ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಎರಡನೇ ಅಲೆ ಉಪಟಳದ ನಡುವೆಯೇ ಬ್ಲ್ಯಾಕ್ ಫಂಗಸ್ ಸೋಂಕು ಹೆಚ್ಚುತ್ತಿರುವುದು ವೈದ್ಯರಿಗೆ ತಲೆನೋವಾಗಿದೆ. ಕೊರೊನಾ ಲಸಿಕೆ ಕೊರತೆ, ಆಕ್ಸಿಜನ್, ರೆಮ್ಡಿಸಿವಿರ್ ಅಭಾವ ಇದ್ದಾಗ್ಯೂ ಕೊರೊನಾದೊಂದಿಗೆ ಏಗುತ್ತಿರುವ ವೈದ್ಯರಿಗೆ ಬ್ಲ್ಯಾಕ್ ಫಂಗಸ್ ಚಿಕಿತ್ಸೆಗೂ ಇಂಜೆಕ್ಷನ್ ಕೊರತೆ ಎದುರಾಗಿರುವುದು ಸಮಸ್ಯೆಗಳ ಸರಮಾಲೆಯನ್ನೇ ಸೃಷ್ಟಿಸಿದೆ. ಬೆಂಗಳೂರಿನ ಬೋರಿಂಗ್ ಸೇರಿದಂತೆ ರಾಜ್ಯದ ಬಹುತೇಕ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲು ದಾಖಲಾಗಿರುವ ರೋಗಿಗಳಿಗೆ ನೀಡುವುದಕ್ಕೂ ಇಂಜೆಕ್ಷನ್ ಇಲ್ಲವೆಂಬಂತಾಗಿದ್ದು, ಲಿಪೋಸೋಮಲ್, ಆಂಪೊಟೆರಿಸಿನ್ ಬಿ ಔಷಧ ಪೂರೈಸದಿದ್ದರೆ ಪರಿಸ್ಥಿತಿ ಹದಗೆಡಲಿದೆ.
ಬ್ಲ್ಯಾಕ್ ಫಂಗಸ್ ಸೋಂಕಿಗೆ ಒಳಗಾದ ಒಬ್ಬ ರೋಗಿಗೆ ನಿತ್ಯ 40 ರಿಂದ50 ಇಂಜೆಕ್ಷನ್ ಬೇಕಾಗುತ್ತದೆ ಎಂದು ವೈದ್ಯರು ತಿಳಿಸಿದ್ದು, ರಾಜ್ಯ ಸರ್ಕಾರ ಖರೀದಿ ಮಾಡಿದ್ದ 450 ವಯಲ್ಸ್ ಯಾವ ಮೂಲೆಗೂ ಸಾಕಾಗುವುದಿಲ್ಲ. ಸದ್ಯ ಬೋರಿಂಗ್ ಆಸ್ಪತ್ರೆಯಲ್ಲೇ 16 ಜನ ಬ್ಲಾಕ್ ಫಂಗಸ್ ರೋಗಿಗಳು ದಾಖಲಾಗಿದ್ದರೂ ಆಸ್ಪತ್ರೆಯಲ್ಲಿ ಕೇವಲ 100 ಡೋಸ್ ಇಂಜೆಕ್ಷನ್ ಇದೆ. 100 ಡೋಸ್ ಇಂಜೆಕ್ಷನ್ ಇಬ್ಬರು ಬ್ಲಾಕ್ ಫಂಗಸ್ ರೋಗಿಗಳಿಗೇ ಬೇಕಾಗಿದ್ದು, ಉಳಿದ ರೋಗಿಗಳ ಕಥೆ ಏನು ಎಂದು ವೈದ್ಯರು ಚಿಂತಿಸುವಂತಾಗಿದೆ. ಬೆಂಗಳೂರು ಹಾಗೂ ರಾಜ್ಯದ ಬಹುತೇಕ ಆಸ್ಪತ್ರೆಗಳ ಪರಿಸ್ಥಿತಿ ಹೀಗೆಯೇ ಇದ್ದು ಬ್ಲ್ಯಾಕ್ ಫಂಗಸ್ ಸೋಂಕು ನಿಯಂತ್ರಿಸುವುದೇ ದೊಡ್ಡ ಸವಾಲಾಗಿದೆ.
