ಬೆಂಗಳೂರು: ಕರ್ನಾಟಕದಲ್ಲಿ ಮಳೆ(Karnataka Rain)ರಾಯನ ಆರ್ಭಟ ಇನ್ನೂ ನಿಂತಿಲ್ಲ, ಧೋ ಎಂದು ಸುರಿಯುತ್ತಿರುವ ಮಳೆ ಅಲ್ಲೊಂದು ಇಲ್ಲೊಂದು ಅವಾಂತರಗಳನ್ನೇ ಸೃಷ್ಟಿಸುತ್ತಿದೆ. ಕಷ್ಟಪಟ್ಟು ಜೀವನದ ಬಂಡಿ ಎಳೆಯುತ್ತಿದ್ದ ರೈತನ ಬೆಳೆಗಳೆಲ್ಲಾ ಜಲಪ್ರವಾಹದಲ್ಲಿ ಮುಳುಗುತ್ತಿದೆ. ರೈತರು, ಜನಸಾಮಾನ್ಯರೆಲ್ಲರೂ ಮಳೆಯ ಆರ್ಭಟಕ್ಕೆ ರೋಸಿ ಹೋಗುತ್ತಿದ್ದಾರೆ. ವರುಣನ ಭಾರೀ ಆರ್ಭಟ ಸೆಪ್ಟೆಂಬರ್ 11ರವರೆಗೆ ಮುಂದುವರಿಯಲಿದ್ದು, ಇನ್ನೇನೆಲ್ಲಾ ಸಂಭವಿಸಲಿದೆ ಎಂಬೂದನ್ನು ನೋಡಬೇಕಷ್ಟಿದೆ. ಸರ್ಕಾರ ಕೂಡ ಇನ್ನಷ್ಟು ಎಚ್ಚೆತ್ತುಕೊಂಡು ಸಂಭವಿಸಬಹುದಾದ ಅನಾಹುತಗಳಿಂದ ಜನರನ್ನು ಪಾರುಮಾಡುವಲ್ಲಿ ಕಾರ್ಯಪ್ರವೃತ್ತವಾಗಬೇಕಿದೆ.
ನೋಡನೋಡುತ್ತಲೇ ಕೊಚ್ಚಿ ಹೋದ ಬೈಕ್ ಸವಾರ
ಹಾಸನ ಜಿಲ್ಲೆಯಲ್ಲಿ ಬುಧವಾರ ಭಾರೀ ಮಳೆಯಾಗಿದ್ದು, ಅರಸೀಕೆರೆ ತಾಲ್ಲೂಕಿನಲ್ಲಿ ವರುಣನ ಆರ್ಭಟ ಜೋರಾಗಿಯೇ ಇತ್ತು. ಈ ಮಹಾಮಳೆಗೆ ಬಂದೂರು ಗ್ರಾಮದ ಕೆರೆ ಕೋಡಿ ಬಿದ್ದು ಬೈಕ್ ಸವಾರ ಸಂಕಷ್ಟ ಸಿಲುಕುವಂತಾಯಿತು. ಕೋಡಿ ಬಿದ್ದ ನೀರಿನಲ್ಲಿ ಸಿಲುಕಿದ್ದ ಬೈಕ್ ಸವಾರ ನೋಡ ನೋಡುತ್ತಲೇ ನೀರಿನಲ್ಲಿ ಕೊಚ್ಚಿ ಹೋದ. ಆದರೆ ತನ್ನ ಜೀವವನ್ನು ಉಳಿಸಲು ಯತ್ನಿಸಿದ ಸವಾರ, ನೀರಿನಲ್ಲಿ ಈಜಾಡುತ್ತಲೇ ದಡ ಸೇರಿಕೊಂಡ.
