ತಮಿಳುನಾಡಿಗೆ ಮತ್ತೆ ನೀರು ಹರಿಸುವಂತೆ ಸುಪ್ರೀಂ ಕೋರ್ಟ್ ಆದೇಶ ವಿಚಾರಕ್ಕೆ ಸಂಬಂಧಿಸಿ ಇಂದು ಮಂಡ್ಯ ನಗರ ಬಂದ್ಗೆ ರೈತ ಹಿತರಕ್ಷಣಾ ಸಮಿತಿ ಕರೆ ಕೊಟ್ಟಿದ್ದು ಬೆಳಗ್ಗೆ 8 ಗಂಟೆಯಿಂದ ಸಂಜೆ 6ರವರೆಗೆ ಮಂಡ್ಯ ನಗರ ಬಂದ್ ಆಗಲಿದೆ. ಆಟೋ, ಖಾಸಗಿ ಬಸ್, ಶಾಲಾ ಕಾಲೇಜುಗಳ ಬಂದ್ಗೂ ಮನವಿ ಮಾಡಲಾಗಿದೆ. ಇಂದು ಮೆಡಿಕಲ್ ಶಾಪ್, ಆಸ್ಪತ್ರೆ, ಹಾಲಿನ ಬೂತ್ ಮಾತ್ರ ಓಪನ್ ಇರಲಿದೆ. ನಗರದ ವಿಶ್ವೇಶ್ವರಯ್ಯ ಪ್ರತಿಮೆಯಿಂದ ಸಂಜಯ ವೃತ್ತ, ಮಹಾವೀರ ವೃತ್ತ, ವಿವಿ ರೋಡ್, ಡಬಲ್ ರೋಡ್ ಸೇರಿ ವಿವಿಧ ರಸ್ತೆಗಳಲ್ಲಿ ಮೆರವಣಿಗೆ ನಡೆಯಲಿದೆ. ಮಂಡ್ಯ ನಗರದಾದ್ಯಂತ ಇಂದು ಬೈಕ್ ಱಲಿ ನಡೆಸಲು ರೈತರು ಪ್ಲ್ಯಾನ್ ಮಾಡಿದ್ದಾರೆ. ಇನ್ನು ಮತ್ತೊಂದೆಡೆ ಮಂಡ್ಯದಲ್ಲಿ ರೈತರ ಪ್ರತಿಭಟನೆಗೆ ಜೆಡಿಎಸ್, ಬಿಜೆಪಿ ನಾಯಕರು ಸಾಥ್ ನೀಡಲಿದ್ದಾರೆ. ಪ್ರತಿಭಟನೆಯಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ, ಬಿಜೆಪಿ ನಾಯಕ ಸಿ.ಟಿ.ರವಿ ಭಾಗಿಯಾಗಲಿದ್ದಾರೆ. ಪ್ರಸಕ್ತ ವಿದ್ಯಾಮಾನಗಳಿಗೆ ಸಂಬಂಧಿಸಿದ ಕ್ಷಣ ಕ್ಷಣದ ಮಾಹಿತಿಯನ್ನು ಟಿವಿ9 ಡಿಜಿಟಲ್ ಲೈವ್ನಲ್ಲಿ ವೀಕ್ಷಿಸಿ.
ರಾಯಚೂರು: ಭಾರತ, ಪಾಕಿಸ್ತಾನ ವಿಭಜನೆಗೆ ವಿರೋಧ ಇದೆ ಅಂತ ಅಂಬೇಡ್ಕರ್ ಬಹಳ ಕರೆಕ್ಟ್ ಹೇಳಿದ್ದರು. ಆದರೆ ಗಾಂಧಿ ನೆಹರುನನ್ನ ಪ್ರಧಾನಿ ಮಾಡಬೇಕಿತ್ತು ಅದಕ್ಕೆ ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನಕೊಟ್ಟರು. ಮೊಹಮ್ಮದ್ ಅಲಿ ಜಿನ್ನಾನ ಮೊಮ್ಮಕ್ಕಳು ಇಲ್ಲೆ ಇದ್ದಾರೆ. ಅವರು ಅಲ್ಲಿ ಹೋದ್ರೆ ಹೊಡಿತಾರೆ. ಅವರು ಪಕ್ಕಾ ಮುಸಲ್ಮಾನರಲ್ವಂತೆ. ಮುಸ್ಲಿಂರಿಗೆ ಭಾಯಿ ಭಾಯಿ ಅಂತಿರಾ. 50% ಆಗೋ ವರೆಗೂ ನಿಮ್ಮ ಜೊತೆ ಮಾತ್ರ ಭಾಯಿ ಭಾಯಿ ಅಂತ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು. ಸ್ವಂತ ತಂಗಿ ಗಂಡಗ ಭಾಯಿ ಜಾನ್ ಅನ್ನಲ್ಲ. ನಮ್ಮ ಜೊತೆ ಹಮ್ ಬಾಯಿ ಭಾಯಿ ಅಂತಾರೆ ಅವರು. ಉಪವಾಸ ಕುಳಿತಿದ್ದರಿಂದ ನಮಗೆ ಸ್ವಾತಂತ್ರ್ಯ ಬಂದಿದ್ದಲ್ಲ, ನೇತಾಜಿ ಅವರ ಬಂದೂಕಿನಿಂದ ಸ್ವಾತಂತ್ರ್ಯ ಸಿಕ್ಕಿದ್ದು ಅಂತ ಅಂಬೇಡ್ಕರ್ ಹೇಳಿದ್ದರು. ಹೈದ್ರಾಬಾದ್ ನಿಜಾಮಾ ಅರ್ಧ ಆಸ್ತಿ ಕೊಡುತ್ತೇನೆ, ಇಸ್ಲಾಂ ಧರ್ಮಕ್ಕೆ ಕನ್ವರ್ಟ್ ಆಗು ಅಂತ ಅಂಬೇಡ್ಕರ್ ಅವರಿಗೆ ಎಂದಿದ್ದರಂತೆ. ಆದರೆ ಅಂಬೇಡ್ಕರ್ ಅವರು ನಮ್ಮ ಸಮಾಜಕ್ಕೆ ನ್ಯಾಯ ಕೊಡುತ್ತೇನೆ ಬರಲ್ಲ ಅಂದರು. ಅಸಮಾನತೆ ವಿರುದ್ಧ ಸಿಟ್ಟಿದ್ದರೂ ಹಿಂದೂಗಳು ಮೋಸ ಮಾಡಲ್ಲ ಅಂದರು ಎಂದರು.
ಮಂಡ್ಯ: ಸಕ್ಕರೆನಾಡಿಲ್ಲಿ ಕಾವೇರಿ ಕಿಚ್ಚು ಇನ್ನೂ ಆರಿಲ್ಲ. ಭೂಮಿತಾಯಿ ಹೋರಾಟ ಸಮಿತಿಯು ಶ್ರೀರಂಗಪಟ್ಟಣದಲ್ಲಿ ಸುಪ್ರೀಂಕೋರ್ಟ್ ತೀರ್ಪು ವಿರೋಧಿಸಿ ರೈತರಿಂದ ಪಂಜಿನ ಮೆರವಣಿಗೆ ನಡೆಯಿತು. ರೈತ ಹೋರಾಟಗಾರ ನಂಜುಂಡೇಗೌಡ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದರು.
ಚಿತ್ರದುರ್ಗ: ಇತಿಹಾಸದಲ್ಲಿ ಹೆಚ್.ಡಿ.ದೇವೇಗೌಡರ ಹಾದಿ ಉತ್ತಮವಾಗಿದೆ. ಆದರೆ ಈಗ ಹಾದಿ ತಪ್ಪುತ್ತಿದೆ ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ ಎಂದು ಚಿತ್ರದುರ್ಗದಲ್ಲಿ ಆಹಾರ ಸಚಿವ ಕೆ.ಹೆಚ್.ಮುನಿಯಪ್ಪ ಹೇಳಿದ್ದಾರೆ. ಜೆಡಿಎಸ್ ಪಕ್ಷದಲ್ಲಿ ಈಗ ಜಾತ್ಯತೀತ ತತ್ವ ಉಳಿಯಲ್ಲ ಅನ್ನಿಸುತ್ತಿದೆ. ಹೆಚ್.ಡಿ.ದೇವೇಗೌಡರನ್ನು ಕಾಂಗ್ರೆಸ್ ಪಕ್ಷ ಪ್ರಧಾನಿ ಮಾಡಿತ್ತು. ಕುಮಾರಸ್ವಾಮಿಯನ್ನೂ ಸಹ ಮುಖ್ಯಮಂತ್ರಿ ಮಾಡಿದ್ದೆವು. ಜಾತ್ಯತೀತ ತತ್ವ, ಮುತ್ಸದ್ದಿ ದೇವೇಗೌಡರನ್ನು ಕಾಂಗ್ರೆಸ್ ಬೆಂಬಲಿಸಿತ್ತು. ದೇವೇಗೌಡರು, ಜೆಡಿಎಸ್ ಪಕ್ಷ ಅದೇ ದಾರಿಯಲ್ಲಿ ಇರಬೇಕಿತ್ತು ಎಂದರು.
