ರೈತ, ಎತ್ತು ಹಾಗೂ ನೆಲಕ್ಕಿದೆ ಅವಿನಾಭಾವದ ನಂಟು: ಜಿಲ್ಲೆಯಲ್ಲಿ ಮಣ್ಣೆತ್ತಿನ ಅಮವಾಸೆ ಸಂಭ್ರಮ

|

Updated on: Jun 21, 2020 | 7:25 PM

ಕಲಬುರಗಿ: ಭಾರತ ಸಂಪ್ರದಾಯವನ್ನ ಪಾಲಿಸುವ ಮತ್ತ ಧರ್ಮವನ್ನು ಗೌರವಿಸುವ ದೇಶ. ಇದು ಈ ನೆಲದ ಸಂಸ್ಕಾರ. ಕೃಷಿ ಪ್ರಧಾನವಾಗಿರುವ ಭಾರತದಲ್ಲಿ ರೈತ ದೇಶದ ಬೆನ್ನೆಲುಬಾದ್ರೆ ನೆಲ ಮತ್ತು ಎತ್ತುಗಳು ರೈತನ ಎರಡು ಆಧಾರಗಳು. ಹೀಗಾಗಿ ಈ ನೆಲ ಜಲ ಮತ್ತು ಎತ್ತುಗಳನ್ನ ಗೌರವಿಸುವುದಕ್ಕಾಗಿಯೇ ರೈತರು ಅನೇಕ ಹಬ್ಬ ಹರಿದಿನಗಳನ್ನ ಆಚರಿಸುತ್ತಾರೆ. ಈ ಮೂಲಕ ಅನ್ನ ನೀಡುವ ಭೂತಾಯಿ ಮತ್ತು ಬೆಳೆ ಬೆಳೆಯಲು ನೆರವಾಗುವ ಎತ್ತುಗಳನ್ನ ಪೂಜಿಸ್ತಾರೆ. ಇಂಥ ಹಬ್ಬಗಳಲ್ಲಿ ಮಣ್ಣೆತ್ತಿನ ಅಮವಾಸೆ ಪ್ರಮುಖವಾದದ್ದು. ರೈತ, ಎತ್ತುಗಳು ಹಾಗೂ […]

ರೈತ, ಎತ್ತು ಹಾಗೂ ನೆಲಕ್ಕಿದೆ ಅವಿನಾಭಾವದ ನಂಟು: ಜಿಲ್ಲೆಯಲ್ಲಿ ಮಣ್ಣೆತ್ತಿನ ಅಮವಾಸೆ ಸಂಭ್ರಮ
Follow us on

ಕಲಬುರಗಿ: ಭಾರತ ಸಂಪ್ರದಾಯವನ್ನ ಪಾಲಿಸುವ ಮತ್ತ ಧರ್ಮವನ್ನು ಗೌರವಿಸುವ ದೇಶ. ಇದು ಈ ನೆಲದ ಸಂಸ್ಕಾರ. ಕೃಷಿ ಪ್ರಧಾನವಾಗಿರುವ ಭಾರತದಲ್ಲಿ ರೈತ ದೇಶದ ಬೆನ್ನೆಲುಬಾದ್ರೆ ನೆಲ ಮತ್ತು ಎತ್ತುಗಳು ರೈತನ ಎರಡು ಆಧಾರಗಳು. ಹೀಗಾಗಿ ಈ ನೆಲ ಜಲ ಮತ್ತು ಎತ್ತುಗಳನ್ನ ಗೌರವಿಸುವುದಕ್ಕಾಗಿಯೇ ರೈತರು ಅನೇಕ ಹಬ್ಬ ಹರಿದಿನಗಳನ್ನ ಆಚರಿಸುತ್ತಾರೆ. ಈ ಮೂಲಕ ಅನ್ನ ನೀಡುವ ಭೂತಾಯಿ ಮತ್ತು ಬೆಳೆ ಬೆಳೆಯಲು ನೆರವಾಗುವ ಎತ್ತುಗಳನ್ನ ಪೂಜಿಸ್ತಾರೆ. ಇಂಥ ಹಬ್ಬಗಳಲ್ಲಿ ಮಣ್ಣೆತ್ತಿನ ಅಮವಾಸೆ ಪ್ರಮುಖವಾದದ್ದು.

