ಮಾಜಿ ಮುಖ್ಯಮಂತ್ರಿ ಹೆಚ್ಡಿ ಕುಮಾರಸ್ವಾಮಿ ಅವರು ತಮ್ಮ ಮನೆಯ ದೀಪಾಲಂಕಾರಕ್ಕ ಬೀದಿದೀಪಾಗಳ ಲೈನ್ ಕಲೆಕ್ಷನ್ ಬಳಸಿ ಅನಧಿಕೃತವಾಗಿ ವಿದ್ಯುತ್ ಬಳಕೆ ಮಾಡಿಕೊಂಡಿರುವುದು ಸದ್ಯ ಭಾರೀ ಸಂಚಲನ ಮೂಡಿಸಿದೆ. ಬೆಂಗಳೂರಿನ ಜೆಡಿಎಸ್ ಕಚೇರಿಯ ಗೋಡೆಗಳಲ್ಲಿ ‘ವಿದ್ಯುತ್ ಕಳ್ಳ ಕುಮಾರಸ್ವಾಮಿ’ ಎಂಬ ಪೋಸ್ಟರ್ಗಳನ್ನು ಅಂಟಿಸಿ ವ್ಯಂಗ್ಯವಾಡಲಾಗುತ್ತಿದೆ. ಮತ್ತೊಂದೆಡೆ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಇಂದು ಬಿವೈ ವಿಜಯೇಂದ್ರ ಅವರು ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಹೀಗಾಗಿ ಬೆಂಗಳೂರಿನ ಮಲ್ಲೇಶ್ವರಂನಲ್ಲಿ ರಸ್ತೆಯುದ್ಧಕ್ಕೂ ಬಿಜೆಪಿ ಬಾವುಟಗಳು ರಾರಾಜಿಸುತ್ತಿವೆ. ಎಲ್ಲೆಲ್ಲೂ ವಿಜಯೇಂದ್ರ ಪೋಸ್ಟರ್‌ಗಳು ಮಿಂಚುತ್ತಿವೆ. ಬಿಜೆಪಿ ಕಚೇರಿ ತಳಿರು ತೋರಣಗಳಿಂದ ಸಿಂಗಾರಗೊಂಡಿದ್ದು, ಕಮಲಪಾಳಯದಲ್ಲಿ ಹಬ್ಬದ ವಾತಾವರಣವೇ ನಿರ್ಮಾಣವಾಗಿದೆ. ಇದೆಲ್ಲದರ ಜೊತೆಗೆ ರಾಜ್ಯದ ಪ್ರಮುಖ ಸುದ್ದಿಗಳ ಮಾಹಿತಿಗಾಗಿ ಟಿವಿ9 ಡಿಜಿಟಲ್ ಲೈವ್ ಫಾಲೋ ಮಾಡಿ.
ತುಮಕೂರು: ಜಿಲ್ಲೆಯ ಕೊರಟಗೆರೆ ತಾಲೂಕಿನ ಬೈಚಾಪುರ ಕ್ರಾಸ್ನಲ್ಲಿ 2 ಬೈಕ್ಗಳ ನಡುವೆ ಡಿಕ್ಕಿಯಾಗಿ ಚಿಕ್ಕನಹಳ್ಳಿಯ ನಿವಾಸಿ ಬಾಬಾಜಾನ್(30) ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ನಡೆದಿದೆ. ನೂರುಲ್ಲಾ, ಧರ್ಮಣ್ಣ ಎಂಬುವವರಿಗೆ ಗಾಯವಾಗಿದ್ದು, ತಾಲೂಕು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಈ ಕುರಿತು ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಚಿತ್ರದುರ್ಗ: ಡಾ.ಶಿವಮೂರ್ತಿ ಮುರುಘಾ ಶರಣರ ವಿರುದ್ಧದ ಪೋಕ್ಸೋ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಾಳೆ(ನ.16) ಮುರುಘಾಶ್ರೀಗಳು ಬಿಡುಗಡೆ ಆಗಲಿದ್ದಾರೆ ಎಂದು ವಕೀಲ ಉಮೇಶ್ ಹೇಳಿದ್ದಾರೆ. ಒಂದನೇ ಪೋಕ್ಸೋ ಕೇಸ್‌ನಲ್ಲಿ ಮುರುಘಾಶ್ರೀಗಳಿಗೆ ಜಾಮೀನು ಹಿನ್ನೆಲೆ ಬಿಡುಗಡೆ ಆದೇಶ ಪ್ರತಿ ಜಿಲ್ಲಾ ಕಾರಾಗೃಹಕ್ಕೆ ತಲುಪಿಸಲಾಗಿದೆ. ಇಂದು ಸಂಜೆ 7 ಗಂಟೆ ಬಳಿಕ ಆದೇಶ ಪ್ರತಿ ಕಾರಾಗೃಹಕ್ಕೆ ತಲುಪಿದೆ. ನಾಳೆ ಜಿಲ್ಲಾ ಕಾರಾಗೃಹದ ಅಧಿಕಾರಿಗಳಿಂದ ಕಾನೂನು ಪ್ರಕ್ರಿಯೆ ನಡೆಯುತ್ತದೆ ಎಂದರು.
ಮಂಡ್ಯ: ಸೋಶಿಯಲ್ ಮೀಡಿಯಾದಲ್ಲಿ ಅನ್ಯಧರ್ಮದ ಬಗ್ಗೆ ಅವಹೇಳನಕಾರಿ ಪೋಸ್ಟ್ ಮಾಡಿದ್ದ ಸ್ವಾಮಿ ಎಂಬ ಯುವಕನನ್ನು ಮಂಡ್ಯ ಜಿಲ್ಲೆಯ ಮದ್ದೂರು ಠಾಣೆ ಪೊಲೀಸರು ಸೆರೆ ಹಿಡಿದಿದ್ದಾರೆ. ಕೋಮುಸೌಹಾರ್ದ ಕದಡುವ ಯತ್ನ ಆರೋಪದಡಿ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ. ಇನ್ನು ಇದನ್ನು ಖಂಡಿಸಿ ಮದ್ದೂರು ಪೊಲೀಸ್ ಠಾಣೆಯ ಎದುರು ಭಜರಂಗದಳದಿಂದ ಧರಣಿ ಶುರು ಮಾಡಿದ್ದಾರೆ.
