ಕರ್ನಾಟಕದಲ್ಲಿ ಕಾಂಗ್ರೆಸ್ ನಿರೀಕ್ಷೆಗೂ ಮೀರಿದ ಬಹುಮತ ಪಡೆಯುವ ಮೂಲಕ ಗೆದ್ದು ಬೀಗಿ, ಅಧಿಕಾರದ ಗದ್ದುಗೆಯನ್ನು ಏರಿ ಸಂಪೂರ್ಣ ಸಚಿವ ಸಂಪುಟ ರಚನೆಯಾಗಿದೆ. ಸರ್ಕಾರ ರಚನೆಯಾಗಿ ಈಗ ಎರಡು ತಿಂಗಳು ಕಳೆದಿದ್ದು ಆಗಲೆ ಶಾಸಕರಲ್ಲಿ ಮತ್ತು ಕಾರ್ಯಕರ್ತರಲ್ಲಿ ಅಸಮಾಧಾನ ಮೂಡಿದೆ. ಸಚಿವರು ಸರಿಯಾಗಿ ಸ್ಪಂದಿಸುತ್ತಿಲ್ಲವೆಂದು ಶಾಸಕರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆಯುವ ಮೂಲಕ ಅಸಮಾಧಾನ ಹೊರ ಹಾಕಿದ್ದರು. ಇದನ್ನು ಶಮನ ಮಾಡಲು ಸಿಎಂ ಮತ್ತು ಡಿಸಿಎಂ ಇಂದು ಜಿಲ್ಲಾವಾರು ಶಾಸಕರ ಮತ್ತು ಸಚಿವರ ಸಭೆ ಕರೆದಿದ್ದಾರೆ. ಇನ್ನು ವಿಧಾನಪರಿಷತ್ ನಾಮನಿರ್ದೇಶನ ಪ್ರಕ್ರಿಯೆ ಕ್ಲೈಮ್ಯಾಕ್ಸ್ ಹಂತ ತಲುಪಿದ್ದು, ಪಕ್ಷದ ನಿಷ್ಠಾವಂತ ಕಾರ್ಯಕರ್ತರಿಗೆ ಅವಕಾಶ ಸಿಗುತ್ತಿಲ್ಲವೆಂದು ಕಾರ್ಯಕರ್ತರು ಅಸಮಾಧಾನಗೊಂಡಿದ್ದಾರೆ. ಇನ್ನು ಬಿಜೆಪಿ ಪಾಳಯದಲ್ಲಿ ವಿಪಕ್ಷ ನಾಯಕ ಮತ್ತು ರಾಜ್ಯಾಧ್ಯಕ್ಷನ ಆಯ್ಕೆ ಕಂಗ್ಗಂಟಾಗಿದೆ. ಇದರೊಂದಿಗೆ ಇಂದಿನ ಲೇಟೆಸ್ಟ್ ಅಪ್ಡೇಟ್ಸ್ ಇಲ್ಲಿದೆ.
ಸಚಿವ ಚಲುವರಾಯಸ್ವಾಮಿ ವಿರುದ್ಧ ರಾಜ್ಯಪಾಲರಿಗೆ ದೂರು ನೀಡಿದ ವಿಚಾರವಾಗಿ ಟ್ವೀಟ್ ಮೂಲಕ ಬಿಜೆಪಿ ಮತ್ತು ಹೆಚ್‌ಡಿ ಕುಮಾರಸ್ವಾಮಿ ಅವರಿಗೆ ತಿರುಗೇಟು ನೀಡಿದ ಸಿಎಂ ಸಿದ್ದರಾಮಯ್ಯ, ಮಂಡ್ಯ ಜಿಲ್ಲೆಯ ಅಧಿಕಾರಿಗಳು ದೂರು ನೀಡಿದ್ದಾರೆ ಎಂಬರ್ಥದಲ್ಲಿ ಬರೆದಿರುವ ಪತ್ರ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಇದು ನಕಲಿ ಎಂದು ಬಯಲಾಗಿದೆ. ಅಂತಹ ಅಧಿಕಾರಿಗಳು ಯಾರೂ ಜಿಲ್ಲೆಯಲ್ಲಿ ಇಲ್ಲ ಎಂದು ಮಂಡ್ಯ ಜಿಲ್ಲೆಯ ಕೃಷಿ ಇಲಾಖೆಯ ಜಂಟಿ ನಿರ್ದೇಶಕರು ಸ್ಪಷ್ಟಪಡಿಸಿದ್ದಾರೆ. ಆದರೂ ಈ ಬಗ್ಗೆ ಪರಿಶೀಲನೆ ನಡೆಸಿ ಅಗತ್ಯವಿದ್ದರೆ ತನಿಖೆ ನಡೆಸಲಾಗುವುದು. ಬಿಜೆಪಿ ನಾಯಕರೇ ಇಂತಹ ನಕಲಿ ಪತ್ರವನ್ನಿಟ್ಟುಕೊಂಡು ಸರ್ಕಾರದ ಬಗ್ಗೆ ಅಪಪ್ರಚಾರ ಮಾಡುತ್ತಿರುವ ನೀವೇ ಇದರ ಸೃಷ್ಟಿಕರ್ತರೋ? ಅಥವಾ ನಿಮ್ಮ ‘ಬ್ರದರ್ರೋ’? (ಕುಮಾರಸ್ವಾಮಿ) ಎಂದು ಪ್ರಶ್ನಿಸಿದರು.
