ಅಳಿವಿನಂಚಿಗೆ ಬಂದ ಆಕಾಶ ವೈದ್ಯರು; ಜೈವಿಕ ಸಮತೋಲನದಲ್ಲಿ ರಣಹದ್ದುಗಳ ಪಾತ್ರ ಮತ್ತು ಮಹತ್ವವೇನು?

|

Updated on: May 06, 2024 | 5:22 PM

ವೀಕೆಂಡ್​​ನಲ್ಲಿ ಮೈಡ್ ರಿಲ್ಯಾಕ್ಸ್ ಮಾಡಿಕೊಳ್ಳೋಕೆ ಬೆಂಗಳೂರಿಗೆ ಸವೀಪವಿರುವ ರೇಷ್ಮೆ ನಾಡು ರಾಮನಗರಕ್ಕೆ ಭೇಟಿ ನೀಡುವವರ ಸಂಖ್ಯೆ ಸಾವಿರಾರು. ಅದರಲ್ಲೂ ಹಸಿರ ಸಿರಿಯಲ್ಲಿ ಬಾನೆತ್ತರಕ್ಕೆ ಎದ್ದು ನಿಂತ ರಾಮದೇವರ ಬೆಟ್ಟದ ತಪ್ಪಲಿನಲ್ಲಿ ರಾಮ-ಸೀತೆಯ ನೋಡಿ ಆಧ್ಯಾತ್ಮಿಕ ಭಾವನೆಯಲ್ಲಿ ಮಿಂದೇಳುವುದು ಸಾಮಾನ್ಯ. ಆದ್ರೆ ನೀವೆಂದಾದರೂ ಅಲ್ಲೇ ಇರುವ ಜಟಾಯುವಿನ ವಾಸಸ್ಥಾನ ಎನ್ನಲಾಗುವ ರಣಹದ್ದು ಸಂರಕ್ಷಣಾ ಕೇಂದ್ರಕ್ಕೆ ಭೇಟಿ ನೀಡಿದ್ದೀರಾ? ಹಾಗಾದ್ರೆ ಬನ್ನಿ ನಾವಿಂದು ರಣಹದ್ದು ಕೇಂದ್ರ ಹಾಗೂ ರಣಹದ್ದುಗಳ ಅವನತಿಗೆ ಕಾರಣವಾದ ಅಂಶದ ಬಗ್ಗೆ ಇಲ್ಲಿ ಚರ್ಚಿಸೋಣ.

ಅಳಿವಿನಂಚಿಗೆ ಬಂದ ಆಕಾಶ ವೈದ್ಯರು; ಜೈವಿಕ ಸಮತೋಲನದಲ್ಲಿ ರಣಹದ್ದುಗಳ ಪಾತ್ರ ಮತ್ತು ಮಹತ್ವವೇನು?
ರಣಹದ್ದು
Follow us on

ಬಾಯಲ್ಲಿದ್ದ ಸುಪಾರಿ ಉಗಿಯುತ್ತ ಅರೆ ಹೋ ಸಾಂಬ ಎಂದು ಘರ್ಜಿಸುವ ಗಬ್ಬರ್ ಸಿಂಗ್ ಎಂದಾಕ್ಷಣ ಹಿಂದಿಯ ಶೋಲೆ ಸಿನಿಮಾ, ರಾಮನಗರದ ರಾಮದೇವರ ಬೆಟ್ಟ ನೆನಪಾಗುತ್ತೆ. ಪ್ರಭು ಶ್ರೀ ರಾಮಚಂದ್ರನ ನೆಲೆಬೀಡಾಗಿದ್ದ ರಾಮದೇವರ ಬೆಟ್ಟದ ಪೌರಾಣಿಕತೆ, ಸ್ಥಳ ಮಹಾತ್ಮೆ ಬಗ್ಗೆ ನಿಮಗೆಲ್ಲ ಗೊತ್ತೇ ಇದೆ. ಇದರ ಜೊತೆಗೆ ರಾಮದೇವರ ಬೆಟ್ಟ ರಾಜ್ಯದ ಏಕೈಕ ರಣಹದ್ದು ಸಂರಕ್ಷಣಾ ತಾಣವೂ ಹೌದು. ಅಪರೂಪದ ರಣಹದ್ದುಗಳೆಂದರೆ ಸಾಕು, ವಿಚಿತ್ರ ಪ್ರಾಣಿ, ಕೊಳೆತ ಮಾಂಸ ತಿನ್ನುತ್ತೆ ಎಂದು ನಮ್ಮ ಜನ ಮೂಗು ಮುರಿಯುವುದೇ ಹೆಚ್ಚು. ಆದರೆ ಇಲ್ಲಿನ ಜನರಿಗೆ ಅದು ಸೀತಾ ಮಾತೆಯನ್ನು ರಾವಣನಿಂದ ಕಾಪಾಡಲು ಹೋರಾಡಿದ ಜಟಾಯು. ಆದರೆ ಈಗ ಜಟಾಯುವಿನ ವಂಶಸ್ಥರೆಂದು ಭಾವಿಸಲಾದ ರಣಹದ್ದುಗಳ ಸಂಖ್ಯೆ ಕುಸಿಯುತ್ತಿದೆ.

ಬೆಂಗಳೂರಿನಿಂದ 54, ರಾಮನಗರದಿಂದ 4 ಕಿ.ಮೀ ದೂರದಲ್ಲಿರುವ ರಾಮದೇವರ ಬೆಟ್ಟ ಕರ್ನಾಟಕ ರಾಜ್ಯದ ಮೊಟ್ಟ ಮೊದಲ ರಣಹದ್ದು ಸಂರಕ್ಷಣಾ ಕೇಂದ್ರ. ಇಲ್ಲಿ ಸುಮಾರು 1990ರ ಇಸವಿಯಲ್ಲಿ ಸಾವಿರಾರು ರಣಹದ್ದುಗಳು ವಾಸವಾಗಿದ್ದವು. ಆದರೆ ಈಗ ಬೆರಳೆಣಿಗೆಯಷ್ಟು ರಣಹದ್ದುಗಳು ಕೂಡ ಕಾಣಲು ಸಿಗುತ್ತಿಲ್ಲ. ಮೃತಪಟ್ಟ ಪ್ರಾಣಿ, ಪಕ್ಷಿಗಳನ್ನು ತಿಂದು ಜೀವ ಸಂಕುಲವನ್ನು ರೋಗರುಜಿನಗಳಿಂದ ಕಾಪಾಡಿ ಪರಿಸರ ಸ್ವಚ್ಛವಾಗಿಡಲು ಸಹಾಯ ಮಾಡುತ್ತಿದ್ದ ಈ ಆಕಾಶ ವೈದ್ಯರಾದ ರಣಹದ್ದುಗಳು ಈಗ ಬಹುತೇಕ ಕಣ್ಮರೆಯಾಗುತ್ತಿವೆ. ಇದಕ್ಕೆ ಕಾರಣವೇನು? ಜೈವಿಕ ಸಮತೋಲನದಲ್ಲಿ ರಣಹದ್ದುಗಳ ಪಾತ್ರ ಮತ್ತು ಮಹತ್ವವೇನು ಎಂಬ ಬಗ್ಗೆ ಈ ಲೇಖನದಲ್ಲಿ ತಿಳಿಯಿರಿ.

