ಬೆಂಗಳೂರು, (ಸೆಪ್ಟೆಂಬರ್ 04): ಪ್ರಜ್ವಲ್ ರೇವಣ್ಣ (Prajwal Revanna) ಅವರ ಸಂಸದ ಸ್ಥಾನ ಅಸಿಂಧುಗೊಳಿಸಿದ ಬೆನ್ನಲ್ಲೇ ಇದೀಗ ಶಾಸಕರಾಗಿ ಹೆಚ್.ಡಿ.ರೇವಣ್ಣ (HD Revanna) ಆಯ್ಕೆ ಅಸಿಂಧು ಕೋರಿ ಅರ್ಜಿ ವಿಚಾರಣೆಗೆ ಬಂದಿದ್ದು, ಶಾಸಕ ಹೆಚ್.ಡಿ.ರೇವಣ್ಣ ಸೇರಿದಂತೆ ಎಲ್ಲಾ ಅಭ್ಯರ್ಥಿಗಳಿಗೂ ಕರ್ನಾಟಕ ಹೈಕೋರ್ಟ್ (Karnataka High Court) ಸಮನ್ಸ್ ಜಾರಿಗೆ ಆದೇಶಿಸಿದೆ. ಪರಾಜಿತ ಬಿಜೆಪಿ(BJP) ಅಭ್ಯರ್ಥಿ ದೇವರಾಜೇಗೌಡ ಸಲ್ಲಿಸಿದ್ದ ಚುನಾವಣಾ ತಕರಾರು ಅರ್ಜಿಯನ್ನು ಇಂದು(ಸೆಪ್ಟೆಂಬರ್ 04) ವಿಚಾರಣೆ ನಡೆಸಿದ ಹೈಕೋರ್ಟ್ ಏಕಸದಸ್ಯ ಪೀಠ, ಶಾಸಕ ಹೆಚ್.ಡಿ.ರೇವಣ್ಣ ಸೇರಿದಂತೆ ಅವರ ವಿರುದ್ಧ ಸ್ಪರ್ಧಿಸಿದ್ದ ಎಲ್ಲಾ ಅಭ್ಯರ್ಥಿಗಳಿಗೆ ಸಮನ್ಸ್ ಜಾರಿ ಮಾಡುವಂತೆ ಆದೇಶ ಹೊರಡಿಸಿದೆ. ವಿಧಾನಸಭೆ ಕಾರ್ಯದರ್ಶಿ ಮೂಲಕ ಸಮನ್ಸ್ ಜಾರಿಗೆ ಕೋರ್ಟ್ ಆದೇಶ ಮಾಡಿದೆ.
ಇದೇ ಚುನಾವಣಾ ತಕರಾರು ಅರ್ಜಿ ಸಂಬಂಧ ಶಾಸಕ ಹೆಚ್. ಡಿ.ರೇವಣ್ಣ ವಿರುದ್ಧ ಪರಾಜಿತ ಬಿಜೆಪಿ ಅಭ್ಯರ್ಥಿ ದೇವರಾಜೇಗೌಡ ಸಲ್ಲಿಸಿದ್ದ ಅರ್ಜಿ ವಿಚಾರವಾಗಿ ಹೈಕೋರ್ಟ್ ಏಕಸದಸ್ಯ ಪೀಠದಿಂದ ನೋಟಿಸ್ ಜಾರಿ ಮಾಡಿತ್ತು. ಇದೀಗ ಸಮನ್ಸ್ ಜಾರಿಗೆ ಆದೇಶಿಸಿದೆ.
ಚುನಾವಣಾ ಅಕ್ರಮಗಳಿಂದ ಹೆಚ್.ಡಿ. ರೇವಣ್ಣ ಜಯಗಳಿಸಿದ್ದಾರೆ. 2ನೇ ಸ್ಥಾನದಲ್ಲಿದ್ದ ಶ್ರೇಯಸ್ ಪಟೇಲ್ ಮತದಾರರಿಗೆ ಆಮಿಷ ಒಡ್ಡಿದ್ದಾರೆ. ಹೀಗಾಗಿ ಇವರಿಬ್ಬರ ಮತಗಳಿಕೆಯನ್ನು ಅಸಿಂಧುಗೊಳಿಸುವಂತೆ ಬಿಜೆಪಿ ಪರಾಜಿತ ಅಭ್ಯರ್ಥಿ ದೇವರಾಜೇಗೌಡ ಅವರು ಕೋರ್ಟ್ಗೆ ಸಲ್ಲಿಸಿದ್ದ ಅರ್ಜಿಯಲ್ಲಿ ಮನವಿ ಮಾಡಿದ್ದರು.
ನಿಮ್ಮ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