ಧಾರವಾಡ: ಗೃಹ ಲಕ್ಷ್ಮೀ ಯೋಜನೆ ಗೊಂದಲ ವಿಚಾರ ‘ಈಗ ಎಲ್ಲವೂ ಸರಳ ಮಾಡಿದ್ದೇವೆ. ಈಗಾಗಲೇ 1.9 ಕೋಟಿ ಜನರಿಗೆ ತಲುಪಿದ್ದೇವೆ. ಇನ್ನೂ ಐದಾರು ಲಕ್ಷ ಜನರದ್ದು ಕ್ಲೀಯರ್ ಆಗಬೇಕಿದೆ. ಯಾವುದೇ ಅನುದಾನದ ಕೊರತೆ ಇಲ್ಲ. ಆದರೆ, ತಾಂತ್ರಿಕ ತೊಂದರೆ ಕಾರಣಕ್ಕೆ ವಿಳಂಬ ಆಗಿದೆ. 15 ಲಕ್ಷ ಜನ ಆಧಾರ ಲಿಂಕ್ ಇಲ್ಲದ ಬ್ಯಾಂಕ್ ಖಾತೆ ನೀಡಿದ್ದರು. ಹೀಗಾಗಿ ಅಂಥವರಿಗೆ ವಿಳಂಬ ಆಗಿದೆ ಎಂದು ಧಾರವಾಡದಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು.
ಕಲಬುರಗಿ: ಕರ್ನಾಟಕ ಪರೀಕ್ಷಾ ಪ್ರಾಧಿಕಾರದ FDA ಪರೀಕ್ಷೆಯಲ್ಲಿ ಅಕ್ರಮ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ಇಬ್ಬರು ಉಪನ್ಯಾಸಕರನ್ನು ಸಿಐಡಿ ವಶಕ್ಕೆ ಪಡೆದಿದೆ. ಅಫಜಲಪುರ ಸರ್ಕಾರಿ ಪಿಯು ಕಾಲೇಜು ಪ್ರಭಾರ ಪ್ರಿನ್ಸಿಪಾಲ್ ಬಸಣ್ಣ, ಕರಜಗಿ ಗ್ರಾಮದ ಪಿಯು ಕಾಲೇಜು ಪ್ರಿನ್ಸಿಪಾಲ್ ಚಂದ್ರಕಾಂತ್ ವಶಕ್ಕೆ ಪಡೆಯಲಾಗಿದೆ.
ಬೆಂಗಳೂರು: ರಾಜಭವನಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಭೇಟಿ ನೀಡಿದ್ದು, ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರನ್ನು ಭೇಟಿ ಮಾಡಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷರಾದ ಹಿನ್ನೆಲೆಯಲ್ಲಿ ಸೌಹಾರ್ದಯುತ ಭೇಟಿ ಇದಾಗಿದೆ.
ಚಿತ್ರದುರ್ಗ: ಚಿತ್ರದುರ್ಗದ ಮುರುಘಾಶ್ರೀ ವಿರುದ್ಧ ಫೋಕ್ಸೋ ಪ್ರಕರಣಕ್ಕೆ ಸಂಬಂಧಪಟ್ಟಂತೆ 1ನೇ ಫೋಕ್ಸೋ ಪ್ರಕರಣದಲ್ಲಿ ಮುರುಘಾಶ್ರೀಗೆ ಜಾಮೀನು ಸಿಕ್ಕಿದೆ. ಈ ಹಿನ್ನಲೆ ಜಿಲ್ಲಾ ಕಾರಾಗೃಹದ ಬಳಿಗೆ ಬಸವಪ್ರಭುಶ್ರೀ, ಮುರುಘಾಮಠದ ಉಸ್ತುವಾರಿ ಶ್ರೀ ಸೇರಿದಂತೆ ಮುರುಘಾಶ್ರೀ ಬೆಂಬಲಿಗರು ಆಗಮಿಸುತ್ತಿದ್ದಾರೆ.
ಬೆಂಗಳೂರು: ನ.25 ಹಾಗೂ 26 ರಂದು ಪ್ರಪ್ರಥಮ ಬಾರಿಗೆ ಬೆಂಗಳೂರಿನಲ್ಲಿ ಕಂಬಳ ಆಯೋಜನೆ ಮಾಡಲಾಗಿದೆ. ಈಗಾಗಲೇ ಅರಮನೆ ಮೈದಾನದ ಗೇಟ್ 5 ರಲ್ಲಿ ಕಂಬಳ ಕೆರೆ ಸಜ್ಜುಗೊಳಿಸಲಾಗಿದೆ. ಸ್ಪೀಕರ್ ಯು ಟಿ ಖಾದರ್ ಕಂಬಳ ನಡೆಯುವ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಯು ಟಿ ಖಾದರ್‌ಗೆ ಪುತ್ತೂರು ಶಾಸಕ ಅಶೋಕ್ ರೈ, ಗುಣರಂಜನ್ ಶೆಟ್ಟಿ, ಸಂಗೀತ ನೀರ್ದೇಶಕ ಗುರು ಕಿರಣ್, ಬೆಂಗಳೂರು ತುಳುಕೂಟದ ಅಧ್ಯಕ್ಷ ಸುಂದರ್ ರೈ ಸಾಥ್ ಕೊಟ್ಟಿದ್ದಾರೆ.
