ರಾಯಚೂರು: ಜನ ಮರುಳೋ ಜಾತ್ರೆ ಮರುಳೋ, ಫ್ರೀ ಸೈಟ್​ ಕೊಡ್ತಾರೆ ಅಂತ ಬೆಟ್ಟಕ್ಕೆ ಬೇಲಿ ಹಾಕಿದ ಜನ

| Updated By: ವಿವೇಕ ಬಿರಾದಾರ

Updated on: Oct 19, 2023 | 2:56 PM

ಉಚಿತವಾಗಿ ಸೈಟ್ ಕೊಡುತ್ತಾರೆ ಎಂಬ ಗುಮಾನಿಗೆ ಜನರು ರಾಯಚೂರು ನಗರದ ವಾರ್ಡ್-28 ರ ಆಶ್ರಯ ಕಾಲೋನಿ ಬಳಿ ಇರುವ ಬೆಟ್ಟದಲ್ಲಿ ಕೋಲು ನೆಟ್ಟು, ಬಟ್ಟೆ ಮತ್ತು ರಿಬ್ಬನ್​ಗಳಿಂದ ಬೇಲಿ ಹಾಕಿದ್ದಾರೆ.

ರಾಯಚೂರು ಅ.19: ಜನ ಮರುಳೋ, ಜಾತ್ರೆ ಮರುಳೋ ಎಂಬ ಮಾತಿನಿಂತೆ ಜನರು ಫ್ರೀ ಸೈಟ್​ (Site) ಕೊಡುತ್ತಾರೆ ಅಂತ ಬೆಟ್ಟಕ್ಕೆ ಬೇಲಿ ಹಾಕಿದ್ದಾರೆ. ರಾಯಚೂರಿನಲ್ಲಿ (Raichuru) ಫ್ರೀ ಸೈಟ್​ಗಾಗಿ ಜನರು ಮುಗಿಬಿದ್ದಿದ್ದಾರೆ. ರಾಯಚೂರು ನಗರದ ವಾರ್ಡ್-28 ರ ಆಶ್ರಯ ಕಾಲೋನಿ ಬಳಿ ಇರುವ ಬೆಟ್ಟದಲ್ಲಿ ಜನರು ಕೋಲು ನೆಟ್ಟು, ರಿಬ್ಬನ್ ಮತ್ತು ಬಟ್ಟೆ ಕಟ್ಟಿ, ಇದು ತಮ್ಮ ಸೈಟ್ ಎಂದು ಗುರುತು ಮಾಡಿದ್ದಾರೆ. ಜನರು ಬೆಟ್ಟ ಹಾಗೂ ಬೆಟ್ಟದ ಸುತ್ತಲಿನ ಖಾಲಿ ಜಾಗವನ್ನು ಗುರುತು ಮಾಡುತ್ತಿದ್ದಾರೆ.

ಉಚಿತವಾಗಿ ಸೈಟ್ ಕೊಡುತ್ತಾರೆ ಎಂಬ ಗುಮಾನಿಗೆ ಕೂಲಿ-ನಾಲಿ ಬಿಟ್ಟು ಸೈಟ್ ಹುಡುಕಾಟ ನಡೆಸಿದ್ದಾರೆ. ನಗರಸಭೆ ಸದಸ್ಯ, ಶಾಸಕರು ಸೈಟ್ ಕೊಡಿಸುತ್ತಾರೆ ಅಂತ ಕೆಲವರು ಹೇಳಿದರೇ, ಇನ್ನು ಹಲವರು ಸೈಟ್ ಯಾರು ಕೊಡಿಸುತ್ತಾರೆ ಎಂಬುವುದೇ ಗೊತ್ತಿಲ್ಲ ಎಂದು ಹೇಳುತ್ತಿದ್ದಾರೆ. ಈ ಮಧ್ಯೆ ಓಬ್ಬರನ್ನ ನೋಡಿ, ಮತ್ತೊಬ್ಬರಂತೆ ಇಡೀ ಬೆಟ್ಟವನ್ನು ಕಬ್ಜಾ ಮಾಡುತ್ತಿದ್ದಾರೆ. ಮಕ್ಕಳು, ವೃದ್ಧರು ಸೇರಿದಂತೆ ಇಡೀ ಕುಟುಂಬವೇ ಬೆಟ್ಟದಲ್ಲಿ ಠಿಕಾಣಿ ಹೂಡಿದ್ದು, ಊಟ, ನೀರು, ಬಟ್ಟೆ ಸಮೇತ ಬೆಟ್ಟದತ್ತ ಬರುತ್ತಿದ್ದಾರೆ. ಫ್ರಿ ಸೈಟ್​ಗಾಗಿ ಜನರು ಬೆಟ್ಟದಲ್ಲಿ ಕಾದು ಕುಳಿತಿದ್ದಾರೆ.

