Karnataka News Highlights: ನಿಗಮ ಮಂಡಳಿಗೆ ನೇಮಕಾತಿ ಪ್ರಕ್ರಿಯೆ ಸಂಬಂಧ ಬೆಂಗಳೂರಿನ ತಾಜ್ ವೆಸ್ಟ್ ಎಂಡ್ ಹೋಟೆಲ್ನಲ್ಲಿ ನಡೆಸಲಾದ ಸಭೆ ಮುಕ್ತಾಯವಾಗಿದ್ದು, ನ.28 ರಂದು ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಮಾಡಿ ಆದೇಶಿಸುವ ಸಾಧ್ಯತೆ ಇದೆ. ದೆಹಲಿಯಲ್ಲಿಂದು ಕಾವೇರಿ (Cauvery) ನೀರು ನಿಯಂತ್ರಣ ಸಮಿತಿ ಸಭೆ ನಿಗದಿಯಾಗಿದ್ದು, 11.30ಕ್ಕೆ ಸಿಡಬ್ಲ್ಯುಆರ್‌ಸಿ (CWRC) ಸಭೆ ನಡೆಯಲಿದೆ. ಇನ್ನೊಂದೆಡೆ, ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ನಂತರ ಮೊದಲ ಬಾರಿಗೆ ಸಿದ್ದರಾಮಯ್ಯ (Siddaramaiah) ಅವರು ಬಾಗಲಕೋಟೆ ಜಿಲ್ಲಾ ಪ್ರವಾಸ ಕೈಗೊಳ್ಳುತ್ತಿದ್ದಾರೆ. ಇಂದು ಅವರು ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ. ಇನ್ನೊಂದೆಡೆ, ಬರ ಪರಿಹಾರ ನೀಡುವಂತೆ ಕೇಂದ್ರದ ನಾಯಕರನ್ನು ಒತ್ತಾಯಿಸಲು ಕೃಷಿ ಸಚಿವ ಎನ್ ಚಲುವರಾಯಸ್ವಾಮಿ (N Chaluvarayaswamy) ದೆಹಲಿಗೆ ತೆರಳಲಿದ್ದಾರೆ. ಇದೆಲ್ಲದರ ಜೊತೆಗೆ ರಾಜ್ಯದ ಪ್ರಮುಖ ಸುದ್ದಿಗಳ ಮಾಹಿತಿಗಾಗಿ ಟಿವಿ9 ಡಿಜಿಟಲ್ ಲೈವ್ ಫಾಲೋ ಮಾಡಿ.
ಬೆಂಗಳೂರು: ಡಿಸಿಎಂ ಡಿಕೆ ವಿರುದ್ಧ ಸಿಬಿಐ ತನಿಖೆಗೆ ನೀಡಿದ್ದ ಅನುಮತಿ ವಾಪಸ್ ವಿಚಾರ ‘ಆದಾಯಕ್ಕಿಂತ ಅಧಿಕ ಆಸ್ತಿ ಗಳಿಕೆ ಆರೋಪದಡಿ ಸಿಬಿಐ ತನಿಖೆಗೆ ನೀಡಿದ್ದ ಅನುಮತಿಯನ್ನು ಸಚಿವ ಸಂಪುಟ ಹಿಂಪಡೆದಿದ್ದು, ಸಂಪುಟ ಸಭೆ ಅನುಮತಿ ಹಿಂಪಡೆದಿರುವುದು ಕಾನೂನು ಬಾಹಿರ ಕ್ರಮ, ರಾಜ್ಯ ಸಚಿವ ಸಂಪುಟದ ತೀರ್ಮಾನವನ್ನು ನಾನು ಖಂಡಿಸುತ್ತೇನೆ ಎಂದು ಟ್ವಿಟರ್ನಲ್ಲಿ ವಿಧಾನಸಭೆ ವಿಪಕ್ಷ ನಾಯಕ ಆರ್.ಅಶೋಕ್ ಹಂಚಿಕೊ.ಡಿದ್ದಾರೆ.
ಅಕ್ರಮ ಆಸ್ತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಸಿಎಂ @DKShivakumar ವಿರುದ್ಧದ ಸಿಬಿಐ ತನಿಖೆಯನ್ನು ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಹಿಂದೆ ಪಡೆದಿರುವುದು ಕಾನೂನು ಬಾಹಿರ ಕ್ರಮ. ಇದನ್ನು ಖಂಡಿಸುತ್ತೇನೆ.
— R. Ashoka (ಆರ್. ಅಶೋಕ) (@RAshokaBJP) November 23, 2023
ಬೆಂಗಳೂರು: ಸಚಿವ ಸಂಪುಟ ಸಭೆ ನಂತರ ಸಿಎಂ ಸಿದ್ದರಾಮಯ್ಯ ಅವರು ವಿಧಾನಸೌಧದಿಂದ ನಿರ್ಗಮಿಸಿದ್ದಾರೆ.
ಬೆಂಗಳೂರು: ಡಿ.ಕೆ.ಶಿವಕುಮಾರ್ ವಿರುದ್ಧದ ಸಿಬಿಐ ಕೇಸ್ ವಾಪಸ್ ಪಡೆಯಲು ಸಂಪುಟ ನಿರ್ಧಾರ ಮಾಡಿದೆ.
ಬೆಂಗಳೂರು: ಮಾಜಿ ಸಿಎಂ ಎಸ್.ಎಂ. ಕೃಷ್ಣ ನಿವಾಸಕ್ಕೆ ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ್ ಭೇಟಿ ನೀಡಿದ್ದಾರೆ. ವಿಪಕ್ಷ ನಾಯಕರಾದ ಹಿನ್ನೆಲೆಯಲ್ಲಿ ಸೌಹಾರ್ದಯುತ ಭೇಟಿ ಇದಾಗಿದ್ದು, ಕೇಂದ್ರ ಸಚಿವ ಭಗವಂತ ಖೂಬಾ, ಶಾಸಕರಾದ ಡಾ. ಅಶ್ವಥ್ ನಾರಾಯಣ, ಎಸ್. ಮುನಿರಾಜು ಉಪಸ್ಥಿತರಿದ್ದರು.