ಮೈಸೂರು: ಅನ್ನಭಾಗ್ಯದ ಅಕ್ಕಿ ಅಕ್ರಮವಾಗಿ ಮಾರಿದ್ರೆ ಪಡಿತರ ಚೀಟಿ ರದ್ದುಪಡಿಸ್ತೇವೆ ಎಂದು ಮೈಸೂರು ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಎಚ್ಚರಿಕೆ ನೀಡಿದ್ದಾರೆ. ಮೈಸೂರು ಜಿಲ್ಲೆಯಲ್ಲಿ ಪಡಿತರ ಕಾಳಸಂತೆಯಲ್ಲಿ ಮಾರಾಟ ವಿಚಾರವಾಗಿ ಟಿವಿ9 ವಿಸ್ತೃತ ವರದಿ ಬಿತ್ತರಿಸಿತ್ತು. ಈ ಕುರಿತು ಎಚ್ಚೆತ್ತ ಜಿಲ್ಲಾಧಿಕಾರಿಯವರು ‘ಇಂತವರ ವಿರುದ್ಧ ಅಗತ್ಯ ವಸ್ತುಗಳ ಕಾಯ್ದೆ-1955 ರಡಿ ಪ್ರಕರಣ ದಾಖಲು ಮಾಡಲಾಗುತ್ತಿದೆ ಕಾರ್ಡುದಾರರು ಸರ್ಕಾರದಿಂದ ನ್ಯಾಯಬೆಲೆ ಅಂಗಡಿಗಳ ಮೂಲಕ ಪಡೆಯುವ ಪಡಿತರ ಪದಾರ್ಥಗಳನ್ನು ಕಾಳಸಂತೆಯಲ್ಲಿ ಮಾರಾಟ ಮಾಡುವುದು ಶಿಕ್ಷಾರ್ಹ ಅಪರಾಧ ಪಡಿತರ ಪದಾರ್ಥಗಳನ್ನು ಕಾಳಸಂತೆಯಲ್ಲಿ ಮಾರಾಟ ಮಾಡುವ ಕಾರ್ಡುದಾರರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದರು.
ಬೆಂಗಳೂರು: ಶುಕ್ರವಾರ ಸಂಜೆ 6 ಗಂಟೆಗೆ ಶಾಸಕಾಂಗ ಪಕ್ಷದ ಸಭೆ ನಿಗದಿಯಾಗಿದೆ ಎಂದು ಬೆಂಗಳೂರಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು. ‘ಬಿಜೆಪಿ ಶಾಸಕಾಂಗ ಪಕ್ಚದ ಸಭೆಗೆ ಇಬ್ಬರು ವೀಕ್ಷಕರು ಬರಲಿದ್ದಾರೆ. ವೀಕ್ಷಕರಾಗಿ ಯಾರು ಬರುತ್ತಾರೆ ಎಂಬುದು ನಾಳೆ ಗೊತ್ತಾಗುತ್ತದೆ. ಸಮಾವೇಶ ಬಗ್ಗೆ ಹಿರಿಯರ ಜೊತೆ ಚರ್ಚಿಸಿದ ನಂತರ ತೀರ್ಮಾನ ಮಾಡಲಾಗುವುದು. ಇನ್ನು ವಿಪಕ್ಷ ನಾಯಕರ ವಿಚಾರವಾಗಿ ಶಾಸಕರ ಅಭಿಪ್ರಾಯ ಮುಖ್ಯ, ಶಾಸಕರ ಸಮ್ಮುಖದಲ್ಲಿ ವಿಪಕ್ಷ ನಾಯಕರ ಘೋಷಣೆ ನಿರೀಕ್ಷೆಯಿದೆ ಎಂದರು.
ಚಿತ್ರದುರ್ಗ: ಮುರುಘಾಶ್ರೀ ವಿರುದ್ಧದ ಪೋಕ್ಸೋ ಪ್ರಕರಣಕ್ಕೆ ಸಂಬಂಧಿಸಿದಂತೆ 2ನೇ ಪೋಕ್ಸೋ ಕೇಸ್ನ ವಿಚಾರಣೆಯನ್ನು ನಾಳೆಗೆ ಮುಂದೂಡಿಕೆ ಮಾಡಿ ಚಿತ್ರದುರ್ಗದ 2ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆದೇಶ ಹೊರಡಿಸಿದೆ.
ಮಂಡ್ಯ: ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವುದನ್ನ ಖಂಡಿಸಿ ಮಂಡ್ಯದ ವಿಶ್ವೇಶ್ವರಯ್ಯ ಪ್ರತಿಮೆ ಬಳಿ ರೈತ ಹಿತರಕ್ಷಣಾ ಸಮಿತಿ,
ಕಳೆದ 72 ದಿನಗಳಿಂದ ಧರಣಿ ನಡೆಸುತ್ತಿದೆ. ಇಂದು ಬೆಂಗಳೂರು-ಮೈಸೂರು ಹೆದ್ದಾರಿ ತಡೆದು ಪ್ರತಿಭಟಿಸಿದ ರೈತ ಸಂಘಟನೆ, ಸರ್ಕಾರಕ್ಕೆ ರೈತರ ಕೂಗು ಕೇಳಿಸುತ್ತಿಲ್ಲ, ತಮಿಳುನಾಡಿಗೆ ನೀರು ಬಿಡುತ್ತಿದ್ದಾರೆ. ರೈತರನ್ನು ರಕ್ಷಣೆ ಮಾಡದ ರಾಜ್ಯದ ಸಂಸದರು, ರಾಜೀನಾಮೆ ಕೊಡಲಿ. ಕೇಂದ್ರದಲ್ಲಿ ಕಾವೇರಿ ನೀರಿಗಾಗಿ ಧ್ವನಿ ಎತ್ತದ ಸಂಸದರ ಅವಶ್ಯಕತೆ ಇಲ್ಲ. ಸರ್ಕಾರ ಕೂಡಲೇ ದಿಟ್ಟ ನಿರ್ಧಾರ ತೆಗೆದುಕೊಳ್ಳುವಂತೆ ರೈತರು ಆಗ್ರಹಿಸಿದರು.
ಹಾಸನ: ಜೆಡಿಎಸ್‌ನ ಮಾಜಿ ಶಾಸಕ ಗೌರಿಶಂಕರ್ ಕಾಂಗ್ರೆಸ್ ಸೇರ್ಪಡೆ ವಿಚಾರ ‘ನಮ್ಮ ಗಮನಕ್ಕೆ ತರದೆ ಸೇರ್ಪಡೆ ಮಾಡಿಕೊಂಡಿದ್ದಕ್ಕೆ ಅಸಮಾಧಾನವಿದೆ ಎಂದು ಬಹಿರಂಗವಾಗಿಯೇ ಕೆ.ಎನ್ ರಾಜಣ್ಣ ಹೇಳಿದ್ದಾರೆ. ಹಾಸನದಲ್ಲಿ ಸಹಕಾರ ಇಲಾಖೆಯ ಸಚಿವ ಕೆ.ಎನ್.ರಾಜಣ್ಣ ಮಾತನಾಡಿ ‘ಜಿಲ್ಲೆಯ ಯಾರನ್ನೂ ಸಂಪರ್ಕಿಸದೆ ಸೇರಿಸಿಕೊಂಡಿದ್ದಕ್ಕೆ ಅಸಮಾಧಾನವಿದೆ. ಕಾಂಗ್ರೆಸ್ ಎನ್ನುವುದು ಸಮುದ್ರವಿದ್ದಂತೆ. ಸಮುದ್ರದಲ್ಲಿ ಗಂಗಾ ಮಾತೆಯಷ್ಟು ಪವಿತ್ರ ಜಲವೂ ಬರುತ್ತೆ ಎಂದರು.
