
ಬೆಂಗಳೂರು, ಜೂ.23: ರಾಜ್ಯದ ಪ್ರವಾಸೋದ್ಯಮ ಕ್ಷೇತ್ರವನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯುವ ಮತ್ತು ದೇಶ-ವಿದೇಶಗಳ ಪ್ರವಾಸಿಗರಿಗೆ ವಿಶ್ವದರ್ಜೆಯ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರ ಮಹತ್ವದ ಹೆಜ್ಜೆಯನ್ನಿಟ್ಟಿದೆ. ಪ್ರವಾಸೋದ್ಯಮ ಸಚಿವ ಕೆ.ಜೆ. ಜಾರ್ಜ್ ಅವರ ಸೂಚನೆ ಮೇರೆಗೆ, ಪ್ರವಾಸೋದ್ಯಮ ಇಲಾಖೆಯು ರಾಜ್ಯದ ಇತಿಹಾಸ ಮತ್ತು ಸಂಸ್ಕೃತಿಯನ್ನು ಪ್ರವಾಸಿಗರಿಗೆ ಪರಿಣಾಮಕಾರಿಯಾಗಿ ತಲುಪಿಸಲು ‘ನಮ್ಮ ಗೈಡ್’ (Namma Guide) ಎಂಬ ಅತ್ಯಾಧುನಿಕ ಆನ್‌ಲೈನ್ ವೇದಿಕೆಯನ್ನು ಸಿದ್ಧಪಡಿಸಲು ಗಂಭೀರ ಚಿಂತನೆ ನಡೆಸಿದೆ.
ಪ್ರಸ್ತುತ ಅಭಿವೃದ್ಧಿ ಹೊಂದಿದ ವಿದೇಶಿ ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರು ತಮಗೆ ಬೇಕಾದ ಗೈಡ್‌ಗಳನ್ನು ಆನ್‌ಲೈನ್ ಮೂಲಕವೇ ಮುಂಚಿತವಾಗಿ ಕಾಯ್ದಿರಿಸುವ ಸುಧಾರಿತ ವ್ಯವಸ್ಥೆಗಳಿವೆ. ಇದೇ ಮಾದರಿಯನ್ನು ಕರ್ನಾಟಕದಲ್ಲೂ ಅಳವಡಿಸಿಕೊಳ್ಳಲು ಇಲಾಖೆ ಸಜ್ಜಾಗಿದ್ದು, ಇದಕ್ಕಾಗಿ ಪ್ರತ್ಯೇಕ ವೆಬ್‌ಸೈಟ್ ಹಾಗೂ ಮೊಬೈಲ್ ಆ್ಯಪ್ ಅನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಈ ಡಿಜಿಟಲ್ ಪ್ಲಾಟ್‌ಫಾರ್ಮ್ ಮೂಲಕ ಪ್ರವಾಸಿಗರು ತಮಗೆ ಬೇಕಾದ ಅಧಿಕೃತ ಸ್ಥಳೀಯ ಗೈಡ್‌ಗಳನ್ನು ಸುಲಭವಾಗಿ ಸಂಪರ್ಕಿಸಿ, ಪ್ರವಾಸಿ ತಾಣಗಳ ಇತಿಹಾಸ ಮತ್ತು ಮಹತ್ವವನ್ನು ನಿಖರವಾಗಿ ಅರಿತುಕೊಳ್ಳಲು ಸಾಧ್ಯವಾಗುತ್ತದೆ.
ಈ ನೂತನ ತಂತ್ರಜ್ಞಾನ ಆಧಾರಿತ ಯೋಜನೆಯಿಂದಾಗಿ ಪ್ರವಾಸೋದ್ಯಮ ಇಲಾಖೆಯಲ್ಲಿ ಈಗಾಗಲೇ ಅಧಿಕೃತವಾಗಿ ನೋಂದಣಿಯಾಗಿರುವ ನೂರಾರು ಸ್ಥಳೀಯ ಗೈಡ್‌ಗಳಿಗೆ ನಿರಂತರವಾಗಿ ಉದ್ಯೋಗಾವಕಾಶಗಳು ದೊರೆಯಲಿವೆ. ಇದರೊಂದಿಗೆ ಪ್ರವಾಸಿ ಸ್ಥಳಗಳ ಸ್ವಚ್ಛತೆಯನ್ನು ಕಾಪಾಡುವಲ್ಲಿ ಹಾಗೂ ಐತಿಹಾಸಿಕ ಸ್ಮಾರಕಗಳ ಸಮರ್ಪಕ ನಿರ್ವಹಣೆಯಲ್ಲಿ ಈ ಗೈಡ್‌ಗಳು ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಮಾಡಲು ಈ ಆ್ಯಪ್ ನೆರವಾಗಲಿದೆ.
