ಕಾಂಗ್ರೆಸ್ ಅವಧಿಯಲ್ಲಿ ಏನು ಹಾಳಾಯ್ತು ಎಂದು ಹೇಳಲಿ: ಸಿಎಂಗೆ ಡಿಕೆಶಿ ಸವಾಲು

| Updated By: Rakesh Nayak Manchi

Updated on: Sep 06, 2022 | 1:30 PM

ಕಾಂಗ್ರೆಸ್ ಅವಧಿಯಲ್ಲಿ ಒತ್ತುವರಿಯಾಗಿದ್ದರೆ ತೆರವು ಮಾಡಲಿ, ಬಿಜೆಪಿಯವರು ಆ ಕೆಲಸ ಮಾಡಲಾಗದೇ ಮಾತನಾಡುತ್ತಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿ ಹೇಳಿಕೆಗೆ ತಿರುಗೇಟು ನೀಡಿದರು.

ಕಾಂಗ್ರೆಸ್ ಅವಧಿಯಲ್ಲಿ ಏನು ಹಾಳಾಯ್ತು ಎಂದು ಹೇಳಲಿ: ಸಿಎಂಗೆ ಡಿಕೆಶಿ ಸವಾಲು
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
Follow us on

ಬೆಂಗಳೂರು: ನಗರದಲ್ಲಿ ಮಳೆ ಅವಾಂತರ ಕಾಂಗ್ರೆಸ್ ಕಾಲದ ಒತ್ತುವರಿಯೇ ಕಾರಣ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನೀಡಿದ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಕಾಂಗ್ರೆಸ್ ಅವಧಿಯಲ್ಲಿ ಒತ್ತುವರಿಯಾಗಿದ್ದರೆ ತೆರವು ಮಾಡಲಿ, ಬಿಜೆಪಿಯವರು ಆ ಕೆಲಸ ಮಾಡಲಾಗದೇ ಮಾತನಾಡುತ್ತಾರೆ. ಕೊಟ್ಟ ಕುದುರೆ ಏರದವನು ವೀರನೂ ಅಲ್ಲ, ಶೂರನೂ ಅಲ್ಲ, ಕಾಂಗ್ರೆಸ್ ಅವಧಿಯಲ್ಲಿ ಏನು ಹಾಳಾಯ್ತು ಎಂದು ಹೇಳಲಿ ಎಂದು ಹೇಳಿದರು.

ನಗರದಲ್ಲಿ ಹೇಳಿಕೆ ನೀಡಿದ ಶಿವಕುಮಾರ್, ಅಧಿಕಾರಿಗಳ ಭ್ರಷ್ಟಾಚಾರದಿಂದ ಹಾಳಾಗಿದೆ ಎಂಬೂದನ್ನು ಗಮನದಲ್ಲಿಟ್ಟುಕೊಳ್ಳಲಿ. ಭ್ರಷ್ಟಾಚಾರದಿಂದ ಹಾಳಾಗಿದೆ ಅಂತಾ ಮುಖ್ಯಮಂತ್ರಿಯವರು ಗಮನದಲ್ಲಿಟ್ಟುಕೊಳ್ಳಲಿ, ರಾಜ್ಯದ ಜನರು ನಿಮಗೆ ಅವಕಾಶ ಕೊಟ್ಟಿದ್ದಾರೆ ಕೆಲಸ ಮಾಡಿ. ಕೆಲಸ ಮಾಡಲು ಆಗಲ್ಲ ಅಂದರೆ ಚುನಾವಣೆಗೆ ಹೋಗೋಣ ಬನ್ನಿ ಎಂದುಸವಾಲು ಹಾಕಿದರು.