ಮೈಸೂರು: ಭಾರತ-ನ್ಯೂಜಿಲೆಂಡ್ ಸೆಮಿಫೈನಲ್ ಪಂದ್ಯ ನಡೆಯುತ್ತಿದ್ದು, ಮೈಸೂರಿನಲ್ಲಿ ಪಂದ್ಯ ವೀಕ್ಷಣೆಗೆ ಬೃಹತ್ ಪರದೆ ವ್ಯವಸ್ಥೆ ಮಾಡಲಾಗಿದೆ. ಹೌದು, ಮೈಸೂರಿನ ಬಹುತೇಕ ಹೋಟೆಲ್, ಪಬ್‌ಗಳಲ್ಲಿ ಬೃಹತ್ ಪರದೆ ತೆರೆಯಲಾಗಿದೆ. ಮೈಸೂರು ಹುಣಸೂರು ರಸ್ತೆಯ ಪೆಗ್ಸ್ & ಕೆಗ್ಸ್ ಪಬ್‌ನಲ್ಲಿ ಮೂರು ಪರದೆ ಓಪನ್ ಮಾಡಲಾಗಿದ್ದು, ಈಗಾಗಲೇ ಪಂದ್ಯ ವೀಕ್ಷಣೆಗೆ ಕ್ರಿಕೆಟ್ ಅಭಿಮಾನಿಗಳು ಆಗಮಿಸಿದ್ದಾರೆ.
ಬೆಂಗಳೂರು: ಮಾಜಿ ಸಿಎಂ ಕುಮಾರಸ್ವಾಮಿ ಬರೀ ಸುಳ್ಳು ಹೇಳಿಕೆ ನೀಡುತ್ತಾರೆ, ಅದಕ್ಕೆ ನಾನು ಉತ್ತರ ನೀಡುವುದಿಲ್ಲ ಎಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಕೆಇಎ ನಡೆಸಿದ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮವೆಸಗಿದ ಪ್ರಕರಣದ ಪ್ರಮುಖ ಆರೋಪಿ ಆರ್.ಡಿ.ಪಾಟೀಲ್ 8 ದಿನ ಸಿಐಡಿ ಕಸ್ಟಡಿಗೆ ನೀಡಿ ಕಲಬುರಗಿ ಎರಡನೇ ಜೆಎಂಎಫ್ಸಿ ನ್ಯಾಯಾಲಯ ಆದೇಶ ನೀಡಿದೆ.
ಸಿಎಂ ಸಿದ್ದರಾಮಯ್ಯ, DCM ಡಿ.ಕೆ.ಶಿವಕುಮಾರ್ ಸಮ್ಮುಖದಲ್ಲಿ ಮಾಜಿ ಶಾಸಕರಾದ ಮಂಜುನಾಥ್, ಗೌರಿ ಶಂಕರ್ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ನಡೆಯುತ್ತಿರುವ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಬೆಂಬಲಿಗರ ಜೊತೆ ಮಂಜುನಾಥ್, ಗೌರಿಶಂಕರ್ ಕಾಂಗ್ರೆಸ್ ಸೇರಿದರು. ಗೌರಿಶಂಕರ್ ಸೇರ್ಪಡೆ ಕಾರ್ಯಕ್ರಮಕ್ಕೆ ತುಮಕೂರು ನಾಯಕರೇ ಗೈರಾಗಿದ್ದಾರೆ.
ಪ್ರಸಕ್ತ ವರ್ಷ ಶಕ್ತಿದೇವತೆ ಹಾಸನಾಂಬೆ ದರ್ಶನ ಸಂಪನ್ನ. ಪ್ರಸಕ್ತ ವರ್ಷ 14 ದಿನಗಳ ಹಾಸನಾಂಬೆ ಉತ್ಸವಕ್ಕೆ ವಿದ್ಯುಕ್ತ ತೆರೆ. ಮಧ್ಯಾಹ್ನ 12.23ಕ್ಕೆ ಹಾಸನಾಂಬೆ ಗರ್ಭಗುಡಿ ಬಾಗಿಲು ಬಂದ್ ಮಾಡಲಾಗಿದೆ. ಹಾಸನ ಜಿಲ್ಲಾ ಉಸ್ತುವಾರಿ ಸಚಿವ, ಸಹಕಾರ ಸಚಿವ ಕೆ.ಎನ್.ರಾಜಣ್ಣ ಸಮ್ಮುಖದಲ್ಲಿ ಗರ್ಭಗುಡಿ ಬಾಗಿಲು ಬಂದ್ ಮಾಡಲಾಗಿದೆ. ಹಾಸನಾಂಬೆಗೆ ಮಾಡಲಾಗಿದ್ದ ಅಲಂಕಾರ ತೆರವು ಮಾಡಿ ಪೂಜೆ ಸಲ್ಲಿಸಿ ಗರ್ಭಗುಡಿಯಿಂದ ಅರ್ಚಕರು, ಅಧಿಕಾರಿಗಳು ಹೊರಬಂದು ಗರ್ಭಗುಡಿ ಬಾಗಿಲಿಗೆ ಪೂಜೆ ಸಲ್ಲಿಸಿ ಬೀಗ ಹಾಕಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷರಾಗಿ ವಿಜಯೇಂದ್ರ ಅಧಿಕಾರ ಸ್ವೀಕಾರ ವಿಚಾರ ಸಂಬಂಧ ಇದು ಅವರ ಪಕ್ಷದ ಆಂತರಿಕ ವಿಚಾರ. ಆದರೆ ರಾಜ್ಯದ ದೃಷ್ಟಿಯಿಂದ ವಿರೋಧ ಪಕ್ಷ ಬಲಿಷ್ಠವಾಗಿರಬೇಕು. ಸರ್ಕಾರವನ್ನು ಪಾಸಿಟಿವ್ ಆಗಿ ಎಚ್ಚರಿಸಬೇಕೆಂಬುದು ನಮ್ಮ ಅಪೇಕ್ಷೆ. ಯಾವುದೇ ಸರ್ಕಾರ ಇದ್ದರೂ ಅದನ್ನು ನಿರೀಕ್ಷೆ ಮಾಡುತ್ತೇವೆ. ವಿಜಯೇಂದ್ರ ಒಳ್ಳೇ ಸಂಘಟನೆಗಾರ ಎಂದು ಹೇಳಲು ಬರುವುದಿಲ್ಲ ಎಂದು ಬೆಂಗಳೂರಿನಲ್ಲಿ ಗೃಹ ಇಲಾಖೆ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದರು.
