ಬೆಂಗಳೂರು: ರಾಜ್ಯದಲ್ಲಿ ಕೊವಿಡ್ ಸೋಂಕಿತರಿಗೆ ಹಾಸಿಗೆ ಕೊರತೆ ನೀಗಿಸುವ ಉದ್ದೇಶದಿಂದ ಸರಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಂಭೀರವಲ್ಲದ ಸೋಂಕಿತರನ್ನು ಸ್ಟೆಪ್ ಡೌನ್ ಆಸ್ಪತ್ರೆ ಇಲ್ಲವೇ ಕೋವಿಡ್ ಕೇರ್ ಸೆಂಟರ್‌ಗಳಿಗೆ ಶಿಫ್ಟ್ ಮಾಡಿ ಚಿಕಿತ್ಸೆ ನೀಡಲು ಸರಕಾರ ನಿರ್ಧರಿಸಿದೆ. ಬೆಂಗಳೂರಿನಲ್ಲಿ ಶುಕ್ರವಾರ ಕೋವಿಡ್ ಕಾರ್ಯಪಡೆ ಅಧ್ಯಕ್ಷರಾದ ಉಪ ಮುಖ್ಯಮಂತ್ರಿ ಡಾ. ಸಿಎನ್. ಅಶ್ವತ್ಥನಾರಾಯಣ ಅವರ ಅಧ್ಯಕ್ಷತೆಯಲ್ಲಿ ನಡೆದ ‘ಕೋವಿಡ್ ಚಿಕಿತ್ಸೆ ಶಿಷ್ಟಾಚಾರ ಸಮಿತಿ’ ಸಭೆಯಲ್ಲಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ.
ತಜ್ಞರು ಕೊಟ್ಟ ವರದಿಯ ಪ್ರಕಾರ ಶೇ.30ರಿಂದ 40ರಷ್ಟು ಗಂಭೀರವಲ್ಲದ ಸೋಂಕಿತರು ಸರಕಾರಿ ಮತ್ತು ಖಾಸಗಿ ಆಸ್ಪತ್ರೆಗಳಿಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೂಡಲೇ ಇವರೆಲ್ಲರನ್ನೂ ಸ್ಟೆಪ್‌ಡೌನ್ ಆಸ್ಪತ್ರೆಗಳಿಗೆ ಶಿಫ್ಟ್ ಮಾಡುವ ನಿರ್ಧಾರವನ್ನು ಸಭೆಯಲ್ಲಿ ಕೈಗೊಳ್ಳಲಾಯಿತು. ಕೂಡಲೇ ಈ ಕೆಲಸ ಆಗಬೇಕು. ಇಷ್ಟು ಬೆಡ್‌ಗಳು ಖಾಲಿಯಾದರೆ ಗಂಭೀರ ಸ್ಥಿತಿಯಲ್ಲಿರುವ ಸೋಂಕಿತರಿಗೆ ಬೆಡ್‌ಗಳು ಲಭ್ಯವಾಗುತ್ತವೆ. ಇದರಿಂದ ಸಾವಿನ ಪ್ರಮಾಣ ಗಣನೀಯವಾಗಿ ಕಡಿಮೆಯಾಗಲಿದೆ ಎಂದು ಉಪಮುಖ್ಯಮಂತ್ರಿ ಡಾ. ಅಶ್ವತ್ಥನಾರಾಯಣ ಸಭೆಯಲ್ಲಿ ಹೇಳಿದರು.
ಸರಕಾರಿ ಆಸ್ಪತ್ರೆಗಳು ಮಾತ್ರವಲ್ಲದೆ ಖಾಸಗಿ ಆಸ್ಪತ್ರೆಗಳು ಕೂಡ ಕಡ್ಡಾಯವಾಗಿ ಈ ನಿರ್ಣಯವನ್ನು ಜಾರಿಗೆ ತರಬೇಕು. ನೋಡೆಲ್ ಅಧಿಕಾರಿಗಳ ಉಸ್ತುವಾರಿಯಲ್ಲಿ ಈ ಪ್ರಕ್ರಿಯೆ ಕಟ್ಟುನಿಟ್ಟಾಗಿ ನಡೆಯಬೇಕು ಎಂದು ಅವರು ಸೂಚಿಸಿದರು.