ದಾವಣಗೆರೆ: ಡಿಕೆ ಶಿವಕುಮಾರ್ ಅವರು ಸಮರ್ಥವಾಗಿ ಡಿಸಿಎಂ ಹುದ್ದೆಯನ್ನು ನಿಭಾಯಿಸುತ್ತಿದ್ದಾರೆ. ಸದ್ಯ ಮೂರು ಡಿಸಿಎಂ ಹುದ್ದೆ ಅವಶ್ಯಕತೆ ಇಲ್ಲ ಎಂದು ಚನ್ನಗಿರಿಯಲ್ಲಿ ಕಾಂಗ್ರೆಸ್ ಶಾಸಕ ಬಸವರಾಜು.ವಿ ಶಿವಗಂಗಾ ಹೇಳಿದ್ದಾರೆ. ಹಿರಿಯರಾದ ಕೆಎನ್ ರಾಜಣ್ಣ ಯಾವ ಉದ್ದೇಶದಲ್ಲಿ ಹೇಳಿದ್ದಾರೆ ಗೊತ್ತಿಲ್ಲ. ಜಾತಿ ಆಧಾರದಲ್ಲಿ ಡಿಸಿಎಂ ಹುದ್ದೆ ನೀಡುವುದಾದರೆ ವೀರಶೈವರು ಹೆಚ್ಚಾಗಿದ್ದಾರೆ. ಹಾಗಾದರೆ ಆವರಿಗೆ ಸಿಎಂ ಹುದ್ದೆ ನೀಡಬೇಕಿತ್ತು. ಜಾತಿ ಆಧಾರದಲ್ಲಿ ಹುದ್ದೆ ನೀಡಿಲ್ಲ. ಪಕ್ಷ ಸಂಘಟನೆ, ಪ್ರಾಮಾಣಿಕತೆ, ಪಕ್ಷದ ನಿಷ್ಠೆಗೆ ತಕ್ಕಂತೆ ಹುದ್ದೆ ನೀಡಲಾಗಿದೆ. ಜಾತಿ ಆಧಾರದಲ್ಲಿ ಅಧಿಕಾರ ನೀಡಲು ಸಾಧ್ಯವಿಲ್ಲ. ಇದರಿಂದ ಗೊಂದಲ ಉಂಟಾಗುತ್ತದೆ ಎಂದರು.
ಬಿಎಸ್ಪಿ ಸಂಸದ ಡ್ಯಾನಿಶ್ ಅಲಿ ವಿರುದ್ಧ ಬಿಜೆಪಿ ಸಂಸದ ರಮೇಶ್ ಬಿಧೂರಿ ವಿವಾದಾಸ್ಪದ ಹೇಳಿಕೆ ವಿಚಾರವಾಗಿ ಟಿವಿ9 ಜೊತೆ ಮಾತನಾಡಿದ ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಬಿ.ವಿ. ಶ್ರೀನಿವಾಸ್, ಬಿಜೆಪಿ ಬಣ್ಣ ಮತ್ತೆ ಮತ್ತೆ ಬಯಲಾಗುತ್ತಿದೆ. ಈ ರೀತಿ ಜಾತಿ ನೋಡಿ ನಿಂದನೆ ಸರಿಯಲ್ಲ. ಬಿಜೆಪಿ ನಾಟಕ ಮಾಡುವುದನ್ನು ಬಿಡಬೇಕು. ಸಂಸದರ ಜೊತೆಯೇ ಈ ರೀತಿ ವರ್ತಿಸಿದರೆ ಜನಸಾಮಾನ್ಯರ ಜೊತೆ ಹೇಗೆ ವರ್ತಿಸಬಹುದು? ಬಿಜೆಪಿ ಸರ್ಕಾರ ನಡೆಸುತ್ತಿಲ್ಲ, ಈವೆಂಟ್ ಮ್ಯಾನೇಜ್‌ಮೆಂಟ್ ಕಂಪನಿ ನಡೆಸುತ್ತಿದ್ದಾರೆ. ಜೆಪಿಗೆ ಇಂಡಿಯಾ ಹೆಸರಿನಲ್ಲೂ ಸಮಸ್ಯೆ ಇದೆ. ಜನರ ಗಮನ ಬೇರೆ ಕಡೆ ಸೆಳೆಯಲು ಈ ರೀತಿ ಹೇಳಿಕೆ ನೀಡುತ್ತಿದ್ದಾರೆ. ನಿನ್ನೆಯೇ ರಾಹುಲ್ ಗಾಂಧಿ ಡ್ಯಾನಿಶ್ ಅಲಿ ಮನೆಗೆ ಭೇಟಿ ಕೊಟ್ಟಿದ್ದಾರೆ, ಬಿಜೆಪಿ ಬಿಧೂರಿ ರಾಜೀನಾಮೆ ಪಡೆಯಲಿಲ್ಲ, ಕ್ಷಮೆ ಕೇಳಲಿಲ್ಲ ಅಂದರೆ ಯುವ ಕಾಂಗ್ರೆಸ್ ಹೋರಾಟ ಮುಂದುವರಿಸಲಿದೆ ಎಂದರು.
ಕಾವೇರಿ ಹೋರಾಟದಲ್ಲಿ ಬಿಜೆಪಿ ಜೊತೆಗಿನ ಮೈತ್ರಿ ಬಗ್ಗೆ ಪ್ರಸ್ತಾಪ ಮಾಡಿದ ಕುಮಾರಸ್ವಾಮಿ, ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿದ್ದು ಜನರನ್ನು ಉಳಿಸಲು. ಸಾರ್ವಜನಿಕರ ಮುಂದೆ ನಾನು ಜಾಗಟೆ ಹೊಡೆಯಲ್ಲ. ಉತ್ತರ ಕರ್ನಾಟಕದಲ್ಲಿಯು ಬಹಳಷ್ಟು ನೀರಾವರಿ ಸಮಸ್ಯೆ ಇದೆ. ಮೂರನೇ ಬಾರಿ ಜನುಮ ಪಡೆದು ಬಂದಿದ್ದೇನೆ. ನಾನೂ ಯಾವತ್ತೊ ಮಣ್ಣಿಗೆ ಹೋಗಬೇಕಿತ್ತು. ದೇವರ ಆಶೀರ್ವಾದ, ಜನರ ಆಶೀರ್ವಾದ ಬದುಕಿ ಬಂದಿದ್ದೇನೆ. ನನ್ನ ಹಾಗೂ ದೇವೇಗೌಡರನ್ನ ಬೆಳೆಸಿದ್ದು ನೀವು. ಐದು ವರ್ಷ ಸರ್ಕಾರ ನನಗೆ ಕೊಡಿ ಎಂದಿದ್ದೆ. ಸಮಸ್ಯೆ ಬಗೆಹರಿಸದಿದ್ದರೇ ಪಕ್ಷ ವಿಸರ್ಜನೆ ಮಾಡುತ್ತೇನೆ ಎಂದಿದ್ದೆ. ರಾತ್ರಿ ಮೂರು ಗಂಟೆಯಾದ್ರು ಹಳ್ಳಿ ಹಳ್ಳಿ ಸುತ್ತಿ ಬಂದೆ. ಆದರೆ ಜನರು ಆಶೀರ್ವಾದ ಮಾಡಲಿಲ್ಲ. ಈಗ ಗೆದ್ದವರು ಪಕ್ಷ ವಿಸರ್ಜಿಸಿ ಅಂತಾರೆ. ಆದರೆ ಇವರು ನಿಮ್ಮ ಸಮಸ್ಯೆ ಕೇಳುತ್ತಿದ್ದಾರಾ? ಏನ್ ಮಾಡುತ್ತಿದ್ದಾರೆ? ಎಂದು ಕಾಂಗ್ರೆಸ್ ನಾಯಕರ ವಿರುದ್ದ ಹೆಚ್.ಡಿ.ಕುಮಾರಸ್ವಾಮಿ ಕಿಡಿಕಾರಿದರು.
ಮಂಡ್ಯ: ಸುಪ್ರೀಂಕೋರ್ಟ್ ತೀರ್ಪಿನಂತೆ ನೀರು ಬಿಡಬೇಕು. ಇಲ್ಲದಿದ್ದರೇ ನ್ಯಾಯಾಂಗ ನಿಂದನೆ ಆಗುತ್ತೆ ಅಂತಾ ರಾಜ್ಯ ಸರ್ಕಾರದವರು ಹೇಳುತ್ತಿದ್ದಾರೆ. ತಮಿಳುನಾಡಿಗೆ ನೀರು ನಿಲ್ಲಿಸಿದರೆ ನ್ಯಾಯಾಂಗ ನಿಂದನೆ ಆಗಲ್ಲ. ಸುಪ್ರೀಂಗೆ ನೀರು ಬಿಡಲು ಆಗಲ್ಲ ಎಂದು ಮೇಲ್ಮನವಿ ಸಲ್ಲಿಸಿ. 2016 ತೀರ್ಪು ಪ್ರಸ್ತಾಪಿಸಿ ರಾಜ್ಯ ಸರ್ಕಾರಕ್ಕೆ ಸಲಹೆ ನೀಡಿದರು. ಪಾಲಿಸಲು ಆಗದ ತೀರ್ಪನ್ನ ಪಾಲಿಸದಿದ್ದರೆ ನ್ಯಾಯಾಂಗ ನಿಂದನೆ ಆಗಲ್ಲ. ಆಂಧ್ರದ ನೀರಾವರಿ ಪ್ರಕರಣ ಸಂಬಂಧ ನ್ಯಾಯಮೂರ್ತಿ ಉದಮ್ ಮಲ್ಲಿಕ್ ಹೇಳಿದ್ದರು. ಸೆ.22, 2016 ನ್ಯಾಯಾಲಯ ಅದನ್ನ ಎತ್ತಿಹಿಡಿದಿತ್ತು. ಅದೇ ರೀತಿ ರಾಜ್ಯ ಸರ್ಕಾರ ನೀರು ಬಿಡಲು ಆಗಲ್ಲ ಎಂದು ಮೇಲ್ಮನವಿ ಸಲ್ಲಿಸಲಿ ಎಂದರು.