ರೈತ, ಎತ್ತುಗಳು ಹಾಗೂ ನೆಲ-ಜಲಗಳ ನಡುವಿನ ಸಂಬಂಧ ಅವಿನಾಭಾವ
ಹೌದು, ಮಣ್ಣು ಮತ್ತು ಮಾನವನಿಗೆ ಅವಿನಾಭಾವ ಸಂಬಂಧ. ಅದರಲ್ಲೂ ರೈತರಿಗೆ ಮಣ್ಣಿನ ಜೊತೆ ಹೆಚ್ಚು ಸಂಬಂಧ. ಹೀಗಾಗಿ ಮಣ್ಣನ್ನು ಕೂಡಾ ರೈತರು ದೇವ ಸ್ವರೂಪಿಯಾಗಿ ಕಾಣ್ತಾರೆ. ಅದರಲ್ಲೂ ಕಲಬುರಗಿ ಸೇರಿದಂತೆ ಉತ್ತರ ಕರ್ನಾಟಕದ ಭಾಗದಲ್ಲಿ ರೈತರಿಗೆ ಎತ್ತುಗಳು ಎರಡು ಕಣ್ಣುಗಳಿದ್ದಂತೆ. ಹೀಗಾಗಿ ಕಾರ ಹುಣ್ಣಿಮೆಯೆಂದು ಎತ್ತುಗಳಿಗೆ ಸಿಂಗರಿಸಿ ಪೂಜೆ ಮಾಡುವ ರೈತರು, ಮಣ್ಣಿತ್ತಿನ ಅಮವಾಸ್ಯೆ ದಿನ ಮಣ್ಣಿನಿಂದ ಎತ್ತುಗಳನ್ನು ಮಾಡಿ ಅವುಗಳಿಗೆ ಪೂಜೆ ಮಾಡುತ್ತಾರೆ. ಈ ಸಂಪ್ರದಾಯ ಅನಾದಿ ಕಾಲದಿಂದಲೂ ನಡೆದುಕೊಂಡು ಬಂದಿದೆ.

TV9 Kannada

ಎನಿದು ಮಣ್ಣೆತ್ತಿನ ಅಮವಾಸ್ಯೆ
ಕಾರ ಹುಣ್ಣಿಮೆಯ ನಂತರ ಬರುವುದೇ ಮಣ್ಣೆತ್ತಿನ ಅಮವಾಸ್ಯೆ. ಮಣ್ಣೆತ್ತಿನ ಅಮವಾಸ್ಯೆಯೆಂದು ರೈತರು ಜಿಗುಟಾಗಿರೋ ಮಣ್ಣಿನಲ್ಲಿ ಜೋಡಿ ಎತ್ತುಗಳನ್ನು ಮಾಡುತ್ತಾರೆ. ನಂತರ ಅವುಗಳಿಗೆ ಕೆಲವರು ಬಣ್ಣ ಹಚ್ಚಿದ್ರೆ, ಇನ್ನು ಕೆಲವರು ಪುಟ್ಟ ಅಲಂಕಾರಿಕ ವಸ್ತುಗಳಿಂದ ಸಿಂಗಾರ ಮಾಡ್ತಾರೆ. ನಂತರ ಮನೆಯ ದೇವರ ಕೋಣೆಯಲ್ಲಿಟ್ಟು ಪೂಜೆ ಮಾಡ್ತಾರೆ.