ಲೋಕಸಭೆ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿದ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಅವರು ನಾಳೆ ಮತ್ತೆ ಆರು ಜಿಲ್ಲೆಗಳ ಶಾಸಕರೊಂದಿಗೆ ಸಭೆ ನಡೆಸಲಿದ್ದಾರೆ. ರಾಯಚೂರು, ವಿಜಯಪುರ, ಕೊಪ್ಪಳ ಜಿಲ್ಲೆಗಳ ಶಾಸಕರು, ಉಸ್ತುವಾರಿ ಸಚಿವರೊಂದಿಗೆ ಸಭೆ ನಡೆಸಲಿದ್ದಾರೆ. ಸಂಜೆ ಬೆಳಗಾವಿ, ಹಾವೇರಿ, ಕಲಬುರಗಿ ಜಿಲ್ಲೆಗಳ ಶಾಸಕರು, ಜಿಲ್ಲಾ ಉಸ್ತುವಾರಿ ಸಚಿವರ ಜತೆ ಸಭೆ ನಡೆಸಲಿದ್ದಾರೆ/ ನಾಳೆ ಸಂಜೆ 7 ಗಂಟೆಯಿಂದ ಸಂಸದರು, ರಾಜ್ಯಸಭಾ ಸದಸ್ಯರು, ವಿಧಾನಸಭಾ ಸದಸ್ಯರು, ಪರಿಷತ್ ಸದಸ್ಯರ ಜತೆ ವಿಡಿಯೋ ಸಂವಾದ ನಡೆಸಲಿದ್ದಾರೆ.
ಹಾಸನ: ಚಾಲಕನ ನಿಯಂತ್ರಣ ತಪ್ಪಿ ಇನ್ನೋವಾ ಕಾರು ರಸ್ತೆ ಬದಿಗೆ ಪಲ್ಟಿಯಾದ ಘಟನೆ ಬೇಲೂರು ತಾಲ್ಲೂಕಿನ ಹಾರೋಹಳ್ಳಿ ಕ್ರಾಸ್ ಬಳಿ ನಡೆದಿದೆ. ಘಟನೆಯಲ್ಲಿ ಕಾರನಲ್ಲಿದ್ದ ಒಬ್ಬನ ಕೈ ದೇಹದಿಂದ ಬೇರ್ಪಟ್ಟು ದೂರದಲ್ಲಿ ಬಿದ್ದಿದೆ. ಮತ್ತೊಬ್ಬನ ಸ್ಥಿತಿ ಗಂಭೀರ ಹಾಗೂ ಮೂವರಿಗೆ ಗಾಯಗಳಾಗಿವೆ. ಚಿಕ್ಕಮಗಳೂರು ಜಿಲ್ಲೆಗೆ ಪ್ರವಾಸ ಬಂದು ವಾಪಸ್ ಮರಳುತ್ತಿದ್ದಾಗ ದುರ್ಘಟನೆ ಸಂಭವಿಸಿದೆ. ಗಾಯಾಳುಗಳನ್ನು ಹಾಸನದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಲೋಕಸಭೆ ಚುನಾವಣೆ ಬಗ್ಗೆ ಚರ್ಚಿಸಲು ದೆಹಲಿಗೆ ಆಗಮಿಸಿದ್ದೇವೆ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ನಮ್ಮ ಸಂಸದರು ಮನವಿ ಮಾಡಿದ್ದ ಹಿನ್ನೆಲೆ ಚರ್ಚಿಸಲು ಬಂದಿದ್ದೇನೆ. ಹೈಕಮಾಂಡ್ ನಾಯಕರನ್ನು ಭೇಟಿ ಮಾಡುವ ಪ್ರಯತ್ನ ಮಾಡಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿಗೂ ಪ್ರಯತ್ನ ಮಾಡುತ್ತೇನೆ ಎಂದರು,
ದಾವಣಗೆರೆ: ಸತತ ಎರಡನೇ ಸಲ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆ ಮುಂದೂಡಿಕೆಯಾಗಿರುವ ಹಿನ್ನೆಲೆ ವಿಜಯ ನಗರದ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ತೊಗರಿಕಟ್ಟೆ ಗ್ರಾಮ ಪಂಚಾಯತ್ ಸದಸ್ಯರು ಆಕ್ರೋಶಗೊಂಡಿದ್ದು, ಅಹೋರಾತ್ರಿ ಧರಣಿ ಸತ್ಯಾಗ್ರಹಕ್ಕೆ ನಿರ್ಧಾರ ಮಾಡಿದ್ದಾರೆ. ಆಗಸ್ಟ್ 2 ರಂದು ನಡೆಯಬೇಕಿದ್ದ ಚುನಾವಣೆ ಇಂದಿಗೆ ಮುಂದೂಡಿಕೆಯಾಗಿತ್ತು. ಆದರೆ ಇಂದು ಸದಸ್ಯರು ಸಕಾಲಕ್ಕೆ ಆಗಮಿಸಿದ್ದರೂ ಸಿಬ್ಬಂದಿ ಚುನಾವಣೆ ನಡೆಸಿಲ್ಲ. ಇದರಿಂದ ಆಕ್ರೋಶಗೊಂಡ ಸದಸ್ಯರು ಅಧಿಕಾರಿಗಳೊಂದಿಗೆ ಮಾತಿಗೆ ಇಳಿದಿದ್ದಾರೆ. 11 ಮಂದಿ ಬಿಜೆಪಿ ಬೆಂಬಲಿತ ಸದಸ್ಯರಿದ್ದು ಉದ್ದೇಶ ಪೂರ್ವಕವಾಗಿ ಚುನಾವಣೆ ನಡೆಸುತ್ತಿಲ್ಲ ಎಂದು ಆರೋಪಿಸಿ ಅಹೋ ರಾತ್ರಿ ಹೋರಾಟ ನಡೆಸಲು ಸದಸ್ಯರು ನಿರ್ಧರಿಸಿದ್ದಾರೆ. ಹೀಗಾಗಿ ಪಂಚಾಯತ್ ಸುತ್ತ ಪೊಲೀಸ್ ಭದ್ರತೆ ನಿಯೋಜಿಸಲಾಗಿದೆ.
