ಬೆಂಗಳೂರು: ಕರ್ನಾಟಕದಲ್ಲಿ ಕೊವಿಡ್ ಸಂಕಷ್ಟದ ನಡುವೆಯೂ ತೆರಿಗೆ ಸಂಗ್ರಹ ತೃಪ್ತಿಕರವಾಗಿದೆ. ₹82,443 ಕೋಟಿ ವಾಣಿಜ್ಯ ತೆರಿಗೆ ಸಂಗ್ರಹದ ಗುರಿ ಇರಿಸಿಕೊಳ್ಳಲಾಗಿತ್ತು. ಈವರೆಗೆ ಒಟ್ಟು ₹82,462 ಕೋಟಿ ವಾಣಿಜ್ಯ ತೆರಿಗೆ ಸಂಗ್ರಹವಾಗಿದೆ. ಇದರಲ್ಲಿ ₹65,659 ಕೋಟಿ ಜಿಎಸ್ಟಿ, ಪೆಟ್ರೋಲ್, ಡೀಸೆಲ್ ಮೂಲಕ ₹15,861 ಕೋಟಿ, ವೃತ್ತಿ ತೆರಿಗೆ ಮೂಲಕ ₹942 ಕೋಟಿ ತೆರಿಗೆ ಸಂಗ್ರಹಿಸಲಾಗಿದೆ. ಏಪ್ರಿಲ್ ಮತ್ತು ಮೇ ತಿಂಗಳಿನಲ್ಲಿ ₹ 11,409 ಕೋಟಿ ತೆರಿಗೆ ಸಂಗ್ರಹಿಸಲಾಗಿದೆ.
ವಾರ್ಷಿಕ ತೆರಿಗೆ ಸಂಗ್ರಹ ಗುರಿಯ ಶೇ 14.92ರಷ್ಟು ಸಾಧನೆಯಾಗಿದೆ. ಅಬಕಾರಿ ಇಲಾಖೆಯಲ್ಲಿ 2021-22ನೇ ಸಾಲಿಗೆ ₹ 24,580 ಕೋಟಿ ತೆರಿಗೆ ಗುರಿ ನಿಗದಿಪಡಿಸಲಾಗಿತ್ತು. ಏಪ್ರಿಲ್, ಮೇ ತಿಂಗಳಲ್ಲಿ ₹4284.05 ಕೋಟಿ ತೆರಿಗೆ ಸಂಗ್ರಹವಾಗಿದೆ. ಕಳೆದ ವರ್ಷದ ಏಪ್ರಿಲ್, ಮೇ ತಿಂಗಳಿಗೆ ಹೋಲಿಸಿದರೆ ತೆರಿಗೆ ಸಂಗ್ರಹ ಪ್ರಮಾಣ ಹೆಚ್ಚಾಗಿದೆ. ಈ ವರ್ಷದ ಅಬಕಾರಿ ತೆರಿಗೆ ಸಂಗ್ರಹದಲ್ಲಿಯೂ ಹೆಚ್ಚಳ ಕಂಡುಬಂದಿದೆ.
2020-21ರಲ್ಲಿ ₹ 23,332.10 ಕೋಟಿ ತೆರಿಗೆ ಸಂಗ್ರಹವಾಗಿದೆ. ಶೇ 8.10ರಷ್ಟು ಬೆಳವಣಿಗೆ ದರವಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ವಾಣಿಜ್ಯ ತೆರಿಗೆ ಮತ್ತು ಅಬಕಾರಿ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಪ್ರಧಾನಿಗೆ ಸಿಎಂ ಪತ್ರ
ಈ ನಡುವೆ ಜಿಎಸ್ಟಿ ಪರಿಹಾರ ವ್ಯವಸ್ಥೆಯನ್ನು ಇನ್ನಷ್ಟು ಕಾಲ ವಿಸ್ತರಿಸಬೇಕು ಎಂದು ವಿನಂತಿಸಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ. ಜಿಎಸ್ಟಿ ಪರಿಹಾರ ವ್ಯವಸ್ಥೆಯು 2022ಕ್ಕೆ ಅಂತ್ಯವಾಗಲಿದೆ ಎಂದು ಕೇಂದ್ರ ಸರ್ಕಾರ ಈ ಹಿಂದೆ ಘೋಷಿಸಿತ್ತು.
