ಬೆಂಗಳೂರು: ಟರ್ಕಿ (Turkey) ಹಾಗೂ ಸಿರಿಯಾದಲ್ಲಿ 4 ಪ್ರಬಲ ಭೂಕಂಪಗಳು ಸಂಭವಿಸಿದ್ದು, ಜನತೆಯನ್ನು ಅಕ್ಷರಶಃ ನರಕಕ್ಕೆ ತಳ್ಳಿದೆ. ಭೂಕಂಪದಿಂದ ಈಗಾಗಲೇ 7,800ಕ್ಕೂ ಅಧಿಕ ಮಂದಿ ಮೃತಪಟ್ಟಿರುವ ಮಾಹಿತಿ ಲಭ್ಯವಾಗಿದೆ. ಆದರೆ ಕಟ್ಟಡದ ಅವಶೇಷಗಳಡಿ ಇನ್ನೂ 1,80,000 ಮಂದಿ ಸಿಲುಕಿರುವ ಸಾಧ್ಯತೆ ಇದ್ದು, ಎಲ್ಲರೂ ಮೃತಪಟ್ಟಿರಬಹುದು ಎಂದು ಅಂದಾಜಿಸಲಾಗಿದೆ. ಈ ಹಿನ್ನೆಲೆ ಟರ್ಕಿಯಲ್ಲಿ ಸಿಲುಕಿರುವ ಕನ್ನಡಿಗರ ರಕ್ಷಣೆಗೆ ಸಹಾಯವಾಣಿ ಆರಂಭ ಮಾಡಲಾಗಿದೆ. ರಾಜ್ಯ ವಿಪತ್ತು ನಿರ್ವಹಣಾ ಇಲಾಖೆ ನಿನ್ನೆಯಿಂದ (ಫೆ.7) ಸಹಾಯವಾಣಿ ಆರಂಭಿಸಿದೆ. ಈ ಸಂಬಂಧ ರಾಜ್ಯ ಸರ್ಕಾರ ಭಾರತದ ರಾಯಭಾರಿ ಕಚೇರಿ ಜತೆ ಸಂಪರ್ಕದಲ್ಲಿದೆ.
ನಿನ್ನೆಯಿಂದ ಸದ್ಯ ಇಲ್ಲಿ ತನಕ ಯಾವುದೇ ಕರೆ ಬಂದಿಲ್ಲ. ಕರೆ ಬಂದ ತಕ್ಷಣ ಅಗತ್ಯ ಸಹಾಯಕ್ಕೆ ತಯಾರಾಗಿದ್ದೇವೆ. ಟರ್ಕಿ ಭೂಕಂಪನ ವಿಚಾರ ಸಂಬಂಧ, ಯಾರಿಗಾದ್ರು ಸಹಾಯ ಬೇಕಿದ್ದಲ್ಲಿ ತಕ್ಷಣ 080-22340676 ಸಹಾಯವಾಣಿ ನಂಬರ್ಗೆ ಕರೆ ಮಾಡಿ ಎಂದು ಹೆಲ್ಪ್ ಲೈನ್ ಸಿಬ್ಬಂದಿಗಳು ಮಾಹಿತಿ ನೀಡಿದ್ದಾರೆ.
ಟರ್ಕಿಯಲ್ಲಿ 5,894 ಮಂದಿ ಮೃತಪಟ್ಟಿದ್ದು, ಸಿರಿಯಾದಲ್ಲಿ 1932 ಮಂದಿ ಸಾವನ್ನಪ್ಪಿದ್ದಾರೆ. ಅಂತಿಮವಾಗಿ ಸಾವಿನ ಸಂಖ್ಯೆ 20,000 ಮೀರಬಹುದು ಎಂದು ಅಂದಾಜಿಸಲಾಗಿದೆ. ಟರ್ಕಿ ಹಾಗೂ ಸಿರಿಯಾದಾದ್ಯಂತ ಸುಮಾರು 23 ಮಿಲಿಯನ್ ಜನರು ಈ ದುರಂತದಿಂದ ಪ್ರಭಾವಿತರಾಗಿದ್ದಾರೆ.