ಇದೆ ಜಿಲ್ಲೆಯಲ್ಲಿ ನಿನ್ನೆ ಸುರಿದ ಮಳೆಗೆ ಬೆಳೆ ನಾಶ ಕೂಡ ಸಂಭವಿಸಿದೆ. ಅರಸೀಕೆರೆ ತಾಲೂಕಿನ ಬಂದೂರು ಗ್ರಾಮದ ಸುತ್ತಮುತ್ತ ನೂರಾರು ಎಕರೆ ಬೆಳೆ ಜಲಾವೃತಗೊಂಡಿದ್ದು, ಮಳೆಯಿಂದ ಶುಂಠಿ, ರಾಗಿ, ಎಲೆಕೋಸು ಬೆಳೆಗಳು ನೀರುಪಾಲಾಗಿವೆ. ಫಲಸಲಿ್ಗೆ ಬಂದಿದ್ದ ಬೆಳೆ ಕಳೆದುಕೊಂಡು ಕಂಗೆಟ್ಟಿರುವ ರೈತರು ಸೂಕ್ತ ಪರಿಹಾರ ನೀಡುವಂತೆ ರೈತರು ಆಗ್ರಹಿಸುತ್ತಿದ್ದಾರೆ.
ನೋಡನೋಡುತ್ತಲೇ ಕುಸಿತು ಬಿತ್ತು ಗರಡಿ ಮನೆ
ಮೈಸೂರು ಜಿಲ್ಲೆಯಲ್ಲೂ ಬುಧವಾರ ವರುಣಾರ್ಭಟ ಹೆಚ್ಚಾಗಿತ್ತು. ಭಾರಿ ಗಾಳಿಯಿಂದ ಕೂಡಿದ ಮಳೆಗೆ ಗರಡಿ ಮನೆಯೊಂದು ಕುಸಿದುಬಿತ್ತು. ನಂಜನಗೂಡು ತಾಲೂಕಿನ ಶ್ರೀರಾಂಪುರ ಪಟ್ಟಣದಲ್ಲಿ ಗರಡಿ ಮನೆ ಕುಸಿದು ಬಿದ್ದಿದ್ದು, ಗರಡಿ ಮನೆ ಪುನರ್ ನಿರ್ಮಾಣಕ್ಕೆ ಪೈಲ್ವಾನರು ತಾಲೂಕು ಆಡಳಿತಕ್ಕೆ ಮನವಿ ಮಾಡುತ್ತಿದ್ದಾರೆ. ರಾಷ್ಟ್ರ ಮತ್ತು ರಾಜ್ಯಮಟ್ಟದ ಕುಸ್ತಿಪಟುಗಳನ್ನು ತಯಾರು ಮಾಡಿದ್ದ ಈ ಗರಡಿ ಮನೆ ಪುನರ್ ನಿರ್ಮಾಣಕ್ಕಾಗಿ ಉಸ್ತಾದ್ಗಳು ಒತ್ತಾಯಿಸುತ್ತಿದ್ದಾರೆ.
ಕೇಂದ್ರದ ನೆರೆ ಹಾವಳಿ ಅಧ್ಯಯನ ತಂಡ ಕಲಬುರ್ಗಿಗೆ
ಕಲಬುರಗಿ ಜಿಲ್ಲೆಯಲ್ಲಿ ಮಳೆಯಿಂದಾಗಿ ಭಾರೀ ಪ್ರಮಾಣದಲ್ಲಿ ನಷ್ಟ ಸಂಭವಿಸಿದ್ದು, ಇದರ ಅಧ್ಯಯನ ನಡೆಸಲು ಇಂದು ಕೇಂದ್ರದ ನೆರೆ ಹಾವಳಿ ಅಧ್ಯಯನ ತಂಡ ಭೇಟಿ ನೀಡಲಿದೆ. ಜಿಲ್ಲೆಯಲ್ಲಿ ಅತಿವೃಷ್ಠಿಯಿಂದ ಹಾಳಾದ ಬೆಳೆ ಹಾನಿ ಪ್ರದೇಶ, ಮನೆಗಳು, ರಸ್ತೆಗಳನ್ನು ಕೇಂದ್ರದ ಮೂವರು ಅಧಿಕಾರಿಗಳ ತಂಡ ವೀಕ್ಷಣೆ ಮಾಡಲಿದ್ದು, ಮುಂಜಾನೆ 8 ಗಂಟೆ ನಂತರ ಜಿಲ್ಲೆಯ ಜೇವರ್ಗಿ ತಾಲೂಕಿನ ಅನೇಕ ಗ್ರಾಮಗಳಿಗೆ ಭೇಟಿ ನೀಡಿ ಅಧ್ಯಯನ ನಡೆಸಲಿದ್ದಾರೆ. ಕಲಬುರಗಿ ಜಿಲ್ಲಾಧಿಕಾರಿ ಸೇರಿದಂತೆ ಕಂದಾಯ ಇಲಾಖೆ ಅಧಿಕಾರಿಗಳು ತಂಡದೊಂದಿಗೆ ಇರಲಿದ್ದಾರೆ.