ಸಿಎಂ,ಡಿಸಿಎಂ ಜೊತೆಗಿನ ಬಾಗಲಕೋಟೆ ಶಾಸಕರ ಸಭೆ ಅಂತ್ಯಗೊಂಡಿದೆ. ಆಲಮಟ್ಟಿ ಜಲಾಶಯಕ್ಕೆ ಬಾಗಿನ ಅರ್ಪಿಸಲು ಸಭೆಯಲ್ಲಿ ಸಿಎಂ, ಡಿಸಿಎಂಗೆ ಆಹ್ವಾನ ನೀಡಲಾಯಿತು. ಗೃಹಲಕ್ಷ್ಮಿ ಗ್ಯಾರಂಟಿ ಅನುಷ್ಠಾನದ ಬಳಿಕ ಬಾಗಿನ ಅರ್ಪಿಸುವ ಕಾರ್ಯಕ್ರಮ ಮಾಡುವಂತೆ ಸಿದ್ದರಾಮಯ್ಯ ಅವರು ಸೂಚನೆ ನೀಡಿದ್ದಾರೆ. ಹೀಗಾಗಿ ಆಗಸ್ಟ್ 20 ರ ಬಳಿಕ ಆಲಮಟ್ಟಿ ಜಲಾಶಯಕ್ಕೆ ಬಾಗಿನ ಅರ್ಪಿಸುವ ಕಾರ್ಯಕ್ರಮ ನಿಗದಿಯಾಗಿದೆ.
ಮಂಡ್ಯ: ನೀರಾವರಿ ಸಲಹಾ ಸಮಿತಿ ಸಭೆ ನಂತರ ಮಾತನಾಡಿದ ಕೃಷಿ ಸಚಿವ ಎನ್ ಚಲುವರಾಯಸ್ವಾಮಿ, ಹೊಸ ಸರ್ಕಾರ ರಚನೆಯಾದ ಮೇಲೆ ಹೊಸ ಕಮಿಟಿ ಮಾಡಿ ಸಿಎಂ ಆದೇಶ ಮಾಡಿದ್ದಾರೆ. ಮೈಸೂರು, ಮಂಡ್ಯದ ನಾಲೆಗಳ ಬಗ್ಗೆ ಚರ್ಚೆ ಮಾಡುವ ಅನಿವಾರ್ಯ ಇತ್ತು. ಎಲ್ಲ ಜನಪ್ರತಿನಿಧಿಗಳ ಸಭೆ ಮಾಡಿದ್ದೇವೆ. ಹಲವು ವಿಚಾರ ಚರ್ಚೆ ಮಾಡಿದ್ದೇವೆ. ಅನೇಕ ಮಸ್ಯೆಗಳು ಇವೆ. ಈ ಬಗ್ಗೆ ಸಿಎಂ ಹಾಗೂ ನೀರಾವರಿ ಸಚಿವರ ಗಮನಕ್ಕೆ ತರುತ್ತೇವೆ. ನಾಲೆಗಳ ದುರಸ್ತಿ ಬಗ್ಗೆ ಕೂಡ ಶಾಸಕರು ಕೂಡ ಸಲಹೆ ಕೊಟ್ಟಿದ್ದಾರೆ. ಈ ಬಗ್ಗೆ ಸಿಎಂ ಜೊತೆ ಚರ್ಚೆ ಮಾಡುತ್ತೇವೆ. ಸಂಪೂರ್ಣ ವರದಿ ಕೊಡುತ್ತೇವೆ. ಸದ್ಯ ಕೆ ಆರ್ ಎಸ್ ನಲ್ಲಿ 113 ಅಡಿ ನೀರಿದೆ. ಈ ಹಿಂದೆ ಅನೇಕ ಸಮಸ್ಯೆ ಎದುರಿಸಿದ್ದೇವೆ. ಕೆರೆಗಳಿಗೆ ನೀರು ತುಂಬಿಸುವುದು ಅನಿವಾರ್ಯ. ಕುಡಿಯುವ ನೀರಿಗಾಗಿ ನಾಳೆ ಒಳಗೆ ತೀರ್ಮಾನ ಮಾಡುತ್ತೇವೆ ಎಂದರು.
ಹೃದಯಾಘಾತದಿಂದ ವಿಜಯ್ ರಾಘವೇಂದ್ರ ಪತ್ನಿ ಸ್ಪಂದನಾ ನಿಧನ ಹಿನ್ನೆಲೆ ನಟ ಶಿವರಾಜ್ ಕುಮಾರ್ ಅವರು ಹೈದರಾಬಾದ್ನಿಂದ ಬೆಂಗಳೂರಿಗೆ ಆಗಮಿಸುತ್ತಿದ್ದಾರೆ. 4-5 ದಿನದ ಹಿಂದೆ ಶೂಟಿಂಗ್ ಶುರುವಾಗಿದ್ದ ಹಿನ್ನೆಲೆ ಶಿವರಾಜ್ ಕುಮಾರ್ ಅವರು ಹೈದರಾಬಾದ್ಗೆ ತೆರಳಿದ್ದರು.