ದೇಶದಲ್ಲಿ ಚಿಲ್ಲರೆ ಹಣದುಬ್ಬರ ಹೆಚ್ಚಳ
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಹಾಕಿಕೊಂಡಿದ್ದ ಗುರಿಯ ಮಿತಿಯನ್ನೂ ಮೀರಿ ಚಿಲ್ಲರೆ ಹಣದುಬ್ಬರ ದರವು (Retail Price Index) 2021ರ ಮೇ ತಿಂಗಳಲ್ಲಿ ಶೇ 6.3ಕ್ಕೆ ಏರಿಕೆ ಆಗಿದೆ. ಏಪ್ರಿಲ್ನಲ್ಲಿ ಈ ಪ್ರಮಾಣ ಶೇ 4.23 ಇತ್ತು. ಈ ಬಗ್ಗೆ ಸೋಮವಾರದಂದು ಸರ್ಕಾರ ದತ್ತಾಂಶ ಬಿಡುಗಡೆ ಮಾಡಿದೆ. ಕಳೆದ ಆರು ತಿಂಗಳಲ್ಲಿ ಇದೇ ಮೊದಲ ಬಾರಿಗೆ, ಆರ್ಬಿಐ ಹಾಕಿಕೊಂಡಿದ್ದ ಗುರಿಯ ಮಿತಿಯನ್ನು ಮೀರಿದೆ. ಇನ್ನು ಸಗಟು ದರ ಸೂಚ್ಯಂಕ ಆಧಾರಿತ ಹಣದುಬ್ಬರ ದರವು (WPI) ಮೇ ತಿಂಗಳಲ್ಲಿ ಶೇ 12.94 ತಲುಪಿದೆ. ಹೆಚ್ಚುತ್ತಿರುವ ಕಚ್ಚಾ ತೈಲ ದರ, ಉತ್ಪಾದನಾ ವಸ್ತುಗಳು ಮತ್ತು ಕಳೆದ ವರ್ಷದ ಕಡಿಮೆ ಬೇಸ್ ಈ ಎಲ್ಲ ಅಂಶಗಳು ಸೇರಿಕೊಂಡು ಇಂಥ ಬೆಳವಣಿಗೆ ಆಗಿದೆ. ಸತತವಾಗಿ ಐದನೇ ತಿಂಗಳು WPI ಆಧಾರಿತ ಹಣದುಬ್ಬರ ದರವು ಏರಿಕೆ ದಾಖಲಿಸಿದೆ. ಹಣದುಬ್ಬರ ದರವು ಏರಿಕೆ ಆಗುತ್ತಿದ್ದಂತೆ ರಿಸರ್ವ್ ಬ್ಯಾಂಕ್ ಮೇಲೆ ಒತ್ತಡ ಹೆಚ್ಚಾಗುವಂತೆ ಮಾಡಿದೆ. ಆರ್ಥಿಕ ಚೇತರಿಕೆಗೆ ದರವನ್ನು ನಿಯಂತ್ರಿಸುವುದು ಬಹಳ ಅಗತ್ಯವಾಗಿದೆ.
(Tax Collection of Govt Karnataka in par with Goals Despite Covid pandemic)
ಇದನ್ನೂ ಓದಿ: GST Council: ಬ್ಲ್ಯಾಕ್ ಫಂಗಸ್ ಔಷಧಗಳಿಗೆ ತೆರಿಗೆ ವಿನಾಯಿತಿ; ಕೊರೊನಾ ಲಸಿಕೆಯ ಮೇಲೆ ಶೇ 5 ಜಿಎಸ್ಟಿ ಮುಂದುವರಿಕೆ
ಇದನ್ನೂ ಓದಿ: ಜೂನ್ 30ರವರೆಗೆ ವಾಹನ ತೆರಿಗೆ ಪಾವತಿಸುವ ಅವಧಿ ವಿಸ್ತರಣೆ
Published On - 9:02 pm, Mon, 14 June 21