ಭಾರತೀಯ ಸೇನೆಯ ಟೆಲಿಪೋನ್ಸ್ ಎಕ್ಸ್ ಚೇಂಜ್ ಅನ್ನು ಟಾರ್ಗೆಟ್ ಮಾಡಿ ಮಾಹಿತಿ ಕದಿಯಲು ಖಾಸಗಿಯಾಗಿಯೇ ಮನೆಯಲ್ಲೇ ಟೆಲಿಪೋನ್ ಎಕ್ಸ್ಚೇಂಜ್ ಆರಂಭಿಸಿದ್ದ ಅಘಾತಕಾರಿ ಘಟನೆ ನಮ್ಮ ಬೆಂಗಳೂರಿನಲ್ಲೇ ನಡೆದಿದೆ. ದೇಶದ ಮಿಲಿಟರಿ ಮಾಹಿತಿಗಳನ್ನು ಕದಿಯಲು ಖದೀಮರು ರೂಪಿಸಿದ್ದ ಪ್ಲ್ಯಾನ್ ಅನ್ನು ಈಗ ಪೊಲೀಸರು ಹಾಗೂ ಮಿಲಿಟರಿ ಇಂಟೆಲಿಜೆನ್ಸ್ ಸಿಬ್ಬಂದಿ ಜಂಟಿಯಾಗಿ ಭೇದಿಸಿದ್ದಾರೆ. ಬೆಂಗಳೂರಿನಲ್ಲೇ ಇಬ್ಬರು ಆರೋಪಿಗಳು ಪೊಲೀಸರ ಬಲೆಗೆ ಬಿದ್ದಿದ್ದಾರೆ.
ನಾವೆಲ್ಲಾ ಟೆಲಿಪೋನ್ ಎಕ್ಸ್ಚೇಂಜ್ಗಳನ್ನು ಬಿಎಸ್‌ಎನ್‌ಎಲ್ ಕಚೇರಿಗಳಲ್ಲಿ ನೋಡಿದ್ದೇವೆ. ಆದರೆ, ಬೆಂಗಳೂರಿನ ಬಿಟಿಎಂ ಬಡಾವಣೆಯ ಆರು ಮನೆಗಳಲ್ಲೇ ಟೆಲಿಪೋನ್ ಎಕ್ಸ್ಚೇಂಜ್ಗಳು ಸದ್ದಿಲ್ಲದೆ ಯಾರ ಗಮನಕ್ಕೂ ಬರದೆ ಕೆಲಸ ಮಾಡುತ್ತಿದ್ದವು. ಈ ಟೆಲಿಪೋನ್ ಎಕ್ಸ್ಚೇಂಜ್ಗಳ ಕೆಲಸ ಕಾಲ್ ಕನೆಕ್ಟ್ ಮಾಡುವುದು ಮಾತ್ರವಲ್ಲ, ಭಾರತೀಯ ಸೇನೆಯ ರಹಸ್ಯ ಮಾಹಿತಿಗೆ ಕನ್ನ ಹಾಕುವುದು. ಸೇನೆಯ ಮಾಹಿತಿಯನ್ನು ಕದ್ದು ಉಗ್ರಗಾಮಿ ಸಂಘಟನೆಗಳಿಗೆ ನೀಡುವುದು. ಇದಕ್ಕಾಗಿ ನಮ್ಮ ಬೆಂಗಳೂರು, ನಮ್ಮ ಉದ್ಯಾನನಗರಿ, ಸಿಲಿಕಾನ್ ವ್ಯಾಲಿಯ ಪ್ರತಿಷ್ಠಿತ ಬಿಟಿಎಂ ಬಡಾವಣೆಯ 2ನೇ ಹಂತದ ಆರು ಮನೆಗಳಲ್ಲಿ ಟೆಲಿಪೋನ್ ಎಕ್ಸ್ಚೇಂಜ್ಗಳು ಆರಂಭವಾಗಿದ್ದವು. ಇವುಗಳ ಉದ್ದೇಶ ಏನು? ಹೇಗೆ ಕೆಲಸ ಮಾಡುತ್ತಿದ್ದವು ಎಂಬ ಬಗ್ಗೆ ಇಲ್ಲಿದೆ ಮಾಹಿತಿ.