ಬೆಂಗಳೂರು: ಕೆಲ ಹೊತ್ತಿನಲ್ಲೇ ವಿಧಾನಸೌಧದಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಸಚಿವ ಸಂಪುಟ ಸಭೆ ನಡೆಯಲಿದೆ. ಇಂದಿನ ಸಚಿವ ಸಂಪುಟ ಸಭೆ ಭಾರಿ ಮಹತ್ವ ಪಡೆದುಕೊಂಡಿದೆ. 2019 ರ ಸಿಬಿಐ ಪ್ರಕರಣ ಒಂದಕ್ಕೆ ಸಂಬಂಧಿಸಿ ಕ್ಯಾಬಿನೆಟ್ ಮೀಟಿಂಗ್ ನಲ್ಲಿ ಕಾನೂನಾತ್ಮಕ ಅಂಶಗಳ ಚರ್ಚೆ ನಡೆಯುವ ಸಾಧ್ಯತೆಯಿರುವುದರಿಂದ ಈ ಸಭೆ ಮಹತ್ವ ಪಡೆದುಕೊಂಡಿದೆ.
ಹಾಸನ: ಬೆಂಗಳೂರು ಅರಮನೆ ಮೈದಾನದಲ್ಲಿ ಮೊದಲ ಬಾರಿಗೆ ಕಂಬಳ ಆಯೋಜನೆ ಮಾಡಲಾಗಿದ್ದು, ಬೆಂಗಳೂರಿಗೆ ತೆರಳುತ್ತಿದ್ದ ಕಂಬಳದ ಕೋಣಗಳಿಗೆ ಮಾರ್ಗಮಧ್ಯೆ ಸ್ವಾಗತ ಕೋರಲಾಗಿದೆ. ಹಾಸನಕ್ಕೆ ಬಂದಿಳಿದ 180 ಜೋಡಿ ಕಂಬಳದ ಕೋಣಗಳಿಗೆ ಸ್ವಾಗತ ಮಾಡಲಾಗಿದ್ದು, ಹಾಸನದ ಇಂಜಿನಿಯರಿಂಗ್ ಕಾಲೇಜು ಮೈದಾನದಲ್ಲಿ 4 ಗಂಟೆ ವಿಶ್ರಾಂತಿ ಪಡೆದಿದೆ. ಕಂಬಳದ ಕೋಣಗಳನ್ನು ನೋಡಲು ಸಾರ್ವಜನಿಕರು ಮುಗಿಬಿದ್ದಿದ್ದಾರೆ.
ದಾವಣಗೆರೆ: ಬೃಹತ್ ಗಾತ್ರದ ನಾಗರ ಹಾವು ಉರಗ ತಜ್ಞನ ಕೈಗೆ ಸುತ್ತಿಕೊಂಡ ಘಟನೆ ದಾವಣಗೆರೆ ನಗರದ ಮಾಗಾನಹಳ್ಳಿ ರಸ್ತೆ ಮಂಡಕ್ಕಿ ಭಟ್ಟಿಯಲ್ಲಿ ನಡೆದಿದೆ. ಗೋಡೆ ನಡುವೆ ಸೇರಿಕೊಂಡ ಹಾವನ್ನು ಹೊರ ತೆಗೆಯುತ್ತಿದ್ದಂತೆ ಉರಗ ತಜ್ಞರ ಕೈಗೆ ಸುತ್ತಿಕೊಂಡಿದ್ದು, ಹಾವಿನ ಹಿಡಿತದಿಂದ ಬಿಡಿಸಿಕೊಳ್ಳಲು ಸ್ನೇಕ್ ಬಸಣ್ಣ ಹರ ಸಾಹಸ ಪಟ್ಟಿದ್ದಾರೆ.
ಬೆಂಗಳೂರು: ಡಿಕೆ ಶಿವಕುಮಾರ್ ದೆಹಲಿ ನಿವಾಸಗಳ ಮೇಲೆ ಐಟಿ ದಾಳಿ ಪ್ರಕರಣಕ್ಕೆ ಸಂಬಂಧಪಟ್ಟಂತೆ ದುಬೈಗೆ ತೆರಳಲು ಅನುಮತಿ ಕೋರಿ ಡಿಸಿಎಂ ಡಿ.ಕೆ ಶಿವಕುಮಾರ್ ಜನಪ್ರತಿನಿಧಿಗಳ ವಿಶೇಷ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಐಟಿ ಪ್ರಕರಣದಲ್ಲಿ ಆರೋಪಿಯಾಗಿರುವ ಡಿ.ಕೆ.ಶಿವಕುಮಾರ್ ವಿಶ್ವಸಂಸ್ಥೆಯ ಪರಿಸರ ಸಮ್ಮೇಳನದಲ್ಲಿ ಭಾಗವಹಿಸಲು ತೆರಳಬೇಕಿದೆ. ಹೀಗಾಗಿ ನ.29ರಿಂದ ಡಿ.3ರವರೆಗೆ ತೆರಳಲು ಅನುಮತಿ ಕೋರಿದ ಅರ್ಜಿಯನ್ನು ವಿಚಾರಣೆ ನಡೆಸಿ ನ್ಯಾಯಾಧೀಶೆ ಜೆ.ಪ್ರೀತ್ ಅವರು ಅನುಮತಿ ನೀಡಿದ್ದಾರೆ.
ರಾಮನಗರ: ಉಪವಿಭಾಗಾಧಿಕಾರಿಗಳ ಕೋರ್ಟ್ ಕಲಾಪ ವರ್ಗಾವಣೆ ವಿಚಾರ ‘ ವರ್ಗಾವಣೆ ವಿರೋಧಿಸಿ ಕೋರ್ಟ್ ಕಲಾಪ ಬಹಿಷ್ಕರಿಸಿ ವಕೀಲರಿಂದ
ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸುತ್ತಿದ್ದಾರೆ. ವಾರದಲ್ಲಿ 1 ದಿನ ಮಾತ್ರ ಕಲಾಪವನ್ನು ಕನಕಪುರದಲ್ಲಿ ನಡೆಸುವಂತೆ ಅದೇಶ ಹಿನ್ನೆಲೆ ಪ್ರತಿ ಮಂಗಳವಾರ ಕನಕಪುರದಲ್ಲಿ ಕೋರ್ಟ್ ಕಲಾಪ ನಡೆಸಲು ಎಸಿ ನಿರ್ಧಾರ ಮಾಡಿದ್ದಾರೆ. ಈ ಹಿಂದೆ ರಾಮನಗರ ಜಿಲ್ಲಾ ಕೇಂದ್ರದಲ್ಲೇ ಎಸಿ ಕೋರ್ಟ್ ಕಲಾಪ ನಡೆಯುತ್ತಿತ್ತು.