ರಾತ್ರಿ ಮಲಗಿದ್ದ ಸ್ಪಂದನಾ ಮತ್ತೆ ಏಳಲೇ ಇಲ್ಲ ಅಂತಾ ಮಾಹಿತಿ ಸಿಕ್ಕಿದೆ. ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ. ಮರಣೋತ್ತರ ಪರೀಕ್ಷೆ ವರದಿ ಬಳಿಕ ಎಲ್ಲವೂ ಗೊತ್ತಾಗಲಿದೆ. ಯಾವುದೇ ರೀತಿಯ ಊಹಾಪೋಹಗಳನ್ನು ಹಬ್ಬಿಸಬೇಡಿ. ನಾಳೆ ಬೆಂಗಳೂರಿಗೆ ಸ್ಪಂದನಾ ಪಾರ್ಥಿವ ಶರೀರ ಬರಬಹುದು ಎಂದು ಬೆಂಗಳೂರಿನಲ್ಲಿ ಸ್ಪಂದನಾ ಚಿಕ್ಕಪ್ಪ ಬಿ.ಕೆ.ಹರಿಪ್ರಸಾದ್ ಹೇಳಿದ್ದಾರೆ.
ಥೈಲ್ಯಾಂಡ್ನಲ್ಲಿ ಸ್ಪಂದನಾ ಮರಣೋತ್ತರ ಪರೀಕ್ಷೆ ಮುಗಿದಿದೆ. ನಾಳೆ ರಾತ್ರಿ ಬೆಂಗಳೂರಿಗೆ ಸ್ಪಂದನಾ ಮೃತದೇಹ ತಲುಪಲಿದೆ ಎಂದು ಬೆಂಗಳೂರಿನಲ್ಲಿ ಸ್ಪಂದನಾ ಚಿಕ್ಕಪ್ಪನೂ ಆಗಿರುವ ಕಾಂಗ್ರೆಸ್ ಎಂಎಲ್ಸಿ ಬಿ.ಕೆ.ಹರಿಪ್ರಸಾದ್ ಹೇಳಿದ್ದಾರೆ. ಬುಧವಾರ ಸ್ಪಂದನಾ ಅಂತ್ಯ ಸಂಸ್ಕಾರ ನೆರವೇರಲಿದೆ. ಅಂತ್ಯಕ್ರಿಯೆ ಸ್ಥಳ ಬಗ್ಗೆ ವಿಜಯ್ರಾಘವೇಂದ್ರ ತೀರ್ಮಾನವೇ ಅಂತಿಮ ಎಂದರು.
ಧಾರವಾಡ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ವಿರುದ್ಧ ದಾಖಲಾಗಿದ್ದ ಎಫ್ಐಆರ್ ರದ್ದುಗೊಳಿಸಿ ಹೈಕೋರ್ಟ್ನ ಧಾರವಾಡ ಪೀಠ ಮಹತ್ವದ ತೀರ್ಪು ನೀಡಿದೆ. ಮತದಾರರಿಗೆ ಆಮಿಷವೊಡ್ಡಿದ ಆರೋಪದಡಿ ಮೇ 11 ರಂದು ವಿಜಯನಗರ ಜಿಲ್ಲೆಯ ಹರಪನಹಳ್ಳಿಯಲ್ಲಿ ಎಫ್ಐಆರ್ ದಾಖಲಾಗಿತ್ತು. ಮೇ 7 ರಂದು ನಡೆದಿದ್ದ ಬಹಿರಂಗ ಸಭೆಯಲ್ಲಿ ನಡ್ಡಾ ಅವರು ಭಾಷಣ ಮಾಡಿದ್ದರು. ಟಿವಿಗಳಲ್ಲಿ ಬಂದ ಸುದ್ದಿ ಆಧಾರದಲ್ಲಿ ಪೊಲೀಸರು ಸ್ವಯಂ ಪ್ರೇರಿತರಾಗಿ ಎಫ್ಐಆರ್ ದಾಖಲಿಸಿದ್ದರು.
ಮೈಸೂರು ಅರಮನೆಯ ಹೊರಾಂಗಣದಲ್ಲಿ ಡೋನ್ ಕ್ಯಾಮೆರಾ ಬಳಕೆಗೆ ನಿರ್ಬಂಧ ವಿಧಿಸಿ ಅರಮನೆ ಆಡಳಿಯ ಮಂಡಳಿಯಿಂದ ಆದೇಶ ಹೊರಡಿಸಲಾಗಿದೆ. ಈ ಬಗ್ಗೆ ಪತ್ರಿಕಾ ಪ್ರಕಟಣೆ ನೀಡಿದ ಮಂಡಳಿ ಉಪ ನಿರ್ದೇಶಕ ಟಿ ಎಸ್ ಸುಬ್ರಮಣ್ಯ, ಅರಮನೆಯು ಸುತ್ತಮುತ್ತ ಪ್ರದೇಶ ಹಳದಿ ವಲಯ (Yellow Zone) ಎಂದು ಘೋಷಣೆ ಮಾಡಲಾಗಿದೆ. ಈ ಪ್ರದೇಶದಲ್ಲಿ ಡೋನ್ ಕ್ಯಾಮರಾವನ್ನು ಬಳಸಲು ಮೈಸೂರು ಅರಮನೆ ಮಂಡಳಿಯಿಂದ ಪೂರ್ವಾನುಮತಿ ಅವಶ್ಯಕವಾಗಿದೆ. ಡ್ರೋನ್ ಕ್ಯಾಮೆರಾ ಬಳಸಲು ಅನುಮತಿ ಪಡೆಯದೆ ಡ್ರೋನ್ ಹಾರಿಸಿದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದರು.
