ರಾಯಚೂರು: ತಂಗಿಗೆ ಮೆಸೇಜ್ ಮಾಡ ಬೇಡ ಎಂದು ಬುದ್ಧಿವಾದ ಹೇಳಲು ಹೋಗಿದ್ದ ಅಣ್ಣನ ಹತ್ಯೆ(Murder) ಮಾಡಲಾಗಿರುವ ಭೀಕರ ಘಟನೆ ಜಿಲ್ಲೆಯ ಮಸ್ಕಿ ತಾಲೂಕಿನ ಅಂಕುಶದೊಡ್ಡಿ ಗ್ರಾಮದಲ್ಲಿ ನಡೆದಿದೆ. ಚಾಕುವಿನಿಂದ ಇರಿದು ದೇವರಾಜ್(23) ಎಂಬಾತನನ್ನು ಹತ್ಯೆ ಮಾಡಲಾಗಿದೆ. ಆರೋಪಿಗಳಾದ ಬಸವರಾಜ್ ಹಾಗೂ ಹನುಮಂತ ಎಂಬುವವರ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಆರೋಪಿ ಬಸವರಾಜ್, ಮೃತ ದೇವರಾಜ್ನ ತಂಗಿ ಹಿಂದೆ ಬಿದ್ದಿದ್ದ. ಆಕೆಗೆ ಪ್ರೀತಿಸುವಂತೆ ಕಿರುಕುಳ ನೀಡ್ತಿದ್ದ. ಮೆಸೇಜ್ ಮಾಡೋದು, ಸಿಕ್ಕಸಿಕ್ಕಲ್ಲಿ ಮಾತನಾಡಿಸುವುದನ್ನು ಮಾಡುತ್ತಿದ್ದ. ಈ ಬಗ್ಗೆ ತಂಗಿ ಅಣ್ಣನ ಬಳಿ ಅಳಲು ತೋಡಿಕೊಂಡಿದ್ದಳು. ಹೀಗಾಗಿ ದೇವರಾಜ್ ಆರೋಪಿ ಬಸವರಾಜ್ಗೆ ಬೈದು ಬುದ್ಧಿವಾದ ಹೇಳಿದ್ದ. ಇದರಿಂದ ಸಿಟ್ಟಿಗೆದ್ದ ಬಸವರಾಜ್ ಪಾಠ ಕಲಿಸಲೇ ಬೇಕು ಎಂದು ನಿರ್ಧರಿಸಿ ತನ್ನ ಸ್ನೇಹಿತ ಲಿಂಗಣ್ಣನಿಂದ ಮೆಸೇಜ್ ಮಾಡಿಸಿದ್ದ. ಇದರಿಂದ ಮತ್ತಷ್ಟು ಕೆರಳಿದ ಮೃತ ದೇವರಾಜ್ ಇವನಿಗೆ ಈ ರೀತಿ ಹೇಳಿದ್ರೆ ಅರ್ಥ ಆಗಲ್ಲ ಎಂದು ನಿನ್ನೆ(ಜೂನ್ 23) ಮತ್ತೆ ಮಾತಾಡಲು ಹೋಗಿದ್ದಾನೆ. ಈ ವೇಳೆ ದೇವರಾಜ್ ಹಾಗೂ ಬಸವರಾಜ್ ಕಡೆಯವರ ಮಧ್ಯೆ ಗಲಾಟೆ ನಡೆದಿದೆ. ಆಗ ಬಸವರಾಜ್ ಚಾಕುವಿನಿಂದ ಇರಿದು ದೇವರಾಜ್ನನ್ನು ಹತ್ಯೆಗೈದಿದ್ದಾನೆ. ಘಟನೆಯಲ್ಲಿ ಆರೋಪಿಗಳಾದ ಬಸವರಾಜ್ ಹಾಗೂ ಹನುಮಂತನಿಗೂ ಗಾಯಗಳಾಗಿದ್ದು ಇಬ್ಬರನ್ನೂ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಮಸ್ಕಿ ಪೊಲೀಸ್ ಠಾಣೆಯಲ್ಲಿ ದೂರು, ಪ್ರತಿದೂರು ದಾಖಲಾಗಿದೆ. ಜಾತಿ ನಿಂದನೆ ಆರೋಪದಡಿ ಮೃತ ದೇವರಾಜ್ ಹಾಗೂ ಮೌನೇಶ್ ವಿರುದ್ಧ ಪ್ರತಿ ದೂರು ದಾಖಲಾಗಿದೆ.
ಇದನ್ನೂ ಓದಿ: Belagavi News: ಪ್ರಿಯಕರನ ಜೊತೆ ಸೇರಿಕೊಂಡು ಮಗನನ್ನೇ ಕೊಲೆ ಮಾಡಿದ ತಾಯಿ
ದಕ್ಷಿಣ ಕನ್ನಡ ಜಿಲ್ಲೆ ಕಡಬ ತಾಲೂಕಿನ ಕೋಡಿಂಬಾಳ ಸಮೀಪದ ನೆಕ್ಕಿಲಾಡಿ ಗ್ರಾಮದ ಕೋರಿಯರ್ ಎಂಬಲ್ಲಿ ಕುಮಾರಧಾರ ನದಿಗೆ ಜಿಗಿದು ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಸಕಲೇಶಪುರ ಬಾಳೆಗದ್ದೆ ನಿವಾಸಿ ಧರ್ಮಯ್ಯ (40) ಮೃತ ದುರ್ದೈವಿ. ರಬ್ಬರ್ ಕಟ್ಟಿಂಗ್ ಕೆಲಸಕ್ಕೆ ಸಕಲೇಶಪುರದಿಂದ ಕೋಡಿಂಬಾಳಕ್ಕೆ ಬಂದಿದ್ದ ಧರ್ಮಯ್ಯ ಅವರು ನದಿಗೆ ಹಾರು ಪ್ರಾಣ ಬಿಟ್ಟಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ. ನದಿ ಬದಿಯಲ್ಲಿ ಧರ್ಮಯ್ಯ ಅವರ ಶೂ ಪತ್ತೆಯಾಗಿದೆ. ಘಟನಾ ಸ್ಥಳಕ್ಕೆ ಕಡಬ ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಡಬ ಪೊಲೀಸರು, ಶೌರ್ಯ ತಂಡದ ಸದಸ್ಯರು ಮೃತದೇಹಕ್ಕಾಗಿ ನದಿಯಲ್ಲಿ ಹುಡುಕಾಟ ನಡೆಸುತ್ತಿದ್ದಾರೆ.
ಅಪರಾಧ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