ರಾಮಾಯಣ ಕಾಲದ ಜಟಾಯು ಪಕ್ಷಿಯ ಆವಾಸ ಸ್ಥಾನ ಎಂದು ಹೇಳಲಾಗುವ ರಾಮನಗರದ ರಾಮದೇವರ ಬೆಟ್ಟದಲ್ಲಿ ಹೆಚ್ಚಿನ ಸಂಖ್ಯೆಯ ರಣಹದ್ದುಗಳು ಕಾಣಿಸುತ್ತಿದ್ದವು. ಸದ್ಯ ಈಗ ಅಳಿವಿನ ಅಂಚಿನಲ್ಲಿರುವ ಪಕ್ಷಿಗಳ ಪಟ್ಟಿಯಲ್ಲಿ ಅಪರೂಪದ ರಣಹದ್ದುಗಳು ಕೂಡ ಸ್ಥಾನ ಪಡೆದಿವೆ. ಹೀಗಾಗಿ ಇವುಗಳ ಉಳಿವಿಗಾಗಿ, ಸಂರಕ್ಷಣೆಗಾಗಿ ಪರಿಸರ ಪ್ರೇಮಿಗಳು ಹೋರಾಟ ನಡೆಸಿದ್ದು ಇದರ ಫಲವಾಗಿ 2012ರಲ್ಲಿ ರಾಜ್ಯ ಸರಕಾರ ರಾಮದೇವರ ಬೆಟ್ಟ ವ್ಯಾಪ್ತಿಯ ಸುಮಾರು 346.14 ಎಕ್ಟೇರ್‌ ಪ್ರದೇಶವನ್ನು ಶ್ರೀ ರಾಮದೇವರ ಬೆಟ್ಟ ರಣಹದ್ದು ವನ್ಯಜೀವಿ ಧಾಮವೆಂದು ಅಧಿಕೃತವಾಗಿ ಘೊಷಣೆ ಮಾಡಿದೆ. 2017ರ ಸೆಪ್ಟೆಂಬರ್‌ 12ರಂದು ಅಂತಿಮ ಅಧಿಸೂಚನೆ ಹೊರಡಿಸಿ ವನ್ಯಧಾಮಕ್ಕೆ ಹೊಂದಿಕೊಂಡಿರುವ ಸುಮಾರು 708 ಹೆಕ್ಟೇರ್‌ ಭೂಮಿಯನ್ನು ಪರಿಸರ ಸೂಕ್ಷ್ಮ ವಲಯವೆಂದು ಘೋಷಿಸಿ ಆದೇಶ ಹೊರಡಿಸಿದೆ.

ದೇಶದ ಮೊಟ್ಟ ಮೊದಲ ರಣಹದ್ದು ಸಂಕರಕ್ಷಣ ಪ್ರದೇಶವೆಂಬ ಹೆಗ್ಗಳಿಕೆ ಈ ಸ್ಥಳಕ್ಕೆ ಸಿಕ್ಕಿದೆ. ರಾಮನಗರದ ಪಕ್ಷಿ ಪ್ರೇಮಿ ಶಶಿಕುಮಾರ್.ಬಿ. ಎಂಬುವವರು ಹಲವಾರು ವರ್ಷಗಳಿಂದ ಅರಣ್ಯ ಇಲಾಖೆ ಜೊತೆ ಕೈ ಜೋಡಿಸಿ ಶಾಲಾ ಕಾಲೇಜುಗಳಲ್ಲಿ ರಣಹದ್ದು ಸಂರಕ್ಷಣೆ ಬಗ್ಗೆ ಉಪನ್ಯಾಸ ನೀಡುತ್ತ ಜನರಲ್ಲಿ ಅರಿವು ಮೂಡಿಸುವ ಕಾರ್ಯ ಮಾಡಿಕೊಂಡು ಬಂದಿದ್ದಾರೆ. ಅಲ್ಲದೆ ಕರ್ನಾಟಕ ರಣಹದ್ದು ಸಂರಕ್ಷಣಾ ಟ್ರಸ್ಟ್‌ (Karnataka Vulture Conservation Trust) ಸ್ಥಾಪಿಸಿ ರಣಹದ್ದು ಸಂತತಿ ಉಳಿಸಲು ಹೋರಾಡುತ್ತಿದ್ದಾರೆ.

ರಾಮನಗರದಲ್ಲಿ ಕಳೆದ ಮೂರು ವರ್ಷಗಳಿಂದ ರಣಹದ್ದುಗಳ ಸಂತಾನೋತ್ಪತ್ತಿ ಅಭಿವೃದ್ಧಿ ಕಾಣುತ್ತಿದೆ. ನಮ್ಮಲ್ಲಿ ಕಂಡು ಬರುವಂತಹ ಯಾವ ರಣಹದ್ದುಗಳು ಕೂಡ ಭೇಟೆಯಾಡಲ್ಲ. ರಣಹದ್ದುಗಳು ನೋಡಲು ಸುಂದರವಾಗಿರುವುದಿಲ್ಲ. ಹೀಗಾಗಿಯೇ ಚಿಕ್ಕಮಕ್ಕಳಿಗೆ ಊಟ ಮಾಡಿಸುವಾಗ ಅಮ್ಮಂದಿರು ರಣಹದ್ದು ಬಂದು ಕಣ್ಣು ಕಿತ್ತುಕೊಂಡು ಹೋಗುತ್ತೆ ಎಂದು ಭಯ ಪಡಿಸಿ ಊಟ ಮಾಡಿಸ್ತಾರೆ. ನಮ್ಮಲ್ಲಿ ರಣಹದ್ದುಗಳನ್ನು ವಿಲನ್ ಮಾಡಿದ್ದಾರೆ. ಆದರೆ ಎಷ್ಟೋ ಜನರಿಗೆ ಗೊತ್ತಿಲ್ಲ ರಣಹದ್ದು ನಿಸರ್ಗದ ಜಲಗರ ಎಂದು ಕರ್ನಾಟಕ ರಣಹದ್ದು ಸಂರಕ್ಷಣಾ ಟ್ರಸ್ಟ್‌ ಕಾರ್ಯದರ್ಶಿ ಶಶಿಕುಮಾರ್ ಟಿವಿ9 ಕನ್ನಡ ಪ್ರೀಮಿಯಂ ನ್ಯೂಸ್​​ ಆ್ಯಪ್​ಗೆ ತಿಳಿಸಿದರು.