ಬಿಜೆಪಿ ರಾಜ್ಯಾಧ್ಯಕ್ಷರಾಗಿ ವಿಜಯೇಂದ್ರ ಅಧಿಕಾರ ಸ್ವೀಕಾರ ವಿಚಾರ ಸಂಬಂಧ ಡಿಸಿಎಂ ಡಿಕೆ ನಿವಾಸದ ಬಳಿ ಶಾಸಕ ವಿನಯ್ ಕುಲಕರ್ಣಿ ಪ್ರತಿಕ್ರಿಯೆ ನೀಡಿದ್ದಾರೆ. ವಿಜಯೇಂದ್ರಗೆ ಅಧ್ಯಕ್ಷ ಪಕ್ಷ ನೀಡಿದ ತಕ್ಷಣ ಎಲ್ಲವೂ ಸರಿಹೋಗಲ್ಲ. ನಮ್ಮ ಸಮಾಜದ ಯಡಿಯೂರಪ್ಪರನ್ನು ಸಾಕಷ್ಟು ಕಡೆಗಣಿಸಿದ್ದಾರೆ. ಈಗ ಎಲ್ಲಾ ಲಿಂಗಾಯತರು ಸಮಾಧಾನ ಆಗಿದ್ದಾರೆ ಅಂತಾ ಏನಿಲ್ಲ. ಬಿಜೆಪಿ ರಾಜ್ಯಾಧ್ಯಕ್ಷರಾಗಿ ವಿಜಯೇಂದ್ರ ಅಧಿಕಾರ ಸ್ವೀಕರಿಸಿದ್ದಾರೆ. ಇವತ್ತೇ ಕಾಂಗ್ರೆಸ್ಗೆ ಹಲವು ಸೇರ್ಪಡೆ ಆಗುತ್ತಿದ್ದಾರೆ ಎಂದರು.
ಈ ಸರ್ಕಾರ ಶಾಸಕರ ಕ್ಷೇತ್ರಗಳಿಗೆ 1 ರೂ.ಕೂಡ ಅನುದಾನ ನೀಡುತ್ತಿಲ್ಲ. ಈ ವಿಚಾರವನ್ನು ಅವರದ್ದೇ ಪಕ್ಷದ ಶಾಸಕರೇ ಬಹಿರಂಗಪಡಿಸಿದ್ದಾರೆ. ಭ್ರಷ್ಟ ಸರ್ಕಾರಕ್ಕೆ ಮುಂದಿನ ದಿನಗಳಲ್ಲಿ ತಕ್ಕ ಉತ್ತರ ನೀಡುತ್ತೇವೆ ಎಂದು ಅಧಿಕಾರ ಸ್ವೀಕಾರ ಮಾಡಿದ ಬಳಿಕ ಬಿ.ವೈ.ವಿಜಯೇಂದ್ರ ಹೇಳಿದರು.
ರಾಜ್ಯದಲ್ಲಿ ಭೀಕರ ಬರಗಾಲ ಇದ್ದರೂ ಯಾವುದೇ ಕ್ರಮವಿಲ್ಲ. ಬರಪೀಡಿತ ಜಿಲ್ಲೆಗಳಿಗೆ ಈವರೆಗೂ ಯಾವುದೇ ಸಚಿವರು ಭೇಟಿ ನೀಡಿಲ್ಲ ಎಂದು ಸರ್ಕಾರದ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ವಾಗ್ದಾಳಿ ನಡೆಸಿದ್ದಾರೆ. ಅಧಿಕಾರದ ಅಹಂ, ಗರ್ವದಿಂದ ಸಚಿವರು ಮೆರೆಯುತ್ತಿದ್ದಾರೆ. ಮುಂದೆ ಈ ಸರ್ಕಾರವನ್ನು ಕಿತ್ತೊಗೆಯುವ ಕೆಲಸ ಆಗಬೇಕು ಎಂದರು.
ನನ್ನನ್ನು ಅಧ್ಯಕ್ಷರಾಗಿ ನೇಮಿಸಿರುವ ರಾಷ್ಟ್ರೀಯ ವರಿಷ್ಠರಿಗೆ ಧನ್ಯವಾದ. ಪ್ರಧಾನಿ ಮೋದಿ, ಕೇಂದ್ರ ಸಚಿವ ಅಮಿತ್ ಶಾ, ಜೆ.ಪಿ.ನಡ್ಡಾರಿಗೆ ಧನ್ಯವಾದ. ನನ್ನ ಮೇಲೆ ವಿಶ್ವಾಸವಿಟ್ಟು ಪಕ್ಷವು ಅಧ್ಯಕ್ಷರಾಗಿ ನೇಮಕ ಮಾಡಿದೆ. ಪಕ್ಷದ ಎಲ್ಲಾ ನಾಯಕರ ವಿಶ್ವಾಸ ಉಳಿಸಿಕೊಳ್ಳುವ ಕೆಲಸ ಮಾಡುತ್ತೇನೆ. ಲೋಕಸಭಾ ಚುನಾವಣೆಯಲ್ಲಿ ಎಲ್ಲಾ 28 ಕ್ಷೇತ್ರಗಳಲ್ಲೂ ಗೆಲ್ಲುವ ವಿಶ್ವಾಸವಿದೆ. ನನಗೆ ನೀಡಿರುವ ಸ್ಥಾನದ ಬಗ್ಗೆ ಅರಿವು ಇದೆ, ಜವಾಬ್ದಾರಿ ಹೆಚ್ಚಿದೆ. ರಾಜ್ಯದಲ್ಲಿ ಪಕ್ಷ ಸಂಘಟನೆಗೆ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇವೆ. ಕಾರ್ಯಕರ್ತರು ತಲೆತಗ್ಗಿಸುವ ಕೆಲಸ ಮಾಡದಂತೆ ಪಕ್ಷ ಸಂಘಟನೆ ಮಾಡುವೆ ಎಂದು ಅಧಿಕಾರ ಸ್ವೀಕಾರ ಮಾಡಿದ ಬಳಿಕ ಬಿ.ವೈ.ವಿಜಯೇಂದ್ರ ಹೇಳಿದರು.