ಬೆಂಗಳೂರಿನ ಬಿಟಿಎಂ ಬಡಾವಣೆಯ ಆರು ಮನೆಗಳಲ್ಲಿ ಆರಂಭವಾಗಿದ್ದ ಟೆಲಿಪೋನ್ ಎಕ್ಸ್ಚೇಂಜ್ಗಳಿಂದ ಪಶ್ಚಿಮ ಬಂಗಾಳದ ಸಿಲಿಗುರಿಯಲ್ಲಿರುವ ಭಾರತೀಯ ಸೇನೆಯ ಮಿಲಿಟರಿ ಯೂನಿಟ್ಗೆ ಕರೆ ಮಾಡಲಾಗಿದೆ. ಸಿಲಿಗುರಿ ಘಟಕದಿಂದ ಮಿಲಿಟರಿ ಮಾಹಿತಿಗಳನ್ನು ರಹಸ್ಯವಾಗಿ ಕದಿಯುವುದು ಈ ಗ್ಯಾಂಗ್ನ ಪ್ಲ್ಯಾನ್ ಆಗಿತ್ತು. ಕದ್ದ ಮಾಹಿತಿಯನ್ನು ದುಬೈ ಸೇರಿದಂತೆ ವಿದೇಶಗಳಿಗೆ ರವಾನೆ ಮಾಡುವ ಕೆಲಸವನ್ನು ಇವರು ಸದ್ದಿಲ್ಲದೇ ಮಾಡುತ್ತಿದ್ದರು.
ತಮಿಳುನಾಡಿನ ತಿರುಪ್ಪುರಂ ಜಿಲ್ಲೆಯ 27 ವರ್ಷದ ಗೌತಮ್ ಹಾಗೂ ಕೇರಳದ ಮಲಪ್ಪುರಂ ಜಿಲ್ಲೆಯ ಇಬ್ರಾಹಿಂ ಪುಲ್ಲಟ್ಟಿ ಮಾತ್ರವಲ್ಲದೇ, ಇನ್ನೂ ಕೆಲವರು ಬೆಂಗಳೂರಿನ ಬಿಟಿಎಂ ಬಡಾವಣೆಯ ಆರು ಮನೆಗಳನ್ನು ವಾಸದ ಉದ್ದೇಶಕ್ಕಾಗಿ ಬಾಡಿಗೆಗೆ ಪಡೆದಿದ್ದರು. ಆದರೆ, ಮನೆ ಮಾಲೀಕರಿಗೆ ಗೊತ್ತೇ ಇಲ್ಲದಂತೆ, ಮನೆಗಳಲ್ಲೇ ಟೆಲಿಪೋನ್ ಎಕ್ಸ್ಚೇಂಜ್ ಆರಂಭಿಸಿದ್ದರು. ಟೆಲಿಪೋನ್ ಎಕ್ಸ್ಚೇಂಜ್ ಆರಂಭಿಸಲು 30 ಎಲೆಕ್ಟ್ರಾನಿಕ್ ಡಿವೈಸ್ಗಳನ್ನು ಬಳಸಿದ್ದಾರೆ. ಪ್ರತಿಯೊಂದು ಎಲೆಕ್ಟ್ರಾನಿಕ್ ಡಿವೈಸ್ಗೂ 32 ಸಿಮ್ ಕಾರ್ಡ್ ಹಾಕಿದ್ದಾರೆ.
ಇದಕ್ಕಾಗಿ ಬೆಂಗಳೂರು ಮತ್ತು ತಮಿಳುನಾಡು ರಾಜ್ಯದಲ್ಲಿ ಸಿಮ್ ಪಡೆಯಲು ಬರುವವರ ಹೆಸರಿನಲ್ಲೇ 900ಕ್ಕೂ ಹೆಚ್ಚು ಸಿಮ್ ಕಾರ್ಡ್ಗಳನ್ನು ಖರೀದಿಸಿದ್ದಾರೆ. ಅಮಾಯಕರು ಸಿಮ್ ಕಾರ್ಡ್ ಪಡೆಯಲು ಬಂದಾಗ ಅವರ ಆಧಾರ್ ಕಾರ್ಡ್, ಥಂಬ್ ಇಂಪ್ರೆಷನ್ ಅನ್ನು ಅವರಿಗೆ ಗೊತ್ತಿಲ್ಲದಂತೆ ಕೆಲ ಸಹಚರರಿಂದ ಪಡೆದುಕೊಂಡಿದ್ದಾರೆ. 900ಕ್ಕೂ ಹೆಚ್ಚು ಸಿಮ್ಗಳನ್ನು 32 ಸಿಮ್ ಕಿಟ್ಗಳಲ್ಲಿ ಹಾಕಿ ಟೆಲಿಪೋನ್ ಎಕ್ಸ್ಚೇಂಜ್ ಆರಂಭಿಸಿದ್ದಾರೆ.