ತಮಿಳುನಾಡಿಗೆ ಕಾವೇರಿ ನೀರು ಹರಿಸುವುದನ್ನು ವಿರೋಧಿಸಿ ಮಂಡ್ಯದ ವಿಶ್ವೇಶ್ವರಯ್ಯ ಪ್ರತಿಮೆ ಬಳಿ ನಡೆಯುತ್ತಿರುವ ಹಿತರಕ್ಷಣಾ ಸಮಿತಿ ಪ್ರತಿಭಟನೆಯಲ್ಲಿ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಭಾಗಿಯಾಗಿದ್ದಾರೆ. ಮಾಜಿ ಶಾಸಕರಾದ ಸುರೇಶ್ ಗೌಡ, ಡಿ.ಸಿ.ತಮ್ಮಣ್ಣ, C.S.ಪುಟ್ಟರಾಜು, ರವೀಂದ್ರ ಶ್ರೀಕಂಠಯ್ಯ, ಕೆ.ಟಿ.ಶ್ರೀಕಂಠೇಗೌಡ, ಶಾಸಕ ಮುನಿರತ್ನ, ನಿಖಿಲ್ ಕುಮಾರಸ್ವಾಮಿ ಸೇರಿದಂತೆ ಹಲವರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ.
ಕಾವೇರಿ ನದಿ ವಿಚಾರದಲ್ಲಿ ರೈತರ ಪ್ರತಿಭಟನೆ, ಆಕ್ರೋಶ ತಪ್ಪಲ್ಲ ಎಂದು ಮಂಡ್ಯ ಜಿಲ್ಲೆ ನಾಗಮಂಗಲದಲ್ಲಿ ಸಚಿವ ಚಲುವರಾಯಸ್ವಾಮಿ ಹೇಳಿದ್ದಾರೆ. ಆದರೆ ವಿರೋಧ ಪಕ್ಷಗಳು ಈ ವಿಚಾರದಲ್ಲಿ ಮಧ್ಯಪ್ರವೇಶ ಮಾಡುತ್ತಿರುವುದು ಸರಿಯಲ್ಲ. ಕೆಲವು ವಿಚಾರದಲ್ಲಿ ಲಿಮೇಟೇಷನ್ನಲ್ಲಿ ಇರಬೇಕು. ಕೇಂದ್ರ ಸರ್ಕಾರ ಮನಸ್ಸು ಮಾಡಿದರೆ ಸ್ವಲ್ಪ ರಿಲೀಫ್ ಸಿಗಲಿದೆ. ಈಗ ಬಿಜೆಪಿ ಬೇರೆ ಅಲ್ಲ, ಜೆಡಿಎಸ್ ಬೇರೆ ಅಲ್ಲ. ಇಬ್ಬರು ಒಟ್ಟೊಟ್ಟಿಗೆ ಪೋಟೋ ಕೂಡ ತೆಗೆಸಿಕೊಂಡಿದ್ದಾರೆ. ಒಟ್ಟಿಗೆ ಅನ್ಯೋನ್ಯವಾಗಿದ್ದಾರೆ ಸಂತೋಷ. ಆದರೆ ಈ ವಿಚಾರದಲ್ಲಿ ದೇವೇಗೌಡರಿಗೆ ನೋವಿದೆ. ಅದಕ್ಕೆ ಪಕ್ಷ ಸಂಘಟನೆಯನ್ನ ಕುಮಾರಸ್ವಾಮಿಗೆ ಬಿಟ್ಟಿದ್ದೇವೆ ಎಂದಿದ್ದಾರೆ. ಕುಮಾರಸ್ವಾಮಿ ದೊಡ್ಡವರು, ಏನೋನೋ ಹೇಳ್ತಾರೆ ನಾವು ಏನ್ ಮಾಡೋಕೆ ಆಗುತ್ತೆ. ಕಾವೇರಿ ರೈತರ ಪರ ನಿಲ್ಲುತ್ತೇವೆ ಅಂದ್ರೆ ಸಂತೋಷ. ಆದರೆ ಜನರಿಗೆ ಪ್ರವೋಕ್ ಮಾಡೋದು, ಡೆಲ್ಲಿಗೆ ಹೋಗಿರೋದೆ ವ್ಯರ್ಥ ಅನ್ನೋದು ಸರಿಯಲ್ಲ ಎಂದರು.
ಬಿಜೆಪಿ ಸಂವಿಧಾನದ ಪೀಠಿಕೆಯಿಂದ ಜಾತ್ಯಾತೀತತೆಯನ್ನು ಕಿತ್ತು ಹಾಕಿದೆ. ಜೆಡಿಎಸ್ ತನ್ನ ಹೆಸರಿನಲ್ಲಿದ್ದ ಜಾತ್ಯಾತೀತತೆಯನ್ನು ಅನಧಿಕೃತವಾಗಿ ಕಿತ್ತು ಹಾಕಿದೆ. ಜೆಡಿಎಸ್ನಲ್ಲಿನ ಅಲ್ಪಸಂಖ್ಯಾತ ಮುಖಂಡರು ಪಕ್ಷದ ಹೊಸಿಲಿನ ಹೊರಗೆ ಕಾಲಿಟ್ಟಿದ್ದಾರೆ, ಜೆಡಿಎಸ್ ಪಕ್ಷವನ್ನು ಮುಗಿಸಲೆಂದೇ ಮೈತ್ರಿ ಮಾಡಿಕೊಂಡಿರುವ ಬಿಜೆಪಿಯ ಕನಸು ನನಸಾಗುವ ಕಾಲ ಬಂದಿದೆ. ಕರ್ನಾಟಕದ ಪಾಲಿಗೆ ಇನ್ನು ಜಾತ್ಯಾತೀತ ತತ್ವದ ಜೆಡಿಎಸ್ ಮುಗಿದ ಅಧ್ಯಾಯ ಎಂದು ಕಾಂಗ್ರೆಸ್ ರಾಜ್ಯ ಘಟಕ ಟ್ವೀಟ್ ಮಾಡಿದೆ.
ಬಿಜೆಪಿ ಸಂವಿಧಾನದ ಪೀಠಿಕೆಯಿಂದ ಜಾತ್ಯಾತೀತತೆಯನ್ನು ಕಿತ್ತು ಹಾಕಿದೆ.
ಜೆಡಿಎಸ್ ತನ್ನ ಹೆಸರಿನಲ್ಲಿದ್ದ ಜಾತ್ಯಾತೀತತೆಯನ್ನು ಅನಧಿಕೃತವಾಗಿ ಕಿತ್ತು ಹಾಕಿದೆ.
ಜೆಡಿಎಸ್ ನಲ್ಲಿನ ಅಲ್ಪಸಂಖ್ಯಾತ ಮುಖಂಡರು ಪಕ್ಷದ ಹೊಸಿಲಿನ ಹೊರಗೆ ಕಾಲಿಟ್ಟಿದ್ದಾರೆ, ಜೆಡಿಎಸ್ ಪಕ್ಷವನ್ನು ಮುಗಿಸಲೆಂದೇ ಮೈತ್ರಿ ಮಾಡಿಕೊಂಡಿರುವ ಬಿಜೆಪಿಯ ಕನಸು ನನಸಾಗುವ ಕಾಲ… pic.twitter.com/VtfgOSx7Iq
— Karnataka Congress (@INCKarnataka) September 23, 2023
ಜಲ ಸಂರಕ್ಷಣಾ ಸಮಿತಿ ಕರೆ ಕೊಟ್ಟಿರುವ ಬೆಂಗಳೂರು ಬಂದ್ಗೆ ಓಲಾ, ಉಬರ್ ಸಂಘದ ಬೆಂಬಲ ಸೂಚಿಸಿದೆ. ಬೆಂಗಳೂರಿನಾದ್ಯಂತ ಮಂಗಳವಾರ ಓಲಾ, ಉಬರ್ ಓಡಿಸದಿರಲು ನಿರ್ಧಾರ ಮಾಡಲಾಗಿದೆ ಎಂದು ಓಲಾ, ಉಬರ್ ಸಂಘದ ಅಧ್ಯಕ್ಷ ತನ್ವೀರ್ ಪಾಷಾ ಹೇಳಿದ್ದಾರೆ.
ಬೆಂಗಳೂರು ಹೋಟೆಲ್ ಮಾಲೀಕರ ಸಂಘದಿಂದ ಬೆಂಗಳೂರು ಬಂದ್ಗೆ ನೈತಿಕ ಬೆಂಬಲ ಸೂಚಿಸಿದೆ. ಈ ಬಗ್ಗೆ ಬೆಂಗಳೂರು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಪಿ.ಸಿ. ರಾವ್ ಮಾಹಿತಿ ನೀಡಿದ್ದಾರೆ.