ಬಾಗಲಕೋಟೆ: ನಮ್ಮ ಸಮಾಜ & ಲಂಬಾಣಿ ಸಮಾಜಕ್ಕೆ ಆಗಾಗ ಆತಂಕ ಉಂಟಾಗುತ್ತಿದೆ ಎಂದು ಬೋವಿ ಸಮಾಜದ ಕಾರ್ಯಕ್ರಮದಲ್ಲಿ ಅರವಿಂದ ಲಿಂಬಾವಳಿ ಹೇಳಿದರು. ಇನ್ನು ಹಿಂದುಳಿದ, ದಲಿತರ ಬಗ್ಗೆ ಸಿಎಂ ಸಿದ್ದರಾಮಯ್ಯಗೆ ಅತ್ಯಂತ ಕಾಳಜಿ ಇದೆ. ದೇಶದಲ್ಲಿ ನರೇಂದ್ರ ಮೋದಿ, ಕರ್ನಾಟಕದಲ್ಲಿ ಸಿದ್ದರಾಮಯ್ಯ , ಇಬ್ಬರೂ ಹಿಂದುಳಿದವರಿಗೆ, ದಲಿತರಿಗೆ ನ್ಯಾಯ ಕೊಡುತ್ತಾರೆ ಎಂದರು.
ಬೆಂಗಳೂರು: ವಿಪಕ್ಷ ನಾಯಕ ಆರ್.ಅಶೋಕ್ಗೆ ಎಸ್.ಟಿ ಸೋಮಶೇಖರ್ ಅವರು ವಿಧಾನಸೌಧದ ವಿಪಕ್ಷ ನಾಯಕರ ಕೊಠಡಿಯಲ್ಲಿ ಭೇಟಿಯಾಗಿ ಶುಭ ಕೋರಿದರು.
ಮಂಡ್ಯ: ಮುಂದಿನ ಒಂದು ತಿಂಗಳು ತಮಿಳುನಾಡಿಗೆ ನೀರು ಬಿಡುವಂತೆ ಸಿಡಬ್ಲ್ಯುಆರ್‌ಸಿ ಕರ್ನಾಟಕ ಸರ್ಕಾರಕ್ಕೆ ಆದೇಶ ನೀಡಿದೆ. ಪ್ರತಿನಿತ್ಯ 2700 ಕ್ಯೂಸೆಕ್ ನೀರು ಹರಿಸಲು ಶಿಫಾರಸ್ಸು ಮಾಡಿದ್ದು, ಇದಕ್ಕೆ ಮಂಡ್ಯದ ರೈತರು ಆಕ್ರೋಶ ಹೊರಹಾಕುತ್ತಿದ್ದಾರೆ. ಮಂಡ್ಯದ ವಿಶ್ವೇಶ್ವರಯ್ಯ ಪ್ರತಿಮೆ ಮುಂಭಾಗದ ಬೆಂಗಳೂರು-ಮೈಸೂರು ಹೆದ್ದಾರಿ ತಡೆದು ಪ್ರತಿಭಟನೆ ನಡೆಸಲಾಗುತ್ತಿದ್ದು, ಸರ್ಕಾರ, ಪ್ರಾಧಿಕಾರದ ವಿರುದ್ಧ ಧಿಕ್ಕಾರಗಳನ್ನು ಕೂಗಲಾಗುತ್ತಿದೆ. ತಮಿಳುನಾಡಿಗೆ ನೀರು ಹರಿಸದಂತೆ ರೈತ ಹಿತರಕ್ಷಣಾ ಸಮಿತಿ ಕಳೆದ 80 ದಿನಗಳಿಂದ ರೈತರ ಹೋರಾಟ ನಡೆಯುತ್ತಿದೆ.
ಬಾಗಲಕೋಟೆಗೆ ಮತ್ತೆ ಟಗರು ಬಂದಿದೆ ಎಂದು ಶಾಸಕ ವಿಜಯಾನಂದ ಕಾಶಪ್ಪನವರ್ ಹೇಳಿದರು. ಕೋಚಿಂಗ್ ಸೆಂಟರ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯರನ್ನು ಟಗರಿಗೆ ಹೋಲಿಸಿದರು. ನಾವು ಮತ್ತೆ ಬರುತ್ತೇವೆ ಅಂತಾ ಮೊದಲೇ ಹೇಳಿದ್ದೆವು, ಈಗ ಮತ್ತೆ ಬಂದಿದ್ದೇವೆ. ನನ್ನ ಪತ್ನಿ ವೀಣಾಗೆ ಸಿಎಂ ಸಿದ್ದರಾಮಯ್ಯ ಲೋಕಸಭಾ ಟಿಕೆಟ್ ಕೊಟ್ಟಿದ್ದರು. ಈಗ ಮತ್ತೆ ನನ್ನ ಪತ್ನಿಗೆ ಆಶೀರ್ವಾದ ಮಾಡಿ ಎಂದರು. ಆ ಮೂಲಕ ಪರೋಕ್ಷವಾಗಿ ಸಿಎಂ ಮುಂದೆ ಟಿಕೆಟ್ ಬೇಡಿಕೆಯಿಟ್ಟರು.
