
ವಿಜಯಪುರ,ಅ,27: ಜಿಲ್ಲೆಯಲ್ಲಿ ಮೊಬೈಲ್ ಕಳೆದುಕೊಂಡು ಆತಂಕದಲ್ಲಿದ್ದ ಸಾರ್ವಜನಿಕರಿಗೆ ವಿಜಯಪುರ ಜಿಲ್ಲಾ ಪೊಲೀಸ್ ಇಲಾಖೆ ಭರ್ಜರಿ ಸಿಹಿ ಸುದ್ದಿ ನೀಡಿದೆ. ಜಿಲ್ಲೆಯಾದ್ಯಂತ ವಿವಿಧ ಠಾಣೆಗಳ ವ್ಯಾಪ್ತಿಯಲ್ಲಿ ಕಳೆದುಹೋಗಿದ್ದ ಹಾಗೂ ಕಳ್ಳತನವಾಗಿದ್ದ ಬರೋಬ್ಬರಿ 537 ಮೊಬೈಲ್ ಫೋನ್ಗಳನ್ನು ಪತ್ತೆ ಹಚ್ಚುವಲ್ಲಿ ಜಿಲ್ಲಾ ಪೊಲೀಸರು ಯಶಸ್ವಿಯಾಗಿದ್ದಾರೆ. ಕೇಂದ್ರ ಸರ್ಕಾರದ ತಂತ್ರಜ್ಞಾನ ಆಧಾರಿತ ಸಿಇಐಆರ್ (Central Equipment Identity Register) ಪೋರ್ಟಲ್ ಅನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು ಪತ್ತೆ ಹಚ್ಚಲಾದ ಈ ಮೊಬೈಲ್ಗಳನ್ನು ಅವುಗಳ ನೈಜ ವಾರಸುದಾರರಿಗೆ ಹಸ್ತಾಂತರಿಸಲಾಗಿದೆ.
ಜಿಲ್ಲೆಯ ಎಲ್ಲಾ 28 ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಕಳೆದುಹೋದ ಮೊಬೈಲ್ಗಳ ಪತ್ತೆಗೆ ವಿಶೇಷ ಕಾರ್ಯಾಚರಣೆ ನಡೆಸಲಾಗಿತ್ತು. ಕಳೆದ ಮೂರು ತಿಂಗಳ ಅವಧಿಯಲ್ಲಿ ಸತತ ಪ್ರಯತ್ನ ನಡೆಸಿ 537 ಮೊಬೈಲ್ಗಳನ್ನು ಹುಡುಕಲಾಗಿದೆ. ಪತ್ತೆಯಾದ ಒಟ್ಟು 537 ಮೊಬೈಲ್ಗಳ ಅಂದಾಜು ಮೌಲ್ಯ ಬರೋಬ್ಬರಿ 1 ಕೋಟಿ 7 ಲಕ್ಷದ 40 ಸಾವಿರ ರೂಪಾಯಿ ಎಂದು ವಿಜಯಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಅವರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಕನ್ನಡ ಶಾಲೆಗಳ ಉಳಿವಿಗೆ ವಿಶೇಷ ಅಭಿಯಾನ: ಶಾಲೆಗಳನ್ನು ಉಳಿಸಲು ಹೊರಟ ಉನೈಸ್ ಪೆರಾಜೆ ಪಡೆ!
ಮಾಧ್ಯಮಗಳೊಂದಿಗೆ ಮಾತನಾಡಿದ ಎಸ್ಪಿ ಲಕ್ಷ್ಮಣ ನಿಂಬರಗಿ, “ಇಂದಿನ ಡಿಜಿಟಲ್ ಯುಗದಲ್ಲಿ ಮೊಬೈಲ್ ಅತ್ಯಗತ್ಯ. ಮೊಬೈಲ್ ಕಳೆದುಹೋದ ತಕ್ಷಣ ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ. ಮೊಬೈಲ್ನ IMEI ಸಂಖ್ಯೆಯನ್ನು ಆಧರಿಸಿ ಕೇಂದ್ರ ಸರ್ಕಾರದ ಸಿಇಐಆರ್ ಪೋರ್ಟಲ್ ಮೂಲಕ ಪತ್ತೆ ಹಚ್ಚಬಹುದು. ಫೋನ್ ಕಳೆದುಹೋದ ತಕ್ಷಣ ಸಮೀಪದ ಠಾಣೆಯಲ್ಲಿ ದೂರು ದಾಖಲಿಸಿ, CEIR ಪೋರ್ಟಲ್ನಲ್ಲಿ ಬ್ಲಾಕ್ ಮಾಡಲು ಮನವಿ ಸಲ್ಲಿಸಿ” ಎಂದು ಸಾರ್ವಜನಿಕರಲ್ಲಿ ವಿನಂತಿಸಿದ್ದಾರೆ.
ಕಳೆದುಹೋದ ಮೊಬೈಲ್ ಮತ್ತೆ ಸಿಗುವುದಿಲ್ಲ ಎಂದೇ ಭಾವಿಸಿದ್ದ ಸಾರ್ವಜನಿಕರು, ಪೊಲೀಸರ ಕಾರ್ಯಕ್ಷಮತೆಗೆ ಮನಸಾರೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. “ನಮ್ಮ ಸಾವಿರಾರು ರೂಪಾಯಿ ಮೌಲ್ಯದ ಫೋನ್ ಹಾಗೂ ಅದರಲ್ಲಿದ್ದ ಪ್ರಮುಖ ವೈಯಕ್ತಿಕ ಮಾಹಿತಿ ಮತ್ತೆ ನಮಗೆ ಸಿಕ್ಕಿರುವುದು ಅತ್ಯಂತ ಸಂತಸ ತಂದಿದೆ” ಎಂದು ಮೊಬೈಲ್ ಮರಳಿ ಪಡೆದ ಮುರ್ತುಬಾ ಖಿಲಾರಿ ಹಾಗೂ ಮಂಜುನಾಥ್ ಎಂಬುವವರು ಖಾಕಿ ಪಡೆಯ ಕಾರ್ಯವನ್ನು ಶ್ಲಾಘಿಸಿದ್ದಾರೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