ಮಂಡ್ಯ: ತಮಿಳುನಾಡಿಗೆ ಕಾವೇರಿ ನೀರು ಹರಿಸದಂತೆ ಒತ್ತಾಯಿಸಿ ಕರ್ನಾಟಕದಲ್ಲಿ ರೈತರು ವಿಪಕ್ಷಗಳು ಪ್ರತಿಭಟನೆ ನಡೆಸುತ್ತಿವೆ. ದಲಿತ, ಪ್ರಗತಿಪರ, ಬಿಜೆಪಿ, ಕನ್ನಡಪರ ಸಂಘಟನೆಗಳು ಪ್ರತಿಭಟನೆ ತೀವ್ರಗೊಳಿಸಿದ್ದಾರೆ. ತಮಿಳುನಾಡು ಸಿಎಂ ಎಂಕೆ ಸ್ಟಾಲಿನ್ ವಿರುದ್ಧ ಆಕ್ರೋಶ ಹೊರಹಾಕಲಾಗಿದ್ದು, ಮದ್ದೂರು ಪಟ್ಟಣದ ತಾಲೂಕು ಕಚೇರಿ ಮುಂಭಾಗದ ರಾಷ್ಟೀಯ ಹೆದ್ದಾರಿಯಲ್ಲಿ ಸ್ಟಾಲಿನ್ ಪ್ರತಿಕೃತಿ ದಹನ ಮಾಡಿದ್ದಾರೆ.
ಗದಗ: ದ್ವೇಷ ಭಾಷಣ ಆರೋಪ ವಿವಾರವಾಗಿ ಶ್ರೀರಾಮಸೇನೆ ಮುಖಂಡ ಪ್ರಮೋದ್ ಮುತಾಲಿಕ್ ವಿರುದ್ಧ ಕೇಸ್ ದಾಖಲಾಗಿದ್ದು, ಇದನ್ನು ಖಂಡಿಸಿ ಗದಗ ನಗರದಲ್ಲಿ ಶ್ರೀರಾಮಸೇನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಹುಯಿಲಗೋಳ ನಾರಾಯಣರಾವ ವೃತ್ತದಲ್ಲಿ ಪ್ರತಿಭಟನೆ ನಡೆಸಿ ಸರ್ಕಾರದ ವಿರುದ್ಧ ಕಾರ್ಯಕರ್ತರು ಆಕ್ರೋಶ ಹೊರಹಾಕಿದರು. ಪ್ರಮೋದ ಮುತಾಲಿಕ್ ಅವರ ಮೇಲೆ ವಿನಾಕಾರಣ ಕೇಸ ದಾಖಲಿಸಿದ್ದಾರೆ. ಮುಸ್ಲಿಂ ಓಲೈಕೆಗಾಗಿ ಹಿಂದೂ ಮುಖಂಡರ ಧ್ವನಿ ಹತ್ತಿಕ್ಕಲು ಹೊರಟಿದ್ದಾರೆ. ಹುಬ್ಬಳ್ಳಿಯಲ್ಲಿ ಮೈದಾನದಲ್ಲಿ ಗಣಪತಿ ಪ್ರತಿಷ್ಠಾಪನೆಗೆ ಮುಸ್ಲಿಮರು ವಿರೋಧ ಮಾಡುತ್ತಾರೆ. ಆ ಬಗ್ಗೆ ಸರ್ಕಾರ ಯಾವುದೇ ಕೇಸ್ ಹಾಕಲ್ಲ. ಹಿಂದೂಗಳನ್ನು ಟಾರ್ಗೆಟ್ ಮಾಡಲಾಗಿದೆ ಅಂತ ಆಕ್ರೋಶ ಹೊರಹಾಕಿದರು.
ನೆಲಮಂಗಲ: ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ಮಸೂದೆ ಅಂಗೀಕಾರ ಹಿನ್ನೆಲೆ ದಾಸರಹಳ್ಳಿಯಲ್ಲಿ ಬಿಜೆಪಿ ಕಾರ್ಯಕರ್ತೆಯರಿಂದ ವಿಜಯೋತ್ಸವ ನಡೆಯಿತು. ಶಾಸಕ ಶಾಸಕ ಎಸ್.ಮುನಿರಾಜು ನೇತೃತ್ವದಲ್ಲಿ 8ನೇ ಮೈಲಿ ವೃತ್ತದಲ್ಲಿ ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಾಚರಣೆ ನಡೆಸಲಾಯಿತು. MLC ಭಾರತಿಶೆಟ್ಟಿ ಕಾರ್ಯಕ್ರಮದಲ್ಲಿ ಭಾಗಿಯಾಗಿ ಕಾರ್ಯಕರ್ತೆಯರ ಜೊತೆ ಕುಣಿದು ಕುಪ್ಪಳಿಸಿದರು. ನಮ್ಮ ದೇಶದ ಇತಿಹಾಸದಲ್ಲಿ ಸುವರ್ಣಾಕ್ಷರದಲ್ಲಿ ಬರೆದಿಡುವ ನಿರ್ಣಯ. ಐತಿಹಾಸಿಕ ನಿರ್ಣಯವನ್ನು ನಮ್ಮ ನೆಚ್ಚಿನ ಪ್ರಧಾನಿ ಮೋದಿ ಕೈಗೊಂಡಿದ್ದಾರೆ ಎಂದು ಶಾಸಕ ಎಸ್.ಮುನಿರಾಜು ಹೇಳಿದರು.
ತಮಿಳುನಾಡಿಗೆ ಕೂಡಲೇ ಕಾವೇರಿ ನೀರು ಬಿಡುವುದನ್ನು ಹಿಂಪಡೆಯಲಿ. ಇಲ್ಲದಿದ್ದರೆ ರಾಜ್ಯಾದ್ಯಂತ ಬಿಜೆಪಿ ಹೋರಾಟ ಮಾಡಲಿದೆ ಎಂದು ಬೆಂಗಳೂರಿನಲ್ಲಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಎಚ್ಚರಿಕೆ ಕೊಟ್ಟಿದ್ದಾರೆ. ರಾಜ್ಯವನ್ನು ಆಳುವ ನೈತಿಕತೆ ಸರ್ಕಾರಕ್ಕೆ ಇಲ್ಲ. ಕಾವೇರಿ ಹೋರಾಟವನ್ನು ಯಾರೇ ಮಾಡಿದರೂ ಅದಕ್ಕೆ ಬಿಜೆಪಿ ಬೆಂಬಲ ಕೊಡುತ್ತದೆ. ತಮಿಳುನಾಡಿಗೆ ಸರ್ಕಾರ ಈಗಾಗಲೇ ದೊಡ್ಡ ಲಾಭ ಮಾಡಿಕೊಟ್ಟಿದೆ. ಹೇಡಿ ನಿರ್ಧಾರ ವಾಪಸ್ ಪಡೆಯುವಂತೆ ನಾವು ಪ್ರತಿಭಟನೆ ಮಾಡುತ್ತಿದ್ದೇವೆ ಎಂದರು.
ಸೆಪ್ಟೆಂಬರ್ 26ರಂದು ಬೆಂಗಳೂರು ನಗರ ಬಂದ್ಗೆ ಕರ್ನಾಟಕ ಜಲ ಸಂರಕ್ಷಣಾ ಸಮಿತಿ ಕರೆ ಕೊಟ್ಟಿದೆ. ಫ್ರೀಡಂಪಾರ್ಕ್ನಲ್ಲಿ ಕುರುಬೂರು ಶಾಂತಕುಮಾರ್ ಈ ಬಗ್ಗೆ ತಿಳಿಸಿದ್ದಾರೆ. ಸೆ. 26ರಂದು ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಯಲಿದೆ. ಬೆಳಗ್ಗೆ 11 ಗಂಟೆಗೆ ಟೌನ್ಹಾಲ್ನಿಂದ SBM ವೃತ್ತದವರೆಗೆ ಱಲಿ ಹಮ್ಮಿಕೊಳ್ಳಲಾಗಿದೆ. ಬೆಂಗಳೂರಿನಲ್ಲಿ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಬೇಕು. ಇದು ನಮ್ಮ ಬಂದ್ ಅಲ್ಲ, ಬೆಂಗಳೂರಿನ ನಾಗರಿಕರ ಬಂದ್. ಫಿಲ್ಮ್ ಛೇಂಬರ್, ಐಟಿ ಕಂಪನಿಗಳು ಬೆಂಬಲ ಕೊಡಬೇಕು. ಸರ್ಕಾರಕ್ಕೆ ಒತ್ತಾಯ ವಿಶೇಷವಾದ ವಿಧಾನಮಂಡಲದ ಅಧಿವೇಶನ ಕರೆಯಬೇಕು ಎಂದು ಕುರುಬೂರು ಶಾಂತಕುಮಾರ್ ಹೇಳಿದರು.
ತಮಿಳುನಾಡಿಗೆ ನೀರು ಹರಿಸುವುದನ್ನು ವಿರೋಧಿಸಿ ಮಂಡ್ಯದಲ್ಲಿ ಕಾವೇರಿ ಹೋರಾಟದಲ್ಲಿ ಪುಟ್ಟ ಮಕ್ಕಳು ಕೂಡ ಭಾಗಿಯಾಗಿದ್ದಾರೆ. ಮಂಡ್ಯದ ವಿಶ್ವೇಶ್ವರಯ್ಯ ಪ್ರತಿಮೆ ಬಳಿ ಪ್ರತಿಭಟನೆ ನಡೆಯುತ್ತಿದೆ. ತಲೆ ಮೇಲೆ ಖಾಲಿ ಕೊಡ ಹೊತ್ತು ಮಕ್ಕಳು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ. ‘ಕಾವೇರಿ ನಮ್ಮದು’ ತಮಿಳುನಾಡು ನೀರು ಬಿಡಬೇಡಿ ಎಂದು ಘೋಷಣೆ ಕೂಗಿದ್ದಾರೆ.