ರಣಹದ್ದುಗಳ ಬಗ್ಗೆ ಜನರಲ್ಲಿ ಭಯದ ಭಾವನೆ ಇದೆ. ಬೈಯುವಾಗ, ನಿಂದಿಸುವಾಗ ರಣಹದ್ದು ಪದ ಬಳಕೆಯನ್ನು ಕಾಣಬಹುದು. ಪುರಾಣ, ಇತಿಹಾಸ ಮತ್ತು ಸಾಹಿತ್ಯ ರಚನೆಯಲ್ಲಿ ಹದ್ದುಗಳ ವಿವರಣೆಗಳಿವೆ. ಪಾರ್ಸಿ ಸಮುದಾಯದಲ್ಲಿ ರಣಹದ್ದುಗಳಿಗೆ ವಿಶೇಷ ಸ್ಥಾನಮಾನ ನೀಡಲಾಗಿದೆ. ಸಾಹಿತ್ಯದಲ್ಲೂ ರಣಹದ್ದುಗಳ ಬಳಕೆ ಕಾಣಬಹುದು. ದೇವರ ವಾಹನ, ಗರುಡಾಚಲಮೂರ್ತಿಯಾಗಿ, ರಾಮಾಯಣ ಕಥೆಯಲ್ಲಿ ಜಟಾಯುವಾಗಿಯೂ ಇವುಗಳ ವಿವರಣೆ ಇದೆ. ಈಜಿಪ್ಟಿನ ಕಾವಲು ದೇವತೆಯಾಗಿಯೂ ರಣಹದ್ದುಗಳನ್ನು ಪೂಜಿಸಲಾಗಿದೆ.

ಕರ್ನಾಟಕ ರಣಹದ್ದು ಸಂರಕ್ಷಣಾ ಟ್ರಸ್ಟ್‌ ಕಾರ್ಯದರ್ಶಿ ಶಶಿಕುಮಾರ್ ಸೆರೆ ಹಿಡಿದ ದೃಶ್ಯ

ಪ್ರಪಂಚದಲ್ಲಿ 23 ವಿಧವಾದ ರಣಹದ್ದುಗಳಿದ್ದು, ಭಾರತದಲ್ಲಿ 9 ವಿಧವಾದ ಮತ್ತು ಕರ್ನಾಟಕದಲ್ಲಿ 4 ವಿಧವಾದ ರಣಹದ್ದುಗಳಿದ್ದರೂ ರಾಮನಗರದಲ್ಲಿ 2 ಪ್ರಭೇದದ ರಣಹದ್ದುಗಳನ್ನು ಕಾಣಬಹುದು. ಉದ್ದ ಕೊಕ್ಕಿನ ರಣಹದ್ದು (Indian long billed vulture), ಈಜಿಪ್ಟಿಯನ್ ರಣಹದ್ದು (Egyptian vulture Neophronperenopterus)ಗಳನ್ನು ಕಾಣಬಹುದು. ಬಿಳಿಬೆನ್ನಿನ ರಣಹದ್ದು (White backed vulture), ಕೆಂಪು ತಲೆ ರಣಹದ್ದು (Red headed vulture) ರಾಮನಗರದಲ್ಲಿ ಕಣ್ಮರೆಯಾಗಿದ್ದು ನಾಗರಹೊಳೆ, ಬಂಡೀಪುರ, ತಮಿಳುನಾಡು, ಕೇರಳ ಮತ್ತು ಉತ್ತರ ಭಾರತದ ಅರಣ್ಯ ಭಾಗಗಳಲ್ಲಿ ಕಂಡು ಬರುತ್ತವೆ. ಕೆಲ ರಣಹದ್ದುಗಳು ವಲಸೆ ಬಂದು ಹೋಗುತ್ತವೆ.

ರಾಮದೇವರ ಬೆಟ್ಟದ ಸುತ್ತಲೂ ಅರಣ್ಯದ ವಾತಾವರಣವಿದೆ. ಕಾಡುಗಳಲ್ಲಿರುವ ಪ್ರಾಣಿಗಳು ಇತರೆ ಪ್ರಾಣಿಗಳನ್ನು ಭೇಟೆಯಾಡಿ ಕೊಂದು ಅರ್ಧಂಬರ್ಧ ತಿಂದು ಹಾಕುತ್ತವೆ. ಈ ರೀತಿ ಅರೆಬರೆ ಉಳಿದ ಪ್ರಾಣಿಗಳ ಮಾಂಸದಿಂದ ವಾಸನೆ, ಹುಳದಂತಹ ಅರಣ್ಯ ನಾಶಕ್ಕೆ ಅನುಕೂಲವಾಗುವಂತಹ ಸಮಸ್ಯೆ ಎದುರಾಗಬಹುದು. ಆದರೆ ರಣಹದ್ದುಗಳು ಅರೆಬರೆ ಮಾಂಸವನ್ನು ತಿಂದು ಮುಗಿಸುವ ಮೂಲಕ ಕಾಡು ಶುಚಿಯಾಗಿರುವುದರಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.

