ಹಾವೇರಿ: ಇಂದು (ಆಗಸ್ಟ್ 28) ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ಮತ್ತು ಶಂಕುಸ್ಥಾಪನೆ ನೆರವೇರಿಸಲು ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ಕಳ್ಳರು ಕೈಚಳಕ ತೋರಿಸಿದ್ದಾರೆ. ರಾಣೆಬೆನ್ನೂರು ನಗರದ ಎಪಿಎಂಸಿ ಸಮುದಾಯ ಭವನದಲ್ಲಿ ನಡೆದ ಕಾರ್ಯಕ್ರಮಕ್ಕೆ ಹೊನ್ನಪ್ಪ ಎಂಬುವವರು ಆಗಮಿಸಿದ್ದರು. ತಮ್ಮ ಜೇಬಿನಲ್ಲಿ 50 ಸಾವಿರ ಹಣವಿತ್ತು, ಕಾರ್ಯಕ್ರಮದಲ್ಲಿ ಕಳ್ಳರು 49 ಸಾವಿರವನ್ನು ದೋಚಿದ್ದಾರೆ ಎಂದು ಹೊನ್ನಪ್ಪ ಅಳಲು ತೋಡಿಕೊಂಡಿದ್ದಾರೆ. ಹೊನ್ನಪ್ಪ ಮಾತ್ರವಲ್ಲದೇ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಇನ್ನೂ 13 ಜನರ ಜೇಬಿಗೆ ಕತ್ತರಿ ಬಿದ್ದಿದೆ. ಎಲ್ಲರಿಂದ ಸುಮಾರು ಒಂದೂವರೆ ಲಕ್ಷ ಹಣ ಕಳ್ಳತನವಾಗಿದೆ ಎಂದು ಹೇಳಲಾಗಿದೆ. ಆದರೆ ಈ ಕಿಸೆಗಳ್ಳತನಗಳ ಕುರಿತು ಈವರೆಗೆ ಯಾವುದೇ ಪ್ರಕರಣ ದಾಖಲಾಗಿಲ್ಲ. ಇಂದೇ ಹಿರೇಕೆರೂರು ಪಟ್ಟಣದಲ್ಲಿಯೂ ಕಿಸೆಗಳ್ಳರು ಕೆಲವರ ಜೇಬಿಗೆ ಕತ್ತರಿ ಹಾಕಿದ್ದಾರೆ ಎಂದು ವರದಿಯಾಗಿದೆ.
ಹೆಚ್ಚೂ ಅಂದರೆ ನವೆಂಬರ್ ತಿಂಗಳ ಒಳಗಡೆ ಕರ್ನಾಟಕದ ಎಲ್ಲರಿಗೂ ಕೊವಿಡ್ ಮೊದಲ ಡೋಸ್ (Covid Vaccine) ನೀಡಿ ಮುಗಿಸಲಾಗುವುದು. ಸುಮಾರು ಶೇಕಡಾ 60ರಷ್ಟು ಜನರಿಗೆ 2ನೇ ಡೋಸ್ ಲಸಿಕೆಯನ್ನೂ ವಿತರಿಸಲಾಗುವುದು. ಅಲ್ಲದೇ ರಾಜ್ಯದ ಎಲ್ಲ ಸಾರ್ವಜನಿಕ ವ್ಯವಸ್ಥೆಯನ್ನು ಡಿಜಿಟಲೀಕರಣ ಮಾಡುವ ಗುರಿಯನ್ನು ನಾವು ಹೊಂದಿದ್ದೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (CM Basavaraj Bommai) ಹಾವೇರಿ ತಾಲೂಕಿನ ಜಂಗಮನಕೊಪ್ಪ ಗ್ರಾಮದಲ್ಲಿ ಮೆಗಾ ಡೈರಿಗೆ ಶಂಕುಸ್ಥಾಪನೆ ನೆರವೇರಿಸಿದ ನಂತರ ತಿಳಿಸಿದರು.