ದಕ್ಷಿಣ ಟರ್ಕಿಯಲ್ಲಿನ ವಿನಾಶಕಾರಿ ಭೂಕಂಪಗಳಿಂದ ನಲುಗಿರುವ 10 ಪ್ರಾಂತ್ಯಗಳನ್ನು ವಿಪತ್ತು ವಲಯವೆಂದು ಘೋಷಿಸಿದ ಎರ್ಡೊಗನ್ ಅವರು, ಮೂರು ತಿಂಗಳ ತುರ್ತು ಪರಿಸ್ಥಿತಿ ಮತ್ತು 7 ದಿನಗಳ ಶೋಕಾಚರಣೆಯನ್ನು ಘೋಷಿಸಿದ್ದಾರೆ. ಟರ್ಕಿಯ ವಿಪತ್ತು ಮತ್ತು ತುರ್ತು ನಿರ್ವಹಣಾ ಪ್ರಾಧಿಕಾರದ ಪ್ರಕಾರ, ಭೂಕಂಪದಿಂದಾಗಿ ಕನಿಷ್ಠ 20,426 ಜನ ಗಾಯಗೊಂಡಿದ್ದಾರೆ ಮತ್ತು 5,775 ಕಟ್ಟಡಗಳು ಧರೆಗುರುಳಿವೆ ಎಂದು ರಾಯಿಟರ್ಸ್ ವರದಿ ಮಾಡಿದೆ.
ಸೋಮವಾರ ಟರ್ಕಿಯಲ್ಲಿ ಸಂಭವಿಸಿದ ಭೂಕಂಪವು ದಶಕದಲ್ಲೇ ಸಂಭವಿಸಿದ ಅತಿದೊಡ್ಡ ಪ್ರಾಕೃತಿಕ ವಿಕೋಪವಾಗಿದೆ ಎಂದು ಟರ್ಕಿ ದೇಶದ ಅಧ್ಯಕ್ಷರು ತಿಳಿಸಿದ್ದು, ಭೂಕಂಪ ಶಾಸ್ತ್ರಜ್ಞರ ಅಭಿಪ್ರಾಯದ ಪ್ರಕಾರ ಈ ಭೂಕಂಪ ಟರ್ಕಿಯಲ್ಲಿ ಈವರೆಗೆ ಸಂಭವಿಸಿದ ಭೂಕಂಪಗಳ ಪೈಕಿ ಅತಿ ದೊಡ್ಡದಾಗಿದೆ.
ಕಳೆದ 24 ಗಂಟೆಗಳಲ್ಲಿ 7.8 ತೀವ್ರತೆಯ ಪ್ರಬಲ ಭೂಕಂಪದಿಂದ ತತ್ತರಿಸಿರುವ ಟರ್ಕಿ ದೇಶದ ನೆರವಿಗೆ ಭಾರತವು ಧಾವಿಸಿರುವ ಬೆನ್ನಲ್ಲೇ ಈಗ ಭಾರತಕ್ಕೆ ಧನ್ಯವಾದವನ್ನು ಅರ್ಪಿಸಿದೆ. ದೇಶಕ್ಕೆ ಹಣವನ್ನು ಒದಗಿಸಿದ ಉದಾರತೆಗಾಗಿ ಭಾರತವನ್ನು ದೋಸ್ತ್ ಎಂದು ಕರೆಯುತ್ತಾ, ಭಾರತಕ್ಕೆ ಟರ್ಕಿಯ ರಾಯಭಾರಿ ಫಿರತ್ ಸುನೆಲ್ ನವದೆಹಲಿಗೆ ಧನ್ಯವಾದ ಅರ್ಪಿಸಿದರು ಮತ್ತು ಅಗತ್ಯಕಾಲದಲ್ಲಿ ನೆರವಿಗೆ ಬಂದವನೇ ನಿಜವಾಗಿಯೂ ಸ್ನೇಹಿತ ಎಂದು ಹೇಳಿದರು. ಟರ್ಕಿ ಅಧ್ಯಕ್ಷ ರೆಸೆಪ್ ತಯ್ಯಿಪ್ ಎರ್ಡೊಗನ್ ಅವರು ಮೂರು ತಿಂಗಳ ಅವಧಿಗೆ ಟರ್ಕಿಯ 10 ಪ್ರಾಂತ್ಯಗಳಲ್ಲಿ ತುರ್ತು ಪರಿಸ್ಥಿತಿ ಘೋಷಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