ಮೃತ ಪ್ರಾಣಿ, ಪಕ್ಷಿಗಳನ್ನು ರಣಹದ್ದುಗಳು ತಿನ್ನುವುದರಿಂದ ಬದುಕಿರುವ ಜೀವಿಗಳ ಆರೋಗ್ಯವನ್ನು ಪರೋಕ್ಷವಾಗಿ ಕಾಪಾಡಿದಂತಾಗುತ್ತದೆ. ಮೃತ ಜಾನುವಾರುಗಳ ಮೂಲಕ ಹರಡುವ ಸಾಂಕ್ರಾಮಿಕ ರೋಗ ತಡೆಗಟ್ಟಲು ರಣಹದ್ದುಗಳು ಸಹಾಯ ಮಾಡುತ್ತವೆ. ಅಲ್ಲದೆ, ಮೃತ ಪ್ರಾಣಿಗಳ ದೇಹದ ಕ್ರಿಮಿಗಳು ಗಾಳಿಯಲ್ಲಿ, ನೀರಿನಲ್ಲಿ ಸೇರಿ ಕಲುಷಿತವಾಗದಂತೆ ತಡೆಗಟ್ಟುವಲ್ಲಿ ರಣಹದ್ದುಗಳ ಪಾತ್ರ ದೊಡ್ಡದು. ರಾಮನಗರದಲ್ಲಿ ಕಂಡು ಬರುವ ರಣಹದ್ದುಗಳ ವಿಶೇಷವೆಂದರೆ, ಇವುಗಳು ಸುಮಾರು 5ರಿಂದ 6 ಕೆಜಿ ತೂಕ ಇರುತ್ತವೆ. ರೆಕ್ಕೆಗಳು ಅಗಲಿಸಿದಾಗ ಪ್ರತಿ ರೆಕ್ಕೆಯು 6ರಿಂದ 8 ಅಡಿಗಳಷ್ಟು ಉದ್ದವಿರುತ್ತವೆ.

ಈ ಹಿಂದೆಲ್ಲ ಯಾವುದಾದರು ಹಸು ಸತ್ತರೆ ಹಳ್ಳಕೊಳ್ಳ, ಬಯಲು ಪ್ರದೇಶ, ನದಿಪಾತ್ರದಲ್ಲಿ ಬಿಸಾಕಿ ಬರುತ್ತಿದ್ದರು. ಈ ಸತ್ತ ಪ್ರಾಣಿಗಳನ್ನು ರಣಹದ್ದುಗಳು ತಿನ್ನುತ್ತಿದ್ದವು. ಈ ಸತ್ತ ಪ್ರಾಣಿಯಿಂದ ಪರಿಸರಕ್ಕೆ ಆಗಬಹುದಿದ್ದ ಅದೆಷ್ಟೋ ಸಮಸ್ಯೆಗಳು ದೂರವಾಗುತ್ತಿದ್ದವು. ಆದರೆ ಹಸುಗಳಿಗೆ ಆರೋಗ್ಯ ಸಮಸ್ಯೆ ಇದ್ದಲ್ಲಿ ಅವುಗಳಿಗೆ ಡೈಕ್ಲೋಫಿನಾಕ್‌ ಎಂಬ ಪೈನ್ ಕಿಲ್ಲರ್ ಔಷಧ ನೀಡಲಾಗಿದ್ದು ಅವುಗಳ ಆರೋಗ್ಯ ಸುಧಾರಿಸದೆ ಅವುಗಳು ಸತ್ತಲ್ಲಿ ರೈತರು ಆ ಹಸುಗಳನ್ನು ಬಯಲು ಪ್ರದೇಶದಲ್ಲಿ ಬಿಸಾಕಿದಾಗ ಅವುಗಳನ್ನು ತಿನ್ನುವ ರಣಹದ್ದುಗಳಿಗೆ ಕಿಡ್ನಿ ಫೇಲ್ ಆಗಿ ಸಾಯುತ್ತಿದ್ದವು ಎಂದು ಶಶಿಕುಮಾರ್ ವಿವರಿಸಿದರು.

ಅಂಕಿ ಅಂಶಗಳ ಪ್ರಕಾರ, 1980ರಲ್ಲಿ ಸುಮಾರು 40 ಲಕ್ಷದಷ್ಟಿದ್ದ ರಣಹದ್ದುಗಳ ಸಂಖ್ಯೆ 1990ರ ವೇಳೆಗೆ ಕೆಲವು ಸಾವಿರಕ್ಕೆ ಇಳಿದಿತ್ತು. ನ್ಯಾಚುರಲ್ ಸ್ಕ್ಯಾವೆಂಜರ್ಸ್ ಎಂಬ ಖ್ಯಾತಿಯ, ಭಾರತದಲ್ಲಿ ಕಂಡುಬರುವ ಒಂಬತ್ತಕ್ಕೂ ಹೆಚ್ಚು ಬಗೆಯ ಹದ್ದುಗಳು ಡೈಕ್ಲೊಫಿನಾಕ್ ಎಂಬ ರಾಸಾಯನಿಕದಿಂದ ಅಧಿಕ ಸಂಖ್ಯೆಯಲ್ಲಿ ಸಾವನ್ನಪ್ಪುತ್ತಿದ್ದುದು 2004ರಲ್ಲಿ ಪ್ರಥಮ ಬಾರಿಗೆ ಪತ್ತೆಯಾಯಿತು.

2023ರಲ್ಲಿ ರಣಹದ್ದುಗಳ ಸಮೀಕ್ಷೆ ನಡೆಸಿದ್ದ ಸರ್ಕಾರ

ತಮಿಳುನಾಡು, ಕರ್ನಾಟಕ ಹಾಗೂ ಕೇರಳ ಸೇರಿ ಮೂರು ರಾಜ್ಯಗಳಲ್ಲಿ ಸರ್ಕಾರ ಕಳೆದ ವರ್ಷ ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ರಣಹದ್ದುಗಳ ಸಮೀಕ್ಷೆ ನಡೆಸಿತ್ತು. ಈ ಸರ್ವೇ ಪ್ರಕಾರ ಬಂಡೀಪುರದಲ್ಲಿ 245 ಮೂರು ವಿಧದ ರಣಹದ್ದುಗಳು ಕಂಡುಬಂದಿವೆ. ಈ ಪೈಕಿ ಭಾರತೀಯ ರಣಹದ್ದು 34, ಕೆಂಪು ತಲೆಯ ರಣಹದ್ದು 43 ಹಾಗು ಬಿಳಿ ಬೆನ್ನಿನ ರಣ ಹದ್ದುಗಳು 168 ಎಂದು ಪತ್ತೆ ಮಾಡಲಾಗಿದೆ. ಒಟ್ಟು 245 ರಣಹದ್ದುಗಳು ಕಾಣಿಸಿಕೊಂಡಿವೆ.