ಸಹಾಯಕ ಕೃಷಿ ನಿರ್ದೇಶಕರಿಂದ ರಾಜ್ಯಪಾಲರಿಗೆ ದೂರು ವಿಚಾರವಾಗಿ ಮಂಡ್ಯ ಕೃಷಿ ಇಲಾಖೆಗೆ ಎಎಸ್ಪಿ ತಿಮ್ಮಯ್ಯ ಭೇಟಿನೀಡಿ ಪರಿಶೀಲನೆ ನಡೆಸಿದ್ದಾರೆ. ಜಂಟಿ ಕೃಷಿ ನಿರ್ದೇಶಕರ ಕಚೇರಿ, ಸಹಾಯಕ ನಿರ್ದೇಶಕರ ಕಚೇರಿಗೆ ಭೇಟಿ ನೀಡಿ ಜಂಟಿ ಕೃಷಿ ನಿರ್ದೇಶಕ ಅಶೋಕ್ರಿಂದ ಪ್ರಾಥಮಿಕ ಮಾಹಿತಿ ಸಂಗ್ರಹಿಸಿದ್ದಾರೆ. ಸಹಾಯಕ ಕೃಷಿ ನಿರ್ದೇಶಕರ ಕಚೇರಿಯಲ್ಲೂ ಮಾಹಿತಿ ಪಡೆದು ಪರಿಶೀಲನೆ ನಡೆಸಿದ್ದಾರೆ.
ತುಮಕೂರು ಜಿಲ್ಲೆಯ ಶಾಸಕರು, ಸಚಿವರ ಜೊತೆ ಸಿಎಂ, ಡಿಸಿಎಂ ಸಭೆ ನಡೆಸಿದ ನಂತರ ಮಾತನಾಡಿದ ಕುಣಿಗಲ್ ಕ್ಷೇತ್ರದ ಶಾಸಕ ಡಾ.ರಂಗನಾಥ್, ತಾಲೂಕುಗಳ ಸಮಸ್ಯೆ, ಅನುದಾನ, ಚುನಾವಣೆ ಬಗ್ಗೆ ಚರ್ಚಿಸಿದ್ದೇವೆ. ಸಿಎಂ, ಡಿಸಿಎಂ ಸಭೆಯಿಂದ ಶಾಸಕರು ಸಮಾಧಾನಗೊಂಡಿದ್ದಾರೆ. ಸಚಿವರಿಗೆ ನಮ್ಮ ವರಿಷ್ಠರು, ಸಿಎಂ, ಡಿಸಿಎಂ ಸಂದೇಶ ಕೊಟ್ಟಿದ್ದಾರೆ. ಶಾಸಕರ ಸಮಸ್ಯೆಗಳನ್ನು ಬಗೆಹರಿಸುವುದಾಗಿ ಭರವಸೆ ಕೊಟ್ಟಿದ್ದಾರೆ. ಸಭೆಯಲ್ಲಿ ಯಾವುದೇ ಗೊಂದಲ ಆಗಲಿಲ್ಲ ಎಂದರು.
ಕೃಷಿ ಸಚಿವರ ವಿರುದ್ಧ ಅಧಿಕಾರಿಗಳು ರಾಜ್ಯಪಾಲರಿಗೆ ಪತ್ರ ಬರೆದ ವಿಚಾರವಾಗಿ ರಾಯಚೂರಿನಲ್ಲಿ ಮಾತನಾಡಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಬೇರೆ ಯಾವುದೋ ಉದ್ದೇಶಕ್ಕೆ ರಾಜಕಾರಣ ಮಾಡಲು ಹೊರಟಿದ್ದಾರೆ. ಈ ಬಗ್ಗೆ ಸ್ಪಷ್ಟ ಮಾಹಿತಿ, ಉತ್ತರವನ್ನು ಸದನದಲ್ಲಿ ಸಚಿವರು ನೀಡಿದ್ದಾರೆ. ಒಂದು ವೇಳೆ ವಿಶೇಷ ಮಾಹಿತಿ ಇದ್ದರೆ ಪೊಲೀಸರು ತನಿಖೆ ಮಾಡುತ್ತಾರೆ ಎಂದರು.
ಮಂಡ್ಯ: ಶ್ರೀರಂಗ ಪಟ್ಟಣ ತಾಲೂಕಿನ ಕೆಆರ್ಎಸ್ನ ಕಾವೇರಿ ಸಭಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ನೀರಾವರಿ ಸಲಹಾ ಸಮಿತಿ ಸಭೆ ನಡೆಸುತ್ತಿದ್ದಾರೆ. KRS ಡ್ಯಾಮ್ನಿಂದ ನಾಲೆಗಳಿಗೆ ನೀರು ಬಿಡುವ ವಿಚಾರವಾಗಿ ಚರ್ಚೆ ನಡೆಸಲಾಗುತ್ತಿದೆ. ಶಾಸಕರಾದ ನರೇಂದ್ರಸ್ವಾಮಿ, ರಮೇಶ್ ಬಾಬು, ರವಿಕುಮಾರ್, ಕದಲೂರು ಉದಯ್, ಎಂಎಲ್ಸಿಗಳಾದ ಮಧುಮಾದೇಗೌಡ, ದಿನೇಶ್ ಗೂಳಿಗೌಡ ಸೇರಿದಂತೆ ಹಲವು ಅಧಿಕಾರಿಗಳು ಸಭೆಯಲ್ಲಿ ಭಾಗಿಯಾಗಿದ್ದಾರೆ.
