ವಿಜಯಪುರ: ಜಿಲ್ಲೆಯಲ್ಲಿ ಅಪರಾಧ ಕೃತ್ಯಗಳು ದಿನೇ ದಿನೆ ಹೆಚ್ಚುತ್ತಲೇ ಇವೆ. ಕೊರೊನಾ ಕಾಟದ ಮಧ್ಯೆಯೂ ಕಳ್ಳಕಾಕರು ತಮ್ಮ ಕಸುಬನ್ನು ಬಿಟ್ಟಿಲ್ಲ. ಇದಕ್ಕೆ ಸಾಕ್ಷಿ ಕೆಲವು ದಿನಗಳ ಹಿಂದೆ ಜಿಲ್ಲೆಯ ಚಡಚಣ ತಾಲೂಕಿನ ಝಳಕಿಯಲ್ಲ ನಡೆದ ಘಟನೆ.
ಕುರಿ ವ್ಯಾಪಾರಿಯನ್ನ ದೋಚಲು ಭರ್ಜರಿ ಸ್ಕೆಚ್!
ಜೂನ್ 17ರಂದು ದೂರದ ಮೈಸೂರು ಜಿಲ್ಲೆಯ ನಂಜನಗೂಡಿನ ನಿವಾಸಿ ಸಲ್ಮಾನ್ ಪಾಶಾ ಬಟಾಣಿ ಎಂಬ 25 ವರ್ಷದ ವ್ಯಾಪಾರಿ ಕುರಿಗಳನ್ನು ಖರೀದಿ ಮಾಡಲು ಝಳಕಿಗೆ ಬಂದಿದ್ದ. ಪಟ್ಟಣದ ಹೋಟೆಲ್ವೊಂದರ ಬಳಿ ನಿಂತಿದ್ದ ಈತನನ್ನು ಗಮಿನಿಸಿದ ದರೋಡೆಕೋರರ ಗುಂಪೊಂದು ಸಲ್ಮಾನ ಪಾಶಾ ಕುರಿಗಳನ್ನು ಖರೀದಿ ಮಾಡಲು ಬಂದಿದ್ದಾನೆ ಎಂದು ಗೊತ್ತುಮಾಡಿಕೊಂಡು ಇವನ ಬಳಿ ತುಂಬಾ ಹಣವಿರಬಹುದು. ಎತ್ತಾಕೊಂಡ್ರೆ ಚೆನ್ನಾಗಿ ಹಣ ಸಿಗುತ್ತೆ ಅಂತಾ ಕೂಡಲೇ ಸ್ಕೆಚ್ ಹಾಗಿದ್ರು.
ಕುರಿಗಳನ್ನು ಸಾಗಿಸಲು ತಾನು ತಂದಿದ್ದ ಲಾರಿ ಬಳಿ ನಿಂತಿದ್ದ ಸಲ್ಮಾನ ಪಾಶಾನನ್ನ ಗ್ಯಾಂಗ್ನ ಸದಸ್ಯ ಅಜಿತ್ ರಾಠೋಡ್ ಈತನ ಬಳಿ ಬಂದು ನಮ್ಮ ಬಳಿಯಿರುವ ಕುರಿಗಳಿನ್ನ ಮಾರಬೇಕಿತ್ತು. ಒಮ್ಮೆ ನೋಡ ಬನ್ನಿ ಎಂದು ಸಲ್ಮಾನ್ನನ್ನ ಪುಸಲಾಯಿಸಿ ತನ್ನೊಟ್ಟಿಗೆ ಬೈಕ್ ಮೇಲೆ ಕರೆದುಕೊಂಡು ಹೊರಟ.
ಕಿಡ್ನಾಪ್ ಮಾಡಿ ಕೊಲೆ ಬೆದರಿಕೆ:
ಝಳಕಿ ಬಳಿಯ ಭೀಮಾಶಂಕರ ಸಕ್ಕರೆ ಕಾರ್ಖಾನೆ ಹತ್ರ ಇದ್ದ ಜಮೀನಿನಲ್ಲಿ ಮೇಯುತ್ತಿದ್ದ ಕುರಿಗಳನ್ನು ತೋರಿಸಿ ವ್ಯವಹಾರ ಕುದುರಿಸುವಂತೆ ಮಾತನಾಡಿದ್ದಾನೆ. ಇದೇ ವೇಳೆ ಮತ್ತೊಂದು ಬೈಕ್ನಲ್ಲಿ ಬಂದ ಗ್ಯಾಂಗ್ನ ಮೂವರು ಸದಸ್ಯರು ಸಲ್ಮಾನ್ ಪಾಶಾರನ್ನ ಅಡ್ಡಗಟ್ಟಿ, ಚಾಕೂ ತೋರಿಸಿ ಕೊಲೆ ಮಾಡುವ ಬೆದರಿಕೆ ಹಾಕಿದ್ರು. ನಂತರ ಆತನ ಬಳಿಯಿದ್ದ 2 ಲಕ್ಷ 75 ಸಾವಿರ ರೂಪಾಯಿ ಕಸಿದುಕೊಂಡು ಅಲ್ಲಿಂದ ಪರಾರಿಯಾಗಿದ್ರು.
