ಗ್ಯಾಸ್ ಸಿಲಿಂಡರ್ ಬುಕಿಂಗ್‌ಗೆ ಮುಗಿಬಿದ್ದಿದ್ದ ಜನ ಈಗ ಸೈಲೆಂಟ್: ಕರ್ನಾಟಕದಲ್ಲಿ ಎಲ್‌ಪಿಜಿ ಬೇಡಿಕೆ ದಿಢೀರ್ ಕುಸಿತ! ಕಾರಣವೇನು?

ಕರ್ನಾಟಕದಲ್ಲಿ ಗ್ಯಾಸ್ ಸಿಲಿಂಡರ್ ಕೊರತೆ ಭೀತಿ ಈಗ ನಿವಾರಣೆಯಾಗಿದೆ. ಯುದ್ಧದ ಆತಂಕ ಮತ್ತು ಇ-ಕೆವೈಸಿ ವದಂತಿಗಳಿಂದ ಉಂಟಾದ ಕೃತಕ ಅಭಾವದಿಂದ ಬೇಡಿಕೆ ಗಣನೀಯವಾಗಿ ಹೆಚ್ಚಿತ್ತು. ಆದರೆ ತೈಲ ಕಂಪನಿಗಳ ಸ್ಪಷ್ಟನೆ ಮತ್ತು ಸ್ಥಿರ ಪೂರೈಕೆಯಿಂದಾಗಿ, ದಿನಕ್ಕೆ 69,000 ಸಿಲಿಂಡರ್‌ಗಳಷ್ಟು ಬೇಡಿಕೆ ಕಡಿಮೆಯಾಗಿದೆ. ರಾಜ್ಯದಲ್ಲಿ ಈಗ ಎಲ್‌ಪಿಜಿ ಪೂರೈಕೆ ಸಾಮಾನ್ಯ ಸ್ಥಿತಿಯಲ್ಲಿದೆ.

ಗ್ಯಾಸ್ ಸಿಲಿಂಡರ್ ಬುಕಿಂಗ್‌ಗೆ ಮುಗಿಬಿದ್ದಿದ್ದ ಜನ ಈಗ ಸೈಲೆಂಟ್: ಕರ್ನಾಟಕದಲ್ಲಿ ಎಲ್‌ಪಿಜಿ ಬೇಡಿಕೆ ದಿಢೀರ್ ಕುಸಿತ! ಕಾರಣವೇನು?
ಸಾಂದರ್ಭಿಕ ಚಿತ್ರ
Image Credit source: AI image

Updated on: Apr 24, 2026 | 2:31 PM

ಬೆಂಗಳೂರು, ಏ.24: ಅಮೆರಿಕ, ಇಸ್ರೇಲ್, ಇರಾನ್​ ಯುದ್ಧದಿಂದ ದೇಶದಲ್ಲಿ ಗ್ಯಾಸ್​​​ ಸಿಲಿಂಡರ್​​​​ ಕೊರೆತೆ ಉಂಟಾಗಿತ್ತು. ಇದರಿಂದ ರಾಜ್ಯದಲ್ಲೂ ದೊಡ್ಡ ಆತಂಕ ಸೃಷ್ಟಿಯಾಗಿತ್ತು. ಜನ ಸಾಲು ನಿಂತು ಗ್ಯಾಸ್​​​​ ಪಡೆದುಕೊಳ್ಳಲು ಪರಾಡುತ್ತಿದ್ದರು. ಇದೀಗ ಈ ಸಮಸ್ಯೆ ಇಲ್ಲ ಎಂದು ಹೇಳಲಾಗಿದೆ. ಕರ್ನಾಟಕದಲ್ಲಿ ಕಳೆದ ಕೆಲವು ದಿನಗಳಿಂದ ಎಲ್‌ಪಿಜಿ ಸಿಲಿಂಡರ್‌ಗಳ ಕೊರತೆಯಾಗಬಹುದು ಎಂಬ ಭೀತಿಯಿಂದ ಗ್ರಾಹಕರು ಮುಗಿಬಿದ್ದು ಬುಕಿಂಗ್ ಮಾಡುತ್ತಿರುವ ಘಟನೆಗಳು ಈಗ ಗಣನೀಯವಾಗಿ ಕಡಿಮೆಯಾಗಿದೆ. ಇದರಿಂದಾಗಿ ರಾಜ್ಯದಲ್ಲಿ ಎಲ್‌ಪಿಜಿ ಸಿಲಿಂಡರ್‌ಗಳ ದೈನಂದಿನ ಬೇಡಿಕೆಯಲ್ಲಿ ಭಾರಿ ಇಳಿಕೆ ಕಂಡುಬಂದಿದೆ.