ಬ್ಲ್ಯಾಕ್ ಫಂಗಸ್ ಚಿಕಿತ್ಸೆಗೆ ರಾಜ್ಯದಲ್ಲಿ ಇಂಜೆಕ್ಷನ್ ಕೊರತೆ ಬಗ್ಗೆ ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮದ ವ್ಯವಸ್ಥಾಪಕ ನಿರ್ದೇಶಕಿ ಲತಾಕುಮಾರಿ ಟಿವಿ9ಗೆ ಪ್ರತಿಕ್ರಿಯೆ ನೀಡಿದ್ದಾರೆ. ಕೇಂದ್ರದಿಂದ ಬ್ಲ್ಯಾಕ್ ಫಂಗಸ್‌ಗೆ ಯಾವುದೇ ಔಷಧ ಬಂದಿಲ್ಲ. ಮೈಲಾನ್ ಕಂಪನಿಯಿಂದ ಇಂಜೆಕ್ಷನ್ ಸರಬರಾಜು ಆಗುತ್ತಿದೆ. 1,050 ವಯಲ್ಸ್ ಖರೀದಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಈ ಪೈಕಿ 450 ವಯಲ್ಸ್ ಇಂಜೆಕ್ಷನ್ ಶನಿವಾರ ಬಂದಿದೆ ಎಂದು ತಿಳಿಸಿದ್ದಾರೆ.
ಬ್ಲ್ಯಾಕ್ ಫಂಗಸ್ ಇರುವ ರೋಗಿಗಳು ಎಷ್ಟು ಜನರಿದ್ದಾರೆ. ಒಬ್ಬ ರೋಗಿಗೆ ಎಷ್ಟು ಇಂಜೆಕ್ಷನ್ ಬೇಕು ಎಂದು ಮಾಹಿತಿ ನೀಡಲಾಗಿದೆ. ರಾಜ್ಯ ಸರ್ಕಾರದ ನಿರ್ದೇಶನದಂತೆ ಇಂಜೆಕ್ಷನ್ ಖರೀದಿಯಾಗುತ್ತಿದ್ದು 1,050 ವಯಲ್ಸ್ ಪೈಕಿ ಬಾಕಿ ಇರುವ 600 ವಯಲ್ಸ್ ಇಂಜೆಕ್ಷನ್ ಸದ್ಯದಲ್ಲೇ ಬರಲಿದೆ ಎಂದಿದ್ದಾರೆ. ಆದರೆ, ಬ್ಲ್ಯಾಕ್ ಫಂಗಸ್ ಚಿಕಿತ್ಸೆಗೆ ಈಗಿರುವ 450 ವಯಲ್ಸ್ ಆಗಲೀ ಅಥವಾ ಬಾಕಿ ಇರುವುದು ಸೇರಿ ಒಟ್ಟು 1,050 ವಯಲ್ಸ್ ಇಂಜೆಕ್ಷನ್ ಆಗಲೀ ಸಾಲುವುದಿಲ್ಲ ಎನ್ನುವುದು ಆಸ್ಪತ್ರೆಗಳ ಪರಿಸ್ಥಿತಿಯನ್ನು ನೋಡಿದರೆ ತಿಳಿಯುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಸರ್ಕಾರ ಇಂಜೆಕ್ಷನ್ ಖರೀದಿಗೆ ಏಕೆ ಮೀನಮೇಷ ಎಣಿಸುತ್ತಿದೆ ಎನ್ನುವುದು ಮಾತ್ರ ಅರ್ಥವಾಗುತ್ತಿಲ್ಲ.
ಇದನ್ನೂ ಓದಿ:
ಬ್ಲ್ಯಾಕ್ ಫಂಗಸ್‌ಗೆ ರಾಜ್ಯದ ಆರು ಕಡೆ ಉಚಿತ ಚಿಕಿತ್ಸೆ, ಈಗಾಗಲೇ 1000 ವೈಲ್ಸ್ ಔಷಧಿ ಬಂದಿದೆ: ಅಶ್ವತ್ಥ ನಾರಾಯಣ