ದುಬೈನಲ್ಲಿ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದ ಇಬ್ರಾಹಿಂ ಪುಲ್ಲಟ್ಟಿಗೆ ನಿಯಾಜ್ ಎನ್ನುವವನು ಪರಿಚಯವಾಗಿದ್ದ. ನಿಯಾಜ್, ದುಬೈನಲ್ಲಿ ಇದೇ ರೀತಿ ಟೆಲಿಪೋನ್ ಎಕ್ಸ್ಚೇಂಜ್ ಸೆಂಟರ್ ಮಾಡಿಕೊಂಡಿದ್ದ. ಇದನ್ನೆಲ್ಲಾ ಕೇರಳದ ಇಬ್ರಾಹಿಂ ಪುಲ್ಲಟ್ಟಿ ಕೂಡ ನೋಡಿದ್ದ. ಕಳೆದ ವರ್ಷ ಇಬ್ರಾಹಿಂ ಪುಲ್ಲಟ್ಟಿ ಕೇರಳಕ್ಕೆ ವಾಪಸ್ ಬಂದ. ದುಬೈನಲ್ಲಿ ನೋಡಿದ್ದ ಆಕ್ರಮ ಟೆಲಿಪೋನ್ ಎಕ್ಸ್ ಚೇಂಜ್ ಸೆಂಟರ್ ಅನ್ನು ಭಾರತದಲ್ಲಿ ಆರಂಭಿಸಲು ನಿರ್ಧಾರ ಮಾಡಿದ. ಸೀದಾ ಬೆಂಗಳೂರಿಗೆ ಬಂದವನೇ, ಬಿಟಿಎಂ ಬಡಾವಣೆಯಲ್ಲೇ ಸದ್ದಿಲ್ಲದೇ ವಾಸಕ್ಕಿದ್ದ ಮನೆಗಳಲ್ಲೇ ಟೆಲಿಪೋನ್ ಎಕ್ಸ್ಚೇಂಜ್ ಆರಂಭಿಸಿದ್ದ.
ಈ ಟೆಲಿಪೋನ್ ಎಕ್ಸ್ಚೇಂಜ್ಗಳಲ್ಲೇ ಇಂಟರ್ನ್ಯಾಷನಲ್ ಪೋನ್ಕಾಲ್ಗಳನ್ನು ಲೋಕಲ್ ಪೋನ್ ಕಾಲ್ ಆಗಿ ಪರಿವರ್ತನೆ ಮಾಡುತ್ತಿದ್ದ. ಬೆಂಗಳೂರಿಗೆ ಉದ್ಯೋಗ ಅರಸಿ ಬಂದಿದ್ದ ತಮಿಳುನಾಡಿನ ಗೌತಮ್ ಈ ಇಬ್ರಾಹಿಂ ಪುಲ್ಲಟ್ಟಿಗೆ ಹೇಗೆ ಪರಿಚಯವಾದ ಎಂಬ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದ ಗೌತಮ್ ಸಹ ಆಕ್ರಮದಲ್ಲಿ ಭಾಗಿಯಾಗಿದ್ದ. ಬೆಂಗಳೂರಿನ ಬಿಟಿಎಂ ಬಡಾವಣೆಯ 2ನೇ ಹಂತದ 10ನೇ ಕ್ರಾಸ್ನಲ್ಲೇ ಈ ಗೌತಮ್ ಮತ್ತು ಇಬ್ರಾಹಿಂ ಪುಲ್ಲಟ್ಟಿ ಬೇರೆ ಬೇರೆ ಮನೆಗಳಲ್ಲಿ ವಾಸ ಇದ್ದರು. ಈ ಎರಡು ಮನೆಗಳಲ್ಲೂ ಟೆಲಿಪೋನ್ ಎಕ್ಸ್ಚೇಂಜ್ಗಳನ್ನೇ ಆರಂಭಿಸಿದ್ದರು. ಗೌತಮ್, ಎರಡನೇ ಮಹಡಿಯ ತನ್ನ ಸಿಂಗಲ್ ರೂಮಿನಲ್ಲೇ ಟೆಲಿಪೋನ್ ಎಕ್ಸ್ಚೇಂಜ್ ನಡೆಸುತ್ತಿದ್ದ. ಗೌತಮ್ಗೆ ಇಬ್ರಾಹಿಂ ಪ್ರತಿ ತಿಂಗಳು 70 ಸಾವಿರ ರೂಪಾಯಿ ಸಂಬಳ ಕೊಡ್ತಿದ್ದ. ಈ ವರ್ಷದ ಫೆಬ್ರುವರಿಯಿಂದ ಗೌತಮ್, ಇಬ್ರಾಹಿಂ ಪುಲ್ಲಟ್ಟಿ ಗ್ಯಾಂಗ್ಗೆ ಸೇರ್ಪಡೆಯಾಗಿದ್ದ.