ಬಿಜೆಪಿ ತೊರೆಯುತ್ತಾರೆಂಬ ಚರ್ಚೆ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯರನ್ನು ಬಿಜೆಪಿ ಮಾಜಿ ಶಾಸಕ ಸುಕುಮಾರ ಶೆಟ್ಟಿ ಭೇಟಿಯಾಗಿದ್ದಾರೆ. ಸಿದ್ದರಾಮಯ್ಯ ಭೇಟಿಯಾಗಿ ಚರ್ಚಿಸಿದ್ದಾರೆ.
ಬಿಜೆಪಿ-ಜೆಡಿಎಸ್ ಮೈತ್ರಿ ಬಗ್ಗೆ ವೀರಪ್ಪ ಮೊಯಿಲಿ ವ್ಯಂಗ್ಯವಾಡಿದ್ದಾರೆ. ಜೆಡಿಎಸ್ ಹೊಕ್ಕಿದ ಕಡೆಯಲ್ಲಿ ಸಂಪೂರ್ಣ ಹೋಯ್ತು ಅಂತ ಅರ್ಥ. ಅವರ ಜೊತೆ ಸೇರಿ ಆವತ್ತು ನಾನು ಕೂಡ ಸೋತಿದ್ದೇನೆ. ಈಗ ಆ ಅನಿಷ್ಟ ದೂರವಾಗಿದೆ, ಈಗ ಅದು ಬಿಜೆಪಿಗೆ ಹೋಗಿದೆ. ನಾನು ಈ ಬಾರಿಯೂ ಚಿಕ್ಕಬಳ್ಳಾಪುರದಲ್ಲಿ ಸ್ಪರ್ಧೆ ಮಾಡ್ತೇನೆ. ಬಿ.ಕೆ.ಹರಿಪ್ರಸಾದ್ ವಿಚಾರ ಶಿಸ್ತು ಕಮಿಟಿ ಮುಂದೆ ಇದೆ. ಅವರಿಗೆ ನೋಟೀಸ್ ಕೊಟ್ಟು ಇದರ ಬಗ್ಗೆ ಸಮಿತಿ ನೋಡಿಕೊಳ್ತದೆ ಎಂದರು.
ಪ್ರತಿಭಟನೆ ವೇಳೆ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು. ನಿಮಗೆ ಯೋಗ್ಯತೆ ಇದ್ದರೆ ಸಮಸ್ಯೆ ಪರಿಹಾರ ಮಾಡಿ. ಇಲ್ಲದಿದ್ದರೆ ರಾಜೀನಾಮೆ ಕೊಟ್ಟು ಮನೆಗೆ ಹೋಗಿ. ಎಲ್ಲರೂ ಸೇರಿ ನಾವು ಬೆಂಗಳೂರಿನಲ್ಲಿ ದೊಡ್ಡ ಹೋರಾಟ ಮಾಡುತ್ತೇವೆ. ಸುಪ್ರೀಂ ಕೋರ್ಟ್ ಗೆ ಮನವರಿಕೆ ಮಾಡಿಕೊಡಬೇಕು ಅಂತಾ ದೇವೇಗೌಡರು ಕೂಡಾ ಹೇಳಿದ್ದಾರೆ. ಕಾಂಗ್ರೆಸ್ ಮುಖಂಡರು ತಮಿಳುನಾಡು ಏಜೆಂಟರಂತೆ ವರ್ತನೆ ಖಂಡನೀಯ ಎಂದು ಆಕ್ರೋಶ ಹೊರ ಹಾಕಿದರು. ಬಿಎಸ್ ಯಡಿಯೂರಪ್ಪರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮೈಸೂರು ಬ್ಯಾಂಕ್ ವೃತ್ತದಲ್ಲಿ ರಸ್ತೆ ತಡೆಗೆ ಯತ್ನಿಸಿ ಪ್ರತಿಭಟನೆ ನಡೆಸಲು ಮುಂದಾದ ಹಿನ್ನೆಲೆ ಬಿಎಸ್ ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ, ಗೋವಿಂದ ಕಾರಜೋಳ, ಕಾಗೇರಿ ಸೇರಿದಂತೆ ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ತಮಿಳುನಾಡಿಗೆ ಕಾವೇರಿ ನೀರು ಹರಿಸುವುದನ್ನು ಖಂಡಿಸಿ ಮಂಗಳವಾರ ಬೆಂಗಳೂರು ನಗರ ಬಂದ್ ಮಾಡಲು ಚಿಂತನೆ ನಡೆದಿದೆ.
ಕಾವೇರಿ ನದಿ ವಿಚಾರದಲ್ಲಿ ರಾಜ್ಯ ಸರ್ಕಾರ ಸೂಕ್ತ ವಾದ ಮಂಡಿಸಿಲ್ಲ ಎಂದು ಹುಬ್ಬಳ್ಳಿಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿಕೆ ನೀಡಿದ್ದಾರೆ. ಸರ್ಕಾರ ನಮ್ಮ ಹಾಗೂ ತಮಿಳುನಾಡು ಡ್ಯಾಮ್ಗಳ ಮಾಹಿತಿ ಪಡೆಯಬೇಕಿತ್ತು. ಎರಡೂ ರಾಜ್ಯಗಳ ಡ್ಯಾಮ್ಗಳ ಸ್ಥಿತಿ ಬಗ್ಗೆ ಸೂಕ್ತ ವಾದ ಮಂಡಿಸಿಲ್ಲ. ಕಾವೇರಿ ಪ್ರಾಧಿಕಾರದ ಸಭೆಗೆ ನಮ್ಮವರು ವರ್ಚುವಲ್ ಮೂಲಕ ಹಾಜರಾಗಿದ್ದರು. ಕಾವೇರಿ ನದಿ ವಿಚಾರದಲ್ಲಿ ಕೇಂದ್ರದಿಂದ ಎಲ್ಲ ರೀತಿಯ ಸಹಕಾರ ನೀಡಿದ್ದೇವೆ. ಮುಂದೆಯೂ ಸಹಕಾರ ನೀಡುತ್ತೇವೆ ಎಂದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು.
ಕೆಂಪೇಗೌಡ ಏರ್ಪೋಟ್ ನಲ್ಲಿ ನಿಖಿಲ್ ಕುಮಾರಸ್ವಾಮಿ ಕಾವೇರಿ ವಿವಾದದ ಬಗ್ಗೆ ಪ್ರತಿಕ್ರಿಯೆ ನೀಡಿದರು. ಕಾವೇರಿ ವಿಚಾರದಲ್ಲಿ 200 ವರ್ಷಗಳಿಂದಲೂ ರಾಜ್ಯದ ಜನತೆಗೆ, ರೈತರಿಗೆ ಸದಾ ಅನ್ಯಾಯ ಆಗುತ್ತಿದೆ. ಸುಪ್ರೀಂ ಕೋರ್ಟ್ ಆದೇಶದಿಂದ ಏಳೂವರೆ ಟಿಎಂಸಿ ನೀರು ಖಾಲಿಯಾಗಲಿದೆ. ಹೆಚ್ಡಿ ಕುಮಾರಸ್ವಾಮಿಯವರು ಕಾವೇರಿ ವಿಚಾರದಲ್ಲಿ ಅಮಿತ್ ಷಾ ಹಾಗೂ ನಡ್ಡಾ ರವರ ಗಮನಕ್ಕೆ ತಂದಿದ್ದಾರೆ. ಹೆಚ್.ಡಿ ದೇವೇಗೌಡರು ಸಹ ಪ್ರಧಾನಮಂತ್ರಿಗಳನ್ನ ಭೇಟಿ ಮಾಡಲಿದ್ದಾರೆ. ನಾನು ಸಹ ಕುಮಾರಣ್ಣನ ಜೊತೆ ಮಂಡ್ಯದಲ್ಲಿ ಹೋರಾಟದಲ್ಲಿ ಭಾಗಿಯಾಗಲಿದ್ದೇನೆ ಎಂದರು.
ಬೆಂಗಳೂರಿಗೆ ಆಗಮಿಸಿದ ಹೆಚ್ಡಿ ಕುಮಾರಸ್ವಾಮಿ ಅವರು ಕೇಂಪೇಗೌಡ ಏರ್ಪೋರ್ಟ್ ನಲ್ಲಿ ಮಾತನಾಡಿದರು. ಈ ವೇಳೆ, ಅಮಿತ್ ಷಾ ಹಾಗೂ ನಡ್ಡಾ ಜೊತೆ ನಡೆದ ಚರ್ಚೆಗಳ ಬಗ್ಗೆ ದೆಹಲಿಯಲ್ಲಿ ಹೇಳಿದ್ದೇನೆ. ಬಿಜೆಪಿ-ಜೆಡಿಎಸ್ ಮೈತ್ರಿ ವಿಚಾರ ಅತ್ಯಂತ ಸೌಹಾರ್ದಯುತವಾಗಿ ನಡೆದಿದೆ. ಲಾಂಗ್ ರಿಲೇಷನ್ ಶಿಪ್ ಮುಂದುವರೆಸುವ ಬಗ್ಗೆ ಚರ್ಚೆಗಳು ನಡೆದಿವೆ. ಸೀಟು ಹೊಂದಾಣಿಕೆ ಬಗ್ಗೆ ಯಾವುದೇ ಭಿನ್ನಾಭಿಪ್ರಾಯಗಳು ಇಲ್ಲ. ನಾಡಿನ ಜನತೆ ಹಿತರಕ್ಷಣೆ ದೃಷ್ಟಿಯಿಂದ ಕೆಲ ವಿಷಯಗಳು ಸಾರ್ವಜನಿಕವಾಗಿ ಹೇಳಲು ಸಾಧ್ಯವಿಲ್ಲ. ಮೈತ್ರಿ ವಿಚಾರದಲ್ಲಿ ಯಾವುದೇ ಸಮಸ್ಯೆ ಇಲ್ಲ. ದಸರಾ ಹಬ್ಬದ ನಂತರ ಕೇಂದ್ರ ಹಾಗೂ ರಾಜ್ಯ ಬಿಜೆಪಿ ನಾಯಕರು ಮಾತನಾಡಲಿದ್ದಾರೆ. ನಾನು ಈಗ ಮಂಡ್ಯಗೆ ಹೋಗುತ್ತಿದ್ದೇನೆ. ರೈತರ ಹೋರಾಟಕ್ಕೆ ಬಿಜೆಪಿ ಜೆಡಿಎಸ್ ಬೆಂಬಲ ಕೊಟ್ಟಿದ್ದೇವೆ. ರೈತರ ಹೋರಾಟಕ್ಕೆ ಸಾಂಕೇತಿಕವಾಗಿ ಬೆಂಬಲ ಸೂಚಿಸಲು ಹೊರಟಿದ್ದೇನೆ ಎಂದರು.
