ಕೊಡಗು: ಹುಲಿ ಸೆರೆ ಹಿಡಿಯಲು ರಾಜ್ಯ ಸರ್ಕಾರದಿಂದ ಆದೇಶ, ಪ್ರತಿಭಟನೆ ಹಿಂಪಡೆದ ಕೆ.ಬಾಡಗ ಗ್ರಾಮಸ್ಥರು

| Updated By: Rakesh Nayak Manchi

Updated on: Feb 13, 2023 | 10:00 PM

ಕೊಡಗು ಜಿಲ್ಲೆಯಲ್ಲಿ ಹುಲಿ ದಾಳಿಯಿಂದ ಇಬ್ಬರ ಸಾವು ಪ್ರಕರಣ ಸಂಬಂಧ ಕೆ.ಬಾಡಗ ಗ್ರಾಮಸ್ಥರು ಹುಲಿಯನ್ನು ಕೊಲ್ಲುವಂತೆ ಅಥವಾ ಸೆರೆ ಹಿಡಿಯುವಂತೆ ಆಗ್ರಹಿಸಿ ಪ್ರತಿಭಟನೆಗೆ ಇಳಿದು ಪಟ್ಟು ಹಿಡಿದಿದ್ದರು. ಇದೀಗ ಸರ್ಕಾರ ಹುಲಿ ಸೇರೆಗೆ ಆದೇಶಿಸುತ್ತಿದ್ದಂತೆ ಗ್ರಾಮಸ್ಥರು ಪ್ರತಿಭಟನೆ ಹಿಂಪಡೆದಿದ್ದಾರೆ.

ಕೊಡಗು: ಹುಲಿ ಸೆರೆ ಹಿಡಿಯಲು ರಾಜ್ಯ ಸರ್ಕಾರದಿಂದ ಆದೇಶ, ಪ್ರತಿಭಟನೆ ಹಿಂಪಡೆದ ಕೆ.ಬಾಡಗ ಗ್ರಾಮಸ್ಥರು
ಪ್ರತಿಭಟನೆಯ ದೃಶ್ಯ (ಎಡ ಚಿತ್ರ)
Follow us on

ಕೊಡಗು: ಜಿಲ್ಲೆಯಲ್ಲಿ ಹುಲಿ ದಾಳಿ (Tiger Attack)ಯಿಂದ ಇಬ್ಬರ ಸಾವು ಪ್ರಕರಣ ಸಂಬಂಧ ಕೆ.ಬಾಡಗ ಗ್ರಾಮಸ್ಥರು ಹುಲಿಯನ್ನು ಕೊಲ್ಲುವಂತೆ ಅಥವಾ ಸೆರೆ ಹಿಡಿಯುವಂತೆ ಆಗ್ರಹಿಸಿ ಪ್ರತಿಭಟನೆಗೆ ಇಳಿದು ಪಟ್ಟು ಹಿಡಿದಿದ್ದರು. ಇದೀಗ ಸರ್ಕಾರ ಹುಲಿ ಸೇರೆಗೆ ಆದೇಶಿಸುತ್ತಿದ್ದಂತೆ ಗ್ರಾಮಸ್ಥರು ಪ್ರತಿಭಟನೆ ಹಿಂಪಡೆದಿದ್ದಾರೆ. ಬಾಲಕನನ್ನು ಕೊಂದ ವ್ಯಾಘ್ರ ನಂತರ ರಾಜು ಎಂಬ ವೃದ್ಧನನ್ನು ಕೊಂದು ಹಾಕಿತ್ತು. ಇದರಿಂದ ಆಕ್ರೋಶಗೊಂಡಿರುವ ಗ್ರಾಮಸ್ಥರು ಶವ ಇಟ್ಟುಕೊಂಡು ಪ್ರತಿಭಟನೆಗೆ ಇಳಿದಿದ್ದರು. ಸದ್ಯ ಹುಲಿ ಸೆರೆಗೆ ಸರ್ಕಾರದಿಂದ ಆದೇಶ ಹೊರಬೀಳುತ್ತಿದ್ದಂತೆ ಗ್ರಾಮಸ್ಥರು ಪ್ರತಿಭಟನೆ ಹಿಂಪಡೆದಿದ್ದು, ರಾಜು ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಪೊನ್ನಂಪೇಟೆ ತಾಲೂಕಿನ ಕುಟ್ಟ ಗ್ರಾಮದ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಇದೇ ವೇಳೆ ರಾಜು ಕುಟುಂಬಕ್ಕೆ 5 ಲಕ್ಷ ರೂಪಾಯಿ ಪರಿಹಾರದ ಚೆಕ್‌ ವಿತರಣೆ ಮಾಡಲಾಯಿತು.

ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲೂಕಿನ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಗಡಿಯಲ್ಲಿರುವ ಕೆ.ಬಾಡಗ ಗ್ರಾಮದಲ್ಲಿ ಹುಲಿ ದಾಳಿಗೆ ಇಬ್ಬರು ಬಲಿಯಾದ ಪ್ರಕರಣ ಸಂಬಂಧ ನರಭಕ್ಷಕ ಹುಲಿ ಕೊಲ್ಲುವಂತೆ ಆಗ್ರಹಿಸಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದರು. ಅರಣ್ಯಾಧಿಕಾರಿಗಳಿಗೆ ಗ್ರಾಮಸ್ಥರು ಹಾಗೂ ರೈತಸಂಘದಿಂದ ಮುತ್ತಿಗೆ ಹಾಕಿ ಹುಲಿ ಕೊಲ್ಲಲು ಆದೇಶ ತರುವಂತೆ ಆಗ್ರಹಿಸಿದರು. ಮೃತನ ದೇಹ ತೆಗೆಯಲು ಬಿಡದೆ ತೀವ್ರ ಪ್ರತಿಭಟನೆ ನಡೆಸಲಾಗಿತ್ತು.

ಇದನ್ನೂ ಓದಿ: ಕೊಡಗಿನಲ್ಲಿ ಮುಂದುವರಿದ ವ್ಯಘ್ರ ಪ್ರತಾಪ: 24 ಗಂಟೆಯಲ್ಲಿ ಹುಲಿ ದಾಳಿಗೆ ಒಂದೇ ಗ್ರಾಮದಲ್ಲಿ ಇಬ್ಬರ ಸಾವು, ಜನರಲ್ಲಿ ಭಾರೀ ಆತಂಕ

ಫೆಬ್ರವರಿ 12ರಂದು ಪೊನ್ನಂಪೇಟೆ ತಾಲ್ಲೂಕಿನ ಕುಟ್ಟ ಗ್ರಾಮದಲ್ಲಿ 12 ವರ್ಷದ ಬಾಲಕ ಚೇತನ್ ಮೇಲೆ ದಾಳಿ ನಡೆಸಿದ್ದ ವ್ಯಾಘ್ರ ಆತನನ್ನು ಕೊಂದು ಹಾಕಿತ್ತು. ದಾಳಿ ಮಾಡಿದ ಹುಲಿ ಬಾಲಕನನ್ನು ಕೊಂದು ತೊಡೆ ಭಾಗವನ್ನು ತಿಂದಿದೆ ಎನ್ನಲಾಗಿತ್ತು. ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ಮಾಡಿದ್ದರು. ಈ ಘಟನೆ ಕುಟ್ಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿತ್ತು.

ಈ ಘಟನೆ ಜನರ ಮನಸ್ಸಿನಲ್ಲೇ ಇದ್ದಾಗಲೇ ಅಂದರೆ ಘಟನೆಯಾಗಿ ಕೆಲವೇ ಗಂಟೆಗಳಲ್ಲಿ ಪೊನ್ನಂಪೇಟೆ ತಾಲೂಕಿನ ನಾಲ್ಕೇರಿ ಗ್ರಾಮದ ಬಳಿ ನಡೆದ ಹುಲಿ ದಾಳಿಯಲ್ಲಿ ಮೈಸೂರು ಜಿಲ್ಲೆಯ ಕೊಳವಿಗೆ ಹಾಡಿ ನಿವಾಸಿ ರಾಜು (75) ಸಾವನ್ನಪ್ಪಿದ್ದರು. ದಾಳಿ ವೇಳೆ ತಡೆಯಲು ಯತ್ನಿಸಿದ ರಾಜು ಪುತ್ರ ಹಾಗೂ ಮೃತ ಚೇತನ್ ತಂದೆ ಮಧು ಅವರಿಗೂ ಗಾಯಗಳಾಗಿದ್ದು, ಅವರನ್ನು‌ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತ ರಾಜು ಪೂಣಚ್ಚ ಎಂಬುವರ ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದರು. 24 ಗಂಟೆಗಳಲ್ಲಿ ಹುಲಿ ದಾಳಿಗೆ ಇಬ್ಬರ ಬಲಿ ಹಿನ್ನೆಲೆ ತೋಟಗಳಿಗೆ ತೆರಳಲು ಜನ ಹೆದರುತ್ತಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