ಶೈಕ್ಷಣಿಕ ವರ್ಷ ಆರಂಭವಾಗಿ 2.5 ತಿಂಗಳು ಕಳೆದರೂ ಸಿಗದ ಶೂ-ಸಾಕ್ಸ್: ಬರಿಗಾಲಲ್ಲೇ ಶಾಲೆಗೆ ಹೋಗುತ್ತಿರುವ ವಿದ್ಯಾರ್ಥಿಗಳು

ಸರ್ಕಾರಿ ಶಾಲೆಗಳ ಮಕ್ಕಳಿಗಾಗಿ 'ಶೂ-ಸಾಕ್ಸ್ ಯೋಜನೆ' ಈ ಬಾರಿ ವಿಳಂಬವಾಗಿ ಹಳಿ ತಪ್ಪಿದೆ. ಶೈಕ್ಷಣಿಕ ವರ್ಷ ಆರಂಭವಾಗಿ ಎರಡುವರೆ ತಿಂಗಳಾದರೂ ಯಾದಗಿರಿ ಸೇರಿದಂತೆ ರಾಜ್ಯದಾದ್ಯಂತ ಬಹುತೇಕ ವಿದ್ಯಾರ್ಥಿಗಳಿಗೆ ಶೂ-ಸಾಕ್ಸ್ ವಿತರಣೆಯಾಗಿಲ್ಲ. ಇದರಿಂದ ಬಡ ವಿದ್ಯಾರ್ಥಿಗಳು ಬರಿಗಾಲಿನಲ್ಲಿ ಶಾಲೆಗಳಿಗೆ ಬರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ರಾಜ್ಯಮಟ್ಟದ ಕೇಂದ್ರೀಕೃತ ಟೆಂಡರ್ ಪ್ರಕ್ರಿಯೆಯು ಈ ವಿಳಂಬಕ್ಕೆ ಮುಖ್ಯ ಕಾರಣವಾಗಿದ್ದು, ಸಾಮಾಜಿಕ ಸಮಾನತೆಯ ಉದ್ದೇಶ ಹೊಂದಿದ್ದ ಯೋಜನೆಗೆ ನಿರಾಸೆ ಮೂಡಿಸಿದೆ.

ಶೈಕ್ಷಣಿಕ ವರ್ಷ ಆರಂಭವಾಗಿ 2.5 ತಿಂಗಳು ಕಳೆದರೂ ಸಿಗದ ಶೂ-ಸಾಕ್ಸ್: ಬರಿಗಾಲಲ್ಲೇ ಶಾಲೆಗೆ ಹೋಗುತ್ತಿರುವ ವಿದ್ಯಾರ್ಥಿಗಳು
ಶೂ-ಸಾಕ್ಸ್ ಯೋಜನೆ ವಿಳಂಬ
Image Credit source: Tv9 kannada

Updated on: Aug 14, 2026 | 7:33 AM

ಮುಖ್ಯಾಂಶಗಳು

  • ಸರ್ಕಾರ ಜಾರಿಗೆ ತಂದಿರುವ 'ಶೂ-ಸಾಕ್ಸ್ ಯೋಜನೆ'ಯಲ್ಲಿ ವಿಳಂಬ
  • ಶೈಕ್ಷಣಿಕ ವರ್ಷ ಪ್ರಾರಂಭವಾಗಿ ಬರೋಬ್ಬರಿ ಎರಡುವರೆ ತಿಂಗಳು
  • ರಾಜ್ಯದ ಬಹುತೇಕ ಭಾಗಗಳಲ್ಲಿ ವಿದ್ಯಾರ್ಥಿಗಳಿಗೆ ಶೂ-ಸಾಕ್ಸ್ ವಿತರಣೆಯಾಗಿಲ್ಲ

ಯಾದಗಿರಿ, ಆ.14: ಸರ್ಕಾರಿ ಹಾಗೂ ಅನುದಾನಿತ ಶಾಲಾ ಮಕ್ಕಳಲ್ಲಿ ಯಾವುದೇ ರೀತಿಯ ಭೇದಭಾವ ಮೂಡಬಾರದು ಮತ್ತು ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ನೆರವಾಗಬೇಕು ಎಂಬ ಉದಾತ್ತ ಉದ್ದೇಶದಿಂದ ಸರ್ಕಾರ ಜಾರಿಗೆ ತಂದಿರುವ ‘ಶೂ-ಸಾಕ್ಸ್ ಯೋಜನೆ’ ಈ ಬಾರಿ ವಿಳಂಬದ ನೀತಿಯಿಂದಾಗಿ ಹಳಿ ತಪ್ಪಿದೆ. ಶೈಕ್ಷಣಿಕ ವರ್ಷ ಪ್ರಾರಂಭವಾಗಿ ಬರೋಬ್ಬರಿ ಎರಡುವರೆ ತಿಂಗಳು ಕಳೆಯುತ್ತಾ ಬಂದರೂ ರಾಜ್ಯದ ಬಹುತೇಕ ಭಾಗಗಳಲ್ಲಿ ವಿದ್ಯಾರ್ಥಿಗಳಿಗೆ ಶೂ-ಸಾಕ್ಸ್ ವಿತರಣೆಯಾಗಿಲ್ಲ.