ಅನೇಕರು ಆಸ್ಪತ್ರೆಗೆ ಸೇರುವ ಅಗತ್ಯ ಇಲ್ಲದಿದ್ದರೂ ಬಂದು ಸೇರುತ್ತಿದ್ದಾರೆ. ಇದನ್ನು ಕೂಡ ತಡೆಯಬೇಕು ಹಾಗೂ ಅವರನ್ನು ಹೋಮ್ ಐಸೋಲೇಷನ್ ಮಾಡಿ ಚಿಕಿತ್ಸೆ ಕೊಡಬೇಕು. ಸರಕಾರದ ಮಾರ್ಗಸೂಚಿ ಪ್ರಕಾರ 90ಕ್ಕಿಂತ ಕಡಿಮೆ ಸ್ಯಾಚುರೇಷನ್ ಇರುವವರು ಮಾತ್ರ ಆಸ್ಪತ್ರೆಗೆ ದಾಖಲಾಗಬೇಕು. ಹಣ ಕೊಡ್ತಾರೆ ಎಂದು ಆಸ್ಪತ್ರೆಗಳಿಗೆ ದಾಖಲು ಮಾಡಿಕೊಳ್ಳುವಂತಿಲ್ಲ. ಇದು ಖಾಸಗಿ ಆಸ್ಪತ್ರೆಗಳಿಗೂ ಕಡ್ಡಾಯವಾಗಿ ಅನ್ವಯವಾಗುತ್ತದೆ ಎಂದು ಡಿಸಿಎಂ ಸಭೆಯಲ್ಲಿ ಹೇಳಿದರು.
ಸೋಂಕಿತರ ಚಿಕಿತ್ಸೆಯ ಬಗ್ಗೆ ಸಂಬಂಧಿಕರಿಗೆ ಮಾಹಿತಿ ಕಡ್ಡಾಯ
ಸರಕಾರ ರೂಪಿಸಿರುವ ಕೊವಿಡ್ ಚಿಕಿತ್ಸಾ ವಿಧಾನದ ಮಾರ್ಗಸೂಚಿಯನ್ನು ಕಡ್ಡಾಯವಾಗಿ ಖಾಸಗಿ ಆಸ್ಪತ್ರೆಗಳೂ ಪಾಲಿಸಬೇಕು. ಕೊವಿಡ್ ಶಿಷ್ಟಾಚಾರವನ್ನು ಯಾರೂ ಉಲ್ಲಂಘಿಸುವಂತಿಲ್ಲ. ಆಸ್ಪತ್ರೆಗಳಲ್ಲಿ ಸಮರ್ಪಕ ಚಿಕಿತ್ಸೆ ನೀಡುತ್ತಿಲ್ಲ ಎಂದು ದೂರುಗಳು ಬಂದಿವೆ. ಈ ಬಗ್ಗೆ ಕರಾರುವಕ್ಕಾದ ಸಮೀಕ್ಷೆ-ಪರಿವೇಕ್ಷಣೆ ನಡೆಸಿ, ಗುಣಮಟ್ಟದ ಚಿಕಿತ್ಸೆ ಸಿಗಬೇಕು. ಚಿಕಿತ್ಸೆಯಲ್ಲಿ ಎಲ್ಲಾದರೂ ಲೋಪವಾಗಿದ್ದರೆ ಕಠಿಣ ಕ್ರಮ ಜರುಗಿಸಿ. ಇದೇ ವೇಳೆ ರಿಮೋಟ್ ಐಸಿಯು ವ್ಯವಸ್ಥೆಯನ್ನು ಕೆಲ ದಿನಗಳಲ್ಲಿಯೇ ಅನುಷ್ಟಾನಕ್ಕೆ ತರಲಾಗುತ್ತದೆ ಎಂದು ಉಪಮುಖ್ಯಮಂತ್ರಿ ಹೇಳಿದರು.
