ತುಮಕೂರು: ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಇಂದು (ಫೆ. 6) ಜಿಲ್ಲೆಯ ಗುಬ್ಬಿ ತಾಲೂಕಿನ ಬಿದರೆಹಳ್ಳ ಕಾವಲ್ ಗ್ರಾಮದ ಬಳಿಯ ಏಷ್ಯಾದಲ್ಲೇ ಅತಿ ದೊಡ್ಡ ಹೆಚ್ಎಎಲ್ನ ಹೆಲಿಕಾಪ್ಟರ್ ಉತ್ಪಾದನಾ ಘಟಕವನ್ನು (HAL Helicopter Factory) ಉದ್ಘಾಟಿಸಲಿದ್ದಾರೆ. 2016ರಲ್ಲಿ ಪ್ರಧಾನಿಯವರೇ ಈ ಘಟಕ ನಿರ್ಮಾಣಕ್ಕೆ ಶಂಕುಸ್ಥಾಪನೆ ಮಾಡಿದ್ದರು. 615 ಎಕರೆ ಜಾಗದಲ್ಲಿ ನಿರ್ಮಾಣವಾಗಿರುವ ಈ ಹೆಲಿಕಾಪ್ಟರ್ ಘಟಕ, ಹೆಲಿಪ್ಯಾಡ್, ಫ್ಲೈಟ್ ಹ್ಯಾಂಗಾರ್, ಅಡ್ಮಿನ್ ಕಟ್ಟಡ ಸೇರಿ ಕೆಲವಾರು ಸೌಲಭ್ಯಗಳನ್ನು ಒಳಗೊಂಡಿದೆ. ಇಂದಿನಿಂದ ಮೊದಲ ಹಂತದ ಕಾರ್ಯಾಚರಣೆಗಳು ನಡೆಯುತ್ತವೆ ಎನ್ನಲಾಗಿದೆ.
ಹೆಚ್ಎಎಲ್ ಬಳಿ ಭಾರತೀಯ ಮಿಲಟರಿಗೆ ಯುದ್ಧ ಹೆಲಿಕಾಪ್ಟರ್ ನಿರ್ಮಿಸುವ ಬಹಳಷ್ಟು ಯೋಜನೆಗಳಿವೆ. ಬೆಂಗಳೂರಿನಲ್ಲಿರುವ ಹೆಚ್ಎಲ್ನ ಮುಖ್ಯ ತಯಾರಕಾ ಸಂಕೀರ್ಣ ಸಾಕಾಗದೇ ಇರುವುದರಿಂದ ತುಮಕೂರಿನಲ್ಲಿ ಹೊಸದಾದ ಬೃಹತ್ ಘಟಕ ನಿರ್ಮಿಸಲಾಗಿದೆ.
ತುಮಕೂರಿನ ಈ ಹೆಲಿಕಾಪ್ಟರ್ ಫ್ಯಾಕ್ಟರಿಯಲ್ಲಿ ಮೊದಲಿಗೆ ಲೈಟ್ ಯುಟಿಲಿಟಿ ಹೆಲಿಕಾಪ್ಟರುಗಳನ್ನು (LUH Copters) ತಯಾರಿಸಲಾಗುತ್ತದೆ. ನಂತರ ಲೈಟ್ ಕಾಂಬ್ಯಾಟ್ ಹೆಲಿಕಾಪ್ಟರುಗಳು (LCH) ಮತ್ತು ಮಲ್ಟಿರೋಲ್ ಹೆಲಿಕಾಪ್ಟರುಗಳನ್ನು (IMRH) ತಯಾರಿಸುವ ಯೋಜನೆ ಇದೆ.