ಮನೆ ಖಾಲಿ ಮಾಡಿ ಎಲ್ಲಿಗೆ ಹೋಗುವುದೆಂಬ ಚಿಂತೆ!
ತುಮಕೂರು ಜಿಲ್ಲೆಯಲ್ಲಿ ಭಾರಿ ಮಳೆಗೆ ಹುಳಿಯಾರು ಕೆರೆ ತುಂಬಿ ಮನೆಗಳಿಗೆ ನೀರು ನುಗ್ಗುವ ಭೀತಿ ಎದುರಾಗಿದೆ. ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಕೆರೆಗೆ ದಿನೇದಿನೆ ನೀರಿನ ಒಳಹರಿವು ಹೆಚ್ಚಾಗುತ್ತಿರುವ ಹಿನ್ನೆಲೆ ಸಮೀಪವಿರುವ 30ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗುವ ಭೀತಿ ಉಂಟಾಗಿದೆ. ಈ ನಿಟ್ಟಿನಲ್ಲಿ ಮನೆಗಳನ್ನ ಖಾಲಿ ಮಾಡಲು ಪಟ್ಟಣ ಪಂಚಾಯಿತಿ ಸೂಚನೆ ನೀಡಿದೆ. ಆದರೆ ನಾವು ಮನೆ ಖಾಲಿ ಮಾಡಿ ಎಲ್ಲಿಗೆ ಹೋಗುವುದು ಎಂದು ಅಲ್ಲಿನ ಜನರು ಚಿಂತಿಸುತ್ತಿದ್ದಾರೆ. ಅಲ್ಲದೆ ತಮಗೆ ಪರ್ಯಾಯ ವ್ಯವಸ್ಥೆ ಕಲ್ಪಿಸುವಂತೆ ಒತ್ತಾಯಿಸಿ ಹುಳಿಯಾರು ಪಟ್ಟಣ ಪಂಚಾಯತ್ ಮುಂದೆ ನಿವಾಸಿಗಳು ಜಮಾಯಿಸಿದ್ದಾರೆ.
ಕಳೆದ 25 ವರ್ಷಗಳಿಂದ ಕೆರೆಯಂಗಳದಲ್ಲಿ ಮನೆಗಳನ್ನ ನಿರ್ಮಿಸಿಕೊಂಡು ಇದ್ದ ಕುಟುಂಬಸ್ಥರು ಬೀದಿಗೆ ಬರುವ ಭೀತಿಯನ್ನು ಎದುರಿಸುತ್ತಿದ್ದಾರೆ. ಸುಮಾರು 30 ಕ್ಕೂ ಹೆಚ್ಚು ಕುಟುಂಬಗಳು ಮನೆಗಳನ್ನ ನಿರ್ಮಿಸಿಕೊಂಡು ಕೂಲಿ ಮಾಡಿಕೊಂಡು ಜೀವನ ಸಾಗಿಸುತ್ತಿರುವ ಈ ಕುಟುಂಬಗಳು ಬೇರೆ ಕಡೆ ಹೋಗಿ ನೆಲೆಸಲು ಜಾಗವಿಲ್ಲ ಎನ್ನುತ್ತಿದ್ದಾವೆ.
