ಬೀದರ್: ಪ್ರೀತಿಸಿ ಮದುವೆಯಾಗಿ ಮನೆಯಿಂದ ಓಡಿಬಂದ ಜೋಡಿಗೆ ಇದೀಗ ಜಾತಿಯೇ ಭೂತದಂತೆ ಅಡ್ಡಬರುತ್ತಿದೆ. ಅದರಲ್ಲೂ ಹುಡುಗಿ ಮನೆಯವರೇ ಅಡ್ಡಿಪಡಿಸುತ್ತಿರುವುದು ನುಂಗಲಾರದ ತುತ್ತಾಗಿ ಪರಿಣಮಿಸಿದೆ. ತಮ್ಮನ್ನು ರಕ್ಷಣೆ ಮಾಡುವಂತೆ ಪೊಲೀಸ್ ಠಾಣೆಯ ಮೆಟ್ಟಿಲು ಏರಿದರೂ ಪ್ರಯೋಜನ ಆಗುತ್ತಿಲ್ಲ.
ಏಳು ವರ್ಷಗಳಿಂದ ಪ್ರೀತಿಸುತ್ತಿದ್ದ ಹುಮನಾಬಾದ್ ಪಟ್ಟಣದ ಮರಾಠಾ ಗಲ್ಲಿಯ ನಿವಾಸಿಗಳಾದ ಸುಧಾರಾಣಿ ಮತ್ತು ಸೂರ್ಯಕಾಂತ್ 2019ರ ನವೆಂಬರ್ 13ರಂದು ರಿಜಿಸ್ಟರ್ ಮದುವೆಯಾಗಿದ್ದಾರೆ. ಆದರೆ ಜಾತಿ ಬೇರೆ ಎನ್ನುವ ಕಾರಣಕ್ಕೆ ಹುಡುಗಿಯ ಮನೆಯವರು ಮದುವೆಯನ್ನು ಒಪ್ಪುತ್ತಿಲ್ಲ. ಈ ಮಧ್ಯೆ ಹುಡುಗನಿಗೆ ನಿರಂತರವಾಗಿ ಬೆದರಿಕೆ ಕರೆಗಳನ್ನು ಮಾಡಲಾಗುತ್ತಿದ್ದು, ಆತನ ಕುಟುಂಬದವರಿಗೂ ಹುಡುಗಿ ಕಡೆಯವರು ಮಾನಸಿಕ ಕಿರುಕುಳ ನೀಡುತ್ತಿದ್ದಾರೆ ಎನ್ನಲಾಗಿದೆ. ನಮಗೆ ರಕ್ಷಣೆ ಕೊಡಿ ಎಂದು ಜೋಡಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಆದರೆ ಪೊಲೀಸರೂ ಇವರ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂದು ಅಲವತ್ತುಕೊಳ್ಳುತ್ತಿದ್ದಾರೆ.
ಒಂದೇ ಬಡಾವಣೆ ನಿವಾಸಿಗಳು
ಒಂದೇ ಬಡಾವಣೆಯಲ್ಲಿ ವಾಸವಾಗಿದ್ದ ಸುಧಾರಾಣಿ ಮತ್ತು ಸೂರ್ಯಕಾಂತ್ ನಡುವಿನ ಪರಿಚಯ ಪ್ರೀತಿಗೆ ತಿರುಗಿತ್ತು. ತಮ್ಮ ಪ್ರೇಮವನ್ನು ಬಿಟ್ಟುಕೊಡಲು ತಯಾರಿಲ್ಲದ ಇವರು, ವರ್ಷದ ಹಿಂದೆ ಮನೆಯವರ ವಿರೋಧದ ನಡುವೆಯೂ ಮದುವೆಯಾಗಿದ್ದಾರೆ. ಆದರೆ ಹುಡುಗಿಯ ಮನೆಯಲ್ಲಿ ಈ ವಿವಾಹವನ್ನು ಒಪ್ಪುತ್ತಿಲ್ಲ. ಆತನನ್ನು ಬಿಟ್ಟು ಬಾ ಎಂದು ಕಿರುಕುಳ ನೀಡುತ್ತಿದ್ದಾರೆ. ಇನ್ನು ಹುಡುಗನ ಕುಟುಂಬದವರು ಹುಡುಗಿಯ ಮನೆಯವರ ಕಿರುಕುಳಕ್ಕೆ ಹೆದರಿ ಮರಾಠಾ ಕಾಲನಿ ಬಿಟ್ಟು ವಿದ್ಯಾನಗರ ಕಾಲನಿಗೆ ಹೋಗಿ ವಾಸವಾಗಿದ್ದಾರೆ. ಆದರೂ ದಂಪತಿಗಾಗಲಿ, ಹುಡುಗನ ಮನೆಯವರಿಗಾಗಲಿ ಕಿರುಕುಳ ತಪ್ಪುತ್ತಿಲ್ಲ.
ಪ್ರೀತಿಸಿ ಮದುವೆಯಾಗಿದ್ದ ಜೋಡಿ ಹೈದರಾಬಾದ್ಗೆ ತೆರಳಿದ್ದರು. ಈಗ ಒಂದು ತಿಂಗಳ ಹಿಂದಷ್ಟೇ ಅಲ್ಲಿಂದ ವಾಪಸ್ ಬಂದಿದ್ದಾರೆ. ಆದರೆ ಹುಡುಗಿಯ ಅಣ್ಣ, ಚಿಕ್ಕಪ್ಪ ನಿರಂತರವಾಗಿ ಧಮಕಿ ಹಾಕುತ್ತಿದ್ದಾರೆ. ಪ್ರೇಮಿಗಳು ಪೊಲೀಸರ ಸಹಾಯಕ್ಕಾಗಿ ಕಾಯುತ್ತಿದ್ದಾರೆ.
ಕೊಟಗ್ಯಾಳ ಗ್ರಾಮದಲ್ಲಿ ಚಾಕುವಿನಿಂದ ಇರಿದು, ಬೆಂಕಿ ಹಚ್ಚಿ ಬಾಲಕನ ಬರ್ಬರ ಹತ್ಯೆ
Published On - 9:56 am, Sat, 2 January 21