ಸೂಕ್ತ ಸಮಯದಲ್ಲಿ ವಿಜಯೇಂದ್ರ ಅಧ್ಯಕ್ಷರಾಗಿ ಪದಗ್ರಹಣ ಮಾಡಿದ್ದಾರೆ. ವಿಜಯೇಂದ್ರಗೆ ಯಶಸ್ಸು ಸಿಗಲಿ ಎಂದು ಹಾರೈಸುತ್ತೇನೆ ಎಂದು ಬಿಜೆಪಿ ಕಚೇರಿಯಲ್ಲಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಶುಭ ಹಾರೈಸಿದರು. ವಿಧಾನಸಭೆ ಚುನಾವಣೆಯ ನಂತರ ಬಿಜೆಪಿಗೆ ಶಕ್ತಿ, ಉತ್ಸಾಹ ಬಂದಿದೆ. ಎಲ್ಲರೂ ಒಟ್ಟಾಗಿ ನಡೆದರೆ ಲೋಕಸಭೆಯಲ್ಲಿ ಯಶಸ್ಸು ಸಿಗುತ್ತದೆ. ವಿಜಯೇಂದ್ರ ಸಾರಥ್ಯದಲ್ಲಿ 28 ಲೋಕಸಭಾ ಕ್ಷೇತ್ರ ಗೆಲ್ಲುವ ವಿಶ್ವಾಸವಿದೆ ಎಂದರು.
ವಿಜಯೇಂದ್ರ ನೇತೃತ್ವದಲ್ಲಿ ರಾಜ್ಯದಲ್ಲಿ ಪಕ್ಷ ಸಂಘಟನೆ ಮಾಡುತ್ತೇವೆ ಎಂದು ಬಿ.ವೈ.ವಿಜಯೇಂದ್ರ ಪದಗ್ರಹಣ ಕಾರ್ಯಕ್ರಮದಲ್ಲಿ ಸಂಸದ ನಳಿನ್ ಕುಮಾರ್ ಕಟೀಲು ಹೇಳಿದರು. ನನಗೆ ಕೊಟ್ಟ ಸಹಕಾರವನ್ನು ಬಿ.ವೈ.ವಿಜಯೇಂದ್ರಗೂ ಕೊಡಬೇಕು. ರಾಜ್ಯಾಧ್ಯಕ್ಷರಾದ ವಿಜಯೇಂದ್ರಗೆ ನಾವೆಲ್ಲರೂ ಜೊತೆಯಾಗಿ ನಿಲ್ತೇವೆ. ಲೋಕಸಭೆ ಚುನಾವಣೆಯಲ್ಲಿ ರಾಜ್ಯದ 28 ಸ್ಥಾನಗಳಲ್ಲೂ ಗೆಲ್ಲುವ ಪ್ರಯತ್ನ ಮಾಡುತ್ತೇವೆ ಎಂದರು.
ಬಿ.ವೈ.ವಿಜಯೇಂದ್ರ ಪಕ್ಷದ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಅಮಿತ್ ಶಾರನ್ನು ಕರೆಸಿ ದೊಡ್ಡ ಸಮಾವೇಶಕ್ಕೆ ಚಿಂತನೆ ಮಾಡಿದ್ದೇವೆ ಎಂದು ಬಿ.ವೈ.ವಿಜಯೇಂದ್ರ ಪದಗ್ರಹಣ ಕಾರ್ಯಕ್ರಮದಲ್ಲಿ ಬಿಎಸ್ ಯಡಿಯೂರಪ್ಪ ತಿಳಿಸಿದ್ದಾರೆ. ಒಂದು ಲಕ್ಷ ಜನರನ್ನು ಸೇರಿಸಿ ಕಾರ್ಯಕ್ರಮ ಮಾಡುವ ಅಪೇಕ್ಷೆ ಇದೆ. ಮೋದಿ, ಶಾ, ನಡ್ಡಾ ಆದೇಶದಂತೆ ರಾಜ್ಯಾಧ್ಯಕ್ಷರಾಗಿ ಅಧಿಕಾರ ಸ್ವೀಕಾರ ಮಾಡಿದ್ದಾರೆ. ವಿಜಯೇಂದ್ರ ಅಧ್ಯಕ್ಷರಾದ ಬಳಿಕ ಕಾರ್ಯಕರ್ತರಲ್ಲಿ ಉತ್ಸಾಹ ಕಾಣ್ತಿದೆ. ಎಲ್ಲಾ ನಾಯಕರು ವಿಜಯೇಂದ್ರಗೆ ಆಶೀರ್ವಾದ ಮಾಡಿದ್ದಕ್ಕೆ ಸಂತೋಷವಾಗಿದೆ ಎಂದರು.
ಬಿಜೆಪಿ ರಾಜ್ಯಾಧ್ಯಕ್ಷರಾಗಿ ಬಿ.ವೈ. ವಿಜಯೇಂದ್ರ ಅಧಿಕಾರ ಸ್ವೀಕಾರ ಹಿನ್ನೆಲೆ ಬಿ.ಎಸ್. ಯಡಿಯೂರಪ್ಪ ಹುಟ್ಟೂರು ಬೂಕನಕೆರಯಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ. ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಬೂಕನಕೆರೆಯ ಯಡಿಯೂರಪ್ಪ ನಿವಾಸದಲ್ಲಿ ಸಂತಸ ಮನೆ ಮಾಡಿದೆ.ಯಡಿಯೂರಪ್ಪ ಅವರ ಕುಟುಂಬದಲ್ಲಿ ಮಂದಹಾಸ ಮನೆ ಮಾಡಿದೆ.
