಿಲ್ಲ. ಹೀಗಾಗಿ ನಮಗೆ ಮಂಜೂರು ಮಾಡಿರುವ ಐವತ್ತು ಸಾವಿರ ರೂಪಾಯಿ ಹಣ ಬೇಡ. ನಮಗೆ ದಯಾಮರಣ ಕೊಡಿಸಿ ಅಂತಾ ರಾಷ್ಟ್ರಪತಿಗಳಿಗೆ ಪತ್ರ ಬರೆದಿದ್ದಾರೆ.

ದಯಾಮರಣ ಕೋರಿ ರಾಷ್ಟ್ರಪತಿಗಳಿಗೆ ಬರೆದಿರುವ ಪತ್ರವನ್ನು ಹಿಡಿದುಕೊಂಡು ಕಚೇರಿಯಿಂದ ಕಚೇರಿಗೆ ಅಲೆದಾಡುತ್ತಿದ್ದಾರೆ. ನಮಗೆ ಇರುವುದೊಂದು ಮನೆ. ಇರುವ‌ ಮನೆ ಮಳೆಗೆ ಸಂಪೂರ್ಣ ಹಾನಿಯಾಗಿದೆ. ಕೊಡುವುದಾದರೆ ಸೂಕ್ತ ಪರಿಹಾರ ಕೊಡಿ, ಇಲ್ಲದಿದ್ದರೆ ನಮಗೆ ಸರಕಾರದ ಪರಿಹಾರದ ಹಣವೇ ಬೇಡ ಅಂತಾ ಶಾಂತವ್ವ ಕಡಿಮೆ ಪರಿಹಾರದ ಹಣ ಮಂಜೂರು ಮಾಡಿಸಿದ್ದ ಅಧಿಕಾರಿಗಳ ವಿರುದ್ಧ ಅಸಮಾಧಾನ ಹೊರಹಾಕ್ತಿದ್ದಾರೆ.

ಮಳೆರಾಯನ ಅರ್ಭಟಕ್ಕೆ ಜಿಲ್ಲೆಯಲ್ಲಿ ಸಾಕಷ್ಟು ಜನರು ಮನೆ ಹಾನಿ ಅನುಭವಿಸಿದ್ದಾರೆ. ಆದರೆ ಮನೆ ಹಾನಿ ಪರಿಶೀಲಿಸಿ ವರದಿ ಸಲ್ಲಿಸಬೇಕಾದ ಅಧಿಕಾರಿಗಳು ಹಾಗೂ ಸಿಬ್ಬಂದಿ ತಾವು ಆಡಿದ್ದೇ ಆಟ ಎನ್ನುವ ಹಾಗೆ ಮನಸ್ಸಿಗೆ ಬಂದಂತೆ ಮನೆ ಹಾನಿಯ ವರದಿ ನೀಡಿದ್ದಾರೆ‌. ಇದರಿಂದ ಬಹುತೇಕ ಮನೆ ಹಾನಿ ಆಗಿರುವ ಸಾಕಷ್ಟು ಜನರಿಗೆ ಕಡಿಮೆ ಪರಿಹಾರದ ಹಣ ಬಂದಿದೆ. ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಮಾಡಿದ ತಾರತಮ್ಯದಿಂದ ಶಾಂತವ್ವಳ ಕುಟುಂಬಕ್ಕೆ ಪರಿಹಾರದ ಹಣ ಏತಕ್ಕೂ ಸಾಲದಂತಿದೆ. ಒಟ್ಟಾರೆ ಸೂಕ್ತ ಪರಿಹಾರದ ಹಣ ಸಿಗದಿದ್ದಕ್ಕೆ ಶಾಂತವ್ವಳ ಕುಟುಂಬ ದಯಾಮರಣ ಕೋರಿ ರಾಷ್ಟ್ರಪತಿಗಳಿಗೆ ಪತ್ರ ಬರೆದಿದೆ. ಇನ್ನಾದರೂ ಅಧಿಕಾರಿಗಳು ಆಗಿರುವ ತಾರತಮ್ಯ ಸರಿಪಡಿಸಿ ಕುಟುಂಬಕ್ಕೆ ಸೂಕ್ತ ಪರಿಹಾರ ಒದಗಿಸಬೇಕಿದೆ.

ವರದಿ: ಪ್ರಭುಗೌಡ.ಎನ್.ಪಾಟೀಲ, ಟಿವಿ9 ಹಾವೇರಿ

ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