ಲೋಕಲ್ ಕಾಲ್ ಆಗಿ ಐಎಸ್ಡಿ ಕಾಲ ಪರಿವರ್ತನೆ
ಈ ಟೆಲಿಫೋನ್ ಎಕ್ಸ್ಚೇಂಜ್ ಆರಂಭಿಸಲು ಈ ಗ್ಯಾಂಗ್ 30 ಎಲೆಕ್ಟ್ರಾನಿಕ್ ಡಿವೈಸ್ ಬಳಸಿದ್ದರು. ಸಿಮ್ ಕಿಟ್ಗಳ ಮೂಲಕ ಅಂತಾರಾಷ್ಟ್ರೀಯ ಪೋನ್ ಕಾಲ್ಗಳನ್ನು ಲೋಕಲ್ ಕಾಲ್ಗಳಾಗಿ ಪರಿವರ್ತನೆ ಮಾಡುತ್ತಿದ್ದರು. ಇಂಟರ್ ನ್ಯಾಷನಲ್ ಕಾಲ್ಗೆ ₹10 ಇದ್ದರೆ, ಇವರು ಮಾಡುತ್ತಿದ್ದ ಕಾಲ್ಗೆ ಕೇವಲ 1ರಿಂದ 2 ರೂಪಾಯಿ ಖರ್ಚಾಗುತ್ತಿತ್ತು. ಎರಡು ದೇಶಗಳಲ್ಲಿ ಕಂಪನಿಗಳಿದ್ರೆ, ಸಿಮ್ ಕಿಟ್ ಸಹಕಾರಿ. ಈ ಸಿಮ್ ಕಿಟ್ಗಳನ್ನು ಎಲ್ಲಿ ಕೆಲಸ ಮಾಡ್ತಾರೋ, ಅಲ್ಲಿಯೇ ಇಟ್ಟುಕೊಳ್ಳಬೇಕು. ಸಿಮ್ ಕಿಟ್ ಇಟ್ಟ ಸ್ಥಳದಲ್ಲೇ ಬಂದು ಕಾಲ್ ಮಾಡಿ, ಕನೆಕ್ಟ್ ಮಾಡಿಕೊಂಡು ಮಾತನಾಡಬಹುದು. ಈ ಸಿಮ್ ಕಿಟ್ ಬಳಸಿದರೆ, ಡಾಟಾ, ಕಾಲ್ ಡಿಟೈಲ್ಸ್ ರೆಕಾರ್ಡ್ ಅನ್ನು ರಿಟ್ರೀವ್ ಮಾಡಲು ಕೂಡ ಆಗಲ್ಲ.
ಈ ಟೆಲಿಪೋನ್ ಎಕ್ಸ್ಚೇಂಜ್ ಅನ್ನು ಭಯೋತ್ಪಾದನಾ ಚಟುವಟಿಕೆಗೆ ದುರ್ಬಳಕೆ ಮಾಡಿಕೊಂಡಿರುವ ಸಾಧ್ಯತೆಯೂ ಇದೆ. ಒಂದು ವೇಳೆ ಈ ರೀತಿಯಾಗಿದ್ದರೇ, ರಾಷ್ಟ್ರೀಯ ಭದ್ರತೆ, ಅಂತರಿಕ ಭದ್ರತೆಗೆ ಬಾರಿ ಪೆಟ್ಟಾಗಲಿದೆ. ಹವಾಲಾ ಮಾರ್ಗದ ಮೂಲಕ ಪ್ರತಿ ತಿಂಗಳು ₹ 10ರಿಂದ 15 ಲಕ್ಷ ಗಳಿಸಿದ್ದಾರೆ. ಯಾವ್ಯಾವ ಅಪರಾಧ ಚಟುವಟಿಕೆಗೆ ಈ ಪೋನ್ ಕಾಲ್ ಬಳಸಿದ್ದಾರೆ ಎನ್ನುವ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಭಾರತೀಯ ಸೇನೆಯಿಂದ ರಹಸ್ಯ ಮಾಹಿತಿ ಕದಿಯಲು ಯತ್ನಿಸಿದಾಗ ಮಿಲಿಟರಿ ಇಂಟಲಿಜೆನ್ಸ್ ಗಮನಕ್ಕೆ ಬಂದಿದೆ. ಮಿಲಿಟರಿ ಸಿಬ್ಬಂದಿ ತನಿಖೆ ನಡೆಸಿದ ಬಳಿಕ ಈಗ ಸಿಕ್ಕಿ ಬಿದ್ದಿದ್ದಾರೆ.