ಅಂಕಿಅಂಶಗಳ ಪ್ರಕಾರ, ರಾಜ್ಯದಲ್ಲಿ ಎಲ್‌ಪಿಜಿ ಸಿಲಿಂಡರ್‌ಗಳ ಬೇಡಿಕೆಯು ಗರಿಷ್ಠ ಮಟ್ಟದಲ್ಲಿದ್ದಾಗ ದಿನಕ್ಕೆ 3.75 ಲಕ್ಷ ಇತ್ತು. ಆದರೆ, ಪೂರೈಕೆಯಲ್ಲಿ ಯಾವುದೇ ವ್ಯತ್ಯಯವಾಗುವುದಿಲ್ಲ ಎಂಬ ಭರವಸೆ ಮತ್ತು ಮಾರುಕಟ್ಟೆ ಸ್ಥಿರಗೊಂಡ ನಂತರ ಈ ಬೇಡಿಕೆಯು ಈಗ ದಿನಕ್ಕೆ 3.06 ಲಕ್ಷಕ್ಕೆ ಕುಸಿದಿದೆ. ಅಂದರೆ ದಿನವೊಂದಕ್ಕೆ ಸುಮಾರು 69,000 ಸಿಲಿಂಡರ್‌ಗಳಷ್ಟು ಬೇಡಿಕೆ ಕಡಿಮೆಯಾಗಿದೆ.

ಇತ್ತೀಚೆಗೆ ಕೆವೈಸಿ (e-KYC) ಅಪ್‌ಡೇಟ್ ಮಾಡದಿದ್ದರೆ ಗ್ಯಾಸ್ ಕನೆಕ್ಷನ್ ಕಟ್ ಆಗುತ್ತದೆ ಅಥವಾ ಸಬ್ಸಿಡಿ ನಿಲ್ಲುತ್ತದೆ ಎಂಬ ವದಂತಿಗಳು ಹರಡಿದ್ದವು. ಜೊತೆಗೆ ವಿತರಣೆಯಲ್ಲಿ ವಿಳಂಬವಾಗಬಹುದು ಎಂಬ ಆತಂಕದಿಂದ ಜನರು ತಮಗೆ ಅಗತ್ಯವಿಲ್ಲದಿದ್ದರೂ ಮುನ್ನೆಚ್ಚರಿಕೆ ಕ್ರಮವಾಗಿ ಸಿಲಿಂಡರ್‌ಗಳನ್ನು ಬುಕ್ ಮಾಡಲು ಆರಂಭಿಸಿದ್ದರು. ಇದು ಮಾರುಕಟ್ಟೆಯಲ್ಲಿ ಕೃತಕ ಅಭಾವ ಸೃಷ್ಟಿಯಾಗಲು ಕಾರಣವಾಗಿತ್ತು.

ಇದನ್ನೂ ಓದಿ: ಬಡವರಿಗೆ ಸೇರಬೇಕಿದ್ದ ಅನ್ನಭಾಗ್ಯ ಅಕ್ಕಿ ದಂಧೆಕೋರರ ಪಾಲು: 2,000ಕ್ಕೂ ಹೆಚ್ಚು ಮೂಟೆಗಳು ವಶಕ್ಕೆ

“ರಾಜ್ಯದಲ್ಲಿ ಎಲ್‌ಪಿಜಿ ಸಂಗ್ರಹ ಸಾಕಷ್ಟಿದೆ ಮತ್ತು ಪೂರೈಕೆಯಲ್ಲಿ ಯಾವುದೇ ಅಡಚಣೆ ಇಲ್ಲ. ಗ್ರಾಹಕರು ಅನಗತ್ಯವಾಗಿ ಆತಂಕಕ್ಕೊಳಗಾಗಿ ಹೆಚ್ಚಿನ ಸಿಲಿಂಡರ್‌ಗಳನ್ನು ಬುಕ್ ಮಾಡುವ ಅಗತ್ಯವಿಲ್ಲ” ಎಂದು ತೈಲ ಮಾರುಕಟ್ಟೆ ಕಂಪನಿಗಳು (OMCs) ಗ್ರಾಹಕರಿಗೆ ಮನವಿ ಮಾಡಿದ್ದವು. ಈ ಸ್ಪಷ್ಟನೆಯ ನಂತರ ಈಗ ಬುಕಿಂಗ್ ಪ್ರಕ್ರಿಯೆ ಸಹಜ ಸ್ಥಿತಿಗೆ ಮರಳುತ್ತಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us