ನಾಗರಹೊಳೆ ಅರಣ್ಯ ವ್ಯಾಪ್ತಿಯಲ್ಲಿ ಭಾರತೀಯ ರಣ ಹದ್ದು 13, ಬಿಳಿ ಬೆನ್ನಿನ ರಣ ಹದ್ದು 61, ಕೆಂಪು ತಲೆಯ ರಣಹದ್ದು 30 ಸೇರಿ ಒಟ್ಟು ಮೂರು ವಿಧದ 104 ರಣಹದ್ದುಗಳು ಕಂಡುಬಂದಿವೆ. ಈ ವ್ಯಾಪ್ತಿಯಲ್ಲಿ ರಣಹದ್ದುಗಳ ಸಂತಾನೋತ್ಪತ್ತಿ ಕ್ರಿಯೆಗಳು ನಡೆಯುತ್ತಿದೆ ಎಂದು ಸರ್ಕಾರದ ಸಮೀಕ್ಷೆಯಲ್ಲಿ ತಿಳಿದು ಬಂದಿದೆ. ಇತ್ತೀಚೆಗೆ, ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯವು ದೇಶದಲ್ಲಿ ರಣಹದ್ದುಗಳ ಸಂರಕ್ಷಣೆಗಾಗಿ ರಣಹದ್ದುಗಳ ಕ್ರಿಯಾ ಯೋಜನೆ 2020-25 ಅನ್ನು ಪ್ರಾರಂಭಿಸಿದೆ.

2019ರಲ್ಲಿ ಬನ್ನೇರುಘಟ್ಟದಲ್ಲಿ ಬ್ರೀಡಿಂಗ್ ಸೆಂಟರ್ ತೆರೆಯಲು 2 ಕೋಟಿ ಮೀಸಲಿಡಲಾಗಿತ್ತು. ಆದರೆ ಈ ಯೋಜನೆ ಸರಿಯಾದ ಕ್ರಮದಲ್ಲಿ ಸಾಗುತ್ತಿಲ್ಲ. ಯಾವ ಅಧಿಕಾರಿಗಳು ಆಸಕ್ತಿ ತೋರಿಸುತ್ತಿಲ್ಲ. ಕಾರಣಗಳನ್ನು ನೀಡಿ ಯೋಜನೆಗಳು ನಿಧಾನ ಗತಿಯಲ್ಲಿ ಸಾಗಿವೆ. ಆಸಕ್ತಿ ಇರುವ ಅಧಿಕಾರಿಗಳನ್ನು ಸರ್ಕಾರ ನೇಮಿಸಿದರೆ ಕಾಳಜಿವಹಿಸಿ ಕೆಲಸ ಮಾಡ್ತಾರೆ. ಈ ಬ್ರೀಡಿಂಗ್ ಸೆಂಟರ್ ಓಪನ್ ಆಗಿದ್ದರೆ ರಣಹದ್ದುಗಳ ಸಂಖ್ಯೆ ಹೆಚ್ಚಾಗಲು ಸಹಾಯ ಆಗುತ್ತಿತ್ತು ಎಂದು ಶಶಿಕುಮಾರ್ ಬೇಸರ ವ್ಯಕ್ತಪಡಿಸಿದ್ದಾರೆ.

ರಣಹದ್ದುಗಳು ಒಮ್ಮೆ ಸುರಕ್ಷಿತ ಪ್ರದೇಶಗಳನ್ನು ಆಯ್ಕೆ ಮಾಡಿಕೊಂಡರೆ ಸಾಕು. ಅವು ಪ್ರತಿ ವರ್ಷ ಬರುತ್ತವೆ. ರಣಹದ್ದುಗಳ ಸಂಖ್ಯೆ ನಶಿಸಿ ಹೋಗುವ ಮೊದಲೇ ಬ್ರೀಡಿಂಗ್ ಸೆಂಟರ್​ಗಳನ್ನು ಮಾಡಬೇಕು. ಇಲ್ಲದಿದ್ದರೆ ಪ್ರಯೋಜನವಾಗಲ್ಲ. ರಣಹದ್ದುಗಳು ಹೆಚ್ಚಾಗಿ ಬರುವ ಜಾಗಗಳಲ್ಲಿ ಕೇಜ್ ಹಾಕಿ ಅವುಗಳಿಗೆ ಆಹಾರ ಹಾಕಬೇಕು. ಯಾವ ಇತರೆ ಪ್ರಾಣಿಗಳು ಆ ಆಹಾರವನ್ನು ತಿನ್ನದಂತೆ, ಕೇವಲ ರಣಹದ್ದುಗಳು ಬಂದು ತಿನ್ನುವಂತೆ ನೋಡಿಕೊಳ್ಳಬೇಕು. ರಣಹದ್ದುಗಳು ಆಹಾರಕ್ಕಾಗಿ 100 ಕಿ.ಮೀ ವರೆಗೆ ಸಂಚಾರ ನಡೆಸುತ್ತವೆ. ಈಜಿಪ್ಟಿಯನ್ ರಣಹದ್ದುಗಳಿಗೆ ಸಣ್ಣ-ಪುಟ್ಟ ಕೋಳಿಗಳಿದ್ದರೆ ಸಾಕು, ಆದರೆ ಉದ್ದ ಕೊಕ್ಕಿನ ರಣಹದ್ದುಗಳಿಗೆ ಮೇಕೆ, ಕುರಿಯಂತಹ ಹೆಚ್ಚಿನ ಆಹಾರಬೇಕಾಗುತ್ತೆ. ಈಗ ಹಸುಗಳಿಗೆ ಇನ್ಶೂರೆನ್ಸ್ ಇರುವುದರಿಂದ ಹಸುಗಳು ಸತ್ತ ಮೇಲೆ ಎಲ್ಲೆಂದರಲ್ಲಿ ಬೀಸಾಕುತ್ತಿಲ್ಲ. ಇದರಿಂದ ರಣಹದ್ದುಗಳ ಉಳಿವಿಗೆ ಸಹಾಯಕವಾಗಿದೆ.