ರಾಯಚೂರು: ನಟ ವಿಜಯ ರಾಘವೇಂದ್ರ ಪತ್ನಿ ಸ್ಪಂದನಾ ನಿಧನ ಬಗ್ಗೆ ಈಗಾಗಲೇ ಮಾಹಿತಿ ಬಂದಿದೆ. ಬಹಳ ಆಶ್ಚರ್ಯ ಆಯ್ತು. ವಿಜಯ ರಾಘವೇಂದ್ರ ಪತ್ನಿ ಅವರಿಗೆ ಬಹಳ ಚಿಕ್ಕ ವಯಸ್ಸು. ವಿಜಯ್ ರಾಘವೇಂದ್ರ ಅವರ ಪರಿಚಯವಿದೆ. ಸ್ಪಂದನಾ ಅವರ ತಂದೆ ಶಿವರಾಂ ನಮ್ಮ ಪಕ್ಷದ ಮುಖಂಡರು. ಹರಿಪ್ರಸಾದ್ ಅವರ ಸಹೋದರ.
ಇದು ದುಃಖಕರ ಘಟನೆ. ಈ ಚಿಕ್ಕವಯಸ್ಸಿನಲ್ಲಿ ಹೃದಯಾಘಾತದಿಂದ ತೀರಿಕೊಳ್ಳುವಂತದ್ದು ಆಶ್ಚರ್ಯ ಆಗಿದೆ. ಕುಟುಂಬಕ್ಕೆ ಸಾಂತ್ವನ ಹೇಳುತ್ತೇನೆ. ಅವರ ಸಹೋದರ ರಕ್ಷಿತ್ ನಮ್ಮ ಪಾರ್ಟಿ ಒಳ್ಳೆ ಯುವನಾಯಕ. ಅವರಿಗೆ ಯಾವ ರೀತಿ ಸಾಂತ್ವನ ಹೇಳಬೇಕು ಗೊತ್ತಿಲ್ಲ. ಭಗವಂತ ಅವರಿಗೆ ದುಃಖ ಬರಿಸುವ ಶಕ್ತಿ ನೀಡಲಿ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ಶಿವಮೊಗ್ಗ: ಮುಖ್ಯಮಂತ್ರಿಗಳು ಕೃಷಿ ಸಚಿವರನ್ನು ಸಂಪುಟದಿಂದ ಕೈಬಿಡಬೇಕು. ಹಣ ಲೂಟಿ ಮಾಡಿರುವವರ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳಬೇಕು. ಸರ್ಕಾರ ಬಂದು 3 ತಿಂಗಳು ಆಗಿಲ್ಲ, ರೈತರಿಗೆ ತೊಂದರೆ ಕೊಡುತ್ತಿದ್ದಾರೆ. ರೈತರಿಗೆ ಬಿಎಸ್ ಯಡಿಯೂರಪ್ಪನವರು ಕೊಟ್ಟ ಹಣ ವಾಪಸ್ ಪಡೆಯುತ್ತಿದ್ದಾರೆ. ಗ್ಯಾರಂಟಿ ಯೋಜನೆಗೆ ಬಜೆಟ್ನಲ್ಲಿಟ್ಟ ಬೇರೆ ಹಣ ಬಳಸುತ್ತಿದ್ದಾರೆ. ರೈತರ ದ್ರೋಹಿ ಯಾರಾದರೂ ಇದ್ದರೆ ಅದು ಸಿಎಂ ಸಿದ್ದರಾಮಯ್ಯ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ವಾಗ್ದಾಳಿ ಮಾಡಿದರು.
ಬೆಂಗಳೂರು: ಹೃದಯಾಘಾತದಿಂದ ನಟ ವಿಜಯ್ ರಾಘವೇಂದ್ರ ಪತ್ನಿ ಸ್ಪಂದನಾ ನಿಧನರಾಗಿದ್ದು, ಸ್ಪಂದನಾ ಪಾರ್ಥಿವ ಶರೀರ ನಾಳೆ (ಆ.08) ಮಧ್ಯಾಹ್ನ 12 ಗಂಟೆಗೆ ಬೆಂಗಳೂರಿಗೆ ಬರಲಿದೆ. ಈ ಬಗ್ಗೆ ವಿಜಯ್ ರಾಘವೇಂದ್ರ ಅವರಿಗೆ ಥೈಲ್ಯಾಂಡ್ ರಾಯಭಾರಿ ಮಾಹಿತಿ ನೀಡಿದ್ದಾರೆ.
ಮೈಸೂರು: ನಟ ವಿಜಯರಾಘವೇಂದ್ರ ಪತ್ನಿ ನಿಧನ ಆಘಾತವನ್ನುಂಟು ಮಾಡಿದೆ. ಸಾವಿನ ದುಖ ಭರಿಸುವ ಶಕ್ತಿಯನ್ನ ಕುಟುಂಬಕ್ಕೆ ದೇವರು ನೀಡಲಿ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ ಮಹದೇವಪ್ಪ ಸಂತಾಪ ಸೂಚಿಸಿದ್ದಾರೆ.
