ಬಾಗಲಕೋಟೆ: ಹಾವುಗಳನ್ನು ಸಂರಕ್ಷಿಸುವ ಮೂಲಕ ಜಿಲ್ಲೆಯ ಹಲವಾರು ಹಳ್ಳಿಗಳಲ್ಲಿ ಸ್ನೇಕ್ ಡ್ಯಾನಿ ಎಂದೇ ಚಿರಪರಿಚಿತರಾಗಿದ್ದ ಉರಗ ತಜ್ಞ ಡೇನಿಯಲ್ ನ್ಯೂಟನ್ ಹಾವು ಹಿಡಿಯುವ ವೇಳೆ ಸಾವಿಗೀಡಾಗಿದ್ದಾರೆ. ಜಿಲ್ಲೆಯ ಸೀಗಿಕೇರಿಯ ಗ್ರಾಮದ ಮನೆಯೊಂದರಲ್ಲಿ ನಾಗರಹಾವನ್ನು ಹಿಡಿಯುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ.
ನಗರದ ಜಯನಗರ ನಿವಾಸಿಯಾದ 43 ವರ್ಷದ ಡೇನಿಯಲ್ ಈ ತನಕ 1,036 ನಾಗರಹಾವುಗಳು ಸೇರಿದಂತೆ 3,279 ಹಾವುಗಳನ್ನು ರಕ್ಷಿಸಿದ್ದರು. ಈ ಹಿಂದೆ, ಒಂದಲ್ಲ, ಎರಡಲ್ಲ ಬರೋಬ್ಬರಿ 75 ಬಾರಿ ಹಾವಿನಿಂದ ಕಚ್ಚಿಸಿಕೊಂಡಿದ್ದರೂ ಪವಾಡ ಸದೃಶವೆಂಬಂತೆ ಪಾರಾಗಿದ್ದರು. ಅಲ್ಲದೆ ಕಳೆದ ಜೂನ್ನಲ್ಲಿ ಮರಿ ನಾಗರಹಾವಿನಿಂದ ಕಚ್ಚಿಸಿಕೊಂಡ ಇವರು ಸಾವು-ಬದುಕಿನ ಮಧ್ಯೆ ಹೋರಾಡಿ ಗೆದ್ದಿದ್ದರು. ಆದರೆ ದುರದೃಷ್ಟವಶಾತ್, ಡ್ಯಾನಿ ಈ ಬಾರಿ ಬದುಕುಳಿಯಲಿಲ್ಲ.
ದುಃಖದ ವಿಷಯವೆಂದರೆ, ಡೇನಿಯಲ್ ಒಂದು ತಿಂಗಳ ಹಿಂದಷ್ಟೇ ಮದುವೆಯಾಗಿದ್ದರು. ಇದೀಗ, ಹಲವಾರು ಉರಗಗಳನ್ನು ರಕ್ಷಿಸಿ ಸಾರ್ಥಕ ಬದುಕು ನಡೆಸಿದ್ದ ಡೇನಿಯಲ್ ತಾವು ಬದುಕಿದ್ದಾಗಲೇ ತಮ್ಮ ದೇಹವನ್ನು ದಾನ ಮಾಡಿದ್ದರು ಎಂದು ಹೇಳಲಾಗಿದೆ. ಈ ಮೂಲಕ ಡ್ಯಾನಿ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ.
Published On - 6:40 pm, Tue, 15 December 20