ಕಲಬುರಗಿ: ಸ್ಥಳೀಯವಾಗಿ ಸರಿಯಾಗಿ ಉದ್ಯೋಗ ಸಿಗದೇ ಇದ್ದಿದ್ದರಿಂದ ಜಿಲ್ಲೆಯ ಲಕ್ಷಕ್ಕೂ ಅಧಿಕ ಜನರು ಕೂಲಿ ಕೆಲಸವರಸಿ ನೆರೆಯ ರಾಜ್ಯಗಳಿಗೆ, ಬೆಂಗಳೂರಿಗೆ ಪ್ರತಿ ವರ್ಷ ಹೋಗ್ತಾರೆ. ಅದೇ ರೀತಿ ಈ ವರ್ಷ ಕೂಡಾ ಲಕ್ಷಕ್ಕೂ ಅಧಿಕ ಜನರು ಕೂಲಿ ಅರಸಿಕೊಂಡು ಗುಳೆ ಹೋಗಿದ್ದರು. ಆದ್ರೆ ಇದೀಗ ಅವರ ಕೆಲಸಕ್ಕೆ ಕೊರೊನಾ ಬರೆ ಎಳೆದಿದೆ. ಹೀಗಾಗಿ ವಲಸೆ ಹೋಗಿದ್ದ ಕಾರ್ಮಿಕರು ತವರು ಸೇರಿದ್ದಾರೆ. ಇಂತಹ ತವರು ಸೇರಿದ್ದ ಕಾರ್ಮಿಕರಿಗೆ ಇದೀಗ ನರೇಗಾ ಕೆಲಸ ವರದಾನವಾಗುತ್ತಿದೆ.
ಹೌದು ಪ್ರತಿ ವರ್ಷ ಬೇಸಿಗೆಯ ಸಂದರ್ಭದಲ್ಲಿ ಲಕ್ಷಕ್ಕೂ ಅಧಿಕ ಜನರು ರಾಜ್ಯದ ಬೆಂಗಳೂರು ಮತ್ತು ನೆರೆಯ ಮಹಾರಾಷ್ಟ್ರ, ತೆಲಂಗಾಣ ರಾಜ್ಯಕ್ಕೆ ಕೂಲಿ ಅರಸಿ ಹೋಗ್ತಿದ್ದರು. ಸಾಲ ಮಾಡಿ ದೂರದ ಊರುಗಳಿಗೆ ಹೋಗಿದ್ದ ಕಾರ್ಮಿಕರಿಗೆ ಈ ಬಾರಿ ಕೊರೊನಾ ಹೊಡೆತ ನೀಡಿತ್ತು. ಹೀಗಾಗಿ ಕಾರ್ಮಿಕರು ಬದುಕಿದ್ರೆ ಮುಂದೆ ನೋಡೋಣಾ ಅಂತ ಮರಳಿ ತವರು ಜಿಲ್ಲೆಗೆ ಸೇರಿದ್ದಾರೆ. ನೆರೆಯ ರಾಜ್ಯಗಳಿಂದ ಲಕ್ಷಕ್ಕೂ ಅಧಿಕ ಜನರು ಬಂದಿದ್ದಾರೆ. ಕೂಲಿ ಕೆಲಸವಿಲ್ಲದೆ ಕಂಗಾಲಾಗಿದ್ದವರ ಸಂಕಷ್ಟಕ್ಕೆ ಜಿಲ್ಲಾ ಪಂಚಾಯತ್ ನೆರವು ನೀಡಲು ಮುಂದಾಗಿದೆ. ಹೌದು ನೆರೆ ರಾಜ್ಯದಿಂದ ಬಂದಿರುವ ವಲಸೆ ಕಾರ್ಮಿಕರಿಗೆ ಇದೀಗ ದುಡಿಯಲು ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕೆಲಸ ಕೊಡಲಾಗುತ್ತಿದೆ.
ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕೂಲಿ:
ಈಗಾಗಲೇ ಜಿಲ್ಲೆಯಲ್ಲಿ ಸಾವಿರಾರು ಕಾರ್ಮಿಕರು ಕೆಲಸ ಮಾಡ್ತಿದ್ದಾರೆ. ಜಾಬ್ ಕಾರ್ಡ್ ಇಲ್ಲದೇ ಇರುವವರಿಗೆ ಕೂಡಾ ಜಾಬ್ ಕಾರ್ಡ್ ಮಾಡಿಕೊಟ್ಟು ಕೆಲಸ ನೀಡಲಾಗುತ್ತಿದೆ. ಗ್ರಾಮೀಣ ಭಾಗದಲ್ಲಿರುವ ಕೆರೆಗಳ ಹೂಳೆತ್ತುವುದು, ಹೊಲದಲ್ಲಿ ಬದವು ನಿರ್ಮಾಣ ಸೇರಿದಂತೆ ಅನೇಕ ಕೆಲಸಗಳನ್ನು ಉದ್ಯೋಗ ಖಾತ್ರಿ ಯೋಜನೆಯಲ್ಲಿ ನೀಡಲಾಗುತ್ತಿದೆ. ಇದು ಕಾರ್ಮಿಕರಿಗೆ ಇದೀಗ ವರದಾನವಾಗುತ್ತಿದೆ. ಕೆಲಸವಿಲ್ಲದೆ ಮನೆಯಲ್ಲಿ ಕಂಗಾಲಾಗಿದ್ದ ಕುಟುಂಬಗಳಿಗೆ ಕೆಲಸ ನೀಡಿದ್ದರಿಂದ ಹೆಚ್ಚಿನ ಅನಕೂಲವಾಗುತ್ತಿದೆ. ಕಲಬುರಗಿ ತಾಲೂಕಿನಲ್ಲಿಯೇ 3 ಕೆರೆಗಳ ಹೂಳೆತ್ತುವ ಕೆಲಸವನ್ನು ಮಾಡಲಾಗುತ್ತಿದ್ದು, ಮೂರುವರೆ ಸಾವಿರ ಕಾರ್ಮಿಕರು ಕಳೆದ ಅನೇಕ ದಿನಗಳಿಂದ ಕೆಲಸ ಮಾಡ್ತಿದ್ದಾರೆ.
ಸಮಾಜಿಕ ಅಂತರ, ಮಾಸ್ಕ್ ಕಡ್ಡಾಯ:
ಕಾರ್ಮಿಕರಿಗೆ ಸಮಾಜಿಕ ಅಂತರ ಕಾಪಾಡುವದು, ಕಡ್ಡಾಯವಾಗಿ ಮಾಸ್ಕ್ ಹಾಕಿಕೊಳ್ಳಬೇಕು ಅಂತ ಅಧಿಕಾರಿಗಳು ಹೇಳಿದ್ದಾರೆ. ಆ ಮೂಲಕ ಕೊರೊನಾದ ಆತಂಕದ ನಡುವೆಯೇ ಕಾರ್ಮಿಕರಿಗೆ ಉದ್ಯೋಗ ನೀಡುವ ಕೆಲಸವನ್ನು ಜಿಲ್ಲಾ ಪಂಚಾಯತ್ ಮಾಡುತ್ತಿದೆ. ಆದ್ರು ಅನೇಕ ಕಾರ್ಮಿಕರು ಮಾಸ್ಕ್ಗಳನ್ನು ಧರಿಸುತ್ತಿಲ್ಲ. ಹೀಗಾಗಿ ಕಾರ್ಮಿಕರಿಗೆ ವರದಾನವಾಗಿರೋ ಉದ್ಯೋಗ ಖಾತ್ರಿ ಯೋಜನೆ, ಕೊವಿಡ್ ಹೆಚ್ಚಾಗುವ ಆತಂಕದ ವಾತಾವರಣವನ್ನು ಕೂಡಾ ಸೃಷ್ಟಿ ಮಾಡಿದೆ. ಹೀಗಾಗಿ ಅಧಿಕಾರಿಗಳು ಜನರಿಗೆ ಇನ್ನಷ್ಟು ತಿಳಿವಳಿಕೆಯನ್ನು ಮೂಡಿಸುವ ಕೆಲಸ ಮಾಡಬೇಕಿದೆ.