ಕುಮಾರಸ್ವಾಮಿ ವಿರುದ್ದ ಜೆಡಿಎಸ್ ಕಚೇರಿಗೆ ಪೋಸ್ಟರ್ ಅಂಟಿಸಿದ ವಿಚಾರವಾಗಿ ಮಾತನಾಡಿದ ಪೋಸ್ಟರ್ ಅಂಟಿಸಿದ್ದ ಕಾಂಗ್ರೆಸ್ ಮುಖಂಡ ಎಸ್ ಮನೋಹರ್, ಪೋಸ್ಟರ್ ವಾರ್ ಎಂಬ ಪದ ಜೆಡಿಎಸ್ ಬಳಸಿದೆ. ಅನೇಕ ಬಾರಿ ಕುಮಾರಸ್ವಾಮಿ ಬ್ಲ್ಯೂ ಫಿಲಂ ಪದ ಬಳಸಿದ್ದಾರೆ. ಬ್ಲ್ಯೂ ಫಿಲಂ ನೋಡೋದು ತಪ್ಪೇ ಮಾಡೋದು ತಪ್ಪೇ. ಎಲ್ಲರನ್ನೂ ಬ್ಲ್ಯಾಕ್ ಮೇಲ್ ಮಾಡಿಕೊಂಡೇ ಬಂದ ರಾಜಕಾರಣಿ ಕುಮಾರಸ್ವಾಮಿ. ಅವರನ್ನು ನಾವು ಗೌರವದಿಂದಲೇ ಮಾತನಾಡಿಕೊಂಡು ಬಂದಿದ್ದೇವೆ. ಆದರೆ ಕುಮಾರಸ್ವಾಮಿ ಅವರು ಎಲ್ಲ ರಾಜಕಾರಣಿಗಳ ಬಗ್ಗೆ ಬೇರೆ ಬೇರೆ ಪದಗಳನ್ನು ಬಳಕೆ ಮಾಡುತ್ತಾರೆ. ಅವರ ಯೋಗ್ಯತೆ ಅರ್ಹತೆ ಅನುಸಾರ ಪದ ಬಳಸುತ್ತಾರೆ. ನಾನೊಬ್ಬನೆ ಸಿಂಹ ಎಂಬ ಕುಮಾರಸ್ವಾಮಿ ಯಾಕೆ ಭ್ರಷ್ಟಾಚಾರ ಆರೋಪ ಮಾಡಿ ಅವರೇ ಸಿಎಂ ಆಗಿದ್ದಾಗ ತನಿಖೆ ಮಾಡಲಿಲ್ಲ ಎಂದು ಪ್ರಶ್ನಿಸಿದರು. ಪೋಸ್ಟರ್ ವಾರ್ ನಡೆಯುವಾಗ ನಾವು ಎಲ್ಲ ಮಾಹಿತಿ ಮಾಧ್ಯಮಗಳಿಗೆ ನೀಡಿಯೇ ಕಾನೂನಾತ್ಮಕವಾಗಿಯೇ ಮಾಡುತ್ತೇವೆ. ಜೆಡಿಎಸ್ ಸಾಮಾಜಿಕ ಜಾಲತಾಣಗಳಲ್ಲಿ ಯಾವ ಯಾವ ಸುದ್ದಿ ಬರುತ್ತಿದೆ ಎಂಬುದನ್ನು ಮಾಧ್ಯಮಗಳೇ ನೋಡಲಿ. ಜೆಡಿಎಸ್ ಅಧಿಕೃತ ಸಾಮಾಜಿಕ ಜಾಲತಾಣದಲ್ಲಿ ಏನೇನೋ ಪದ ಬಳಕೆ ಮಾಡುತ್ತಿದ್ದಾರೆ ಎಂದರು. ಪೋಸ್ಟರ್ ಅಂಟಿಸಿದ ವಿಚಾರವಾಗಿ ಮನೋಹರ್ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಕಾವೇರಿ ನೀರು ನಿಯಂತ್ರಣ ಪ್ರಾಧಿಕಾರದ ಸಭೆಯಲ್ಲಿ ನೀರು ಬಿಡುವಂತೆ ತಮಿಳುನಾಡು ಬೇಡಿಕೆ ಇಟ್ಟಿದೆ. ಇದಕ್ಕೆ ಕೌಂಟರ್ ಕೊಟ್ಟ ಕರ್ನಾಟಕದ ಅಧಿಕಾರಿಗಳು, ರಾಜ್ಯದಲ್ಲಿ ಬರ ಪರಿಸ್ಥಿತಿ ಎದುರಾಗಿದೆ. ತಮಿಳುನಾಡು 17ಟಿಎಂಸಿ ಕೇಳುತ್ತಿರುವುದಕ್ಕೆ ಅರ್ಥವೇ ಇಲ್ಲ. ಕಾವೇರಿ ಕೊಳ್ಳದ ಜಲಾಶಯಗಳಲ್ಲಿ ಸಾಕಷ್ಟು ನೀರಿಲ್ಲ. ಕುಡಿಯುವ ಬಳಕೆಗೂ ನೀರು ಸಂಗ್ರಹವಿಲ್ಲ. ಕರ್ನಾಟಕದಲ್ಲಿ ಮುಂದೆ ಮಳೆಯಾಗುವ ಸಾಧ್ಯತೆ ಕಡಿಮೆ ಇದೆ. ತಮಿಳುನಾಡಿನಲ್ಲಿ ಹೆಚ್ಚು ಮಳೆಯಾಗುತ್ತಿದೆ. ಹಿಂಗಾರು ಮಾರುತಗಳು ಪ್ರಬಲವಾಗಿವೆ, ಮಳೆ ಹೆಚ್ಚು ಸುರಿಯುತ್ತಿದೆ. ತಮಿಳುನಾಡಿಗೆ ನೀರು ಬಿಟ್ಟರೆ ವಾಪಾಸ್ ತೆಗೆದುಕೊಳ್ಳಲು ಸಾಧ್ಯವೆ? ಹೀಗಾಗಿ ನೀರು ಹರಿಸಲು ಸಾಧ್ಯವೇ ಇಲ್ಲ ಎಂದು ಹೇಳಿದ್ದಾರೆ.
ದೆಹಲಿಯಲ್ಲಿ ಕಾವೇರಿ ನೀರು ನಿಯಂತ್ರಣ ಸಮಿತಿ ಸಭೆ ಆರಂಭಗೊಂಡಿದ್ದು, ಡಿಸೆಂಬರ್ ಅವಧಿಯಲ್ಲಿ ಹರಿಸಬೇಕಿದ್ದ 6 ಟಿಎಂಸಿ ನೀರಿಗಾಗಿ ತಮಿಳುನಾಡಿನ ಅಧಿಕಾರಿಗಳು ಬೇಡಿಕೆ ಮುಂದಿಟ್ಟಿದ್ದಾರೆ. ಒಟ್ಟು 17 ಟಿಎಂಸಿ ನೀರು ಹರಿಸುವಂತೆ ಒತ್ತಾಯಿಸಿದ್ದಾರೆ.