ಕರವೇ ಹೋರಾಟಗಾರರು ಅತ್ತಿಬೆಲೆ ಬಾರ್ಡರ್ ತಲುಪಿದ್ದು ಗಡಿ ಗೋಪುರದ ಬಳಿ ರಸ್ತೆ ಬಂದ್ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕರ್ನಾಟಕದಲ್ಲಿ ತಮಿಳು ಚಿತ್ರಗಳು ಬಿಡುಗಡೆಯಾಗಬಾರದು. ಸಮಸ್ಯೆ ಬಗೆ ಹರಿಯೋ ಬರೆಗೂ ಚಿತ್ರಮಂದಿರಗಳಲ್ಲಿ ತಮಿಳು ಸಿನಿಮಾ ಪ್ರದರ್ಶನ ರದ್ದಾಗಬೇಕು ಅಂತ ಆಕ್ರೊಶ ಹೊರ ಹಾಕಿದ್ದಾರೆ. ಪೊಲೀಸರು ಪ್ರತಿಭಟನಾಕಾರರನ್ನ ತಡೆ ಹಿಡಿದು ವಶಕ್ಕೆ ಪಡೆದಿದ್ದಾರೆ.
ಮೈಸೂರಿನಲ್ಲೂ ಕಾವೇರಿ ಹೋರಾಟದ ಕಿಚ್ಚು ಜೋರಾಗಿದೆ. ಮೈಸೂರು ನ್ಯಾಯಾಲಯದ ಮುಂಭಾಗದ ರಸ್ತೆ ತಡೆದು ಮೈಸೂರು ವಕೀಲರು ಪ್ರತಿಭಟನೆ ನಡೆಸಿದ್ದಾರೆ. ಕೋರ್ಟ್ ಮುಂಭಾಗ ವಾಹನ ಸಂಚಾರ ಸಂಪೂರ್ಣ ಬಂದ್ ಆಗಿದೆ. ರಾಜ್ಯ ಸರ್ಕಾರದ ವಿರುದ್ದ ಘೋಷಣೆ ಕೂಗಿ ಆಕ್ರೋಶ ಹೊರ ಹಾಕಲಾಗುತ್ತಿದೆ. ನಾವು ಸ್ವಾರ್ಥಿಗಳಲ್ಲ ನಮ್ಮ ಬಳಿಯೇ ನೀರಿಲ್ಲ. ನಾವು ಯಾವ ರೀತಿ ನೀರು ಬಿಡಲು ಸಾಧ್ಯ ಎಂದು ಕಿಡಿಕಾರಿದ್ದಾರೆ.
ಹಾಸನದಲ್ಲೂ ಕಾವೇರಿ ಕಿಚ್ಚು ಹೆಚ್ಚಾಗಿದೆ. ಕಾವೇರಿ ನೀರಿಗಾಗಿ ಕನ್ನಡಪರ ಸಂಘಟನೆಗಳು ಬೀದಿಗಿಳಿದಿವೆ. ಕರವೇ ಕಾರ್ಯಕರ್ತರು ಹಾಸನದ ಬೂವನಹಳ್ಳಿ ಬಳಿ ರಾಷ್ಟ್ರೀಯ ಹೆದ್ದಾರಿ 75 ತಡೆದಿದ್ದು ಸ್ಥಳದಲ್ಲಿ ಪೊಲೀಸರಿಂದ ಭಾರೀ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಮುಂಜಾಗ್ರತಾ ಕ್ರಮವಾಗಿ ನೂರಾರು ಸಂಖ್ಯೆಯಲ್ಲಿ ಪೊಲೀಸರ ನಿಯೋಜನೆ ಮಾಡಲಾಗಿದೆ.
ರಾಜಣ್ಣ ಬಳಿಕ ಮಾಜಿ ಸಚಿವ ಬಸವರಾಜ್ ರಾಯರೆಡ್ಡಿ ಡಿಸಿಎಂ ಹುದ್ದೆ ಹೆಚ್ಚಿಸಲು ಮನವಿ ಮಾಡಿದ್ದಾರೆ. ಮೂರಲ್ಲ ಬದಲಿಗೆ ಆರು ಡಿಸಿಎಂ ಹುದ್ದೆ ಸೃಷ್ಠಿಸಲು ಒತ್ತಾಯಿಸಿದ್ದಾರೆ. ಎಲ್ಲ ಜಾತಿ ಧರ್ಮಗಳು ಕಾಂಗ್ರೆಸ್ ಗೆ ಬೆಂಬಲ ನೀಡಿವೆ. ಮುಸ್ಲಿಂ, ಎಸ್ಸಿ, ಎಸ್ಟಿ ಸೇರಿದಂತೆ ಮಹಿಳೆಗೂ ಒಂದು ಡಿಸಿಎಂ ಹುದ್ದೆ ನೀಡಬೇಕು. ನಾನು ರಾಜಣ್ಣ, ಪರಮೇಶ್ವರ್ ಹೇಳಿಕೆ ಬೆಂಬಲಿಸುತ್ತೇನೆ. ಈ ಬಗ್ಗೆ ಸಿಎಂ, ಕಾಂಗ್ರೆಸ್ ಹೈಕಮಾಂಡ್ ಅಂತಿಮ ನಿರ್ಧಾರ ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.
ತಮಿಳುನಾಡಿಗೆ ಕಾವೇರಿ ನೀರು ಹರಿಸುವುದನ್ನ ವಿರೋಧಿಸಿ ಮಂಡ್ಯ ನಗರದ ಸಂಜಯ ವೃತ್ತದಲ್ಲಿ ರೈತರಿಂದ ಧರಣಿ ಮುಂದುವರಿದಿದೆ. ಬಾಯಿಗೆ ಮಣ್ಣು ಹಾಕಿಕೊಂಡು ರೈತರು ವಿನೂತನ ಪ್ರತಿಭಟನೆ ಮಾಡಿದ್ದಾರೆ. ತಮಿಳುನಾಡಿಗೆ ನೀರು ಬಿಟ್ಟು ರೈತರ ಬಾಯಿಗೆ ಸರ್ಕಾರ ಮಣ್ಣು ಹಾಕಿದೆ ಎಂದು ಕಿಡಿಕಾರಿದ್ದಾರೆ.
ತಮಿಳುನಾಡಿಗೆ ಕಾವೇರಿ ನೀರು ಹರಿಸುವುದನ್ನು ವಿರೋಧಿಸಿ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯಲ್ಲಿ ಕರವೇ ಪ್ರತಿಭಟನೆ ನಡೆಸುತ್ತಿದೆ. ರಾಜ್ಯ, ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ತಮಿಳುನಾಡು ಸರ್ಕಾರದ ಭೂತ ದಹನ ಮಾಡಿ ಕರವೇ ನಾರಾಯಣಗೌಡ ಬಣದ ಕಾರ್ಯಕರ್ತರು ಆಕ್ರೋಶ ಹೊರ ಹಾಕಿದ್ದಾರೆ.
ಪ್ರತಿಭಟನೆ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ನಿವಾಸದಲ್ಲಿ ಮಹತ್ವದ ಚರ್ಚೆ ನಡೆಯುತ್ತಿದ್ದು ಭದ್ರತೆ, ಸದ್ಯದ ಪರಿಸ್ಥಿತಿ ಬಗ್ಗೆ ಸಿಎಂ ಸಿದ್ದರಾಮಯ್ಯರಿಗೆ ಅವರಿಗೆ ಗೃಹ ಸಚಿವ ಪರಮೇಶ್ವರ್ ಮಾಹಿತಿ ನೀಡಿದ್ದಾರೆ. ಸಭೆಯಲ್ಲಿ ಗೃಹ ಸಚಿವ ಜಿ.ಪರಮೇಶ್ವರ್, ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ, ಗೃಹ ಕಾರ್ಯದರ್ಶಿ ರಜನೀಶ್ ಗೋಯಲ್ ಭಾಗಿಯಾಗಿದ್ದಾರೆ.
