ರಾಯಚೂರು: ರಾಯಚೂರಿನಲ್ಲಿ (Raichur) ಏಮ್ಸ್ (AIIMS) ಸ್ಥಾಪನೆಗೆ ಆಗ್ರಹಿಸಿ ನಡೆಯುತ್ತಿರುವ ಹೋರಾಟಕ್ಕೆ 308 ದಿನಗಳಾಗಿದ್ದು ಸ್ಥಳಕ್ಕೆ ಮಂತ್ರಾಲಯ ಪೀಠಾಧಿಪತಿ ಡಾ. ಸುಬುಧೇಂದ್ರ ತೀರ್ಥರು (Subudhendra Teertha Swamiji) ಗುರುವಾರ ಭೇಟಿ ನೀಡಿದರು. ಹೋರಾಟಕ್ಕೆ ಬೆಂಬಲ ಸೂಚಿಸಿ ಮಾತನಾಡಿದ ಅವರು, ಏಮ್ಸ್ ಸ್ಥಾಪನೆಗಾಗಿ ರಾಜ್ಯ, ಕೇಂದ್ರ ಸರ್ಕಾರಕ್ಕೆ ಸಂದೇಶ ರವಾನಿಸಿದ್ದೇವೆ. ರಾಯಚೂರು ಚಿನ್ನದ ನಾಡು, ಭತ್ತದ ಕಣಜ, 2 ನದಿಗಳ ಬೀಡಾಗಿದೆ. ಈಗಾಗಲೇ ರಾಯಚೂರು ಜಿಲ್ಲೆ ಐಐಟಿಯಿಂದ ವಂಚಿತಗೊಂಡಿದೆ. ನಮ್ಮ ಸಹನೆ ಪರೀಕ್ಷಿಸುವುದು ಬೇಡ, ಸಹನೆ ಮೀರಿದರೆ ಕಷ್ಟವಾಗಲಿದೆ ಎಂದು ಸುಬುಧೇಂದ್ರ ತೀರ್ಥರು ಎಚ್ಚರಿಕೆ ನೀಡಿದ್ದಾರೆ.
ಐಐಟಿ ಸಂಸ್ಥೆ ರಾಯಚೂರಿಗೆ ಮಂಜೂರಾಗಬೇಕಿತ್ತು. ಆದರೆ, ಅದರಿಂದ ವಂಚಿತರಾಗಿದ್ದೇವೆ. ಹಸಿದವರಿಗೆ ಅನ್ನ ಕೊಟ್ಟರೆ ಅದು ಜೀರ್ಣವಾಗುತ್ತದೆ. ಹಸಿಯದೇ ಇದ್ದವರಿಗೆ ಅನ್ನ ಕೊಟ್ಟರೆ ಅದು ಅಜೀರ್ಣವಾಗುತ್ತದೆ. ನಮಗೆ ಏಮ್ಸ್ ಬೇಕು. ಏಮ್ಸ್ ಮಾದರಿ ಅನ್ನೋದು ಅಸಂಬದ್ಧ. ಹೀಗಾಗಿ ಏಮ್ಸ್ಗಾಗಿ ಪ್ರಧಾನಿ, ಮುಖ್ಯಮಂತ್ರಿಗಳಿಗೆ ಈ ವೇದಿಕೆ ಮೂಲಕ ಕೇಳುತ್ತಿದ್ದೇನೆ. ನಿಮ್ಮ ಕಿವಿಗೆ ಬಿದ್ದಿರುವ ಏಮ್ಸ್ ಹೋರಾಟದ ಕೂಗನ್ನು ಕೇಳಿಸಿಕೊಳ್ಳಿ ಎಂದು ಅವರು ಹೇಳಿದರು.
ನಿರಾಶರಾಗುವುದು ಬೇಡ. ನ್ಯಾಯದ ಪರ ನಮ್ಮ ಬೇಡಿಕೆ ಇದೆ.. ಏಮ್ಸ್ಗಾಗಿ ಮುಖ್ಯಮಂತ್ರಿಗಳು, ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ಸಂದೇಶ ರವಾನಿಸಿದ್ದೇವೆ ಎಂದು ಸುಬುಧೇಂದ್ರ ತೀರ್ಥರು ಹೋರಾಟಗಾರರಿಗೆ ಧೈರ್ಯ ತುಂಬಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