ಬೆಂಗಳೂರು: ಕನ್ನಡ ಚಿತ್ರರಂಗದ ಖ್ಯಾತ ಕಲಾವಿದ ವಿಜಯ್ ರಾಘವೇಂದ್ರ ಅವರ ಪತ್ನಿ ಸ್ಪಂದನಾ ಅವರು ಅಕಾಲಿಕ ನಿಧನ ಹೊಂದಿದ ಸುದ್ದಿ ತೀವ್ರ ಆಘಾತವನ್ನುಂಟು ಮಾಡಿದೆ. ಅವರ ಆತ್ಮಕ್ಕೆ ಸದ್ಗತಿಯನ್ನು ಪ್ರಾರ್ಥಿಸುತ್ತೇನೆ. ದೇವರು ಅವರ ಕುಟುಂಬ ಹಾಗೂ ಆಪ್ತೇಷ್ಟರಿಗೆ ಈ ನೋವನ್ನು ಭರಿಸುವ ಶಕ್ತಿಯನ್ನು ನೀಡಲಿ ಎಂದು ಕೋರುತ್ತೇನೆ. ಓಂ ಶಾಂತಿ ಎಂದು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಸಂತಾಪ ಸೂಚಿಸಿದರು.
ರಾಯಚೂರು: ಇಂದ್ರಧನುಷ 5.0 ಮಿಷನ್ಗೆ ರಾಯಚೂರಿನಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಚಿವ ದಿನೇಶ್ ಗುಂಡೂರಾವ್ ಚಾಲನೆ ನೀಡಿದರು. ಇಂದ್ರಧನುಷ 5.0 ರಾಜ್ಯಮಟ್ಟದ ಕಾರ್ಯಕ್ರಮವಾಗಿದೆ.
ಬೆಂಗಳೂರು: ಖ್ಯಾತ ನಟ ವಿಜಯರಾಘವೇಂದ್ರ ಪತ್ನಿ ಸ್ಪಂದನಾ ಹೃದಯಾಘಾತದಿಂದ ನಿಧನರಾಗಿದ್ದಾರೆ. ದಂಪತಿ ನಿನ್ನೆ (ಆ.06) ರಾತ್ರಿ ಥೈಲ್ಯಾಂಡ್ಗೆ ತೆರಳಿದ್ದರು. ನಾಳೆ (ಆ.08) ರಂದು ಸ್ಪಂದನಾ ಪಾರ್ಥಿವ ಶರೀರ ಬೆಂಗಳೂರಿಗೆ ಆಗಮಿಸಲಿದೆ.
ಬೆಂಗಳೂರು: ಸಚಿವ ಚಲುವರಾಯಸ್ವಾಮಿ ವಿರುದ್ಧ ಕೃಷಿ ಅಧಿಕಾರಿಗಳು ರಾಜ್ಯಪಾಲರಿಗೆ ದೂರು ನೀಡಿದ್ದು, ಕ್ರಮ ಕೈಗೊಳ್ಳುವಂತೆ ರಾಜ್ಯಪಾಲರು ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಅವರಿಗೆ ಪತ್ರ ಬರೆದಿದ್ದಾರೆ.
ಮಂಡ್ಯ: ಕೃಷಿ ಅಧಿಕಾರಿಗಳಿಂದ ರಾಜ್ಯಪಾಲರಿಗೆ ಪತ್ರ ಬರೆದ ವಿಚಾರ ನನಗೆ ಗೊತ್ತಿಲ್ಲ. ಕೃಷಿ ಜಂಟಿ ನಿರ್ದೇಶಕರ ಜತೆ ಈಗಷ್ಟೇ ಮಾತನಾಡಿದ್ದೇನೆ. ಇದೊಂದು ಫೇಕ್ ಲೆಟರ್ ಎಂಬ ಮಾಹಿತಿ ನೀಡಿದ್ದಾರೆ. ಪಾಪ ಬಹಳ ಹುಡುಕಿ ಹುಡುಕಿ ಏನೇನೋ ಮಾಡುತ್ತಿದ್ದಾರೆ. ಹಾಗೇನಾದರೂ ಆಗಿದ್ದರೇ ತನಿಖೆ ನಡೆಸಲು ಸೂಚಿಸುತ್ತೇನೆ. ನಮ್ಮ ಇಲಾಖೆಯ ಕಾರ್ಯದರ್ಶಿಗಳಿಗೆ ಸೂಚನೆ ನೀಡುವೆ ಎಂದು ಕೃಷಿ ಇಲಾಖೆ ಸಚಿವ ಚಲುವರಾಯಸ್ವಾಮಿ ಹೇಳಿದರು.
