ಮೈಸೂರು, ಜುಲೈ 29: ತಿರುಪತಿ(Tirupati) ಬಳಿ ಚಲಿಸುತ್ತಿದ್ದ ರೈಲಿನಲ್ಲಿ ಸೀಟ್ ವಿಚಾರಕ್ಕೆ ರಾಜ್ಯದ 38 ಪ್ರಯಾಣಿಕರ ಮೇಲೆ ಹಲ್ಲೆ ನಡೆದಿದೆ ಎಂಬ ಆರೋಪ ಕೇಳಿಬಂದಿದೆ. ಮೈಸೂರಿನಿಂದ 220 ಮಂದಿ ಆಂಧ್ರದ ತಿರುಪತಿಗೆ ತೆರಳಿದ್ದರು. ತಿರುಪತಿಯಿಂದ ವಾಪಸ್ ರೈಲಿನಲ್ಲಿ ಬರುವಾಗ ಸೀಟ್ ವಿಚಾರಕ್ಕೆ ಗಲಾಟೆಯಾಗಿದ್ದು ರಾಜ್ಯದ ಪ್ರಯಾಣಿಕರ ಮೇಲೆ ಹಲ್ಲೆ ನಡೆದಿದೆ ಎಂಬ ಆರೋಪ ಕೇಳಿ ಬಂದಿದೆ.
ನೂರಾರು ಜನರನ್ನು ಕರೆಸಿ ಹಲ್ಲೆ ಮಾಡಿರುವ ಆರೋಪ ಕೇಳಿ ಬಂದಿದ್ದು ದೂರು ನೀಡಿದ್ರು ಆಂಧ್ರದ ಪಾಕಲಂ ಪೊಲೀಸರು ಸ್ಪಂದಿಸಿಲ್ಲ. ಮೊಬೈಲ್ನಲ್ಲಿ ಸೆರೆಯಾದ ಹಲ್ಲೆ ದೃಶ್ಯ ಡಿಲೀಟ್ ಮಾಡಿಸಿದರು ಎಂದು ಪ್ರಯಾಣಿಕರೊಬ್ಬರು ಆರೋಪಿಸಿದ್ದಾರೆ. ಹೀಗಾಗಿ ಹಲ್ಲೆಗೊಳಗಾದವರು ಈ ಬಗ್ಗೆ ಮೈಸೂರಿನಲ್ಲಿ ದೂರು ನೀಡಲು ಮುಂದಾಗಿದ್ದಾರೆ.
ಆಂಧ್ರಪ್ರದೇಶ ಮೂಲದ ವ್ಯಕ್ತಿಗಳು ಮೈಸೂರಿನ ಪ್ರಯಾಣಿಕರಿಗೆ ಮನಬಂದಂತೆ ಥಳಿಸಿದ್ದಾರೆ. ಸೀಟ್ ಮೇಲಿಟ್ಟಿದ್ದ ಲ್ಯಾಪ್ ಟಾಪ್ ಮೇಲೆ ಕುಳಿತಿದ್ದೀರಾ ಎಂದು ಗಲಾಟೆ ಶುರುವಾಗಿದ್ದು ಮಾತಿಗೆ ಮಾತು ಬೆಳೆದು ಗಲಾಟೆ ಕೈ ಕೈ ಮಿಲಾಯಿಸುವ ಹಂತಕ್ಕೆ ಹೋಗಿದೆ. ಈ ವೇಳೆ ಆಂಧ್ರ ಮೂಲದವರು ಜನರನ್ನು ಕರೆಸಿ ಹಲ್ಲೆ ಮಾಡಿಸಿದ್ದಾರೆ. ಪೊಲೀಸರನ್ನು ಕರೆದರು ಸಹಾಯಕ್ಕೆ ಬರಲಿಲ್ಲ. ಪೊಲೀಸರಿಗೆ ನಾವು ದೂರು ಕೊಟ್ಟರೂ ನಮ್ಮನ್ನೆ ಅಪರಾಧಿಗಳಂತೆ ಪ್ರಶ್ನೆ ಮಾಡಿದರು. ಹಲ್ಲೆ ಮಾಡಿದ ವಿಡಿಯೋವನ್ನ ಚಿತ್ರಿಕರಣ ಮಾಡಿದ್ದಕ್ಕೆ ಮೊಬೈಲನ್ನು ಕಿತ್ತುಕೊಂಡಿದ್ದಾರೆ. ಅಲ್ಲಿನ ಜನ ತಮ್ಮ ಬಳಿ ಡ್ರಾಗರ್ ಹಾಗೂ ಚಾಕು ಸೇರಿದಂತೆ ಮಾರಕಾಸ್ತ್ರಗಳನ್ನು ಇಟ್ಟುಕೊಂಡಿದ್ದು ಅದರಲ್ಲೇ ಹಲ್ಲೆ ಮಾಡಿದ್ದಾರೆ ಎಂದು ಪ್ರಯಾಣಿಕರು ಆರೋಪಿಸಿದ್ದಾರೆ. ಸದ್ಯ ಮೈಸೂರು ರೈಲ್ವೆ ಪೊಲೀಸರಿಗೆ ದೂರು ನೀಡಲು ಮುಂದಾಗಿದ್ದಾರೆ.
ಮೈಸೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 9:51 am, Sat, 29 July 23