ರಣಹದ್ದುಗಳ ಸಂಖ್ಯೆ ಕಡಿಮೆಯಾಗಲು ಕಾರಣವೇನು

ಸತ್ತ ಪ್ರಾಣಿಗಳ ಮಾಂಸ ತಿನ್ನುವುದೇ ರಣಹದ್ದುಗಳ ಆಹಾರ ಕ್ರಮ. ಜಾನುವಾರುಗಳ ಕೆಚ್ಚಲು ಊತ, ಉಳುಕು ಸೇರಿದಂತೆ ಮತ್ತಿತರ ಕಾಯಿಲೆಗಳಿಗೆ ನೋವು ನಿವಾರಕ ಇಂಜೆಕ್ಷನ್‌ ಅಗಿ ಡೈಕ್ಲೋಫಿನಾಕ್‌ ಔಷಧವನ್ನು ಬಳಸಲಾಗುತ್ತಿತ್ತು. ರೋಗ ಪೀಡಿತ ಜಾನುವಾರುಗಳು ಸತ್ತ ಬಳಿಕವೂ ಅದರ ಮಾಂಸ ಖಂಡಗಳಲ್ಲಿ ಡೈಕ್ಲೋಫೆನಿಕ್‌ ಔಷಧ ಅಂಶ ಇರುತ್ತದೆ. ಸೂಕ್ತರೀತಿಯಲ್ಲಿ ಶವ ಸಂಸ್ಕಾರ ಮಾಡದೆ, ಜಾನುವಾರುಗಳನ್ನು ಹಾಗೆಯೇ ಬಿಸಾಡಿದರೆ ಅದರ ಮಾಂಸ ಸೇವಿಸುವ ರಣಹದ್ದುಗಳ ದೇಹದಲ್ಲಿ ಡೈಕ್ಲೋಫೆನಿಕ್‌ ಅಂಶ ಸೇರಿ ಅವುಗಳ ಮೂತ್ರ ಪಿಂಡಗಳ ಮೇಲೆ ಪರಿಣಾಮ ಬೀರುತ್ತದೆ. ಅದರ ಕಾರ್ಯನಿರ್ವಹಿಸದಂತೆ ಮಾಡುತ್ತದೆ. ಇದು ರಣಹದ್ದು ಸಾವಿಗೆ ಪ್ರಮುಖ ಕಾರಣ ಎಂಬುವುದು ವೈಜ್ಞಾನಿಕ ಸಂಶೋಧನೆಯಲ್ಲಿ ಸಾಬೀತಾಗಿದೆ.

ಡೈಕ್ಲೋಫಿನಾಕ್‌ನಿಂದಾಗಿ ಹದ್ದುಗಳ ಕಿಡ್ನಿ ಸೇರಿದಂತೆ ಹಲವು ಅಂಗಗಳು ಹಾಳಾಗಿ, ಬಹು ಅಂಗಾಂಗ ವೈಫಲ್ಯದಿಂದ ಮೃತಪಡುತ್ತಿದ್ದವು. ಹೀಗಾಗಿ ಇವುಗಳ ಸಂತತಿ ಕ್ಷೀಣಿಸಿತ್ತು. 2006 ರಲ್ಲಿ ಭಾರತ, ನೇಪಾಳ ಮತ್ತು ಪಾಕಿಸ್ತಾನದಲ್ಲಿ ಪಶುವೈದ್ಯಕೀಯ ಬಳಕೆಗಾಗಿ ಡೈಕ್ಲೋಫಿನಾಕ್‌ ಔಷಧವನ್ನು ನಿಷೇಧಿಸಲಾಯಿತು, ಆದರೆ ಇದು ಇಂದಿಗೂ ಅಕ್ರಮವಾಗಿ ಮಾರಾಟ ಮಾಡಲಾಗುತ್ತಿದೆ ಎಂದು ತಿಳಿದು ಬಂದಿದೆ. ಜೊತೆಗೆ ಡೈಕ್ಲೋಫಿನಾಕ್‌ ಬದಲಿಗೆ ಮೆಲೋಕ್ಸಿಕಾಮ್ ಎಂಬ ಔಷಧಿಯನ್ನು ಪರಿಚಯಿಸಿದ್ದು ಇದು ಹೆಚ್ಚಿನ ಬೆಲೆ ಎನ್ನುವ ಕಾರಣಕ್ಕೆ ರೈತರು ಹೆಚ್ಚಾಗಿ ಖರೀದಿಸುತ್ತಿಲ್ಲ.

ಜೊತೆಗೆ ರಣಹದ್ದುಗಳು ವರ್ಷಕ್ಕೆ ಒಂದೇ ಮೊಟ್ಟೆಯನ್ನು ಇಡುತ್ತವೆ. ಕೆಲವೊಮ್ಮೆ ವಾತಾವರಣ ಬದಲಾವಣೆ, ರಣಹದ್ದುಗಳ ಮೊಟ್ಟೆಯನ್ನು ಬೇರೆ ಪಕ್ಷಿಗಳು ನಾಶ ಮಾಡುವುದು, ಮೊಟ್ಟೆ ಇಡುವ ಸಮಯದಲ್ಲಿ ರಣಹದ್ದುಗಳಿಗೆ ಆಹಾರದ ಕೊರತೆಯಿಂದಾಗಿಯೂ ಕೂಡ ರಣಹದ್ದುಗಳ ಅವನತಿಗೆ ಕಾರಣ ಎನ್ನುತ್ತಾರೆ ಶಶಿಕುಮಾರ್.

ರಣಹದ್ದುಗಳ ಸಂಖ್ಯೆ ಹೆಚ್ಚಾಗಬೇಕೆಂದರೆ ಫೀಡಿಂಗ್ ಸೆಂಟರ್​ಗಳನ್ನು ತೆರೆಯಬೇಕು. ರಣಹದ್ದುಗಳನ್ನು ಬಿಟ್ಟು ಯಾವುದೇ ಪ್ರಾಣಿಗಳು ಪ್ರವೇಶ ಮಾಡದಂತೆ ಕೇಜ್ ನಿರ್ಮಿಸಿ, ಅಲ್ಲಿ ಕುರಿಯನ್ನು 15 ದಿನ ಕ್ವಾರೆಂಟೈನ್ ಮಾಡಬೇಕು. ಕ್ವಾರೆಂಟೈನ್ ಮಾಡುವುದಿಂದ ಪ್ರಣಿಗಳಿಗೆ ಹಾಕಲಾದ ಡೈಕ್ಲೋಫಿನಾಕ್‌ ಅಂಶ ನಾಶವಾಗುತ್ತೆ. ಈ ರೀತಿ ಕ್ವಾರೆಂಟೈನ್ ಮಾಡಲಾದ ಮಾಂಸವನ್ನು ರಣಹದ್ದುಗಳಿಗೆ ನೀಡಬೇಕು. ರಣಹದ್ದುಗಳು ಗೂಡು ಕಟ್ಟುವುದಿಲ್ಲ. ಬಂಡೆ ಕಲ್ಲುಗಳ ನಡುವೆಯೇ ಸೂಕ್ತ ಸ್ಥಳವನ್ನು ಹುಡಿಕೊಳ್ಳುತ್ತವೆ. ನವೆಂಬರ್-ಮಾರ್ಚ್​ ತಿಂಗಳು ಮೊಟ್ಟೆ ಇಡುವ ಸಮಯ. ರಣಹದ್ದು ಮೊಟ್ಟೆ ಇಟ್ಟ ನಂತರ 50-60 ದಿಗಳ ಕಾಲ ಕಾವು ಕೊಡುತ್ತೆ. ಕಾವು ಕೊಡುವ ವೇಳೆ ರಣಹದ್ದುಗಳು ಆಹಾರದ ಸಮಸ್ಯೆಗಳನ್ನು ಎದುರಿಸುತ್ತಿವೆ.

