ಕೊಪ್ಪಳ, ಸೆ.20: ಜಿಲ್ಲೆಯ ಕಾರಟಗಿ(Karatagi) ಪಟ್ಟಣದಲ್ಲಿರುವ ಕರ್ನಾಟಕ ನೀರಾವರಿ ನಿಗಮ ಕಚೇರಿಗೆ ಇಂದು(ಶುಕ್ರವಾರ) ರೈತರು ಮುತ್ತಿಗೆ ಹಾಕಿ, ಅಧಿಕಾರಿಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು. ಹೌದು, ಕಾರಟಗಿ ತಾಲೂಕಿನ ಯರಡೋಣಾ, ತಿಮ್ಮಾಪುರ, ಹಾಲಸಮುದ್ರ, ಬೂದಗುಂಪಾ, ಚನ್ನಳ್ಳಿ ಮಾವಿನ ಮಡಗು ಸೇರಿದಂತೆ ಅನೇಕ ಗ್ರಾಮಗಳಲ್ಲಿ ರೈತರು, ತುಂಗಭದ್ರಾ ಜಲಾಶಯ(Tungabhadra Dam)ದ ನೀರನ್ನೇ ನಂಬಿ ಕೃಷಿ ಮಾಡುತ್ತಿದ್ದಾರೆ. ಈ ಗ್ರಾಮಗಳಿಗೆಲ್ಲ 31 ಮತ್ತು 32 ನೇ ವಿತರಣಾ ಕಾಲುವೆಗಳ ಮೂಲಕ ನೀರು ಪೂರೈಕೆ ಮಾಡಲಾಗುತ್ತದೆ. ಆದ್ರೆ, ಕಳೆದ ಕೆಲ ದಿನಗಳಿಂದ ಕಾಲುವೆಗಳ ಕೊನೆ ಭಾಗದ ರೈತರ ಜಮೀನಿಗೆ ಸರಿಯಾಗಿ ನೀರು ಪೂರೈಕೆಯಾಗುತ್ತಿಲ್ಲ. ಹೀಗಾಗಿ ನೀರಿಲ್ಲದೇ ಹಸಿರಾಗಿದ್ದ ಭತ್ತ ಸೊರಗುತ್ತಿದೆ. ಇದು ಅನ್ನದಾತರ ಚಿಂತೆ ಹೆಚ್ಚಿಸಿದೆ.
ತುಂಗಭದ್ರಾ ಜಲಾಶಯ ತುಂಬಿದ್ದರಿಂದ, ತಮ್ಮ ಬೆಳೆಗೆ ನೀರಿನ ಸಮಸ್ಯೆ ಆಗುವುದಿಲ್ಲ ಎಂದು ತಿಳಿದು ರೈತರು ಸಾವಿರಾರು ರೂಪಾಯಿ ಖರ್ಚು ಮಾಡಿ ಭತ್ತ ಬೆಳದಿದ್ದಾರೆ. ಆದ್ರೆ, ಇದೀಗ ಸರಿಯಾಗಿ ನೀರು ಪೂರೈಕೆಯಾಗದೇ ಇರುವುದರಿಂದ ಭತ್ತದ ಬೆಳೆ ಒಣಗಲು ಆರಂಭವಾಗಿದೆ. ಹೀಗಾಗಿ ಕಾಲುವೆಗಳ ಕೊನೆ ಭಾಗದ ರೈತರ ಜಮೀನಿಗೆ ಕೂಡ ಸರಿಯಾಗಿ ನೀರು ಬರುವಂತೆ ಕ್ರಮವಹಿಸಬೇಕು ಎಂದು ರೈತರು ನೀರಾವರಿ ಇಲಾಖೆಯ ಅಧಿಕಾರಿಗಳಿಗೆ ಆಗ್ರಹಿಸಿದರು.