ಪ್ರವಾಸಿ ತಾಣದ ಆಯ್ಕೆ
ಬಳಕೆದಾರರು ಮೊದಲು ತಾವು ಭೇಟಿ ನೀಡಲು ಬಯಸುವ ಕರ್ನಾಟಕದ ಪ್ರವಾಸಿ ತಾಣವನ್ನು (ಉದಾಹರಣೆಗೆ: ಹಂಪಿ, ಮೈಸೂರು ಅರಮನೆ, ಜೋಗ್ ಜಲಪಾತ ಅಥವಾ ಬೇಲೂರು-ಹಳೇಬೀಡು) ಆ್ಯಪ್‌ನಲ್ಲಿ ಸರ್ಚ್ ಮಾಡಿ ಆಯ್ಕೆ ಮಾಡಿಕೊಳ್ಳಬೇಕು.
ಅಧಿಕೃತ ಮತ್ತು ನೋಂದಾಯಿತ ಗೈಡ್‌ಗಳ ಪಟ್ಟಿ
ಆಯಾ ಪ್ರವಾಸಿ ತಾಣವನ್ನು ಆಯ್ಕೆ ಮಾಡಿದ ತಕ್ಷಣ, ಪ್ರವಾಸೋದ್ಯಮ ಇಲಾಖೆಯಲ್ಲಿ ಅಧಿಕೃತವಾಗಿ ನೊಂದಣಿಯಾಗಿರುವ (Registered Guides) ಸ್ಥಳೀಯ ಗೈಡ್‌ಗಳ ಸಂಪೂರ್ಣ ಪಟ್ಟಿ ಪರದೆಯ ಮೇಲೆ ಕಾಣಸಿಗುತ್ತದೆ.
ಭಾಷಾ ಆದ್ಯತೆ
ಪ್ರವಾಸಿಗರು ತಮಗೆ ಕಂಫರ್ಟಬಲ್ ಆಗಿರುವ ಭಾಷೆಯ ಆಧಾರದ ಮೇಲೆ ಗೈಡ್‌ಗಳನ್ನು ಫಿಲ್ಟರ್ ಮಾಡಬಹುದು. ಕನ್ನಡ, ಇಂಗ್ಲಿಷ್, ಹಿಂದಿ ಅಥವಾ ವಿದೇಶಿ ಭಾಷೆಗಳನ್ನು ಮಾತನಾಡುವ ನುರಿತ ಗೈಡ್‌ಗಳನ್ನು ಸುಲಭವಾಗಿ ಪತ್ತೆಹಚ್ಚಬಹುದು.
ಪ್ರೊಫೈಲ್ ಮತ್ತು ರೇಟಿಂಗ್ಸ್ ಪರಿಶೀಲನೆ
ಪ್ರತಿ ಗೈಡ್‌ನ ಪ್ರೊಫೈಲ್‌ನಲ್ಲಿ ಅವರ ಅನುಭವ, ಪರಿಣತಿ (ಇತಿಹಾಸ, ಚಾರಣ ಅಥವಾ ಸಂಸ್ಕೃತಿ) ಮತ್ತು ಈ ಹಿಂದೆ ಅವರ ಸೇವೆ ಪಡೆದ ಇತರ ಪ್ರವಾಸಿಗರು ನೀಡಿರುವ ರೇಟಿಂಗ್ಸ್ ಹಾಗೂ ವಿಮರ್ಶೆಗಳನ್ನು (Reviews) ನೋಡಿ ಅತ್ಯುತ್ತಮ ಗೈಡ್ ಅನ್ನು ಆಯ್ಕೆ ಮಾಡಿಕೊಳ್ಳಬಹುದು.
ಆನ್‌ಲೈನ್ ಬುಕಿಂಗ್ ಮತ್ತು ಲಭ್ಯತೆ
ವಿದೇಶಿ ಪ್ರವಾಸೋದ್ಯಮ ಮಾದರಿಯಲ್ಲಿಯೇ, ಪ್ರವಾಸಿಗರು ತಾವು ಭೇಟಿ ನೀಡುವ ದಿನಾಂಕ ಮತ್ತು ಸಮಯವನ್ನು ನಮೂದಿಸಿ, ಗೈಡ್‌ಗಳ ಲಭ್ಯತೆಯನ್ನು ಪರಿಶೀಲಿಸಿ ಆನ್‌ಲೈನ್ ಮೂಲಕವೇ ಮುಂಚಿತವಾಗಿ ಸ್ಲಾಟ್ ಕಾಯ್ದಿರಿಸಬಹುದು
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:21 pm, Tue, 23 June 26