ಕಾಂಗ್ರೆಸ್ ಅವಧಿಯಲ್ಲಿ ಒತ್ತುವರಿಯಾಗಿದ್ದರೆ ಒಂದು ನಿಮಿಷ ತಡಮಾಡದೇ ಹಗರಣಗಳನ್ನು ಬಯಲಿಗೆಳೆಯಿರಿ, ಹಗರಣಗಳನ್ನು ಬಯಲಿಗೆಳೆದು ನಮ್ಮನ್ನು ಗಲ್ಲಿಗೆ ಹಾಕಿ. ಇಂಧನ ಇಲಾಖೆಯಲ್ಲಿನ ಹಗರಣಗಳನ್ನೂ ಬಯಲಿಗೆಳೆಯಲಿ. ನನ್ನೊಬ್ಬನ ಮೇಲೆ ಆದಾಯ ಮೀರಿದ ಆಸ್ತಿ ಕೇಸ್ ಹಾಕಿದ್ದಾರೆ. ಅವರು (ಬಿಜೆಪಿ) ಆದಾಯ ಮೀರಿ ಆಸ್ತಿ ಮಾಡಿಲ್ಲವೇ? ಈ ಡಿಕೆ ಶಿವಕುಮಾರ್ ಬಿಜೆಪಿಯ ಗೊಡ್ಡು ಬೆದರಿಕೆಗೆ ಹೆದರುವ ಮಗ ಅಲ್ಲ ಎಂದು ಸವಾಲು ಹಾಕಿದರು.

ಕಾಂಗ್ರೆಸ್​ಗೆ ಹೇಗೆ ಪಾಠ ಕಲಿಸಬೇಕು ಅಂತ ಗೊತ್ತಿದೆ

ಡಿ.ಕೆ.ಶಿವಕುಮಾರ್ ಅವರ ಸವಾಲಿಗೆ ಪ್ರತಿಕ್ರಿಯಿಸಿದ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್, ದೇಶದಲ್ಲಿ ಕಾಂಗ್ರೆಸ್ ಮುಳುಗತ್ತಿದೆ. ಮಳೆ ನಿಂತರ ನಾವು ಕಾಂಗ್ರೆಸ್​ಗೆ ಪಾಠ ಕಲಿಸುತ್ತೇವೆ ಎಂದಿದ್ದಾರೆ. ಕಾಂಗ್ರೆಸ್ ಅವಧಿಯ ಹಗರಣಗಳನ್ನು ಬಯಲಿಗೆಳೆದು ತನಿಖೆ ಮಾಡಲಿ, ಬಿಜೆಪಿ ಬೆದರಿಕೆಗೆ ನಾನು ಹೆದರುವ ಮಗ ಅಲ್ಲ ಎಂಬ ಡಿಕೆ ಶಿವಕುಮಾರ್ ಹೇಳಿಕೆಗೆ ತಿರುಗೇಟು ನೀಡಿದ ರವಿಕುಮಾರ್,
ಡಿ.ಕೆ. ಶಿವಕುಮಾರ್ ಇಂಥದ್ದಕ್ಕೆಲ್ಲ ಹೆದರಲ್ಲ, ಅವರು ಯಾವುದಕ್ಕೂ ಹೆದರಲ್ಲ, ಕಾಂಗ್ರೆಸ್​ನವರಿಗೆ ಹೇಗೆ ಪಾಠ ಕಲಿಸಬೇಕು ಅಂತ ನಮಗೆ ಗೊತ್ತಿದೆ. ರಾಹುಲ್ ಗಾಂಧಿ ರಾಜ್ಯಕ್ಕೆ ಬಂದಷ್ಟೂ ಬಿಜೆಪಿಗೆ ಲಾಭ, ಅವರು ಹೆಚ್ಚು ಹೆಚ್ಚು ರಾಜ್ಯಕ್ಕೆ ಬರಲಿ, ರಾಹುಲ್ ಗಾಂಧಿ‌ ಐರನ್ ಲೆಗ್ ಎಂದು ಹೇಳಿದರು.

ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 1:30 pm, Tue, 6 September 22