ರೈತರ ಮಕ್ಕಳ ಶಿಕ್ಷಣದ ಸಮಸ್ಯೆಗಳ ಬಗ್ಗೆ ನಾನು ತಿಳಿದಿದ್ದೇನೆ. ರೈತರ ಆರ್ಥಿಕ ಪರಿಸ್ಥಿತಿ ಸರಿ ಇಲ್ಲದ್ದನ್ನು ಗಮನಿಸಿಯೇ ರೈತರ ಮಕ್ಕಳಿಗೆ ಶಿಷ್ಯವೇತನ ಯೋಜನೆ ಜಾರಿ ಮಾಡಿದ್ದೇವೆ. ಈ ಯೋಜನೆ ಜಾರಿ ಮಾಡಿರುವ ಮೊದಲ ರಾಜ್ಯ ನಮ್ಮದಾಗಿದ್ದು, ನನ್ನ ಆಡಳಿತದ ಅವಧಿಯಲ್ಲಿ ಮೊದಲ ಆದ್ಯತೆಯನ್ನು ರಾಜ್ಯದ ರೈತರಿಗೆ ಮತ್ತು ಬಡವರಿಗೆ ನೀಡುತ್ತೇವೆ ಎಂದು ಅವರು ತಿಳಿಸಿದರು. ಮೇಕೆದಾಟು ಯೋಜನೆ ಜಾರಿಯ ಕುರಿತೂ ಮಾತನಾಡಿದ ಅವರು, ಯಾವುದೇ ಕಾರಣಕ್ಕೂ ರಾಜ್ಯಕ್ಕೆ ಹಿನ್ನೆಡೆಯಾಗಲು ಬಿಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.
1 ಸಾವಿರ ಎಕರೆ ಟೌನ್ಶಿಪ್ ನಿರ್ಮಾಣ, ಡಿಸಿಸಿ ಬ್ಯಾಂಕ್ ಸ್ಥಾಪನೆ
ಹಾವೇರಿಗೆ ಹೊಂದಿಕೊಂಡಂತೆ 1 ಸಾವಿರ ಎಕರೆ ಪ್ರದೇಶದಲ್ಲಿ ಕೈಗಾರಿಕಾ ಟೌನ್ಶಿಪ್ ನಿರ್ಮಿಸಲು ಕ್ರಮ ಕೈಗೊಳ್ಳುತ್ತೇವೆ. ಹಾವೇರಿ ಜಿಲ್ಲೆಗೆ ಪ್ರತ್ಯೇಕ ಡಿಸಿಸಿ ಬ್ಯಾಂಕ್ ಸ್ಥಾಪಿಸಲು ಈಗಾಗಲೇ ಕೇಂದ್ರ ಹಣಕಾಸು ಸಚಿವರ ಜತೆ ಚರ್ಚಿಸಿದ್ದೇನೆ. ಹಾವೇರಿ ಜಿಲ್ಲೆ ಸೇರಿದಂತೆ ಮುಂಬರುವ ದಿನಗಳಲ್ಲಿ 5-6 ಜಿಲ್ಲೆಗಳಲ್ಲಿ ಪ್ರತ್ಯೇಕ ಡಿಸಿಸಿ ಬ್ಯಾಂಕ್ ಸ್ಥಾಪನೆಗೆ ಕ್ರಮ ಕೈಗೊಳ್ಳುತ್ತೇವೆ ಎಂದು ಅವರು ತಿಳಿಸಿದರು. ಗಡಿ ಭಾಗದ ಕನ್ನಡಿಗರಿಗೆ ಎಲ್ಲ ಅನುಕೂಲ ಮಾಡುತ್ತೇವೆ. ಗಡಿಯಲ್ಲಿನ ಕನ್ನಡಿಗರನ್ನು ಸಂಪೂರ್ಣ ರಕ್ಷಣೆ ಮಾಡುತ್ತೇವೆ ಎಂದು ಸಹ ಅವರು ಅಭಯ ನೀಡಿದರು.
ತವರು ಜಿಲ್ಲೆ ಹಾವೇರಿಯ ಪ್ರವಾಸದಲ್ಲಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಅವರನ್ನೇ ಹೋಲುವ ಗಂಧದಲ್ಲಿ ರಚಿಸಿದ ಮೂರ್ತಿಯನ್ನು ಉಡುಗೊರೆಯನ್ನಾಗಿ ನೀಡಲಾಗಿದೆ. 18 ಕೆಜಿ ತೂಕದ ಮೂರ್ತಿ ಸಾಕ್ಷಾತ್ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನೇ ಹೋಲುತ್ತದೆ. ರಾಣೆಬೆನ್ನೂರು ನಗರ ಸಭೆಯ ವತಿಯಿಂದ ಈ ಉಡುಗೊರೆ ನೀಡಲಾಗಿದ್ದು, ಮೂರ್ತಿ ತಯಾರಿಗೆ ಸುಮಾರು 2 ಲಕ್ಷ ವೆಚ್ಚ ಮಾಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಗಂಧಧ ಮೂರ್ತಿಯ ಹಿಂಭಾಗದಲ್ಲಿ ಕರ್ನಾಟಕ ಭೂಪಟವನ್ನು ಚಿತ್ರಿಸಲಾಗಿದೆ.
ಇದನ್ನೂ ಓದಿ:
(Haveri Pick Pocket of 13 people total 1.50 lakh done in CM Basavaraj Bommai participated event)
Published On - 8:10 pm, Sat, 28 August 21