ಜಾಗತೀಕರಣ ಭರಾಟೆಯಲ್ಲಿ ಕೃಷಿ ಕ್ಷೇತ್ರ ಸೊರಗಿ ಹೋಗಿದೆ. ಒಂದು ರೀತಿಯಲ್ಲಿ ಇಂದು ಕೃಷಿ ಚಟುವಟಿಕೆಗಳು ಯಾಂತ್ರೀಕರಣಗೊಂಡಿವೆ. ಟ್ರ್ಯಾಕ್ಟರ್ ಟಿಲ್ಲರ್ ಸೇರಿದಂತೆ ಇತರೆ ಯಂತ್ರಗಳ ಮೂಲಕ ಇಂದು ಕೃಷಿ ಚಟುವಟಿಕೆಗಳನ್ನು ಮಾಡಲಾಗುತ್ತಿದೆ. ಎತ್ತುಗಳು ಹಾಗೂ ಇತರೆ ಜಾನುವಾರುಗಳಿಂದ ಕೃಷಿಯ ಕೆಲಸ ಕಾರ್ಯಗಳನ್ನು ಮಾಡುವವರು ಬಹಳ ವಿರಳವಾಗಿದ್ದಾರೆ. ಇಂಥ ವಿರಳತೆಯ ಮಧ್ಯೆ ಎತ್ತುಗಳ ಮೂಲಕ ಸಾಂಪ್ರದಾಯಿಕ ಕೃಷಿ ಮಾಡುತ್ತಿರುವವರು ಬೆರಳೆಣಿಕೆಯಷ್ಟು ಜನರು. ಇಂತ ಬೆರಳೆಣಿಕೆಯಷ್ಟು ಜನರ ಮಧ್ಯೆ ಎತ್ತುಗಳ (Bullocks) ಮೂಲಕ ಜಮೀನಿನಲ್ಲಿ ದಾಖಲೆ ಪ್ರಮಾಣದ ಉಳುಮೆ ಮಾಡಿ (Plough) ಸಾಧನೆ ಮಾಡಿದ್ದಾರೆ ಜಿಲ್ಲೆಯ ರೈತರು. ಅದ್ಯಾವ ಸಾಧನೆ, ಅವರು ಮಾಡಿದ್ದಾದರೂ ಏನು ಎಂಬ ಕುತೂಹಲಾ ಅಲ್ವಾ? ಹಾಗಾದರೆ ಈ ಸ್ಟೋರಿ ನೋಡಿ…
ಅಲ್ಲಿ ಸಡಗರ ಸಂಭ್ರಮ ಮನೆ ಮಾಡಿತ್ತು. ಎತ್ತುಗಳಿಗೆ ಬಣ್ಣ ಬಳಿಯೋದ್ರಲ್ಲಿ ಹಿರಿಯರು ಬ್ಯುಸಿಯಾಗಿದ್ದರೆ, ಜಾಂಜ್ ವಾದ್ಯಗಳ ತಾಳಕ್ಕೆ ಯುವಕರು ಹೆಜ್ಜೆ ಹಾಕಿದರು. ಇವೆಲ್ಲಾ ಅವರ ಸಂಭ್ರಮಕ್ಕೆ ಕಾರಣವಾಗಿದ್ದವು. ಅಲ್ಲಾ ಇವರು ಯಾಕೆ ಎತ್ತುಗಳಿಗೆ ಬಣ್ಣ ಬಳಿದು ಜಾಂಜ್ ಬಾರಿಸಿ ಕುಣಿದು ಕುಪ್ಪಳಿಸುತ್ತಿದ್ಧಾರೆ ಎನ್ನೋದಕ್ಕೂ ಒಂದು ರೀಸನ್ ಇದೆ. ಇದು ಈ ಎತ್ತುಗಳ ಹಾಗೂ ರೈತನ ಸಾಧನೆ.