ರಾಜ್ಯಾಧ್ಯಕ್ಷರ ಕಚೇರಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಬಿ.ವೈ.ವಿಜಯೇಂದ್ರ ಅಧಿಕಾರ ಸ್ವೀಕರಿಸಿದ್ದಾರೆ. ನಳಿನ್ ಕುಮಾರ್ ಕಟೀಲು ಅವರು ವಿಜಯೇಂದ್ರಗೆ ಅಧಿಕಾರ ಹಸ್ತಾಂತರಿಸಿದರು. ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಮಾಜಿ ಸಚಿವರಾದ ಅಶೋಕ್, ಗೋವಿಂದ ಕಾರಜೋಳ, ಮುನಿರತ್ನ, ಆರಗ ಜ್ಞಾನೇಂದ್ರ, ಶ್ರೀರಾಮುಲು, ಗೋಪಾಲಯ್ಯ, ಪ್ರಭು ಚೌಹಾಣ್, ಸಂಸದರಾದ ರಾಘವೇಂದ್ರ, ತೇಜಸ್ವಿ ಸೂರ್ಯ ಸೇರಿ ಹಲವರು ಭಾಗಿಯಾಗಿದ್ದಾರೆ.
ಬೆಂಗಳೂರು: ನೂತನ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಬಿಜೆಪಿ ಕಚೇರಿಗೆ ಆಗಮಿಸಿದ್ದು, ಅದ್ಧೂರಿ ಸ್ವಾಗತ ದೊರೆಯಿತು. ಶಾಸಕ ಬಿವೈ ವಿಜಯೇಂದ್ರ ಅವರು ಇನ್ನೇನು ಕೆಲವೇ ಕ್ಷಣದಲ್ಲಿ ರಾಜ್ಯಾಧ್ಯಕ್ಷರಾಗಿ ಪದಗ್ರಹಣ ಸ್ವೀಕರಿಸಲಿದ್ದಾರೆ.
ಪಕ್ಷ ಸಂಘಟನೆಗಾಗಿ ನಾವೆಲ್ಲ ವಿಜಯೇಂದ್ರ ಜತೆ ಇರುತ್ತೇವೆ ಎಂದು ಬೆಂಗಳೂರಿನಲ್ಲಿ ಬಿಜೆಪಿ ಶಾಸಕ ಎಸ್.ಆರ್.ವಿಶ್ವನಾಥ್ ತಿಳಿಸಿದರು. ಲೋಕಸಭಾ ಚುನಾವಣೆಯಲ್ಲಿ 28 ಸ್ಥಾನಗಳನ್ನೂ ಗೆಲ್ಲಲು ಸಿದ್ಧತೆ ನಡೆದಿದೆ. ಈಗಾಗಲೇ ಬಿ.ವೈ.ವಿಜಯೇಂದ್ರ ಪ್ರವಾಸ ಶುರು ಮಾಡಿದ್ದಾರೆ. ನಾವೆಲ್ಲ ಉತ್ಸಾಹದಿಂದ ಅವರ ಜತೆ ಕೆಲಸ ಮಾಡಲು ಸಿದ್ಧರಿದ್ದೇವೆ ಎಂದರು.
ವಿಜಯೇಂದ್ರ ರಾಜ್ಯಾಧ್ಯಕ್ಷರಾಗಿ ಅಧಿಕಾರ ಸ್ವೀಕರಿಸ್ತಿರೋದು ಖುಷಿ ತಂದಿದೆ ಎಂದು ಬೆಂಗಳೂರಿನಲ್ಲಿ ಬಿ.ವೈ.ವಿಜಯೇಂದ್ರ ಸಹೋದರಿ ಅರುಣಾದೇವಿ ಸಂತಸ ವ್ಯಕ್ತಪಡಿಸಿದ್ದಾರೆ. ನಮ್ಮ ತಂದೆ ಆ ಕಾಲದಲ್ಲೇ ಪಕ್ಷ ಸಂಘಟನೆಗಾಗಿ ಹೋರಾಟ ಮಾಡಿದ್ರು. ಈಗ ಬಿ.ವೈ.ವಿಜಯೇಂದ್ರಗೆ ಪಕ್ಷದ ನಾಯಕರು ಜವಾಬ್ದಾರಿ ನೀಡಿದ್ದಾರೆ. ರಾಜ್ಯದ ಜನರು ಬಿ.ವೈ.ವಿಜಯೇಂದ್ರ ಜೊತೆ ಇದ್ದಾರೆ. ವಿಜಯೇಂದ್ರ ಅಧಿಕಾರ ಸ್ವೀಕರಿಸ್ತಿರೋದು ಕುಂಟುಂಬದ ಸಂಭ್ರಮವಲ್ಲ. ಒಂದು ಸಮಾಜದ ಸಂಭ್ರಮ, ಪ್ರತಿಯೊಬ್ಬ ಕಾರ್ಯಕರ್ತರ ಸಂಭ್ರಮ ಎಂದರು.
ಇಂದು ಭಾರತ ನ್ಯೂಜಿಲೆಂಡ್ ನಡುವೆ ಸೆಮಿಫೈನಲ್ ಪಂದ್ಯ. ಹೀಗಾಗಿ ಭಾರತದ ಗೆಲುವಿಗಾಗಿ ಅಭಿಮಾನಿಗಳು ಪ್ರಾರ್ಥನೆ ಮಾಡಿದ್ದಾರೆ. ಮೈಸೂರಿನ ಅಗ್ರಹಾರ ಬಡಾವಣೆಯ 101 ಗಣಪತಿ ದೇಗುಲದಲ್ಲಿ ಭಾರತೀಯ ಆಟಗಾರರ ಭಾವಚಿತ್ರ ಹಿಡಿದು ಪ್ರಾರ್ಥನೆ ಮಾಡಿ ಭಾರತದ ಪರ ಘೋಷಣೆ ಕೂಗಿ ಶುಭ ಹಾರೈಸಿದ್ದಾರೆ.
ಇಂದು ಪಕ್ಷದ ರಾಜ್ಯಾಧ್ಯಕ್ಷರಾಗಿ ಜವಾಬ್ದಾರಿ ಸ್ವೀಕರಿಸುವ ವಿಜಯೇಂದ್ರ ಅವರು ತಂದೆಯ ಆಶೀರ್ವಾದ ಪಡೆಯಲು ಮಾಜಿ ಸಿಎಂ ಯಡಿಯೂರಪ್ಪ ನಿವಾಸಕ್ಕೆ ಆಗಮಿಸಿದ್ದಾರೆ. ಬೆಂಗಳೂರಿನ ಡಾಲರ್ಸ್ ಕಾಲೋನಿಯ ಯಡಿಯೂರಪ್ಪ ನಿವಾಸಕ್ಕೆ ಭೇಟಿ ನೀಡಿದ್ದಾರೆ.