9 ಮತ್ತು 11ನೇ ತರಗತಿ ವಿದ್ಯಾರ್ಥಿಗಳಿಗೆ ಬೋರ್ಡ್ ಪರೀಕ್ಷೆ ನಡೆಸಲು ರಾಜ್ಯ ಶಿಕ್ಷಣ ಇಲಾಖೆ ನಿರ್ಧಾರ ಮಾಡಿದೆ. 9ನೇ ತರಗತಿ ಮಕ್ಕಳ ಕಲಿಕಾ ದೃಷ್ಟಿಯಿಂದ ಮಕ್ಕಳಿಗೆ ಸಂಕಲನಾತ್ಮಕ ಮೌಲ್ಯಮಾಪನ ಪರೀಕ್ಷೆ ನಡೆಸಲು ನಿರ್ಧರಿಸಲಾಗಿದೆ. ಹಾಗೂ 11ನೇ ತರಗತಿ ವಿದ್ಯಾರ್ಥಿಗಳಿಗೆ ವಾರ್ಷಿಕ ಪರೀಕ್ಷೆ ನಡೆಸುವಂತೆ ಎಲ್ಲಾ ಸರ್ಕಾರಿ, ಅನುದಾನಿತ, ಅನುದಾನ ರಹಿತ ಖಾಸಗಿ ಶಾಲೆಗಳಿಗೆ
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಆದೇಶ ನೀಡಿದೆ. 2023-24ನೇ ಸಾಲಿನಿಂದಲೇ ಬೋರ್ಡ್ ಪರೀಕ್ಷೆ ನಡೆಸುವಂತೆ ಆದೇಶ ಹೊರಡಿಸಿದೆ.
ಮಂಡ್ಯ ಜಿಲ್ಲೆಯಲ್ಲಿ ಕಾವೇರಿ ಕಿಚ್ಚು ಮುಂದುವರಿದಿದೆ. ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಕೆ.ಹೊನ್ನಲಗೆರೆ ಕೂಡ ಬಂದ್ ಆಗಿದೆ. ಹೊನ್ನಲಗೆರೆಯಲ್ಲಿ ಬೆಳಗ್ಗೆಯಿಂದಲೇ ವ್ಯಾಪಾರ ವಹಿವಾಟು ಸ್ಥಗಿತಗೊಂಡಿದೆ. ಹೊನ್ನಲಗೆರೆಯಲ್ಲಿ ವಿವಿಧ ಕನ್ನಡ ಪರ ಸಂಘಟನೆಯಿಂದ ಪ್ರತಿಭಟನೆ ನಡೆಯುತ್ತಿದೆ.
ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ತಿಮ್ಮಪ್ಪನಹಳ್ಳಿಯ ಸರ್ಕಾರಿ ಶಾಲೆ ಆವರಣದಲ್ಲಿ ವಾಮಾಚಾರ ಮಾಡಲಾಗಿದೆ. ಸರ್ಕಾರಿ ಪ್ರೌಢ ಶಾಲೆಯ ಮುಖ್ಯಶಿಕ್ಷಕರ ಕೊಠಡಿ ಬಳಿ ತಲೆ ಬುರುಡೆ, ಲಿಂಬೆ ಹಣ್ಣು, ಎಲೆ ಅಡಿಕೆ, ಕುಂಕುಮ ಪತ್ತೆಯಾಗಿದೆ. ಶಾಲೆಗೆ ಆಗಮಿಸಿದ ವಿದ್ಯಾರ್ಥಿಗಳು, ಸಿಬ್ಬಂದಿಗೆ ಆತಂಕ ಶುರುವಾಗಿದೆ. ತಳಕು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ತಿಮ್ಮಪ್ಪನಹಳ್ಳಿ ಶಾಲೆಗೆ ತಳಕು ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ವಾಮಾಚಾರಕ್ಕೆ ಬಳಸಿದ ಬುರುಡೆ ಇತರೆ ವಸ್ತುಗಳ ತೆರವು ಮಾಡಲಾಗಿದೆ.
ಇನ್ಮುಂದೆ ಪ್ರತಿ ಶನಿವಾರ ಬೆಳಗ್ಗೆ 11ರಿಂದ ಮಧ್ಯಾಹ್ನ 2ರವರೆಗೆ ಸಿಎಂ ಭೇಟಿಗೆ ಶಾಸಕರಿಗೆ ಅವಕಾಶ ನೀಡಲಾಗಿದೆ. ಕ್ಷೇತ್ರದ ಅಭಿವೃದ್ಧಿ, ಅನುದಾನ ಬಗ್ಗೆ ಖುದ್ದು ಚರ್ಚೆಗೆ ಅವಕಾಶ ನೀಡಲಾಗಿದೆ. ಸಿಎಂ ಸಿಗ್ತಿಲ್ಲ, ಅನುದಾನ ಸಿಗ್ತಿಲ್ಲ ಎಂಬ ದೂರು ಹೇಳುವ ಹಾಗಿಲ್ಲ. ಹಾಗಾಗಿ ಪ್ರತಿ ಶನಿವಾರ ಶಾಸಕರ ಭೇಟಿಗೆ ಸಿಎಂ ಅವಕಾಶ ನೀಡಿದ್ದಾರೆ. ಗೃಹ ಕಚೇರಿ ಕೃಷ್ಣಾದಲ್ಲಿ ಸಿಎಂ ಸಿದ್ದರಾಮಯ್ಯ ಭೇಟಿಗೆ ಸಮಯ ನಿಗದಿ ಮಾಡಲಾಗಿದ್ದು ಸಿಎಂ ಭೇಟಿಗೆ ಬಿಜೆಪಿ, ಜೆಡಿಎಸ್ ಶಾಸಕರಿಗೂ ಅವಕಾಶ ನೀಡಲಾಗಿದೆ.
ಭದ್ರಾ ಜಲಾಶಯದಿಂದ ಭತ್ತದ ಬೆಳೆಗೆ ನೀರು ಬಿಡುವಂತೆ ಆಗ್ರಹಿಸಿ ದಾವಣಗೆರೆ ಜಿಲ್ಲೆಯಾದ್ಯಂತ ರೈತರ ಪ್ರತಿಭಟನೆ ತೀವ್ರಗೊಂಡಿದೆ. ನೀರು ಬಿಡುವಂತೆ ಆಗ್ರಹಿಸಿ ವಿಷ ಸೇವಿಸಿ ರೈತ ಆತ್ಮಹತ್ಯೆಗೆ ಯತ್ನಿಸಿದ ಘಟನೆ ದಾವಣಗೆರೆ ಜಿಲ್ಲೆ ಹರಿಹರ ತಾಲೂಕಿನ ಮಲೇಬೆನ್ನೂರಿನಲ್ಲಿ ನಡೆದಿದೆ. ರೈತನ ಕೈಯಲ್ಲಿ ಕ್ರಿಮಿನಾಶಕ ಬಾಟಲ್ ಕಸಿದುಕೊಂಡು ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತೆಗೆದುಕೊಂಡರು. ಸಾಮಾಜಿಕ ಜಾಲತಾಣದಲ್ಲಿ ಆತ್ಮಹತ್ಯೆ ಯತ್ನ ವಿಡಿಯೋ ವೈರಲ್ ಆಗಿದೆ.
ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಕೆಆರ್ಎಸ್ ಡ್ಯಾಮ್ ಒಳ ಹರಿವು ಇಳಿಕೆಯಾಗಿದ್ದು ಹೊರ ಹರಿವು ಏರಿಕೆಯಾಗಿದೆ. ನಿನ್ನೆ ಕಾವೇರಿ ನದಿಗೆ 2,673 ಕ್ಯೂಸೆಕ್ ನೀರು ಬಿಡಲಾಗಿತ್ತು. ಇಂದು ಕೆಆರ್ಎಸ್ ಡ್ಯಾಮ್ನಿಂದ 2973 ಕ್ಯೂಸೆಕ್ ನೀರು ಬಿಡುಗಡೆಯಾಗಿದೆ. ನಿನ್ನೆ ಕೆಆರ್ಎಸ್ಗೆ 5,845 ಕ್ಯೂಸೆಕ್ ನೀರು ಒಳ ಹರಿವು ಇತ್ತು. ಇಂದು 5147 ಕ್ಯೂಸೆಕ್ಗೆ ಇಳಿಕೆಯಾಗಿರುವ ಒಳ ಹರಿವು ಇದೆ. ಸದ್ಯ 96.90 ಅಡಿಗೆ KRS ಜಲಾಶಯದ ನೀರಿನ ಮಟ್ಟ ಕುಸಿದಿದೆ.
ಬೆಂಗಳೂರಿನಲ್ಲೂ ಕಾವೇರಿ ಹೋರಾಟ ತೀವ್ರಗೊಳ್ಳುತ್ತಿದೆ. ಬೆಂಗಳೂರು ನಗರದ ಆಯಾಕಟ್ಟಿನ ಸ್ಥಳಗಳಲ್ಲಿ ಹೈಅಲರ್ಟ್ ಘೋಷಿಸಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಹೆಚ್ಚುವರಿ ಪೊಲೀಸರ ನಿಯೋಜನೆ ಮಾಡುವಂತೆ ಬೆಂಗಳೂರು ಪೊಲೀಸ್ ಕಮಿಷನರ್ ಬಿ.ದಯಾನಂದ್ ಆಯಾ ವಲಯ ಹೆಚ್ಚುವರಿ ಆಯುಕ್ತರು, ಡಿಸಿಪಿಗಳಿಗೆ ಸೂಚನೆ ಕೊಟ್ಟಿದ್ದಾರೆ.
