
ವಿಜಯಪುರ, ನ.15: ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಅವರ ಸಂಸ್ಥಾಪನೆಯ, ಪುತ್ರ ರಾಮನಗೌಡ ಪಾಟೀಲ್ ಅಧ್ಯಕ್ಷರಾಗಿರುವ ‘ಸಿದ್ದಸಿರಿ ಮಲ್ಟಿ ಸ್ಟೇಟ್ ಮಲ್ಟಿ ಪರ್ಪಸ್ ಕೋ-ಆಪರೇಟಿವ್ ಸೊಸೈಟಿ’ ಮೇಲೆ ಕೇಂದ್ರದ ಹಣಕಾಸು ಸಂಸ್ಥೆಗಳು (ED-IT) ದಾಳಿ ನಡೆಸಿವೆ ಎಂಬ ವಂತಿಗಳ ಕುರಿತು ಶಾಸಕ ಯತ್ನಾಳ ಸ್ಪಷ್ಟನೆ ನೀಡಿದ್ದಾರೆ. ವಿಜಯಪುರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಯಾವುದೇ ದಾಳಿಯಾಗಿಲ್ಲ, ಇದೆಲ್ಲವೂ ರಾಜಕೀಯ ವಿರೋಧಿಗಳ ಸುಳ್ಳು ವದಂತಿ ಎಂದು ತಳ್ಳಿಹಾಕಿದ್ದು, ತಮ್ಮ ಮೇಲೆ ಭ್ರಷ್ಟಾಚಾರ ಸಾಬೀತು ಮಾಡಿದರೆ 1 ಕೋಟಿ ರೂಪಾಯಿ ಬಹುಮಾನ ನೀಡುವುದಾಗಿ ಸವಾಲು ಹಾಕಿದ್ದಾರೆ.
ಕಳೆದ 2025ರಲ್ಲಿ ಕೇವಲ 5 ಲಕ್ಷ ರೂ. ಬಂಡವಾಳದಲ್ಲಿ ಆರಂಭವಾದ ಸಿದ್ದಸಿರಿ ಸೌಹಾರ್ದ ಸಹಕಾರಿ ಸಂಘವು ಅಲ್ಪಾವಧಿಯಲ್ಲಿ ಬೆಳೆದು 2025ರ ವೇಳೆಗೆ 6,140 ಕೋಟಿ ರೂ. ವ್ಯವಹಾರ ನಡೆಸುವ ಮೂಲಕ ರಾಜ್ಯದಿಂದ ಕೇಂದ್ರ ವ್ಯಾಪ್ತಿಗೆ ಸೇರ್ಪಡೆಗೊಂಡು ‘ಸಿದ್ದಸಿರಿ ಮಲ್ಟಿ ಸ್ಟೇಟ್ ಮಲ್ಟಿಪರ್ಪಸ್ ಕೋ-ಆಪರೇಟಿವ್ ಸೊಸೈಟಿ’ಯಾಗಿ ಪರಿವರ್ತನೆಯಾಗಿದೆ. ರಾಜ್ಯ ವ್ಯಾಪ್ತಿಯಿಂದ ಕೇಂದ್ರ ಸಹಕಾರಿ ವ್ಯಾಪ್ತಿಗೆ ಹೋದಾಗ ನಿಯಮಗಳ ಬದಲಾವಣೆಯಾಗಲಿದ್ದು, ಕೇಂದ್ರ ಸಹಕಾರ ಸಂಘಗಳ ರಿಜಿಸ್ಟ್ರಾರ್ ಕಚೇರಿಯಿಂದ ಮಾಹಿತಿ ಕೋರಿ ನೋಟಿಸ್ ಬರುವುದು ಸಹಜ. ಅದರಂತೆ ಆಗಸ್ಟ್ 14ರಂದು ಆಡಿಟರ್ ಸಹಿ ಹಾಗೂ ದಾಖಲೆಗಳ ಕುರಿತು ಕೇಳಿದ್ದ ಮಾಹಿತಿಗೆ ಸೆಪ್ಟೆಂಬರ್ 4ರಂದೇ ಇ-ಮೇಲ್ ಮೂಲಕ ಸಮರ್ಪಕ ಉತ್ತರ ನೀಡಲಾಗಿದೆ ಎಂದು ಯತ್ನಾಳ ತಿಳಿಸಿದರು.
ಈವರೆಗೆ ಕನ್ನಡದಲ್ಲಿಯೇ ಆಡಿಟ್ ವರದಿ ಸಲ್ಲಿಸಲಾಗುತ್ತಿದ್ದು, ಸಿಆರ್‌ಸಿಎಸ್ ಅಧಿಕಾರಿಗಳು ಕನ್ನಡದಿಂದ ಇಂಗ್ಲಿಷ್‌ಗೆ ಭಾಷಾಂತರಿಸುವಾಗ ಕೆಲವು ಗೊಂದಲಗಳು ಉಂಟಾಗಿವೆ. ಮುಂದಿನ ದಿನಗಳಲ್ಲಿ ಇಂಗ್ಲಿಷ್‌ನಲ್ಲಿಯೇ ಆಡಿಟ್ ವರದಿ ಸಲ್ಲಿಸಲಾಗುವುದು ಎಂದರು.