ಹಾಸನಾಂಬ ದೇವಿ ದರ್ಶನಕ್ಕೆ ಇಂದೇ ಕೊನೆಯ ದಿನ. ಬೆಳಗ್ಗೆ 7 ಗಂಟೆಯವರೆಗೆ ಹಾಸನಾಂಬೆ ದರ್ಶನಕ್ಕೆ ಅವಕಾಶ. ಇಂದು ಶಾಸ್ತ್ರೋಕ್ತವಾಗಿ ಅರ್ಚಕರು ಗರ್ಭಗುಡಿ ಬಾಗಿಲು ಮುಚ್ಚಲಿದ್ದಾರೆ. ಈ ಬಾರಿ 13 ದಿನಗಳ ಕಾಲ ಭಕ್ತರಿಗೆ ಹಾಸನಾಂಬೆ ದರ್ಶನಕ್ಕೆ ಅವಕಾಶ ನೀಡಲಾಗಿತ್ತು. ಈವರೆಗೆ ಹತ್ತು ಲಕ್ಷಕ್ಕೂ ಹೆಚ್ಚು ಭಕ್ತರು ಹಾಸನಾಂಬೆ ದೇವಿ ದರ್ಶನ ಮಾಡಿದ್ದಾರೆ.
ಇಂದು ಜೆಡಿಎಸ್ ಮಾಜಿ ಶಾಸಕ ಗೌರಿಶಂಕರ್ ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ. ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿಂದು ಪಕ್ಷ ಸೇರ್ಪಡೆ ಕಾರ್ಯಕ್ರಮ ನಡೆಯಲಿದ್ದು ಸಿಎಂ, ಡಿಸಿಎಂ ಸಮ್ಮುಖದಲ್ಲಿ ಗೌರಿ ಶಂಕರ್ ಕಾಂಗ್ರೆಸ್ ಸೇರಲಿದ್ದಾರೆ. ಬಿಜೆಪಿ, ಜೆಡಿಎಸ್ ಮೈತ್ರಿಗೆ ಅಸಮಾಧಾನ ಹೊರಹಾಕಿದ್ದ ತುಮಕೂರು ಗ್ರಾಮಾಂತರ ಕ್ಷೇತ್ರದ ಮಾಜಿ ಶಾಸಕ ಗೌರಿಶಂಕರ್ ಅವರು ನೂರಾರು ಬೆಂಬಲಿಗರ ಜೊತೆ ಕಾಂಗ್ರೆಸ್ ಸೇರಲಿದ್ದಾರೆ.
HDK ನಿವಾಸದ ದೀಪಾಲಂಕಾರಕ್ಕೆ ಅಕ್ರಮವಾಗಿ ವಿದ್ಯುತ್ ಪಡೆದ ಆರೋಪ ಸಂಬಂಧ ಇಂದು ಹೆಚ್ಡಿಕೆಗೆ ಬೆಸ್ಕಾಂ ಅಧಿಕಾರಿಗಳಿಂದ ನೋಟಿಸ್ ಸಾಧ್ಯತೆ. ದಂಡದ ಮೊತ್ತವನ್ನ ನೋಟಿಸ್ ಮೂಲಕ ಬೆಸ್ಕಾಂ ತಿಳಿಸಲಿದೆ.
ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷರಾಗಿ ಇಂದು ವಿಜಯೇಂದ್ರ ಪದಗ್ರಹಣ ಹಿನ್ನೆಲೆ ಬೆಂಗಳೂರಿನ ಮಲ್ಲೇಶ್ವರಂನ ರಾಜ್ಯ ಬಿಜೆಪಿ ಕಚೇರಿಯ ಜಗನ್ನಾಥ ಭವನದಲ್ಲಿ ದುರ್ಗಾ ಹೋಮ, ಗಣಪತಿ ಹೋಮ ಆರಂಭವಾಗಿದೆ. ಹೋಮ ಸಂಕಲ್ಪದಲ್ಲಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ, ಭಾರತೀಯ ಜನತಾ ಪಕ್ಷದ ಕಚೇರಿ ಸಿಬ್ಬಂದಿ, ಕಾರ್ಯಕರ್ತರು ಭಾಗಿಯಾಗಿದ್ದಾರೆ. ಇಂದು ರಾತ್ರಿ, ಮುಂಜಾನೆಯಿಂದ ಹೋಮ ಹವನ ಕಾರ್ಯ ನಡೆಯುತ್ತಿದೆ. ಬೆಳಗ್ಗೆ ಪೂರ್ಣಾಹುತಿಯಲ್ಲಿ ನಿಯೋಜಿತ ಅಧ್ಯಕ್ಷ ವಿಜಯೇಂದ್ರ ಭಾಗಿಯಾಗಲಿದ್ದಾರೆ.
ಬೆಂಗಳೂರಿನ ಶೇಷಾದ್ರಿಪುರಂನ ಜೆಡಿಎಸ್ ಕಚೇರಿ ಕಾಂಪೌಂಡ್ಗೆ ಅಂಟಿಸಿದ್ದ ‘ವಿದ್ಯುತ್ ಕಳ್ಳ ಕುಮಾರಸೋಮಿ..!’ ಎಂದು ಬರೆದಿದ್ದ ಪೋಸ್ಟರ್ ತೆರವುಗೊಳಿಸಲಾಗಿದೆ. ಜೆ.ಪಿ.ಭವನದ ಕಾಂಪೌಂಡ್ಗೆ ಕಿಡಿಗೇಡಿಗಳು ಪೋಸ್ಟರ್ ಅಂಟಿಸಿದ್ದರು. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ನಂತರ ಪೋಸ್ಟರ್ಗಳ ತೆರವು ಮಾಡಲಾಗಿದೆ. ಶ್ರೀರಾಂಪುರ ಠಾಣೆ ಪೊಲೀಸರು ಪೋಸ್ಟರ್ಗಳನ್ನು ತೆರವುಗೊಳಿಸಿದ್ದಾರೆ.
Published On - 7:59 am, Wed, 15 November 23