ಕರ್ನಾಟಕ ರಾಜ್ಯ ಮುಕ್ತ ವಿವಿ ಪ್ರಶ್ನೆ ಪತ್ರಿಕೆ ಮಾರಾಟ ಪ್ರಕರಣಕ್ಕೆ ಸಂಬಂಧಿಸಿ ಪ್ರಶ್ನೆ ಪತ್ರಿಕೆ ಮಾರಾಟ ಹಿನ್ನೆಲೆ ಮರು ಪರೀಕ್ಷೆಗೆ ವಿವಿ ನಿರ್ಧಾರ ಮಾಡಿದೆ. ಪ್ರಶ್ನೆ ಪತ್ರಿಕೆ ಮಾರಾಟ ಆರೋಪ ಕೇಸ್ನಲ್ಲಿ ಇಬ್ಬರನ್ನು ಬಂಧಿಸಲಾಗಿದೆ. ಬಿಕಾಂ ಪ್ರಶ್ನೆ ಪತ್ರಿಕೆ ಮಾರಾಟ ಆರೋಪದಡಿ ಇಬ್ಬರು ಅರೆಸ್ಟ್ ಆಗಿದ್ದಾರೆ. ಜಯಲಕ್ಷ್ಮಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಕರ್ನಾಟಕದಲ್ಲಿ ಸಂಚರಿಸಲಿರುವ 3ನೇ ವಂದೇ ಭಾರತ್ ರೈಲಿಗೆ ನಾಳೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಲಿದ್ದಾರೆ. ಬೆಂಗಳೂರು-ಕಾಚಿಗೂಡ ಮಾರ್ಗದ ವಂದೇ ಭಾರತ್ ರೈಲಿಗೆ ನಾಳೆ ವಿಡಿಯೋ ಕಾನ್ಫರೆನ್ಸ್ ಮೂಲಕ ಮೋದಿ ಚಾಲನೆ ನೀಡಲಿದ್ದಾರೆ. ಇದು ಕರ್ನಾಟಕದಲ್ಲಿ ಸಂಚರಿಸಲಿರುವ 3ನೇ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು. ಬೆಂಗಳೂರಿನ ಯಶವಂತಪುರ-ಹೈದರಾಬಾದ್ನ ಕಾಚಿಗೂಡ ನಡುವೆ ಸಂಚಾರ ಮಾಡಲಿದೆ. ಐಟಿ ಹಬ್ ಕೇಂದ್ರಗಳಾಗಿರುವ ಬೆಂಗಳೂರು, ಹೈದರಾಬಾದ್ಗೆ ಇದರಿಂದ ಅನುಕೂಲವಾಗಲಿದೆ.
ಮೈಸೂರು ಜಿಲ್ಲೆ H.D.ಕೋಟೆ ತಾಲೂಕಿನ ಬೀಚನಹಳ್ಳಿಯ ಕಬಿನಿ ಜಲಾಶಯದ ಇಂದಿನ ನೀರಿನ ಮಟ್ಟ 75.01 ಅಡಿಗೆ ಕುಸಿದಿದೆ. ಕಬಿನಿ ಜಲಾಶಯದಿಂದ ಸದ್ಯ 4,890 ಕ್ಯೂಸೆಕ್ ನೀರು ಹೊರಹರಿವಿದ್ದು ಇಂದಿನ ಒಳಹರಿವು 2,786 ಕ್ಯೂಸೆಕ್ ಇದೆ. ಕಬಿನಿ ಜಲಾಶಯದಲ್ಲಿ ಸದ್ಯಕ್ಕೆ 14.28 ಟಿಎಂಸಿ ನೀರು ಸಂಗ್ರಹವಾಗಿದೆ.
ಬೆಂಗಳೂರು: ರಾಜ್ಯದಲ್ಲಿ ದಿನೇ ದಿನೇ ಕಾವೇರಿ ಕಿಚ್ಚು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ನಗರದ ಆಯಾ ಕಟ್ಟಿನ ಸ್ಥಳಗಳಲ್ಲಿ ಸೂಕ್ತ ಮುನ್ನೆಚ್ಚರಿಕೆ ವಹಿಸುವಂತೆ ಆಯಾ ವಲಯ ಹೆಚ್ಚುವರಿ ಆಯುಕ್ತರು, ಡಿಸಿಪಿಗಳಿಗೆ ಸೂಚನೆ ನೀಡಿದ್ದಾರೆ. ತಮಿಳುನಾಡು ಕಡೆ ಹೊರಡುವ ಬಸ್ಗಳು, ಬಸ್ಸ್ಟಾಪ್ಗಳ ಬಳಿ, ತಮಿಳಿಗರು ವಾಸಿಸುವ ಕಡೆ ಮತ್ತು 2016 ರಲ್ಲಿ ಕಾವೇರಿ ಗಲಾಟೆ ನಡೆದ ಏರಿಯಾಗಳಲ್ಲಿ ತೀವ್ರ ನಿಗಾವಹಿಸುವಂತೆ ಸೂಚಿಸಲಾಗಿದೆ.
ನಗರದ ಪಶ್ಚಿಮ ಹಾಗೂ ಉತ್ತರ ವಿಭಾಗದಲ್ಲಿ, ಮೈಸೂರು ರಸ್ತೆ ಸುತ್ತಮುತ್ತಲಿನ ಏರಿಯಾಗಳು, ಹೊಸೂರು ರಸ್ತೆ ಅಕ್ಕಪಕ್ಕದ ಏರಿಯಾಗಳು, ಆರ್ ಆರ್ ನಗರ, ಬ್ಯಾಟರಾಯನಪುರ, ಸ್ಯಾಟಲೈಟ್ ಆಸುಪಾಸು, ಮಾರ್ಕೆಟ್ ಸೇರಿ ಪ್ರಮುಖ ಏರಿಯಾಗಳಲ್ಲಿ ಮುನ್ನೆಚ್ಚರಿಕೆ ಸಲುವಾಗಿ ವ್ಯಾಪಕ ಗಸ್ತು ವಹಿಸುವಂತೆ ಹೇಳಿದ್ದಾರೆ.
ಬೆಂಗಳೂರು: ನಗರದಲ್ಲಿ ಇಂದು ಕಾವೇರಿ ನದಿ ನೀರಿಗಾಗಿ ಸರಣಿ ಪ್ರತಿಭಟನೆ ನಡೆಯಲಿವೆ. ಕನ್ನಡಪರ ಸಂಘಟನೆಗಳು ಶನಿವಾರ ಕೇಂದ್ರ, ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲಿವೆ. ಬೆಳಗ್ಗೆ 10.30ಕ್ಕೆ ಕರವೇ ಶಿವರಾಮೇಗೌಡ ಬಣ ಮಲ್ಲೇಶ್ವರಂನ ಸಂಪಿಗೆ ರಸ್ತೆಯ ಕುವೆಂಪು ಪ್ರತಿಮೆ ಮುಂದೆ ಪ್ರತಿಭಟನೆ ಮಾಡಲಿದೆ. ಇದರಲ್ಲಿ ನೂರಾರು ಕರವೇ ಕಾರ್ಯಕರ್ತರು ಭಾಗಿಯಾಗಲಿದ್ದಾರೆ. ಬೆಳಗ್ಗೆ 10 ಗಂಟೆಗೆ ಕರವೇ ಪ್ರವೀಣ್ ಶೆಟ್ಟಿ ಬಣ ಅತ್ತಿಬೆಲೆ ಬಳಿ ಕರ್ನಾಟಕ-ತಮಿಳುನಾಡು ಗಡಿ ಬಂದ್ ಮಾಡಿ ಧರಣಿ ನಡೆಸಲಿದೆ. ಬೆಳಗ್ಗೆ 11.30ಕ್ಕೆ ಕರ್ನಾಟಕ ರಾಜ್ಯ ಕಾರ್ಮಿಕ ಪರಿಷತ್ ಮೈಸೂರು ಬ್ಯಾಂಕ್ ಸರ್ಕಲ್ ಬಳಿ ಹೋರಾಟ ನಡೆಸಲಿದೆ.
ಮಂಡ್ಯದಲ್ಲಿ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿ ಬಂದ್ಗೆ ವರ್ತಕರು ಬೆಂಬಲ ವ್ಯಕ್ತಪಡಿಸಿದ್ದಾರೆ. ಮತ್ತೊಂದೆಡೆ ಬಂದ್ ಹಿನ್ನೆಲೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ವಹಿಸಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
ಮಂಡ್ಯ ಬಂದ್ಗೆ ಕರೆ ನೀಡಲಾಗಿದ್ದು ಮಂಡ್ಯದಲ್ಲಿ ಪ್ರತಿಭಟನೆ ಆರಂಭವಾಗಿದೆ. ಮಂಡ್ಯ ರಕ್ಷಣಾ ವೇದಿಕೆ ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸುತ್ತಿದೆ. ಸಂಜಯ್ ವೃತ್ತದಲ್ಲಿ ರಸ್ತೆಯಲ್ಲಿ ಟೀ ಮಾಡುವ ಮೂಲಕ ಪ್ರತಿಭಟನೆ ನಡೆಸಲಾಗುತ್ತಿದೆ. ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಆದೇಶ ಸುಟ್ಟು ಟೀ ಮಾಡಿ ಪ್ರತಿಭಟನೆ ನಡೆಸುತ್ತಿದ್ದಾರೆ.
Published On - 7:37 am, Sat, 23 September 23