ಘಟನೆಯಿಂದ ತುಸು ನಲುಗಿ ಹೋಗಿದ್ದ ಸಲ್ಮಾನ್ ಕೂಡಲೇ ಝಳಕಿ ಪೊಲೀಸರನ್ನ ಸಂಪರ್ಕಿಸಿ ನಡೆದುದನ್ನು ವಿವರಿಸಿದ. ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿದ ಜಿಲ್ಲಾ ಎ.ಸ್ಪಿ ಅನುಪಮ್ ಅಗರ್ವಾಲ್ ದರೋಡೆಕೋರರ ಗ್ಯಾಂಗ್ನ ಬಂಧಿಸಲು ಇಂಡಿಯ DySPಎಂ.ಬಿ ಸಂಕದ ನೇತೃತ್ವದಲ್ಲಿ ತಂಡ ರಚಿಸಿದರು. ಚಡಚಣ CPI ಚಿದಂಬರ, ಝಳಕಿ PSIಪರಶುರಾಮ್ ಮನಗೂಳಿ ಸೇರಿದಂತೆ ಇತರರಿದ್ದ ತಂಡ ದರೋಡಕೋರರ ಗ್ಯಾಂಗ್ನ ಹಿಡಿಯಲು ಜಾಲ ಬೀಸಿದರು.
ಪೊಲೀಸರ ವಿಚಾರಣೆಯಲ್ಲಿ ಸತ್ಯ ಬಿಚ್ಚಿಟ್ಟ ಗ್ಯಾಂಗ್:
ನಿನ್ನೆ ಸಾಯಂಕಾಲ ಇಂಡಿ ತಾಲೂಕಿನ ಚಣೇಗಾಂವ್ ಗ್ರಾಮದಲ್ಲಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ನಾಲ್ವರನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದರು. ಖಾಕಿಯ ಖಡಕ್ ವರ್ಕ್ಔಟ್ಗೆ ಈ ಖತರ್ನಾಕ ಗ್ಯಾಂಗ್ ಕೊನೆಗೂ ತಾನು ಮಾಡಿದ ಕೃತ್ಯವನ್ನು ಒಪ್ಪಿಕೊಂಡಿದೆ. ಅಜಿತ್ ರಾಠೋಡ್ ಅಲ್ಲದೆ ಆತನನ ಸಹಚರರಾದ ಸಚಿನ್ ಚವ್ಹಾಣ, ಸಿದ್ದು ಚವ್ಹಾಣ ಹಾಗೂ ಉಮೇಶ ರಾಠೋಡ್ನ ಹಿಡಿಯುವಲ್ಲಿ ಖಾಕಿ ಯಶಸ್ವಿಯಾಗಿದೆ. ಜೊತೆಗೆ ಬಂಧಿತರಿಂದ 2.70 ಲಕ್ಷ ರೂಪಾಯಿ ಹಾಗೂ ಕೃತ್ಯಕ್ಕೆ ಬಳಸಿದ ಎರಡು ಬೈಕ್ ಮತ್ತು ಚಾಕೂವನ್ನು ಸಹ ವಶಪಡಿಸಿಕೊಂಡಿದ್ಧಾರೆ. ಸದ್ಯಕ್ಕೆ ನಾಲ್ವರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಶೋಕಿ ಜೀವನ ನಡೆಸಲು ಬಯಸಿದ್ದ ಈ 20ರ ಆಸುಪಾಸಿನ ಯುವಕರಿಗೆ ಬೇಗ ದುಡ್ಡು ಮಾಡಲು ಹೊಳೆದಿದ್ದೇ ಈ ಅಡ್ಡದಾರಿ. ದುಡ್ಡಿರೋನು ಮಾತ್ರ ಇಡೀ ಪ್ರಪಂಚನ ತನ್ನ ಅಡಿಯಾಳು ಮಾಡ್ಕೊಂಡು ಆಳೋದು. ಆಳಾಗಿ ಹಾಳಾಗತ್ಯಾ ಇಲ್ಲ ಆಳುಗಳಿಗೆಲ್ಲಾ ದೊರೆ ಆಗ್ತ್ಯಾ ಎಂಬ ಕನ್ನಡದ ಸಿಲಿಕಾನ್ ಸಿಟಿಯ ಚಿತ್ರದ ಡೈಲಾಗ್ನಂತೆ ತಾವೂ ಕೂಡ ಅರಸರಾಗಲು ಹೊರಟಿದ್ದರು. ಆದರೆ ಆಳಲು ಬಯಸಿದ ಯುವಕರು ಇಂದು ಬದುಕು ಹಾಳು ಮಾಡಿಕೊಂಡಿದ್ದಾರೆ. -ಅಶೋಕ ಯಡಳ್ಳಿ