ಬಿಟಿಎಂ ಬಡಾವಣೆಯ ಆರು ಮನೆಗಳ ಟೆಲಿಪೋನ್ ಎಕ್ಸ್ಚೇಂಜ್ಗಳಿಂದ ದುಬೈಗೆ ಹೆಚ್ಚಿನ ಪೋನ್ ಕಾಲ್ ಮಾಡಿದ್ದಾರೆ. ಅಂತಾರಾಷ್ಟ್ರೀಯ ಪೋನ್ ಕಾಲ್ಗಳನ್ನು ಲೋಕಲ್ ಕಾಲ್ಗಳಾಗಿ ಪರಿವರ್ತನೆ ಮಾಡಿದ್ದಾರೆ. ಇಬ್ರಾಹಿಂ ಪುಲ್ಲಟ್ಟಿ, ಗೌತಮ್ ಸೇರಿದಂತೆ ಐದು ಮಂದಿ ಹವಾಲಾ ಸಿಂಡಿಕೇಟ್ ಅನ್ನು ನಡೆಸಿದ್ದಾರೆ. ಈ ಇಬ್ಬರೇ ದುಬೈನಿಂದ ಪ್ರತಿ ತಿಂಗಳು ₹ 10 ರಿಂದ 15 ಲಕ್ಷ ಹಣವನ್ನು ಹವಾಲಾ ಮೂಲಕ ಪಡೆದಿದ್ದಾರೆ. ಈ ಪ್ರಕರಣದಲ್ಲಿ ಇನ್ನೂ ಮೂವರು ಭಾಗಿಗಳಾಗಿದ್ದು, ಅವರನ್ನು ಬಂಧಿಸಲು ಪೊಲೀಸರು ಯತ್ನಿಸುತ್ತಿದ್ದಾರೆ.
ಸಿಕ್ಕಿ ಬಿದ್ದಿದ್ದು ಹೇಗೆ?
ಇಬ್ರಾಹಿಂ ಪುಲ್ಲಟ್ಟಿ ಮತ್ತು ಗೌತಮ್ ಗ್ಯಾಂಗ್ ಸೇನೆಯಿಂದ ರಹಸ್ಯ ಮಾಹಿತಿ ಕದಿಯಲು ಯತ್ನಿಸಿದೆ. ಪಶ್ಚಿಮ ಬಂಗಾಳದ ಸಿಲಿಗುರಿಯಲ್ಲಿರುವ ಭಾರತೀಯ ಸೇನೆಯ ಪೋನ್ ಎಕ್ಸ್ಚೇಂಜ್ಗೂ ಮಾಡಿದ್ದಾರೆ. ಅಲ್ಲಿಂದ ಸೇನೆಯ ಮಾಹಿತಿಯನ್ನು ಆಕ್ರಮವಾಗಿ ಕದಿಯಲು ಯತ್ನಿಸಿದ್ದಾರೆ. ಪೋನ್ ಕಾಲ್ ಬಗ್ಗೆ ಸಿಲಿಗುರಿಯ ಮಿಲಿಟರಿ ಇಂಟಲಿಜೆನ್ಸ್ಗೆ ಅನುಮಾನ ಬಂದಿದೆ. ತಕ್ಷಣವೇ ಪೋನ್ ಕಾಲ್ ಬಗ್ಗೆ ಬೆಂಗಳೂರಿನ ಮಿಲಿಟರಿ ಇಂಟಲಿಜೆನ್ಸ್ಗೆ ಮಾಹಿತಿ ನೀಡಲಾಯಿತು. ಅವರು ಪೋನ್ಕಾಲ್ಗಳ ಬಗ್ಗೆ ವಾರಗಟ್ಟಲೇ ತನಿಖೆ ನಡೆಸಿದೆ. ಕೊನೆಗೆ ಬೆಂಗಳೂರಿನ ಐಪಿ ಅಡ್ರೆಸ್ ಬಳಸಿ ಪೋನ್ ಕಾಲ್ ಮಾಡಿರುವುದು ಗೊತ್ತಾಗಿದೆ. ಬಳಿಕ ಬೆಂಗಳೂರಿನ ಯಾವ ಸ್ಥಳದಿಂದ ಪೋನ್ ಕಾಲ್ ಮಾಡಲಾಗುತ್ತಿದೆ ಎನ್ನುವುದನ್ನು ಮಿಲಿಟರಿ ಇಂಟಲಿಜೆನ್ಸ್ ಪತ್ತೆ ಹಚ್ಚಿದೆ.