ಕೆಲವು ಬ್ರೀಡಿಂಗ್ ಸೆಂಟರ್​ಗಳಲ್ಲಿ ರಣಹದ್ದುಗಳು ಮೊಟ್ಟೆ ಇಟ್ಟ ನಂತರ ಆ ಮೊಟ್ಟೆಗಳನ್ನು ಎತ್ತಿಕೊಂಡು ಕಾವು ನೀಡಲಾಗುತ್ತೆ. ತಾಯಿ ರಣಹದ್ದಿಗೆ ಹೆಚ್ಚಿನ ಪ್ರಮಾಣದಲ್ಲಿ ಉತ್ತಮ ಆಹಾರ ನೀಡಿ ಮತ್ತೊಂದು ಮೊಟ್ಟೆ ಇಡಿಸಲು ತಯಾರಿ ಮಾಡಲಾಗುತ್ತೆ. ಮರಿ ರಣಹದ್ದು ಮೊಟ್ಟೆ ಇರುವ ಹಂತಕ್ಕೆ ಬರಲು ಐದರಿಂದ-ಆರು ವರ್ಷ ಬೇಕಾಗುತ್ತೆ.

ಇತ್ತೀಚೆಗೆ ಪ್ರಾಣಿ-ಪಕ್ಷಿಗಳ ಮೇಲೆ ವೈಜ್ಞಾನಿಕ ಸ್ಟಡಿಗಳು ನಡೆಯುತ್ತಿಲ್ಲ. ಸರ್ಕಾರ ಇತರೆ ಸಂಸ್ಥೆಗಳಿಗೆ ಸ್ಟಡಿ ಮಾಡಲು ಅವಕಾಶ ನೀಡಬೇಕು. ಅಳುವಿನಂಚಿನಲ್ಲಿರುವ ರಣಹದ್ದುಗಳ ರಕ್ಷಣೆಗೆ ಕ್ರಮಕೈಗೊಳ್ಳಬೇಕು. ಇಂತಹ ವಿಚಾರಗಳಲ್ಲಿ ಸರ್ಕಾರ ನಿಧಾನವಾಗಿ ಸಾಗಿದರೆ ಆ ಪ್ರಾಣಿ-ಪಕ್ಷಿಗಳು ಅಳವಿನ ಅಂಚಿಗೆ ಸರ್ಕಾರವೇ ಕಾರಣವಾಗುತ್ತೆ ಎಂದು ಶಶಿಕುಮಾರ್ ತಿಳಿಸಿದರು.

ಬನ್ನೇರುಘಟ್ಟದಲ್ಲಿ ಬ್ರೀಡಿಂಗ್ ಸೆಂಟರ್ ರೆಡಿಯಾಗ್ತಿದೆ. ಮುಂದೆ ಹರಿಯಾಣದಿಂದ ಕೆಲವು ರಣಹದ್ದುಗಳನ್ನು ಇಲ್ಲಿಗೆ ತಂದು ಅವುಗಳನ್ನು ಬ್ರೀಡ್ ಮಾಡಿ ಅವುಗಳನ್ನು ರಾಮದೇವರ ಬೆಟ್ಟ ಸೇರಿದಂತೆ ಸುತ್ತಮುತ್ತಲಿನ ಬೆಟ್ಟಗಳಲ್ಲಿ ಬಿಡುವ ಬಗ್ಗೆ ಸಿದ್ಧತೆ ನಡೆದಿದೆ. ಮೊದಲು ರಾಮದೇವರ ಬೆಟ್ಟದಲ್ಲಿ ಬಿಡುತ್ತೇವೆ. ಸಕ್ಸಸ್ ಆದ್ರೆ ಎಲ್ಲೆಲ್ಲಿ ರಣಹದ್ದುಗಳ ವಾಸ ಕಂಡುಬರುತ್ತೋ ಅಲ್ಲಿ ಬಿಡುತ್ತೇವೆ ಎಂದು ರಾಮನಗರದ ಉಪ ಅರಣ್ಯ ಸಂರಕ್ಷಣಾಧಿಕಾರಿ ಎಂ.ರಾಮಕೃಷ್ಣಪ್ಪ ಟಿವಿ9 ಪ್ರೀಮಿಯಮ್ ನ್ಯೂಸ್ ಆ್ಯಪ್​ಗೆ ತಿಳಿಸಿದ್ದಾರೆ.

ಬನ್ನೇರುಘಟ್ಟದಲ್ಲಿ ಬ್ರೀಡಿಂಗ್ ಸೆಂಟರ್ ರೆಡಿಯಾದ ಬಳಿಕ ರಾಮನಗರದಲ್ಲಿ ತಾತ್ಕಾಲಿಕವಾಗಿ ಫ್ಯಾಬ್ರಿಕೇಟೆಡ್ ರಿಲೀಸಿಂಗ್ ಸೆಂಟರ್ ಮಾಡ್ತೀವಿ. ಇಲ್ಲಿ ವಿಜಿಬಲ್ ಶೆಟರ್ ನಿರ್ಮಿಸಿ ರಣಹದ್ದುಗಳಿಗೆ ಫೀಡ್ ಹಾಕ್ತೀವಿ. ಹೊಸ ರಣಹದ್ದುಗಳಿಗೆ ಲೊಕೇಶನ್ ಗೊತ್ತಾಗಲ್ಲ ಹೀಗಾಗಿ ನಾವು ರಿಲೀಸ್ ಮಾಡಿದ ರಣಹದ್ದುಗಳು ಸಹಾಯ ಮಾಡ್ತಾವೆ. ಮೂರು-ನಾಲ್ಕು ವರ್ಷದಿಂದ ನಾಲ್ಕು ರಣಹದ್ದುಗಳು ಕಾಣಿಸಿಕೊಂಡಿವೆ. ಈ ಬಾರಿ ಸರ್ವೆ ಮಾಡಬೇಕೆಂದುಕೊಂಡಿದ್ದೇವೆ. ಆಹಾರ ಸಿಗುವ ಹಿನ್ನೆಲೆ ಬಂಡೀಪುರ, ನಾಗರಹೊಳೆ ಕಡೆ ಹೆಚ್ಚಿನ ಸಂಖ್ಯೆಯಲ್ಲಿ ರಣಹದ್ದುಗಳು ಕಾಣಿಸಿಕೊಂಡಿವೆ ಎಂದು ತಿಳಿಸಿದರು.