ಜಾತಿಗಣತಿ ಮೂಲ ಪ್ರತಿ ನಾಪತ್ತೆ ವಿಚಾರವಾಗಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿಪಕ್ಷ ನಾಯಕ ಆರ್.ಅಶೋಕ್, ಕಾಂತರಾಜ ವರದಿ ಹಲವು ಗೊಂದಲಗಳಿಗೆ ಕಾರಣವಾಗಿದೆ. ಸಿದ್ದರಾಮಯ್ಯ ಏಕಾಏಕಿ ಮಾಡಿದ್ದಾರೆ. ಇದುಹತ್ತು ವರ್ಷದ ಹಳೆಯ ವರದಿಯಾಗಿದೆ. ಈಗ ಜನಸಂಖ್ಯೆ ಹೆಚ್ಚಾಗಿದೆ, ಜನರಿಂದ ವಿರೋಧ ವ್ಯಕ್ತವಾಗುತ್ತಿದೆ. ಕಾಂತರಾಜು ವರದಿಯಲ್ಲಿ ಸೆಕ್ರೆಟರಿ ಸಹಿ ಹಾಕಬೇಕು. ನಮ್ಮಅವಧಿಯಲ್ಲಿ ಸಹಿ ಹಾಕಲೇ ಇಲ್ಲ, ಈಗ ಕಾಂತರಾಜು ವರದಿಯ ಮೂಲ ಪ್ರತಿಯೇ ಕಾಣೆಯಾಗಿದೆ. 168 ಕೋಟಿ ಸರ್ಕಾರದ ಹಣ ಖರ್ಚು ಮಾಡಿ ವರದಿ ಕಾಣೆಯಾಗಿದೆ ಅಂದ್ರೆ ಸರ್ಕಾರ ಯಾಕೆ ತನಿಖೆ ಮಾಡುತ್ತಿಲ್ಲ? ಕಾಣೆಯಾಗಿರುವ ಬಗ್ಗೆ ಏನೂ ಮಾತನಾಡುತ್ತಿಲ್ಲ, ಇದನ್ನ ನಾನು ಖಂಡಿಸುತ್ತೇನೆ. ಯಾರು ಖದ್ದಿದ್ದಾರೆ ಎಂಬುದರ ವಿಚಾರವಾಗಿ ತನಿಖೆ ಆಗಲೇಬೇಕು. ಸರಿಯಾದ ಮಾನದಂಡವಾಗಿ ಸಮಿಕ್ಷೆ ಮಾಡಬೇಕು. ಅತೀ ಆತುರ, ಓವರ್ ಆಕ್ಷನ್ ಆಗಿ ಸಿದ್ದರಾಮಯ್ಯ ವರದಿ ಸ್ವೀಕಾರಕ್ಕೆ ಮುಂದಾಗಿದ್ದಾರೆ ಎಂದರು.
ಬೆಂಗಳೂರು: ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ವಿಪಕ್ಷ ನಾಯಕ ಆರ್.ಅಶೋಕ, ನಮ್ಮ ಪ್ರಧಾನಿಗಳು ನಡ್ಡಾ, ಅಮೀತ್ ಶಾ, ಸಂತೋಷ್ ಜೀ, ಬಿಎಸ್ವೈ, ಬೊಮ್ಮಾಯಿ ಗಣ್ಯರೆಲ್ಲ ಪಕ್ಷದ ನಾಯಕರ ಜೊತೆ ಚರ್ಚೆ ಮಾಡಿ ನನ್ನನ್ನು ವಿಪಕ್ಷ ನಾಯಕನನ್ನಾಗಿ ಆಯ್ಕೆ ಮಾಡಿದ್ದಾರೆ. ವಿಪಕ್ಷ ನಾಯಕರ ಕಚೇರಿಗೆ ಇಂದು ಪೂಜೆ ಮಾಡಿ ವಿದ್ಯುಕ್ತವಾಗಿ ಅಧಿಕಾರ ಸ್ವೀಕಾರ ಮಾಡಿದ್ದೇನೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ 6 ತಿಂಗಳುಗಳಲ್ಲಿ ಏನೂ ಆಗಿಲ್ಲ. ಅನೇಕ ಕಪ್ಪು ಚುಕ್ಕೆಗಳು ಕಾಣಿಸುತ್ತಿವೆ. ಸರ್ಕಾರದ ಕಿವಿ ಹಿಂಡುವ ಕೆಲಸಗಳನ್ನ ಸದನದಲ್ಲಿ ಮಾಡುತ್ತೇವೆ, ಅದಕ್ಕೂ ಬಗ್ಗದೇ ಹೋದರೆ ಉಗ್ರ ಹೋರಾಟ ಮಾಡುತ್ತೇವೆ. ವರ್ಗಾವಣೆಯಲ್ಲಿ ಸರ್ಕಾರ ಮುಳುಗಿದೆ ಎಂದರು.
ಪಕ್ಷದಲ್ಲಿ ಎಲ್ಲರನ್ನೂ ಜೊತೆಗೆ ಕರೆದೊಯ್ಯುವುದು ನನ್ನ ಜವಾಬ್ದಾರಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಹೇಳಿದರು. ರಮೇಶ್ ಜಾರಕಿಹೊಳಿ ಭೇಟಿ ಬಳಿಕ ಮಾತನಾಡಿದ ಅವರು, ಜಾರಕಿಹೊಳಿ ನಡೆ ಬಗ್ಗೆ ಹಲವು ರೀತಿಯಲ್ಲಿ ಚರ್ಚೆ ನಡೆಯುತ್ತಿತ್ತು. ಕೆಲವು ಬಾರಿ ಶಾಸಕ ರಮೇಶ್ ಅಸಮಾಧಾನ ತೋಡಿಕೊಂಡಿದ್ದರು. ಹೀಗಾಗಿ ರಮೇಶ್ ಭೇಟಿ ಮಾಡಿ ಅರ್ಧಗಂಟೆ ಚರ್ಚೆ ಮಾಡಿದ್ದೇನೆ. ನರೇಂದ್ರ ಮೋದಿಯವರು ಮತ್ತೆ ಪ್ರಧಾನಿ ಆಗಬೇಕು. ಪಕ್ಷದಲ್ಲಿ ಸಹಕಾರ ಕೊಡೋದಾಗಿ ರಮೇಶ್ ಜಾರಕಿಹೊಳಿ ಹೇಳಿದ್ದಾರೆ. ಕೆಲವು ಸಣ್ಣಪುಟ್ಟ ಅಸಮಾಧಾನಗಳಿದ್ದವು, ಅದರ ಬಗ್ಗೆ ಚರ್ಚಿಸಿದ್ದೇವೆ ಎಂದರು. ಮಾಜಿ ಸಚಿವರಾದ ಅರವಿಂದ ಲಿಂಬಾವಳಿ, ಸೋಮಣ್ಣ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ಪಕ್ಷದ ಹಿರಿಯರು ಏನೇ ಮಾತಾಡಿದರೂ ಆಶೀರ್ವಾದ ಅಂದುಕೊಳ್ಳುತ್ತೇನೆ. ಎಲ್ಲರನ್ನೂ ಜೊತೆಗೆ ಕರೆದುಕೊಂಡು ಹೋಗುತ್ತೇನೆ ಎಂದರು.