ಚಿಕಿತ್ಸೆ ಪಡೆಯುತ್ತಿರುವ ಸೋಂಕಿತರಿಗೆ ಯಾವ ಚಿಕಿತ್ಸೆ ನೀಡಲಾಗುತ್ತಿದೆ? ಅವರ ಆರೋಗ್ಯ ಹೇಗಿದೆ? ಎಂಬ ಮಾಹಿತಿಯನ್ನು ಸಂಬಂಧಿಕರಿಗೆ ನೀಡುವುದು ಕಡ್ಡಾಯ. ವೈದ್ಯರು ಈ ಬಗ್ಗೆ ಸಂಬಂಧಿಕರಿಗೆ ಸಮರ್ಪಕ ಮಾಹಿತಿ ನೀಡಲಾಗುತ್ತಿಲ್ಲ ಎಂದು ದೂರುಗಳು ಬರುತ್ತಿವೆ. ಸಾವುಗಳ ಬಗ್ಗೆಯೂ ಸಮರ್ಪಕ ಆಡಿಟ್ ನಡೆಯಬೇಕು ಎಂದು ಉಪಮುಖ್ಯಮಂತ್ರಿ ಹೇಳಿದರು.
ಹೋಮ್ ಐಸೋಲೇಷನ್ ಆಗಿರುವ ಸೋಂಕಿತರ ರಕ್ತ ಪರೀಕ್ಷೆ ಮಾಡಿ
ಹೋಮ್ ಐಸೋಲೇಷನ್ ಆಗಿರುವ ಸೋಂಕಿತರ ರಕ್ತ ಪರೀಕ್ಷೆ ನಡೆಸುವಂತೆ ಸೂಚಿಸಿದ ಡಿಸಿಎಂ, ಇತ್ತೀಚಿನ ಕೆಲ ದಿನಗಳಲ್ಲಿ ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿರುವವರ ಆರೋಗ್ಯದಲ್ಲಿ ಬಹಳ ಏರುಪೇರಾಗುತ್ತಿರುವ ವರದಿಗಳು ಬರುತ್ತಿವೆ. ಹೀಗಾಗಿ ಅವರೆಲ್ಲರ ರಕ್ತ ಪರೀಕ್ಷೆ ಮಾಡಿ, ಸಮಸ್ಯೆ ಪತ್ತೆಹಚ್ಚಬೇಕು. ಸೋಂಕು ಪತ್ತೆಹಚ್ಚುವ ಕೆಲಸ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿಯೇ ಮುಗಿಯಬೇಕು ಎಂದು ಅಧಿಕಾರಿಗಳಿಗೆ ಡಾ. ಅಶ್ವತ್ಥನಾರಾಯಣ ಸೂಚಿಸಿದರು.
ಸಭೆಯಲ್ಲಿ ಆರೋಗ್ಯ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಾವೇದ್ ಅಕ್ತರ್, ಇಲಾಖೆ ಆಯುಕ್ತ ತ್ರಿಲೋಕ ಚಂದ್ರ, ಡಿಸಿಎಂ ಅವರ ಕಾರ್ಯದರ್ಶಿ ಪ್ರದೀಪ್, ಚಿಕ್ಸಿತೆಯ ಶಿಷ್ಟಾಚಾರ ಸಮಿತಿ ಅಧ್ಯಕ್ಷರೂ ಆದ ಆರೋಗ್ಯ ವಿವಿ ಕುಲಪತಿ ಡಾ. ಸಚ್ಚಿದಾನಂದ ಸೇರಿದಂತೆ ಇತರ ಹಿರಿಯ ವೈದರು ಇದ್ದರು.
ಇದನ್ನೂ ಓದಿ: Karnataka Lockdown: ಕರ್ನಾಟಕ ಲಾಕ್ಡೌನ್ ಅವಧಿಯಲ್ಲಿ ಯಾವೆಲ್ಲಾ ಸೇವೆ ಲಭ್ಯವಿರಲಿದೆ, ಯಾವುದು ಇಲ್ಲ? ಇಲ್ಲಿದೆ ಮಾಹಿತಿ
ಕರ್ನಾಟಕ ಲಾಕ್ಡೌನ್: ಬಾರ್ಗಳಲ್ಲಿ ಪಾರ್ಸೆಲ್ಗೆ ಅವಕಾಶ, ಸಮಯ ನಿಗದಿ
(Measures are taken against Bed Oxygen availability issues by DCM Ashwath Narayana)
Published On - 8:55 pm, Fri, 7 May 21