ಮಳೆಗೆ ಬೆಣ್ಣೆ ಹಳ್ಳದ ಆರ್ಭಟ
ಬಾಗಲಕೋಟೆ ಜಿಲ್ಲೆಯಲ್ಲಿ ಸುರಿದ ಅಪಾರ ಮಳೆ ಹಿನ್ನೆಲೆಯಿಂದ ಮಲಪ್ರಭಾ ನದಿ ಬೆಣ್ಣೆ ಹಳ್ಳದ ಆರ್ಭಟ ಜೋರಾಗಿದ್ದು, ಬಾದಾಮಿ ತಾಲ್ಲೂಕಿನ ಮಲಪ್ರಭಾ ತೀರದಲ್ಲಿ ಪ್ರವಾಹ ಆತಂಕ ಹೆಚ್ಚಾಗಿದೆ. ಈಗಾಗಲೇ ಮಲಪ್ರಭಾ ತೀರದ ಖ್ಯಾಡ, ಕಾತರಕಿ, ನೀರಲಗಿ ಗ್ರಾಮಕ್ಕೆ ನೀರು ನುಗ್ಗಿದ್ದು, ಖ್ಯಾಡ ಗ್ರಾಮದ ಹತ್ತಾರು ಮನೆಗಳು ಜಲಾವೃತಗೊಂಡಿವೆ. ಇದರಿಂದಾಗಿ ತಮ್ಮ ಮನೆಯಲ್ಲಿ ನೆಲಸಲು ಸಾಧ್ಯವಾಗುತ್ತಿಲ್ಲವೆಂದು ಬಹುತೇಕ ಮಂದಿ ಬೇರೆ ಕಡೆ ಸ್ಥಳಾಂತರಗೊಂಡಿದ್ದಾರೆ. 2007-2009ರಲ್ಲಿ ಪ್ರವಾಹಕ್ಕೆ ಸಿಲುಕಿದ್ದ ಈ ಗ್ರಾಮಸ್ಥರು ಸ್ಥಳಾಂತರಗೊಂಡಿದ್ದು, ಮತ್ತೀಗ ಅದೇ ಸ್ಥಿತಿ ಎದುರಾಗಿದೆ. ಒಂದೆಡೆ ಗ್ರಾಮಕ್ಕೆ ನುಗ್ಗಿದ ನೀರಿನಲ್ಲಿ ಮಕ್ಕಳು ಈಜಾಡುತ್ತಾ ಪುಂಡಾಟ ಮೆರೆಯುತ್ತಿದ್ದರೆ, ಇನ್ನೊಂದೆಡೆ ಪೋಷಕರು ತಮ್ಮ ಮಕ್ಕಳನ್ನು ಹೆಗಲ ಮೇಲೆ ಕೂರಿಸಿಕೊಂಡು ಸಂಚರಿಸುತ್ತಿದ್ದಾರೆ.
ಆಂದ್ರಪ್ರದೇಶ ಸಂಪರ್ಕ ಕಡಿತ
ಬಳ್ಳಾರಿ ಜಿಲ್ಲೆಯಲ್ಲಿ ಧಾರಾಕಾರ ಮಳೆ ಸುರಿದ ಪರಿಣಾಮ ವೇದಾವತಿ ಉಕ್ಕಿ ಹರಿಯುತ್ತಿದ್ದಾಳೆ. ನದಿಯು ಉಕ್ಕಿ ಹರಿಯುತ್ತಿರುವ ಪರಿಣಾಮ ಸಿರಗುಪ್ಪ ತಾಲೂಕಿನ ರಾರಾವಿ ಮಾರ್ಗವಾಗಿ ಆಂದ್ರಪ್ರದೇಶ ಸಂಪರ್ಕ ಕಡಿತಗೊಂಡಿದೆ. ರಾರಾವಿ ಸೇತುವೆ ಮೇಲೆ ನೀರು ಹರಿಯುತ್ತಿರುವ ಪರಿಣಾಮ ಪೊಲೀಸರು ಬ್ಯಾರಿಕೇಡ್ ಹಾಕಿ ವಾಹನಗಳ ಓಡಾಟವನ್ನು ತಡೆಗಟ್ಟಿದ್ದಾರೆ.
ಮತ್ತಷ್ಟು ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:57 am, Thu, 8 September 22