ಜಾತಿಗಣತಿ ವರದಿ ಗೊಂದಲವಾಗಿರೋ ವಿಚಾರವಾಗಿ ಮಾತನಾಡಿದ ಗೃಹ ಸಚಿವ ಜಿ ಪರಮೇಶ್ವರ, ಆ ವರದಿಯನ್ನ ನಾವಿನ್ನು ಹೊರಗೆ ತಂದೆ ಇಲ್ಲ. ಆಯೋಗದವರು ವರದಿಯನ್ನ ಸರ್ಕಾರಕ್ಕೆ ಕೊಟ್ಟ ನಂತರ ಸರ್ಕಾರ ಅದನ್ನ ತೀರ್ಮಾನ ಮಾಡುತ್ತದೆ. ಮೂಲ ಪ್ರತಿ ಕಾಣೆ ಆಗಿದೆ ಅನ್ನೋದೆಲ್ಲ ಸುಳ್ಳು. ಆಯೋಗದ ಅಧ್ಯಕ್ಷರಿಗೆ ಒಂದು ತಿಂಗಳು ಹೆಚ್ಚಿಗೆ ಕಾಲಾವಕಾಶ ನೀಡಲಾಗಿದೆ. ವರದಿನೇ ಆಚೆ ಬಂದಿಲ್ಲ, ವರದಿ ಆಚೆ ಬಂದ ನಂತರ ಪರ ವಿರೋಧ ಅಭಿಪ್ರಾಯಗಳು ಕೇಳಿಬರಬಹದು. ಏನೂ ಇಲ್ಲದೇನೆ ಹೀಗೆ ಚರ್ಚೆ ನಡೆಸೋದು ಎಷ್ಟರ ಮಟ್ಟಿಗೆ ಸರಿ. ವಿರೋಧ ಪಕ್ಷವರು ಕೂಡ ಏನೇನೋ ಹೇಳಿಕೆಗಳನ್ನ ಕೊಡುತ್ತಿದ್ದಾರೆ. ವರದಿ ಬಂದ ಮೇಲೆ ತಾನೇ ಅದೆಲ್ಲ ಮಾತನಾಡೋದು ಎಂದರು.
ಕಾರ್ಕಳ ಶಾಸಕ ವಿ. ಸುನೀಲ್ ಕುಮಾರ್ ಅವರು ಟ್ವೀಟ್ ಮಾಡಿ, ಜಾತಿ ಗಣತಿ ವರದಿಯಲ್ಲಿನ ಗೋಜಲುಗಳನ್ನು ಗಮನಿಸಿದರೆ ಇದೊಂದು ದೊಡ್ಡ ಹಗರಣ ಎಂಬುದರಲ್ಲಿ ಅನುಮಾನವೇ ಇಲ್ಲ ಎಂದು ಹೇಳಿದ್ದಾರೆ. 162 ಕೋಟಿ ರೂ.ವೆಚ್ಚದಲ್ಲಿ ತಯಾರಿಸಿದ ವರದಿಯ ಉದ್ದೇಶವೇ ಈಡೇರುತ್ತಿಲ್ಲ ಎಂದರೆ ಅರ್ಥವೇನು? ವರದಿ ಬಗ್ಗೆ ಇಷ್ಟೆಲ್ಲಾ ಚರ್ಚೆ ನಡೆಯುತ್ತಿದ್ದರೂ ಆಯೋಗದ ಹಿಂದಿನ ಅಧ್ಯಕ್ಷ ಕಾಂತರಾಜ್ ನಾಪತ್ತೆಯಾಗಿದ್ದಾರೆ. ವರದಿಗೆ ಏಕೆ ಸಹಿ ಹಾಕಿಲ್ಲ ಎಂಬ ಬಗ್ಗೆ ಸದಸ್ಯ ಕಾರ್ಯದರ್ಶಿ ಮಗುಮ್ಮಾಗಿದ್ದಾರೆ. ಆಯೋಗದ ವರದಿಗೆ ಅವರು ಅಂದು ಸಹಿ ಹಾಕಿಲ್ಲ ಎಂದರೆ ತಾವು ಈ ವರದಿಯ ಭಾಗವಾಗಲು ತಯಾರಿಲ್ಲ ಎಂದರ್ಥವಲ್ಲವೇ?. ಅಂದರೆ ವರದಿ ತಯಾರಿ ಹಂತದಲ್ಲೇ ಭಾರೀ ಲೋಪ ಹಾಗೂ ಅವ್ಯವಹಾರ ನಡೆದಿದೆ ಎಂಬುದು ಸ್ಪಷ್ಟವಾಗುತ್ತದೆ ಎಂದು ಆರೋಪಿಸಿದ್ದಾರೆ.
