ಬೆಂಗಳೂರು: ರಾಜ್ಯ ಸರ್ಕಾರದ ಶೇ. 30 ರಷ್ಟು ಶುಲ್ಕ ಕಡಿತದ ಆದೇಶವನ್ನು ಪುನರ್ ಪರಿಶೀಲನೆ ಮಾಡಬೇಕೆಂದು ಒತ್ತಾಯಿಸಿ ಕ್ಯಾಮ್ಸ್, ಮಿಕ್ಸಾ, ಮಾಸ್, ಕುಸುಮ, ಸಿಬಿಎಸ್ಇ ಹಾಗೂ ಐಸಿಎಸ್ಇ ಶಾಲೆಗಳ ಒಕ್ಕೂಟ ಪ್ರತಿಭಟನೆಗೆ ನಿರ್ಧಾರ ಮಾಡಿವೆ. ಖಾಸಗಿ ಶಾಲೆಗಳು ಶೇ. 30ರಷ್ಟು ಶುಲ್ಕವನ್ನು ಕಡಿತಗೊಳಿಸಬೇಕು. ಅಲ್ಲದೇ ಯಾವುದೇ ಅಭಿವೃದ್ಧಿ ಶುಲ್ಕವನ್ನು ಪಡೆಯುವಂತಿಲ್ಲ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಆದೇಶ ನೀಡಿದ್ದರು. ಆದರೆ ಇದಕ್ಕೆ ಸಂಬಂಧಿಸಿದ ಆದೇಶವನ್ನು ಪುನರ್ ಪರಿಶೀಲನೆ ಮಾಡಬೇಕೆಂದು ಆಗ್ರಹಿಸಿ ಇದೇ 23 ರಂದು ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ ನಡೆಸಲು ಶಾಲೆಗಳ ಒಕ್ಕೂಟ ಕರೆ ನೀಡಲಾಗಿದೆ.
ಸಭೆಯಲ್ಲಿ ಕೈಗೊಂಡ ನಿರ್ಣಯಗಳು
ರಾಜ್ಯ ಸರ್ಕಾರ ಶೇ. 30 ರಷ್ಟು ಕಡಿತ ಅಂತಾ ಹೇಳಿದೆ. ಆದರೆ ಆದೇಶದಲ್ಲಿ ಶೇ. 55 ರಿಂದ 65 ರಷ್ಟು ಶುಲ್ಕ ಕಡಿತವಾಗುತ್ತಿದೆ. ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಮತ್ತು ಶಿಕ್ಷಕರು ಮತ್ತು ಶಿಕ್ಷಕೇತರ ಸಿಬ್ಬಂದಿಗೆ ಅನುದಾನ ನೀಡಬೇಕು. ಕಟ್ಟಡ ಸುರಕ್ಷಿತ ಪ್ರಮಾಣ ಪತ್ರ ಹಿಂದಿನ ಶಾಲೆಗಳಿಗೆ ಕೈ ಬಿಡಬೇಕು. 1 ರಿಂದ 5 ನೇ ತರಗತಿಗಳನ್ನ ಆರಂಭ ಮಾಡಬೇಕು. ಬಿಇಓ ಡಿಡಿಪಿಐಗಳ ಭ್ರಷ್ಟಾಚಾರ ನಿಯಂತ್ರಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು. ಈ ಎಲ್ಲಾ ಬೇಡಿಕೆಗಳನ್ನು ಇದೇ ತಿಂಗಳ 23 ರೊಳಗೆ ಸರ್ಕಾರ ಈಡೇರಿಸಬೇಕು. ಇಲ್ಲವಾದಲ್ಲಿ ಇದೇ ಫೆಬ್ರವರಿ 23 ರಂದು ಬೃಹತ್ ಪ್ರತಿಭಟನಾ ಮೆರವಣಿಗೆ ಮಾಡಲು ನಿರ್ಧಾರ ಮಾಡಲಾಗಿದೆ ಎಂದು ಸಭೆಯಲ್ಲಿ ನಿರ್ಧರಿಸಲಾಗಿದೆ.
ಪುಟ್ಟಣ್ಣ ಗುಡಗು
ಸುರೇಶ್ ಕುಮಾರ್ ಕೋವಿಡ್ ಸಮಯದಲ್ಲಿ ಶಿಕ್ಷಕರಿಗೆ ಯಾವ ಕೊಡುಗೆಯನ್ನು ಕೊಟ್ಟಿದ್ದಾರೆ. ಯಾವ ರೀತಿಯಲ್ಲಿ ಶಿಕ್ಷಣ ಸಂಸ್ಥೆಗಳಿಗೆ ಸಹಾಯ ಮಾಡಿದ್ದಾರೆ? ಪೋಷಕರನ್ನು ಎತ್ತಿಕಟ್ಟೊ ಕೆಲಸ ಮಾಡುತ್ತೀರ. ಇಂತಹ ಎಡಬಿಡಂಗಿ ವ್ಯಕ್ತಿಯನ್ನು ನೋಡಿಲ್ಲ ಎಂದು ಮಾತನಾಡಿದ ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ, 23ಕ್ಕೆ ಬೃಹತ್ ಹೋರಾಟಕ್ಕೆ ನಾನು ಬರುತ್ತೇನೆ. ಅದಕ್ಕೂ ಸರ್ಕಾರ ನಮ್ಮ ಬೇಡಿಕೆ ಈಡೆರಿಸಲಿಲ್ಲ ಎಂದರೆ ಸುರೇಶ್ ಕುಮಾರ್ ಕಚೇರಿಗೆ ಬೀಗ ಹಾಕಿ ಹೋರಾಟ ಮಾಡುತ್ತೇವೆ ಎಂದು ಹೇಳಿದರು.
ಹೋರಾಟದಿಂದ ಹಿಂದೆ ಸರಿದ ರುಪ್ಸಾ
ಶಿಕ್ಷಣ ಇಲಾಖೆ ತೆಗೆದುಕೊಂಡ ನಿರ್ಧಾರವನ್ನು ಸ್ವಾಗತಿಸಿದ ರುಪ್ಸಾ ರಾಜ್ಯಾಧ್ಯಕ್ಷ ಲೋಕೇಶ್ ತಾಳಿಕಟ್ಟೆ, ರುಪ್ಸಾ ಅಡಿಯಲ್ಲಿ 13 ಸಾವಿರಕ್ಕೂ ಹೆಚ್ಚು ಬಜೆಟ್ ಶಾಲೆಗಳಿವೆ. ಶೇ.30ರಷ್ಟು ಶುಲ್ಕ ಕಡಿತದ ಬಗ್ಗೆ ಯಾವುದೇ ತಕರಾರು ಇಲ್ಲ. ಹೀಗಾಗಿ ಫೆಬ್ರವರಿ 23ರಂದು ಕರೆಕೊಟ್ಟಿರುವ ಹೋರಾಟಕ್ಕೆ ನಮ್ಮ ಬೆಂಬಲವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
Published On - 10:39 am, Wed, 10 February 21