ಮನೆಯ ಪೂಜೆ ನಂತರ ಕೆಲವರು ಗ್ರಾಮದ ಹನಮಂತ ದೇವರು, ಗ್ರಾಮ ದೇವತೆಯ ದೇವಸ್ಥಾನಗಳಿಗೆ ಮಣ್ಣಿನ ಎತ್ತುಗಳನ್ನು ತೆಗೆದುಕೊಂಡು ಹೋಗಿ ಪೂಜೆ ಮಾಡಿಕೊಂಡು ಬರ್ತಾರೆ. ಪೂಜೆ ಮಾಡಿದ ನಂತರ ಮಣ್ಣಿನ ಎತ್ತುಗಳಿಗೆ, ಹೋಳಿಗೆ, ಕಡಬಿನಿಂದ ಮಾಡಿದ ಆಹಾರವನ್ನು ಎಡೆ ಇಡುತ್ತಾರೆ ಅಂದ್ರೆ ನೈವೇದ್ಯ ಮಾಡುತ್ತಾರೆ. ನಂತರ ತಮ್ಮ ಮನೆಯ ಹಿತ್ತಲಲ್ಲಿ ಅಥವಾ ಜಮೀನಿನಲ್ಲಿ ಈ ಮಣ್ಣಿನ ಎತ್ತುಗಳನ್ನು ಇಟ್ಟು ಭೂ ತಾಯಿ ಮತ್ತು ಎತ್ತುಗಳು ನಮ್ಮನ್ನು ಕಾಪಾಡಲಿ ಅಂತ ಪ್ರಾರ್ಥನೆ ಮಾಡುತ್ತಾರೆ.

ಎತ್ತುಗಳು ರೈತರ ಎರಡು ಕಣ್ಣುಗಳು
ರೈತರಿಗೆ ಎತ್ತುಗಳು ಕಣ್ಣುಗಳಿದ್ದಂತೆ. ಮತ್ತೊಂದಡೆ ಮಣ್ಣು ಕೂಡಾ ದೇವ ಸ್ವರೂಪಿ. ಹೀಗಾಗಿ ಎತ್ತು ಮತ್ತು ಮಣ್ಣನ್ನು ರೈತರು ಪೂಜೆ ಮಾಡ್ತಾರೆ. ಎತ್ತುಗಳು ಜಮೀನಿನಲ್ಲಿ ರೈತನಿಗೆ ಹಗಲಿರಳು ದುಡಿಯುವಲ್ಲಿ ನೆರವಾಗುತ್ತವೆ. ಮತ್ತೊಂದಡೆ ಭೂತಾಯಿ ರೈತನಿಗೆ ಅನ್ನ ನೀಡ್ತಾಳೆ. ಹೀಗಾಗಿ ಮಣ್ಣು ಮತ್ತು ಎತ್ತುಗಳನ್ನು ರೈತರು ಪೂಜನೀಯ ಭಾವದಿಂದ ಕಾಣ್ತಾರೆ. ಅದರಲ್ಲೂ ಮುಂಗಾರು ಮಳೆ ಪ್ರಾರಂಭದ ನಂತರ ಬರುವ ಕಾರ ಹುಣ್ಣಿಮೆ ಮತ್ತು ಮಣ್ಣೆತ್ತಿನ ಅಮವಾಸ್ಯೆಗಳನ್ನ ರೈತರು ಸಂಭ್ರಮದಿಂದ ಆಚರಿಸುತ್ತಾರೆ. ತಮ್ಮ ನೋವು ನಲಿವುಗಳನ್ನು ಬದಿಗಿಟ್ಟು, ಎತ್ತುಗಳನ್ನು ಪೂಜಿಸುತ್ತಾರೆ. ಕಾರ ಹುಣ್ಣಿಮೆಯ ಸಮಯದಲ್ಲಿ ಎತ್ತುಗಳನ್ನು ಪೂಜಿಸಿದ್ರೆ, ಮಣ್ಣೆತ್ತಿನ ಅಮವಾಸ್ಯೆಯಂದು ಮಣ್ಣಿನಿಂದ ಮಾಡಿದ ಎತ್ತುಗಳನ್ನು ಪೂಜಿಸುತ್ತಾರೆ.