ಜಾತಿ ಗಣತಿ ವರದಿಯಲ್ಲಿನ ಗೋಜಲುಗಳನ್ನು ಗಮನಿಸಿದರೆ ಇದೊಂದು ದೊಡ್ಡ ಹಗರಣ ಎಂಬುದರಲ್ಲಿ ಅನುಮಾನವೇ ಇಲ್ಲ. ೧೬೨ ಕೋಟಿ ರೂ.ವೆಚ್ಚದಲ್ಲಿ ತಯಾರಿಸಿದ ವರದಿಯ ಉದ್ದೇಶವೇ ಈಡೇರುತ್ತಿಲ್ಲ ಎಂದರೆ ಅರ್ಥವೇನು ? ವರದಿ ಬಗ್ಗೆ ಇಷ್ಟೆಲ್ಲ ಚರ್ಚೆ ನಡೆಯುತ್ತಿದ್ದರೂ ಆಯೋಗದ ಹಿಂದಿನ ಅಧ್ಯಕ್ಷ ಕಾಂತರಾಜ್ ನಾಪತ್ತೆಯಾಗಿದ್ದಾರೆ. 1/5
— Sunil Kumar Karkala (@karkalasunil) November 23, 2023
ಮೈಸೂರು: ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷರಾಗಿ ವಿಜಯೇಂದ್ರ ನೇಮಕ ವಿಚಾರವಾಗಿ ಪಕ್ಷದ ಮೇಲೆ ಮತ್ತಷ್ಟು ಮುನಿಸುಗೊಂಡ ಮಾಜಿ ಸಚಿವ ವಿ.ಸೋಮಣ್ಣ, ಡಿಸೆಂಬರ್ 6ರ ಬಳಿಕ ತನ್ನ ಮನಸ್ಸಿನ ಭಾವನೆ ತಿಳಿಸುವುದಾಗಿ ಹೇಳಿದರು. ಮಾಜಿ ಸಚಿವ ಅರವಿಂದ ಲಿಂಬಾವಳಿ ಹೇಳಿಕೆಗೆ ನನ್ನ ಸಮ್ಮತಿ ಇದೆ. ನಮ್ಮ ಪಕ್ಷದಲ್ಲಿ ಒಂದು ರೀತಿ ಸೋಮನಹಳ್ಳಿ ಮುದುಕಿ ಕಥೆ ಆಗಿದೆ. ಡಿಸೆಂಬರ್ 6ರ ಬಳಿಕ ಎಲ್ಲವನ್ನೂ ವಿವರವಾಗಿ ಹೇಳುತ್ತೇನೆ. ಯಾವ ರೀತಿ ನನಗೆ ಹೊಡೆತ ಆಗಿದೆ ಎಂಬುದನ್ನು ವಿವರಿಸುತ್ತೇನೆ. ರಾಜಕಾರಣ ಯಾವುದೇ ಮನೆತನಕ್ಕೆ ಸಿಮೀತವಲ್ಲ. ರಾಜಕಾರಣ ನಾಟಕ ಕಂಪನಿ ಅಲ್ಲ, ಒಳ ಒಪ್ಪಂದಕ್ಕೆ ಸಿಮೀತವಲ್ಲ. ನನ್ನನ್ನು ಯಾರು ಸಂಪರ್ಕಿಸಿಲ್ಲ, ನಾನೂ ಯಾರನ್ನು ಸಂಪರ್ಕಿಸಿಲ್ಲ ಎಂದರು.
ಕೈಗಾರಿಗಾ ಸಚಿವ ಎಂ.ಬಿ.ಪಾಟೀಲ್ ಪುತ್ರನ ವಿವಾಹ ಸಮಾರಂಭ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭಾಗಿಯಾಗಿದ್ದಾರೆ. ಬೆಂಗಳೂರಿನ ತಾಜ್ ವೆಸ್ಟ್ ಎಂಡ್ನಲ್ಲಿ ಬಸನಗೌಡ-ಅಖಿಲಾ ವಿವಾಹ ಸಮಾರಂಭ ನಡೆಯುತ್ತಿದೆ.
ಬೆಂಗಳೂರು ಸೇರಿದಂತೆ ರಾಜ್ಯದ ಬಹುತೇಕ ಕಡೆಗಳಲ್ಲಿ ನವೆಂಬರ್ 29ರ ವರೆಗೂ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಬೆಳಗಾವಿ, ಬೀದರ್, ಧಾರವಾಡ, ಗದಗ, ಹಾವೇರಿ, ಕೊಪ್ಪಳ, ರಾಯಚೂರು, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಹಾಸನ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ಶಿವಮೊಗ್ಗ, ತುಮಕೂರು, ವಿಜಯನಗರದಲ್ಲಿ ಮಳೆಯಾಗಲಿದೆ. ಶಿವಮೊಗ್ಗ, ಕೊಡಗು, ಚಿಕ್ಕಮಗಳೂರು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ನೀಡಲಾಗಿದೆ. ರಾಜ್ಯದ ಒಂದೆರಡು ಕಡೆಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ, ದಕ್ಷಿಣ ಒಳನಾಡಿನ ಕೆಲವು ಕಡೆಗಳಲ್ಲಿ, ಕರಾವಳಿಯ ಕೆಲವು ಕಡೆಗಳಲ್ಲಿ ಸಾಧಾರಣ ಮಳೆಯಾಗಲಿದೆ. ಬೆಂಗಳೂರಿನಲ್ಲಿ ಸದ್ಯ ಮೋಡ ಕವಿದ ವಾತಾವರಣ ಇದ್ದು, ನಿನ್ನೆ ರಾತ್ರಿ ಮಳೆಯಾಗಿತ್ತು.
ಚಿಕ್ಕಮಗಳೂರು: ಬೈರಾಪುರ ಬಳಿ ಕಾಡಾನೆ ದಾಳಿಗೆ ಒಳಗಾಗಿ ಮೃತಪಟ್ಟಿದ್ದ ETF ಸಿಬ್ಬಂದಿ ಕಾರ್ತಿಕ್ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ. ನಿನ್ನೆ ಆನೆಗಳನ್ನು ಕಾಡಿಗಟ್ಟುವ ಕಾರ್ಯಾಚರಣೆ ವೇಳೆ ಕಾರ್ತಿಕ್ ಸಾವನ್ನಪ್ಪಿದ್ದರು. ಮೃತ ಕಾರ್ತಿಕ್ ಕುಟುಂಬಕ್ಕೆ 25 ಲಕ್ಷ ರೂ. ಪರಿಹಾರ ಘೋಷಣೆ ಮಾಡಲಾಗಿದೆ.
ಸಚಿವ ಎಂ.ಬಿ.ಪಾಟೀಲ್ ಪುತ್ರನ ಮದುವೆ ಸಮಾರಂಭದಲ್ಲಿ ಭಾಗಿಯಾಗಲು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ಅವರು ಬೆಂಗಳೂರಿಗೆ ಆಗಮಿಸಿದ್ದಾರೆ. ಮದುವೆಯಲ್ಲಿ ಭಾಗಿಯಾದ ನಂತರ ಸಿಎಂ, ಡಿಸಿಎಂ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಲಿದ್ದಾರೆ.
