ರಾಮನಗರ: ತಾಲೂಕಿನ ಶೇಷಗಿರಿಹಳ್ಳಿಯಲ್ಲಿರುವ ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ ಹೈವೈ (Bengaluru-Mysuru Express Highway) ಟೋಲ್ ಬಳಿ ಮಂಡ್ಯ ಜಿಲ್ಲೆ ಮಳವಳ್ಳಿ ಕ್ಷೇತ್ರದ ಶಾಸಕ ಪಿ.ಎಂ.ನರೇಂದ್ರಸ್ವಾಮಿ (PM Narendraswamy) ಜೊತೆ ಟೋಲ್ ಸಿಬ್ಬಂದಿ ಕಿರಿಕ್ ಮಾಡಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಶಾಸಕರು ಜೂನ್ 4ರ ಭಾನುವಾರ ಮಳವಳ್ಳಿಯಿಂದ ಬೆಂಗಳೂರಿಗೆ ಆಗಮಿಸುವಾಗ ನಡೆದ ಘಟನೆ ಇದಾಗಿದೆ.
ಬೆಂಗಳೂರಿಗೆ ಹೋಗುತ್ತಿದ್ದ ಶಾಸಕ ನರೇಂದ್ರಸ್ವಾಮಿ ಅವರ ಕಾರನ್ನು ಟೋಲ್ ಸಿಬ್ಬಂದಿ ತಡೆದಿದ್ದಾರೆ. ವಾಹನದ ಪಾಸ್ ಇದ್ದರೂ ಸಿಬ್ಬಂದಿ ಕಾರು ಪರಿಶೀಲನೆ ನಡೆಸಿದ್ದಲ್ಲದೆ, ಕಾರಿನಲ್ಲಿದ್ದ ಶಾಸಕರ ಜೊತೆ ವಾಗ್ವಾದ ನಡೆಸಿದ್ದಾರೆ. ಪೊಲೀಸರ ಬರಲಿ ಎಂದು ಮಳವಳ್ಳಿ ಶಾಸಕರು ಹೇಳಿದಾಗ, ಯಾವ ಪೊಲೀಸ್ ಬೇಕಾದರೂ ಬರಲಿ, ನಾನು ನೋಡಿರದ ಪೊಲೀಸರಾ ಅಂತ ಟೋಲ್ ಸಿಬ್ಬಂದಿ ಆವಾಜ್ ಹಾಕಿದ್ದಾರೆ.
ಅಷ್ಟಕ್ಕೂ ಸುಮ್ಮನಾಗದ ಟೋಲ್ ಸಿಬ್ಬಂದಿ, ನಿಮ್ಮನ್ನು ಎಕ್ಸ್ಪ್ರೆಸ್ ಹೈವೇನಲ್ಲಿ ಬಿಟ್ಟಿಯಾಗಿ ಓಡಾಡಲು ಬಿಡುತ್ತಾ ಇದ್ದೇವೆ ಅಂತ ಶಾಸಕರಿಗೆ ಏಕವಚನದಿಂದಲೇ ಏರುಧ್ವನಿಯಲ್ಲಿ ಹೇಳಿದ್ದಾರೆ. ಆ ಮೂಲಕ ಶಾಸಕ ನರೇಂದ್ರ ಸ್ವಾಮಿ ಜೊತೆ ಟೋಲ್ ಸಿಬ್ಬಂದಿ ಅನುಚಿತ ವರ್ತನೆ ತೋರಿದ್ದಾರೆ. ಜೂನ್ 4 ರಂದು ನಡೆದಿರುವ ಈ ಘಟನೆ ಇದೀಗ ಬೆಳಕಿಗೆ ಬಂದಿದೆ.
ಇದನ್ನೂ ಓದಿ: ಟೋಲ್ ವಿಚಾರಕ್ಕೆ ನಡೆದ ಜಗಳ ಕೊಲೆಯಲ್ಲಿ ಅಂತ್ಯ; ಫಾಲೋ ಮಾಡಿಕೊಂಡು ಹೋಗಿ ಟೋಲ್ ಸಿಬ್ಬಂದಿ ಹತ್ಯೆ
ಎರಡು ದಿನಗಳ ಹಿಂದೆಯಷ್ಟೇ, ರಾಮನಗರ ತಾಲೂಕಿನ ಶೇಷಗಿರಿಹಳ್ಳಿ ಟೋಲ್ ಪ್ಲಾಜಾದ ಬಳಿ ಟೋಲ್ ಪಡೆಯುವ ವಿಚಾರಕ್ಕೆ ಯುವಕನೊಬ್ಬನ ಕೊಲೆಯೇ ನಡೆದಿತ್ತು. ಟೋಲ್ ಪಡೆಯುವ ವಿಚಾರಕ್ಕೆ ಸಿಬ್ಬಂದಿ ಹಾಗೂ ಕಾರಿನಲ್ಲಿ ಬಂದಿದ್ದ ಯುವಕರ ನಡುವೆ ಮಾರಾಮಾರಿಯಾಗಿತ್ತು. ಇದನ್ನೇ ಮನಸಿನಲ್ಲಿಟ್ಟುಕೊಂಡಿದ್ದ ಯುವಕರು ಟೋಲ್ನಲ್ಲಿ ಕೆಲಸ ಮಾಡುತ್ತಿದ್ದ ಪವನ್ಕುಮಾರ್ (26) ಹತ್ಯೆ ಮಾಡಿದ್ದರು.
ಬೆಂಗಳೂರು ದಕ್ಷಿಣ ತಾಲೂಕಿನ ಕರಿಕಲ್ ತಾಂಡ್ಯ ನಿವಾಸಿ ಪವನ್ಕುಮಾರ್ ಕೆಲಸ ಮುಗಿಸಿ ಊಟಕ್ಕೆ ಹೋಗಿದ್ದಾಗ ಟೋಲ್ನಿಂದ ಹಿಂಬಾಲಿಸಿಕೊಂಡು ಬಂದು ದುಷ್ಕರ್ಮಿಗಳು ಪವನ್ ಮೇಲೆ ಹಲ್ಲೆಗೈದು ಹತ್ಯೆ ನಡೆಸಿದ್ದರು. ಜೂನ್ 4ರ ರಾತ್ರಿ 10 ಗಂಟೆಗೆ ಈ ಜಗಳ ನಡೆದಿದ್ದು, ರಾತ್ರಿ 12 ಗಂಟೆಗೆ ಪವನ್ನನ್ನು ದುಷ್ಕರ್ಮಿಗಳು ಹತ್ಯೆ ಮಾಡಿದ್ದರು.
ಅಷ್ಟು ಮಾತ್ರವಲ್ಲದೆ, ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಯುವತಿಯೊಬ್ಬಳ ಶವ ಪತ್ತೆಯಾಗಿತ್ತು. ಜೂನ್ 4 ರಂದು ಯುವಕನೊಬ್ಬನ ಜೊತೆ ಬೈಕ್ನಲ್ಲಿ ತೆರಳಿದ್ದ ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ಕುರಹಟ್ಟಿ ಗ್ರಾಮದ ಚಾಂದಿನಿ, ಮಂಡ್ಯದ ಬೂದನೂರು ಕೆರೆಯಲ್ಲಿ ಶವವಾಗಿ ಪತ್ತೆಯಾಗಿದ್ದಳು. ಕೆರೆಗೆ ಬಿದ್ದು ಆತ್ಮಹತ್ಯೆಗೆ ಶರಣಾಗಿರುವ ಶಂಕೆ ವ್ಯಕ್ತವಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:53 pm, Tue, 6 June 23