ಇದನ್ನೂ ಓದಿ: ಇಂದು ಪ್ರಧಾನಿ ಮೋದಿ ಬೆಂಗಳೂರು, ತುಮಕೂರು ಭೇಟಿ; 6 ಪ್ರಮುಖ ಯೋಜನೆಗಳಿಗೆ ಚಾಲನೆ
ಮುಂದಿನ 20 ವರ್ಷದ ಕಾಲಾವಧಿಯಲ್ಲಿ 3-15 ಟನ್ ಶ್ರೇಣಿಯ 1 ಸಾವಿರಕ್ಕೂ ಹೆಚ್ಚು ಹೆಲಿಕಾಪ್ಟರುಗಳು ಹೆಚ್ಎಎಲ್ ತಯಾರಿಸಲಿದೆ. ಇದರ ಒಟ್ಟು ಮೌಲ್ಯ 4 ಲಕ್ಷ ಕೋಟಿ ರೂಗೂ ಹೆಚ್ಚು ಎನ್ನಲಾಗಿದೆ. ಈಗಾಗಲೇ ಒಂದು ಹೆಲ್ಯುಎಚ್ ಹೆಲಿಕಾಪ್ಟರ್ ತಯಾರಿಸಲಾಗಿದ್ದು ಅದರ ಪರೀಕ್ಷೆಯೂ ಯಶಸ್ವಿಯಾಗಿ ಉದ್ಘಾಟನೆಗೆ ಅಣಿಯಾಗಿದೆ. ಕಾರ್ಖಾನೆಯಲ್ಲಿ 6,000ಕ್ಕೂ ಹೆಚ್ಚು ಜನರಿಗೆ ಉದ್ಯೋಗದ ನಿರೀಕ್ಷೆ ಇದೆ.
ತುಮಕೂರಿನ ಈ ಹೊಸ ಫ್ಯಾಕ್ಟರಿಯಲ್ಲಿ ಆರಂಭದಲ್ಲಿ ವರ್ಷಕ್ಕೆ 30 ಹೆಲಿಕಾಪ್ಟರ್ಗಳನ್ನು ತಯಾರಿಸುವ ಉದ್ದೇಶ ಇದೆ. ನಂತರ ಹಂತ ಹಂತವಾಗಿ ಈ ಸಂಖ್ಯೆಯನ್ನು 90ಕ್ಕೆ ಹೆಚ್ಚಿಸುವ ಗುರಿ ಹೊಂದಲಾಗಿದೆ ಎಂದು ರಕ್ಷಣಾ ಇಲಾಖೆ ಹೇಳಿದೆ.
ಭಾರತೀಯ ವಾಯಪಡೆ ಬಳಿ ಈಗ ಚೀತಾ ಮತ್ತು ಚೇತಕ್ ಎಂಬೆರಡು ಮಾದರಿಯ ಹೆಲಿಕಾಪ್ಟರುಗಳಿವೆ. ಆದರೆ, ಇವುಗಳು ಹಳೆಯದಾಗಿದ್ದು, ಹೊಸ ತಂತ್ರಜ್ಞಾನದೊಂದಿಗೆ ತಯಾರಿಸಲಾಗಿರುವ ಲೈಟ್ ಯುಟಿಲಿಟಿ ಹೆಲಿಕಾಪ್ಟರುಗಳು ಈ ಚೀತಾ ಮತ್ತು ಚೇತಕ್ ಸ್ಥಾನಗಳನ್ನು ತುಂಬಲಿವೆ. ಒಮ್ಮೆ ಎಲ್ಯುಎಚ್ ಕಾಪ್ಟರುಗಳು ತಕ್ಕ ಪ್ರಮಾಣದಲ್ಲಿ ನಿರ್ಮಾಣಗೊಂಡು ನಿಯೋಜನೆಗೊಂಡ ಬಳಿಕ ಚೀತಾ ಮತ್ತು ಚೇತಕ್ ಹೆಲಿಕಾಪ್ಟರುಗಳು ಕಾರ್ಯಾಚರಣೆ ನಿಲ್ಲಿಸಲಿವೆ. ಈ ಹಳೆಯ ಹೆಲಿಕಾಪ್ಟರುಗಳನ್ನು ಹೆಚ್ಎಎಲ್ ಸಂಸ್ಥೆಯೇ ನಿರ್ಮಿಸಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