ತುಮಕೂರು: ತಾಲೂಕಿನ ತಿಮ್ಮರಾಜನಹಳ್ಳಿ ಗ್ರಾಮ ಪಂಚಾಯತ್ ಸದಸ್ಯನ ಮೇಲೆ ಕಾರ್ಯದರ್ಶಿ ಹಲ್ಲೆ ನಡೆಸಿದ ಘಟನೆ ನಡೆದಿದೆ. ಘಟನೆಯಲ್ಲಿ ಹಲ್ಲೆಗೊಳಾದ ಸದಸ್ಯ ಚಂದ್ರಮೌಳಿ ಎಂಬವರ ಕಾಲು ಮುರಿತವಾಇದೆ. ಮಹಿಳೆಯೋರ್ವಳ ಅಂಗಡಿ ಲೈಸೆನ್ಸ್ ರಿನಿವಲ್ ಮಾಡುವ ವಿಚಾರದಲ್ಲಿ ಕಾರ್ಯದರ್ಶಿ ಸಂತೋಷ್ ಹಾಗೂ ಚಂದ್ರಮೌಳಿ ನಡುವೆ ದೂರವಾಣಿ ಕರೆಯಲ್ಲಿ ಜಗಳವಾಗಿತ್ತು. ಇಷ್ಟಕ್ಕೆ ಸುಮ್ಮನಾಗದ ಕಾರ್ಯದರ್ಶಿ ಸಂತೋಷ್, ಕುಟುಂಬದವರ ಜೊತೆ ಬಂದು ಚಂದ್ರಮೌಳಿ ಮೇಲೆ ಹಲ್ಲೆ ನಡೆಸಿರುವ ಆರೋಪ ಕೇಳಿಬಂದಿದೆ. ಇಬ್ಬರು ಮಹಿಳೆಯರು ಮತ್ತು ಇಬ್ಬರು ಪುರುಷರು ಹಲ್ಲೆ ನಡೆಸಿರುವ ಆರೋಪ ಕೇಳಿಬಂದಿದೆ. ವಾರ್ಡ್ ಸಭೆ ಮುಗಿಸಿ ಹೊರಬರುತ್ತಿದ್ದಂತೆ ಹಲ್ಲೆ ನಡೆಸಿದ್ದು, ಚಂದ್ರಮೌಳಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆ ಸಂಬಂಧ ಕೋರಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತೆಲಂಗಾಣ ಚುನಾವಣೆ ಹಿನ್ನೆಲೆ ಸಚಿವ ಜಮೀರ್ ಅಹ್ಮದ್ ಖಾನ್ ತಂಗಿದ್ದ ಹೋಟೆಲ್ ಮೇಲೆ ಪೊಲೀಸರು ದಾಳಿ ನಡೆಸಿದ ಘಟನೆ ನಡೆದಿದೆ. ಹೈದರಾಬಾದ್ ಪಾರ್ಕ್ ಹಟ್ ಹೋಟೆಲ್ ಮೇಲೆ ಈ ದಾಳಿ ನಡೆದಿದೆ. ತಡರಾತ್ರಿ ರೇಡ್ ಮಾಡಿದ್ದಕ್ಕೆ ಸಚಿವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ದಾಳಿ ನಡೆಸಿ ಯಾವುದೇ ಕುರುಹು ಇಲ್ಲದೆ ಪೊಲೀಸರು ಹಿಂತಿರುಗಿದ್ದಾರೆ. ತೆಲಂಗಾಣ ರಾಜ್ಯದಲ್ಲಿ ಈ ಬಾರಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲಿದೆ. ಬಿಜೆಪಿ ಹಾಗೂ ಬಿಎಸ್ಆರ್ ಸೋಲುವ ಭಯದಿಂದ ದಾಳಿ ಮಾಡಿಸಿದೆ ಎಂದು ಜಮೀರ್ ಆರೋಪಿಸಿದ್ದಾರೆ.
ಬರ ಪರಿಹಾರ ನೀಡುವಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಲು ಇಂದು ದೆಹಲಿಗೆ ಕಂದಾಯ ಸಚಿವ ಕೃಷ್ಣ ಭೈರೇಗೌಡ, ಕೃಷಿ ಸಚಿವ ಎನ್ ಚಲುವರಾಯಸ್ವಾಮಿ ಅವರು ತೆರಳಲಿದ್ದಾರೆ. ಈ ನಾಯಕರ ಭೇಟಿಗೆ ಕೇಂದ್ರ ವಿತ್ತ ಸಚಿವರು ಇಂದು ಸಮಯ ನೀಡಿದ್ದಾರೆ. ಒಂದು ವಾರದೊಳಗೆ ಬರ ಪರಿಹಾರ ಘೋಷಣೆ ಮಾಡುವ ನಿರೀಕ್ಷೆಯನ್ನು ಸಚಿವರು ಹೊಂದಿದ್ದಾರೆ,
ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ನಂತರ ಮೊದಲ ಬಾರಿಗೆ ಸಿದ್ದರಾಮಯ್ಯ ಅವರು ಬಾಗಲಕೋಟೆ ಜಿಲ್ಲಾ ಪ್ರವಾಸ ಕೈಗೊಳ್ಳುತ್ತಿದ್ದಾರೆ. ಅಂಜುಮನ್ ಶಾಲೆಯ ಆವರಣದಲ್ಲಿ ಕಾರ್ಯಕ್ರಮ, ನವನಗರದ ಬೋವಿ ಪೀಠಕ್ಕೆ ಭೇಟಿ, ಕಾಂಗ್ರೆಸ್ ನಾಯಕಿ ವೀಣಾ ಕಾಶಪ್ಪನವರ್ಗೆ ಸೇರಿದ ಉಚಿತ ಕೋಚಿಂಗ್ ಸೆಂಟರ್ ಉದ್ಘಾಟನೆ ಸೇರಿದಂತೆ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ.
ತಮಿಳುನಾಡಿಗೆ ನೀರು ಹರಿಸುವಂತೆ ನೀಡಿದ್ದ ಆದೇಶದ ಅವಧಿ ಮುಕ್ತಾಯ ಹಿನ್ನೆಲೆ ಇಂದು ದೆಹಲಿಯಲ್ಲಿ ಮತ್ತೆ ಕಾವೇರಿ ನೀರು ನಿಯಂತ್ರಣ ಸಮಿತಿ ಸಭೆ ನಡೆಸಲಿದೆ. ಮುಂದಿನ ಅವಧಿಗೆ ನೀರು ಹರಿಸಬೇಕೇ ಬೇಡವೇ ಎಂಬುದರ ಬಗ್ಗೆ ಬೆಳಗ್ಗೆ 11.30ಕ್ಕೆ ಸಿಡಬ್ಲ್ಯುಆರ್‌ಸಿ ಸಭೆ ನಡೆಯಲಿದೆ.
Published On - 6:56 am, Thu, 23 November 23