ಚಿಂಚೋಳಿಯಲ್ಲಿರುವ ಸಿದ್ದಸಿರಿ ಎಥನಾಲ್ ಆ್ಯಂಡ್ ಪವರ್‌ಗೆ 1,065 ಕೋಟಿ ರೂ. ಹೂಡಿಕೆ ಮಾಡಲಾಗಿದ್ದು, 1,734 ಕೋಟಿ ರೂ. ಮೌಲ್ಯದ ಆಸ್ತಿ ಇದೆ. ಸೊಸೈಟಿ ಅಧ್ಯಕ್ಷರಾಗಿರುವ ತಮ್ಮ ಪುತ್ರ ರಾಮನಗೌಡ ಅವರು ಆಸ್ತಿಯನ್ನು ತಮ್ಮ ಹೆಸರಿಗೆ ಮಾಡಿಕೊಳ್ಳುತ್ತಿದ್ದಾರೆ ಎಂಬ ಆರೋಪ ಸಂಪೂರ್ಣ ಸುಳ್ಳು. ಚಿಂಚೋಳಿ ಕಾರ್ಖಾನೆ ಸಿದ್ದಸಿರಿ ಸೊಸೈಟಿಯ ಹೆಸರಿನಲ್ಲೇ ಹೊರತು ಕುಟುಂಬದ ಹೆಸರಿನಲ್ಲ. ಇದನ್ನು ದಾಖಲೆ ಸಮೇತ ಸಾಬೀತುಪಡಿಸಿದರೆ 1 ಕೋಟಿ ರೂ. ಬಹುಮಾನ ನೀಡುವುದಾಗಿ ಸವಾಲು ಹಾಕಿದರು. ಸಿದ್ದಸಿರಿ ಸೊಸೈಟಿ ಹೆಸರು ಕೆಡಿಸಲು ಬೆಂಗಳೂರಿನಲ್ಲಿ ಮಾಜಿ ಶಾಸಕರೊಬ್ಬರು ಅಪಪ್ರಚಾರ ನಡೆಸುತ್ತಿದ್ದಾರೆ. ಇದರ ಹಿಂದೆ ಕೇಂದ್ರ ಸಚಿವ ಅಮಿತ್ ಶಾ, ಪ್ರಹ್ಲಾದ್ ಜೋಶಿ, ಶೋಭಾ ಕರಂದ್ಲಾಜೆ ಅಥವಾ ಸೋಮಣ್ಣ ಅವರ ಪಾತ್ರವಿಲ್ಲ. ಬದಲಿಗೆ ರಾಜ್ಯದಲ್ಲಿ ಬಿಜೆಪಿಯನ್ನು ಮುನ್ನಡೆಸುತ್ತಿರುವ ವ್ಯಕ್ತಿಯೊಬ್ಬರ ಕುತಂತ್ರ ಇದರಲ್ಲಿದೆ ಎಂದು ಪರೋಕ್ಷವಾಗಿ ಬಿ.ವೈ. ವಿಜಯೇಂದ್ರ ವಿರುದ್ಧ ಕಿಡಿಕಾರಿದರು. ಅವ್ಯವಹಾರ ಮಾಡಿ ಜೀವನ ನಡೆಸುವ ನೀಚ ರಾಜಕಾರಣಿ ನಾನಲ್ಲ ಎಂದರು.
ಇದನ್ನೂ ಓದಿ: “ರಾಮನಗರದಿಂದ ನಮ್ಮನ್ನು ಹೊರಹಾಕಲು ಯಾರಿಂದಲೂ ಸಾಧ್ಯವಿಲ್ಲ”: ಹೆಚ್.ಡಿ. ಕುಮಾರಸ್ವಾಮಿ ಕಿಡಿ
ದಾಳಿಯ ವದಂತಿಗಳಿAದ ಗ್ರಾಹಕರು ಯಾವುದೇ ಕಾರಣಕ್ಕೂ ಗಾಬರಿಯಾಗಬೇಕಿಲ್ಲ. ವದಂತಿಗಳ ನಡುವೆಯೂ ಇದೇ ವಾರದಲ್ಲಿ ಸೊಸೈಟಿಗೆ 9 ಕೋಟಿ ರೂ. ಠೇವಣಿ ಬಂದಿದ್ದು, ಸಾರ್ವಜನಿಕರ ಪ್ರತಿಯೊಂದು ಹಣವೂ ಸಂಪೂರ್ಣ ಸುರಕ್ಷಿತವಾಗಿದೆ ಎಂದು ಯತ್ನಾಳ ಭರವಸೆ ನೀಡಿದರು. ಸುಳ್ಳು ಸುದ್ದಿ ಹರಡುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