ಶಿವಮೊಗ್ಗ: ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದ 27 ವರ್ಷದ ಅಪರಾಧಿಗೆ 20 ವರ್ಷ ಕಠಿಣ ಜೈಲು ಶಿಕ್ಷೆ, 1ಲಕ್ಷದ 50 ಸಾವಿರ ದಂಡ ವಿಧಿಸಿದೆ. ದಂಡದ ಹಣ ಕಟ್ಟಲು ವಿಫಲವಾದರೆ ಹೆಚ್ಚುವರಿ 09 ತಿಂಗಳು ಸಾದಾ ಶಿಕ್ಷೆ ನೀಡುವಂತೆ ಶಿವಮೊಗ್ಗ ಜಿಲ್ಲಾ ನ್ಯಾಯಾಲಯ ತೀರ್ಪು ನೀಡಿದೆ. ಅಪರಾಧಿ ಯುವಕ 2022 ರಲ್ಲಿ 14 ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದನು. ಈ ಸಂಬಂಧ ಬಾಲಕಿಯ ತಂದೆ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ರಾಯಚೂರು: ಇಂದು ರಾಜ್ಯಾದ್ಯಂತ ಇಂದ್ರಧನುಷ 5.0 ಮಿಷನ್ಗೆ ಸಚಿವ ದಿನೇಶ್ ಗುಂಡೂರಾವ್ ಬೆಳಗ್ಗೆ 11 ಗಂಟೆಗೆ ಚಾಲನೆ ನೀಡಲಿದ್ದಾರೆ. ನಗರದ ಎಲ್ಬಿಎಸ್ ನಗರದಲ್ಲಿರುವ ನಮ್ಮ ಕ್ಲಿನಿಕ್ನಲ್ಲಿ ಗರ್ಭಿಣಿಯರು, ಮಕ್ಕಳಿಗೆ ಲಸಿಕೆ ನೀಡುವ ಮೂಲಕ ಚಾಲನೆ ನೀಡಲಿದ್ದಾರೆ. ಬಳಿಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳ ಜೊತೆ ಸಭೆ ನಡೆಸಲಿದ್ದಾರೆ. ಸಂಜೆ ರಾಯಚೂರು ಜಿಲ್ಲಾ ಕಾಂಗ್ರೆಸ್ ಘಟಕಕ್ಕೆ ಭೇಟಿ ನೀಡಿ ಪದಾದಿಕಾರಿಗಳ ಜೊತೆ ಸಭೆ ನಡೆಸಲಿದ್ದಾರೆ.
ಬೆಂಗಳೂರು: ಸಚಿವರ ವಿರುದ್ಧ ಕಾಂಗ್ರೆಸ್ ಶಾಸಕರೇ ಅಸಮಾಧಾನಗೊಂಡಿದ್ದು ಇದನ್ನು ಶಮನಗೊಳಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಇಂದು (ಆ.07) 6 ಜಿಲ್ಲೆಗಳ ಸಚಿವರು, ಶಾಸಕರ ಜತೆ ಸಭೆ ನಡೆಸಲಿದ್ದಾರೆ. ಬೆಳಗ್ಗೆ 11 ಗಂಟೆಗೆ ಸಿಎಂ ಗೃಹಕಚೇರಿ ಕೃಷ್ಣಾದಲ್ಲಿ ನಡೆಯುವ ಸಭೆಯಲ್ಲಿ ತುಮಕೂರು, ಯಾದಗಿರಿ, ಚಿತ್ರದುರ್ಗ, ಬಾಗಲಕೋಟೆ, ಧಾರವಾಡ, ಬಳ್ಳಾರಿ ಜಿಲ್ಲೆ ಕಾಂಗ್ರೆಸ್ ಶಾಸಕರು, ಉಸ್ತುವಾರಿ ಸಚಿವರು ಭಾಗಿಯಾಗುವ ನಿರೀಕ್ಷೆ ಇದೆ.
ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ 2023ಕ್ಕೆ ಆನೆಗಳ ಆಯ್ಕೆ ಪ್ರಕ್ರಿಯೆ ಭರದಿಂದ ಸಾಗಿದೆ. ನಾಗರಹೊಳೆ ಬಂಡೀಪುರದ ವಿವಿಧ ಆನೆ ಕ್ಯಾಂಪ್‌ಗಳಿಗೆ ತೆರಳಿ ಅಧಿಕಾರಿಗಳು ಪರಿಶೀಲನೆ ಮಾಡಲಿದ್ದಾರೆ. ಮೈಸೂರು ಡಿಸಿಎಫ್ ಸೌರಭ್ ಕುಮಾರ್ ನೇತೃತ್ವದ ಅಧಿಕಾರಿಗಳು ತೆರಳಿ ಪರಿಶೀಲಿಸಲಿದ್ದಾರೆ.
ಬೆಂಗಳೂರು: ವಿಧಾನಪರಿಷತ್ ಸದಸ್ಯತ್ವ ಸ್ಥಾನ ನಿಷ್ಠಾವಂತ ಕಾರ್ಯಕರ್ತರಿಗೆ ಸಿಗದೇ ಉಳ್ಳವರ ಪಾಲಾಗುತ್ತಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಬೇಸರಗೊಂಡಿದ್ದಾರೆ. ಈ ಹಿನ್ನೆಲೆ ಇಂದು ಪಕ್ಷದ ನಾಯಕರ ನಿಲುವಿನ ವಿರುದ್ಧ ಕಾರ್ಯಕರ್ತರು ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದು, ಕೆಪಿಸಿಸಿ ಕಚೇರಿ ಸಭೆ ನಡೆಸಲಿದ್ದಾರೆ. ಎಂಆರ್ ಸೀತಾರಾಮ್, ಉಮಾಶ್ರೀ ಮತ್ತು ಸುಧಾಮ್ ದಾಸ್ ಅವರಿಗೆ ಪರಿಷತ್ ಸದಸ್ಯ ಸ್ಥಾನ ನೀಡುತ್ತಿರುವುದಕ್ಕೆ ಕಾರ್ಯಕರ್ತರು ವಿರೋಧ ವ್ಯಕ್ತಪಡಿಸಿದ್ದಾರೆ.
ಗೃಹ ಸಚಿವ ಅಮಿತ್ ಶಾ ಆಹ್ವಾನದ ಹಿನ್ನಲೆ ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ದೆಹಲಿಗೆ ತೆರಳಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ವಿಪಕ್ಷ ನಾಯಕ ಆಯ್ಕೆ ವಿಚಾರಕ್ಕೆ ಹೈಕಮಾಂಡ್ ಜತೆ ಚರ್ಚೆ ನಡೆಸಲಿದ್ದಾರೆ.
Published On - 7:56 am, Mon, 7 August 23