ಇದನ್ನೂ ಓದಿ: ರಾಯಚೂರು: 8 ವರ್ಷಗಳಿಂದ ಗೃಹಬಂಧನದಲ್ಲಿರುವ ಮಾನಸಿಕ ಅಸ್ವಸ್ಥನಿಗೆ ಮುಕ್ತಿ; ಆಸ್ಪತ್ರೆಗೆ ದಾಖಲು

ಟಿವಿ9 ವರದಿ ಬೆನ್ನಲ್ಲೇ ರಾಯಚೂರು ನಗರಸಭೆ ಅಧಿಕಾರಿಗಳು ಅಲರ್ಟ್ ಆಗಿದ್ದು, ಅತೀಕ್ರಮಣ ಮಾಡಿದ ಪ್ರದೇಶವನ್ನು ನಗರಸಭೆ ಅಧಿಕಾರಿಗಳ ನೇತೃತ್ವದ ತಂಡ ತೆರವುಗೊಳಿಸಿದೆ. ಈ ಬಗ್ಗೆ ನಗರಸಭೆ ಪೌರಾಯುಕ್ತ ಗುರುಸಿದ್ದಯ್ಯ ಮಾತನಾಡಿ ಸರ್ವೆ ನಂಬರ್ 559 ರ 10 ಎಕರೆ‌ 38 ಗುಂಟೆ ಜಾಗವನ್ನು ಅತೀಕ್ರಮಣ ಮಾಡಿದ್ದನ್ನು ತೆರವುಗೊಳಿಸಲಾಗಿದೆ. ಆರ್​ಓ ನೇತೃತ್ವದ ಐದು ಜನರ ತಂಡ ರಚಿಸಿ ತನಿಖೆಗೆ ಆದೇಶಿಸಿದ್ದೇನೆ. ಆ ವರದಿ ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುತ್ತೆ ಎಂದರು.

ಜನ ತಾವಾಗಿ ಬಂದಿದ್ದಾರೊ, ಇಲ್ಲ ಯಾರಾದರೂ ಕಳುಹಿಸಿದ್ದಾರೆ ಅನ್ನೋದರ ಮಾಹಿತಿ ಪಡೆಯುತ್ತೇವೆ. ವಸತಿ ರಹಿತರಿಗೆ ಉಚಿತವಾಗಿ ಸೈಟ್ ಕೊಡಲು ಅವಕಾಶ ಇದೆ. ಅದಕ್ಕೆ ಅರ್ಜಿ ಸಲ್ಲಿಕೆ ಮಾಡಬೇಕು. ಬಳಿಕ ಸಮೀಕ್ಷೆ ನಡೆಸಿ ತಾಲ್ಲೂಕು ಮಟ್ಟದ ಸಮೀತಿ ಆಗತ್ತೆ. ನಂತರ ಜಿಲಾ ಮಟ್ಟಕ್ಕೆ ಹೋಗತ್ತೆ ಆ ಬಳಿಕ ಅನುಮೋದನೆ ಆಗತ್ತೆ. ಕೊನೆಗೆ ಅಧಿಕೃತ ಹಕ್ಕು ಪತ್ರ ಬಂದ ಬಳಿಕ ಅವರು ಮಾಲೀಕರಾಗುತ್ತಾರೆ. ವಸತಿ ರಹಿತರು ನಗರ ಸಭೆಯಲ್ಲಿ ಅರ್ಜಿ ಸಲ್ಲಿಸಿ ಎಂದು ಸಲಹೆ ನೀಡಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 9:59 am, Thu, 19 October 23