ಬೆಂಗಳೂರಿನ ಬಿಟಿಎಂ ಬಡಾವಣೆಯ ಆರು ಮನೆಗಳಿಂದಲೇ ಈ ಪೋನ್ಕಾಲ್ಗಳು ಬಂದಿವೆ ಎನ್ನುವುದು ಮಿಲಿಟರಿ ಇಂಟಲಿನ್ಸ್ಗೆ ಗೊತ್ತಾಗಿದೆ. ಅವರು ಬೆಂಗಳೂರು ಪೊಲೀಸ್ ಕಮೀಷನರ್ ಕಮಲ್ ಪಂತ್ಗೆ ಮಾಹಿತಿ ನೀಡಿದ್ದಾರೆ. ಕಮಲ್ ಪಂತ್ ಪ್ರಕರಣದ ತನಿಖೆಯನ್ನು ಸಿಸಿಬಿಗೆ ವಹಿಸಿದ್ದಾರೆ. ಸಿಸಿಬಿ ಅಧಿಕಾರಿಗಳು ನೇರವಾಗಿ ಎಲ್ಲ ಆರು ಮನೆಗಳನ್ನು ಪತ್ತೆ ಹಚ್ಚಿ, ದಾಳಿ ನಡೆಸಿ, ಇಬ್ರಾಹಿಂ ಪುಲ್ಲಟ್ಟಿ, ಗೌತಮ್ ಇಬ್ಬರನ್ನು ಬಂಧಿಸಿದ್ದಾರೆ. ಈಗ ಭಟ್ಕಳದ ನಿಸಾರ್ ಅಹಮದ್ ಎಂಬಾತನನ್ನು ಈ ಪ್ರಕರಣದಲ್ಲಿ ಬಂಧಿಸಿರುವುದಾಗಿ ಸಿಸಿಬಿ ಜಂಟಿ ಪೋಲೀಸ್ ಕಮೀಷನರ್ ಸಂದೀಪ್ ಪಾಟೀಲ್ ಹೇಳಿದ್ದಾರೆ.
ಈ ಆಕ್ರಮ ಟೆಲಿಪೋನ್ ಎಕ್ಸ್ಚೇಂಜ್ ಅನ್ನು ಯಾವ್ಯಾವ ಚಟುವಟಿಕೆಗಳಿಗೆ ಬಳಸುತ್ತಿದ್ದರು ಎನ್ನುವ ಬಗ್ಗೆ ಪೋಲೀಸರು ತನಿಖೆ ನಡೆಸುತ್ತಿದ್ದಾರೆ. ಇಬ್ರಾಹಿಂ ಪುಲ್ಲಟ್ಟಿ, ಗೌತಮ್ ಇಬ್ಬರನ್ನೂ ಹತ್ತು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಪಡೆಯಲಾಗಿದೆ.
(Telephone Exchange Started in Bengaluru to Steal Information of Indian Army Unit of Siliguri)
ಇದನ್ನೂ ಓದಿ: ಸೇನೆಯನ್ನು ಪ್ರಬಲಗೊಳಿಸಲು ಹೊಸ ಯುದ್ಧ ಘಟಕಗಳನ್ನು ಸಜ್ಜುಗೊಳಿಸಲಿದೆ ಭಾರತೀಯ ಸೇನೆ
Published On - 6:50 pm, Thu, 10 June 21