ರಣಹದ್ದು ಏಕ ಪತ್ನಿ ವ್ರತಸ್ಥ

ರಣಹದ್ದುಗಳ ಬಗ್ಗೆ ವಿಶೇಷ ಅಧ್ಯಯನ ನಡೆಸಿದ ಪಕ್ಷಿ ಪ್ರೇಮಿಗಳು ಕುತೂಹಲಕರ ಮಾಹಿತಿಯನ್ನು ಹೊರ ಹಾಕಿದ್ದಾರೆ. ರಣಹದ್ದು ಬಹು ಸೂಕ್ಷ್ಮ ಪಕ್ಷಿ. ಇವು ಒಂದೇ ಹೆಣ್ಣಿನ ಸಂಗ ಬಯಸುತ್ತವೆ. ಇನ್ನು ಈಜಿಪ್ಟಿಯನ್‌ ರಣಹದ್ದು ವರ್ಷಕ್ಕೆ 2 ಮೊಟ್ಟೆ ಇಟ್ಟು ಮರಿ ಮಾಡಿದರೆ, ಉದ್ದಕೊಕ್ಕಿನ ರಣಹದ್ದು ವರ್ಷಕ್ಕೆ ಕೇವಲ ಒಂದು ಮೊಟ್ಟೆ ಮಾತ್ರ ಇಡುತ್ತದೆ. ಇವು ನವೆಂಬರ್‌-ಡಿಸೆಂಬರ್‌ ಮಾಸದಲ್ಲಿ ಮೊಟ್ಟೆ ಇಟ್ಟು ಮರಿ ಮಾಡುತ್ತವೆ.

ರಣಹದ್ದುಗಳು ಪರಿಸರ ಸ್ವಚ್ಚತೆಯ ಪೌರಕಾರ್ಮಿಕರು

ಮಾಂಸಹಾರಿ ಪ್ರಾಣಿಗಳು ಸಸ್ಯಹಾರಿ ಪ್ರಾಣಿಗಳನ್ನು ತಿಂದು ಬದುಕಿದರೆ, ಮಾಂಸಹಾರಿ ಪ್ರಾಣಿಗಳು ಸತ್ತಾಗ ಅವುಗಳನ್ನು ತಿನ್ನುವುದು ರಣಹದ್ದುಗಳು. ಆದ್ದರಿಂದ ರಣಹದ್ದುಗಳನ್ನು ಪರಿಸರ ಸ್ವಚ್ಚತೆಯ ಪೌರಕಾರ್ಮಿಕರು ಎನ್ನುತ್ತಾರೆ. ಆ ಮೂಲಕ ಪರಿಸರ ಸಮತೊಲನಕ್ಕೆ ತನ್ನದೇ ಕೊಡುಗೆಯನ್ನು ಅವುಗಳು ನೀಡುತ್ತವೆ. ರಣಹದ್ದುಗಳು ಗುಂಪು ಗುಂಪಾಗಿ ಹಾರಾಡುತ್ತಲೇ ಆಹಾರ ಹುಡುಕುತ್ತವೆ. ಮೃತ ಪ್ರಾಣಿ, ಪಕ್ಷಿಗಳನ್ನು ತಿನ್ನುತ್ತವೆ. ಎತ್ತರವಾದ ಮರಗಳು, ಕಟ್ಟಡಗಳು, ನೇರವಾದ ಬಂಡೆ, ಗೋಪುರಗಳು ಸೇರಿದಂತೆ ಎತ್ತರದ ಸುರಕ್ಷತಾ ಸ್ಥಳಗಳಲ್ಲಿ ವಾಸಿಸುತ್ತವೆ. ರಣಹದ್ದುಗಳು ಗೂಡನ್ನು ಕಡ್ಡಿಗಳಿಂದಲೂ ಸುರಳಿಗಳಿಂದಲೂ ಕಟ್ಟುತ್ತವೆ.

ಹೆಣಗಳನ್ನು ರಣಹದ್ದಿಗೆ ಆಹಾರವಾಗಿ ನೀಡುವ ಪಾರ್ಸಿಗಳು

ಪಾರ್ಸಿ ಸಮುದಾಯದಲ್ಲಿ ಶವ ಸಂಸ್ಕಾರ ಎಂಬ ಪದ್ಧತಿ ಬಹಳ ವಿಭಿನ್ನ. ಇವರಲ್ಲಿ ಹೆಣವನ್ನು ಸುಡುವಂತಿಲ್ಲ, ಹೂಳುವಂತಿಲ್ಲ. ಗಾಳಿ, ನೀರು ಮತ್ತು ಪೃಥ್ವಿಯಲ್ಲಿ ಮಾಲಿನ್ಯ ಉಂಟಾಗದಂತೆ ಅಂತ್ಯಕ್ರಿಯೆ ನೆರವೇರಿಸಬೇಕು ಎನ್ನುವ ಪದ್ಧತಿ ಇದೆ. ಹೀಗಾಗಿ ಅವರು ಶವವನ್ನು ರಣಹದ್ದುಗಳು ತಿನ್ನಲು ಬಿಡುತ್ತಾರೆ. ರಣಹದ್ದುಗಳಿಗೆ ಬ್ಯಾಕ್ಟೀರಿಯಾ, ಫಂಗಸ್ ಜೀರ್ಣಿಸಿಕೊಳ್ಳುವ ಶಕ್ತಿ ಇದೆ. ಈಗ ರಣಹದ್ದುಗಳ ಸಂಖ್ಯೆ ಗಣನೀಯವಾಗಿ ಕ್ಷೀಣಿಸಿರುವುದರಿಂದ ಆ ಸಮುದಾಯದವರು ಅನಿವಾರ್ಯವಾಗಿ ಅನ್ಯ ಮಾರ್ಗ ಕಂಡುಕೊಳ್ಳುವಂತಾಗಿದೆ.

Published On - 3:32 pm, Mon, 6 May 24