ಇನ್ನು ಉತ್ತರ ಕರ್ನಾಟಕ ಬಾಗದಲ್ಲಿ ಅನೇಕ ಹಬ್ಬಗಳಿಗೂ ಮತ್ತು ಮಣ್ಣಿಗೂ ಸಂಬಂಧವಿದೆ. ಮಣ್ಣೆತ್ತಿನ ಅಮವಾಸ್ಯೆಯಂದು ಮಣ್ಣಿನಿಂದ ಎತ್ತುಗಳನ್ನು ಮಾಡಿ ಪೂಜಿಸುವ ಜನರು, ನಂತರ ನಾಗರ ಪಂಚಮಿಗೆ ಮಣ್ಣಿನಿಂದ ನಾಗರ ಹಾವನ್ನು ಮಾಡಿ ಪೂಜಿಸುತ್ತಾರೆ. ಇದಾದ ನಂತರ ಗೌರಿ ಹುಣ್ಣಿಮೆಗೆ ಮಣ್ಣಿನ ಗೌರಿಯನ್ನು ಮಾಡ್ತಾರೆ. ಗಣೇಶ ಚತುರ್ಥಿಯಂದು ಮಣ್ಣಿನ ಗಣೇಶನನ್ನು ಮಾಡಿ ಪೂಜಿಸುತ್ತಾರೆ. ನಂತರ ಮಣ್ಣಿನಿಂದ ಮಾಡಿದ ಜೋಕಮಾರನನ್ನು ಮಾಡಿ ಚರಗವನ್ನು ಚೆಲ್ಲುವ ಮೂಲಕ ಆ ವರ್ಷವನ್ನು ಮಣ್ಣಿನ ಪೂಜೆಯ ಮೂಲಕ ಮುಗಿಸುತ್ತಾರೆ.

ಮಾರುಕಟ್ಟೆಗೆ ಲಗ್ಗೆಯಿಟ್ಟಿರುವ ಕಲರ್ ಕಲರ್ ಎತ್ತುಗಳು
ಗ್ರಾಮೀಣ ಭಾಗದಲ್ಲಿನ ರೈತರು ಇಂದಿಗೂ ಕೂಡಾ ಜಮೀನಿನಿಂದ ತಂದ ಮಣ್ಣಿನಲ್ಲಿ ಎತ್ತುಗಳನ್ನು ಮಾಡಿ ಪೂಜೆಸುತ್ತಾರೆ. ಆದ್ರೆ ನಗರದಲ್ಲಿರುವವರಿಗೆ ಮಣ್ಣು ಸಿಗೋದು ಕಷ್ಟ. ಹೀಗಾಗಿ ಅನೇಕರು ಮಾರುಕಟ್ಟೆಯಲ್ಲಿ ಸಿಗುವ ಕಲರ್ ಕಲರ್ ಮಣ್ಣಿನ ಎತ್ತುಗಳನ್ನು ಖರೀದಿಸಿ ಮನೆಯಲ್ಲಿಟ್ಟು ಪೂಜೆ ಮಾಡ್ತಾರೆ. ಅನೇಕ ಕುಂಬಾರರು ಈ ಸಮಯದಲ್ಲಿ ಮಣ್ಣಿನ ಎತ್ತುಗಳನ್ನು ಸಿದ್ದ ಮಾಡಿ ಮಾರಾಟ ಮಾಡ್ತಾರೆ. ಇದು ಕಲಬುರಗಿ ಸೇರಿದಂತೆ ಬಹುತೇಕ ಉತ್ತರ ಕರ್ನಾಟಕದ ನಗರದವಾಸಿಗಳು ಮಣ್ಣೆತ್ತಿನ ಅಮವಾಸೆ ಆಚರಿಸುವ ಪರಿ. ಈ ಸಾರಿಯೂ ಮಣ್ಣಿನ ಎತ್ತುಗಳ ಮಾರಾಟ ಕೂಡಾ ಕಲಬರುಗಿಯಲ್ಲಿ ಜೋರಾಗಿ ನಡೆಯುತ್ತಿದೆ. ಅನೇಕರು ಐವತ್ತರಿಂದ ನೂರು ರೂಪಾಯಿ ನೀಡಿ, ಮಣ್ಣಿನ ಸುಂದರ ಎತ್ತುಗಳನ್ನು ತಗೆದುಕೊಂಡು ಹೋಗಿ ಪೂಜೆ ಮಾಡುತ್ತಿದ್ದಾರೆ.-ಸಂಜಯ್ ಚಿಕ್ಕಮಠ

Published On - 1:44 pm, Sun, 21 June 20