ಇದನ್ನೂ ಓದಿ:ತುಂಗಭದ್ರಾ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಕುರಿಗಾಯಿ ರಕ್ಷಣೆ ಮಾಡಿದ ಮೀನುಗಾರರು
ಇನ್ನು 31 ನೇ ವಿತರಣಾ ಕಾಲುವೆಗೆ 280 ಕ್ಯೂಸೆಕ್ ನೀರನ್ನು ನಿಗದಿ ಮಾಡಲಾಗಿದೆ. ಈ ಕಾಲುವೆ 33 ಕಿಲೋ ಮೀಟರ್ ದೂರದವರೆಗೆ ತನ್ನ ವ್ಯಾಪ್ತಿಯನ್ನು ಹೊಂದಿದೆ. ಆದ್ರೆ, ಕಾಲುವೆ ಆರಂಭದಲ್ಲಿರುವ ರೈತರ ಜಮೀನಿಗೆ ಯಾವುದೇ ಸಮಸ್ಯೆಯಾಗುತ್ತಿಲ್ಲ. ಉಪಕಾಲುವೆ ಮತ್ತು ಕಾಲುವೆಯ ಕೊನೆ ಭಾಗದ ರೈತರ ಜಮೀನಿಗೆ ನೀರು ಮುಟ್ಟುತ್ತಿಲ್ಲ. ಇದಕ್ಕೆ ನೀರಾವರಿ ಇಲಾಖೆಯ ಅಧಿಕಾರಿಗಳ ನಿರ್ವಹಣೆಯ ಕೊರತೆಯೇ ಕಾರಣ ಎಂದು ರೈತರು ಆರೋಪಿಸುತ್ತಿದ್ದಾರೆ. ಕೆಲ ರೈತರು ನೀರನ್ನು ಕೆಳಭಾಗದ ರೈತರ ಜಮೀನಿಗೆ ಹೋಗಲು ಅಡ್ಡಿ ಮಾಡುತ್ತಿರುವುದು ಒಂದಡೆಯಾದರೆ, ಇನ್ನೊಂದೆಡೆ ಎಡದಂಡೆ ಕಾಲುವೆಯಿಂದ 31, 32 ವಿತರಣಾ ಕಾಲುವೆಗೆ ನಿಗದಿತ ಪ್ರಮಾಣದಲ್ಲಿ ನೀರು ಬಿಡದೇ ಇರುವುದು.
ಹೌದು, 31 ವಿತರಣಾ ಕಾಲುವೆಗೆ 280 ಕ್ಯೂಸೆಕ್ ನೀರು ನಿಗದಿ ಮಾಡಿದ್ದರು ಕೂಡ ಅಷ್ಟು ನೀರು ಕಾಲುವೆಗೆ ಹರಿದು ಬರುತ್ತಿಲ್ಲ. ನೀರಿನ ಪ್ರಮಾಣ ಕಡಿಮೆಯಾಗಿರೋದರಿಂದ ಕೊನೆಯ ಭಾಗದಲ್ಲಿರುವ ರೈತರ ಜಮೀನಿಗೆ ನೀರು ಬರುತ್ತಿಲ್ಲ. ಇದೆಲ್ಲ ಗೊತ್ತಿದ್ದರೂ ಕೂಡ ನೀರಾವರಿ ಇಲಾಖೆಯ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಹದಿನೈದು ದಿನದ ಹಿಂದೆ ಕೂಡ ನಾವು ಅಧಿಕಾರಿಗಳನ್ನು ಭೇಟಿ ಮಾಡಿ, ತಮ್ಮ ಸಮಸ್ಯೆ ಹೇಳಿಕೊಂಡಿದ್ದೆವು. ಇಲ್ಲಿವರಗೆ ಅಧಿಕಾರಿಗಳು ಕಾಲುವೆಗಳ ಬಳಿ ಬಂದು ತಪಾಸಣೆ ಮಾಡುತ್ತಿಲ್ಲ. ಸರಿಯಾಗಿ ನೀರು ಹರಿಯುವಂತೆ ನೋಡಿಕೊಳ್ಳುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಆದ್ರೆ, ಇನ್ನು ಮುಂದೆ ಸಮಸ್ಯೆಯಾಗದಂತೆ ನೋಡಿಕೊಳ್ಳುತ್ತೇವೆ ಎಂದು ಅಧಿಕಾರಿಗಳು ಹೇಳ್ತಿದ್ದಾರೆ.
ಸದ್ಯ ನೀರು ನಿರ್ವಹಣೆ ಸಮಸ್ಯೆಯಿಂದ ಕಾಲುವೆಯ ಕೊನೆ ಭಾಗದಲ್ಲಿರುವ ರೈತರ ಜಮೀನಿಗೆ ನೀರು ಹೋಗುತ್ತಿಲ್ಲ. ಉತ್ತಮವಾಗಿ ಬೆಳೆ ಬಂದಿರುವ ಸಮಯದಲ್ಲಿ ಭತ್ತಕ್ಕೆ ಸೂಕ್ತ ನೀರು ಸಿಗದೇ ಹೋದರೆ, ಭತ್ತ ಒಣಗಿ ಹೋಗುತ್ತದೆ. ಈ ನಿಟ್ಟಿನಲ್ಲಿ ಅಧಿಕಾರಿಗಳು ಕ್ರಮವಹಿಸಿ, ಕಾಲುವೆಯ ಕೊನೆ ಭಾಗದ ರೈತರಿಗೆ ಕೂಡ ನೀರು ಸಿಗುವಂತೆ ವ್ಯವಸ್ಥೆ ಮಾಡಬೇಕಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