ಅಷ್ಟಕ್ಕೂ ಎತ್ತುಗಳ ಏನು ಸಾಧನೆ ಮಾಡಿವೆ ಎಂದು ಕೇಳಿದರೆ ನೀವು ಸಹ ಶಾಕ್ ಆಗ್ತೀರಾ. ವಿಜಯಪುರ (Vijayapura) ತಾಲೂಕಿನ ಖತಿಜಾಪುರ ಗ್ರಾಮದ ಈ ಜೋಡಿ ಎತ್ತುಗಳ ಸಾಧನೆ ಈಗಾ ಪ್ರಖ್ಯಾತಿಗೆ ಪಾತ್ರವಾಗಿದೆ. ಈ ಎತ್ತುಗಳು ಒಂದೇ ದಿನ ನಿರಂತವಾಗಿ ನಿನ್ನೆ ಭಾನುವಾರ 20 ಎಕರೆ ಜಮೀನನ್ನು ಉಳುಮೆ ಮಾಡಿವೆ ಎಂದರೆ ಯಾರೂ ನಂಬಲಿಕ್ಕಿಲ್ಲ. ಆದರೂ ಇದು ಸತ್ಯ.
ಖತಿಜಾಪುರ ಗ್ರಾಮದ ಶಿವನಗೌಡ ಬಿರಾದಾರ್ ಎಂಬ ರೈತರಿಗೆ ಸೇರಿದ ಮಧ್ಯ ವಯಸ್ಸಿನ ಈ ಎತ್ತುಗಳು ಬೆಳಿಗ್ಗೆ 5 ಗಂಟೆಯಿಂದ ಸಾಯಂಕಾಲ 5 ಗಂಟೆಯವರೆಗೆ ನಿರಂತರ 12 ಗಂಟೆಗಳ ಕಾಲ ಜಮೀನನನ್ನು ಉಳುಮೆ ಮಾಡಿವೆ. ಅದೂ ಸಹ ಎತ್ತುಗಳ ಕೊರಳಿಗೆ ಯಾವುದೇ ಕೊರಳಪಟ್ಟಿ ಕಟ್ಟದೇ ಉಳುಮೆ ಮಾಡಿದ್ದು ಸಾಧನೆಯಾಗಿದೆ.
ಸಂಗನಗೌಡ ಬಿರಾದಾರ್ ಅವರ ಜೋಡಿ ಎತ್ತುಗಳು ಗಂಗಪ್ಪ ಕವಡಿ ಎಂಬವವರ ಜಮೀನಿನಲ್ಲಿ ನಿರಂತರ ಉಳುವೆ ಮಾಡಿ ಸಾಧನೆ ಮಾಡಿವೆ. ಗ್ರಾಮದ ಸಿದ್ದನಗೌಡ ಪಾಟೀಲ್ ಎಂಬ ರೈತ ಯುವಕ ನಿರಂತರ 12 ಗಂಟೆ ಕಾಲ ಎತ್ತುಗಳ ಮೂಲಕ ಜಮೀನು ಉಳುಮೆ ಮಾಡಿ ಸಾಧನೆ ಮಾಡಿದ್ದಾರೆ. ಎತ್ತುಗಳ ಕೊರಳಿಗೆ ಕೊರಳುಪಟ್ಟಿ ಕಟ್ಟದೇ ಉಳುವೆ ಮಾಡುವುದು ಸುಲಭದ ಕೆಲಸವಲ್ಲ.
ಸಾಮಾನ್ಯವಾಗಿ ಒಂದು ಜೋಡಿ ಎತ್ತುಗಳು ದಿನವೊಂದಕ್ಕೆ 4 ರಿಂದ 5 ಎಕರೆ ಮಾತ್ರ ಉಳುಮೆ ಮಾಡುವುದು ವಾಡಿಕೆ. ಆದರೆ ಖತಿಜಾಪುರ ಗ್ರಾಮದ ಶಿವನಗೌಡ ಬಿರಾದಾರ್ ಅವರ ಎತ್ತುಗಳ ಮೂಲಕ ಸಿದ್ದನಗೌಡ ಪಾಟೀಲ್ 20 ಎಕರೆ ಜಮೀನು ಉಳುಮೆ ಮಾಡಿದ್ದು ದಾಖಲೆಯಾಗಿದೆ. ಇದು ಗ್ರಾಮದ ಜನರ ಖುಷಿಗೆ ಕಾರಣವಾಗಿದೆ.
