ರಾಯಚೂರು: ಕರ್ತವ್ಯಲೋಪದ ಆರೋಪದ ಮೇಲೆ ಅಮಾನತಾಗಿದ್ದರು ಅಧಿಕಾರಿಯೊಬ್ಬರು ಸರ್ಕಾರದ ಹಣ ಲೂಟಿ ಮಾಡಿರುವುದು ಬೆಳಕಿಗೆ ಬಂದಿದೆ. ಗ್ರಾಮ ಪಂಚಾಯತಿ ಖಾತೆಯಲ್ಲಿದ್ದ 13 ಲಕ್ಷ ರೂಪಾಯಿಯನ್ನು ಮಾನ್ವಿ ತಾಲೂಕಿನ ಮದ್ಲಾಪುರ ಪಿಡಿಒ ಬಸವರಾಜ್ ಲಪಟಾಯಿಸಿದ್ದಾರೆಂದು ಗಂಭೀರ ಆರೋಪ ಕೇಳಿಬಂದಿದೆ.
ಮೃತಪಟ್ಟ ಕಾರ್ಮಿಕರ ಹೆಸರಲ್ಲಿ ಕೂಲಿ ಹಣ ಪಾವತಿಸಿ ಅಕ್ರಮ ಎಸಗಿದ್ದ. ಹೀಗಾಗಿ ಆಗಸ್ಟ್ ತಿಂಗಳಲ್ಲಿ ಕರ್ತವ್ಯಲೋಪದ ಆರೋಪದ ಮೇಲೆ ಸೇವೆಯಿಂದ ಪಿಡಿಒರನ್ನು ಅಮಾನತು ಮಾಡಲಾಗಿತ್ತು. ಆದ್ರೆ ಅಮಾನತಾದ ಆಗಸ್ಟ್ ತಿಂಗಳಿನಿಂದ ಅಕ್ಟೋಬರ್ ಅಂತ್ಯದವರೆಗೆ ಪಿಡಿಒ ಬಸವರಾಜ ಅಕ್ರಮವಾಗಿ ಸರ್ಕಾರದ ಹಣ ಡ್ರಾ ಮಾಡಿರುವುದು ಬೆಳಕಿಗೆ ಬಂದಿದೆ. ಹೀಗಾಗಿ ಮತ್ತೊಮ್ಮೆ ಅಮಾನತು ಮಾಡಿ ಜಿಲ್ಲಾ ಪಂಚಾಯತ್ ಸಿಇಒ ಲಕ್ಷ್ಮಿಕಾಂತರೆಡ್ಡಿ ಆದೇಶಿಸಿದ್ದಾರೆ.
ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಕೆಲ ಅಧಿಕಾರಿಗಳು ಪಿಡಿಒ ರಕ್ಷಣೆಗೆ ಪ್ರಯತ್ನಿಸಿ ವಿಫಲವಾಗಿದ್ದಾರೆ ಎನ್ನಲಾಗಿದೆ. ಆರೋಪಿ ಮೇಲೆ ಕ್ರಿಮಿನಲ್ ಕೇಸ್ ದಾಖಲಿಸಲು ಹಿಂದೇಟು ಹಾಕುತ್ತಿರುವುದು ಚರ್ಚೆಗೆ ಗ್ರಾಸವಾಗಿದೆ. ಹೀಗಾಗಿ ತನಿಖೆಯಲ್ಲಿ ಆರೋಪಿ ವಿರುದ್ಧ ಕ್ರಿಮಿನಲ್ ಕೇಸ್ಗೆ ಶಿಫಾರಸು ಮಾಡಲಾಗಿದೆ.