ಸಾಮಾನ್ಯವಾಗಿ ಟ್ರ್ಯಾಕ್ಟರ್ ಮೂಲಕವೂ ಒಂದು ದಿನಕ್ಕೆ 20 ಎಕರೆ ಜಮೀನನನ್ನು ಉಳುಮೆ ಮಾಡಲು ಆಗಲ್ಲ. ಆದರೆ ಜೋಡೆತ್ತುಗಳ ಮೂಲಕ 12 ಗಂಟೆಗಳ ಆವಧಿಯಲ್ಲಿ 20 ಎಕರೆ ಭೂಮಿ ಉಳುಮೆ ಮಾಡಿ ಖತಿಜಾಪುರ ಗ್ರಾಮದ ರೈತರು ಸಾಧಿಸಿ ತೋರಿಸಿದ್ದಾರೆ. 20 ಎಕರೆ ಭೂಮಿಯನ್ನು ಉಳುಮೆ ಪೂರ್ಣಗೊಳಿಸಿದ ಕೂಡಲೇ ಗ್ರಾಮದ ಹಿರಿಯರು, ಯುವಕರು ಎತ್ತುಗಳಿಗೆ ಬಣ್ಣ ಬಳಿದು ಹೂ ಮಾಲೆ ಹಾಕಿ ಖುಷಿಪಟ್ಟರು. ಜಾಂಜ್ ಹಾಗೂ ಇತರೆ ವಾದ್ಯಗಳನ್ನು ಹಾಕಿ ಕುಣಿದು ಕುಪ್ಪಳಿಸಿದರು. ಪಟಾಕಿ ಸಿಡಿಸಿ ಸಂಭ್ರಮಿಸಿದರು. ಜಮೀನಿಂದಲೇ ಎತ್ತುಗಳನ್ನು ಮೆರವಣಿಗೆ ಮಾಡುತ್ತಾ ಖತಿಜಾಪುರ ಗ್ರಾಮಕ್ಕೆ ಕರೆದುಕೊಂಡು ಹೋಗಿ ಗ್ರಾಮದಲ್ಲಿಯೂ ಮೆರವಣಿಗೆ ಮಾಡಿದರು. ಎತ್ತುಗಳ ಸಾಧನೆಯಿಂದ ಇಡೀ ಗ್ರಾಮದ ಜನರು ಹಬ್ಬದ ರೀತಿಯಲ್ಲಿ ಸಂಭ್ರಮಿಸಿದರು.
ಒಟ್ಟಾರೆ ನೈಪಥ್ಯಕ್ಕೆ ಸೇರುತ್ತಿರೋ ಕೃಷಿ ಕ್ಷೇತ್ರದಲ್ಲಿ ಇಂಥ ಸಾಧನೆ ಮಾಡಿ ಸೈ ಎನಿಸಿಕೊಂಡಿದ್ದಾರೆ ಖತಿಜಾಪುರ ಗ್ರಾಮದ ರೈತರು. ಕೃಷಿಯನ್ನು ಬಿಟ್ಟು ನಗರ ಪಟ್ಟಣಗಳತ್ತ ಮುಖ ಮಾಡುತ್ತಿರೋ ಯುವಕರ ಮಧ್ಯೆ ಗ್ರಾಮದ ಯುವ ರೈತರು ಸಾಧನೆ ಮಾಡುವ ಮೂಲಕ ಕೃಷಿಯತ್ತ ಯುವಕರನ್ನು ಸೆಳೆಯೋ ಕೆಲಸ ಮಾಡುತ್ತಿದ್ದಾರೆ. ಯಾಂತ್ರಿಕೃತವಾದ ಕೃಷಿ ಚಟುಟವಿಕೆಯ ಮಧ್ಯೆ ಸಾಂಪ್ರದಾಯಿಕ ಪದ್ದತಿಗಳ ಮೂಲಕ ಕೃಷಿ ಮಾಡುವುದನ್ನು ಉಳಿಸಿಕೊಂಡು ಹೋಗುತ್ತಿರುವ ಇವರು ಇತರರಿಗೆ ಮಾದರಿಯಾಗಿದ್ದಾರೆ.