ಇದರಿಂದಾಗಿ ಯಾದಗಿರಿ ಜಿಲ್ಲೆ ಸೇರಿದಂತೆ ರಾಜ್ಯಾದ್ಯಂತ ಗ್ರಾಮೀಣ ಭಾಗದಿಂದ ನಗರ ಪ್ರದೇಶಗಳ ಶಾಲೆಗಳಿಗೆ ಆಗಮಿಸುವ ಬಡ ವಿದ್ಯಾರ್ಥಿಗಳು ಅನಿವಾರ್ಯವಾಗಿ ಬರಿಗಾಲಿನಲ್ಲೇ ಶಾಲೆಗಳಿಗೆ ಬರುವಂತ ಸ್ಥಿತಿ ನಿರ್ಮಾಣವಾಗಿದೆ. ಗ್ರಾಮೀಣ ಭಾಗದ ಬಡ ಕುಟುಂಬಗಳ ಪೋಷಕರಿಗೆ ಮಕ್ಕಳಿಗೆ ಪ್ರತ್ಯೇಕವಾಗಿ ಚಪ್ಪಲಿ ಅಥವಾ ಶೂ ಖರೀದಿಸಿಕೊಡುವ ಆರ್ಥಿಕ ಶಕ್ತಿಯಿಲ್ಲ. ಸರ್ಕಾರವೇ ಉಚಿತವಾಗಿ ಶೂ-ಸಾಕ್ಸ್ ನೀಡುತ್ತದೆ ಎಂಬ ನಿರೀಕ್ಷೆಯಲ್ಲಿದ್ದ ಪೋಷಕರು ಹಾಗೂ ವಿದ್ಯಾರ್ಥಿಗಳಿಗೆ ಈಗ ತೀವ್ರ ನಿರಾಶೆಯಾಗಿದೆ.

ಆರ್ಥಿಕವಾಗಿ ಸಬಲರಾಗಿರುವ ಪೋಷಕರು ತಮ್ಮ ಮಕ್ಕಳಿಗೆ ಚಪ್ಪಲಿ ಕೊಡಿಸಿದ್ದಾರೆ. ಆದರೆ ಬಡತನದಲ್ಲಿರುವ ಕುಟುಂಬಗಳ ಮಕ್ಕಳು ಬರಿಗಾಲಿನಲ್ಲೇ ನಡೆದುಕೊಂಡು ಶಾಲೆಗೆ ತಲುಪುತ್ತಿದ್ದಾರೆ. ಈ ವರ್ಷ ಸರ್ಕಾರದ ಯೋಜನೆ ಕೇವಲ ಅಧಿಕೃತ ಆದೇಶ ಹಾಗೂ ಸುತ್ತೋಲೆಗಳಿಗೆ ಮಾತ್ರ ಸೀಮಿತವಾಗಿದೆಯೇ ಹೊರತು ಶಾಲಾ ಅಂಗಳಕ್ಕೆ ತಲುಪಿಲ್ಲ ಎಂಬ ಆಕ್ರೋಶ ಸಾರ್ವಜನಿಕ ವಲಯದಿಂದ ವ್ಯಕ್ತವಾಗಿದೆ.

ಈ ಹಿಂದೆ ಶಾಲಾ ಅಭಿವೃದ್ಧಿ ಮತ್ತು ಮೇಲ್ವಿಚಾರಣಾ ಸಮಿತಿ ಮೂಲಕ ಶಾಲಾ ಮಟ್ಟದಲ್ಲೇ ಸ್ಥಳೀಯವಾಗಿ ಶೂ ಹಾಗೂ ಸಾಕ್ಸ್ ಖರೀದಿಸಲು ಶಿಕ್ಷಣ ಇಲಾಖೆ ಅನುದಾನ ನೀಡಿ ಅವಕಾಶ ಕಲ್ಪಿಸಿತ್ತು. ಇದರಿಂದ ಶಾಲೆ ಆರಂಭವಾದ ದಿನಗಳಲ್ಲೇ ಮಕ್ಕಳಿಗೆ ಶೂ ಸಿಗುತ್ತಿತ್ತು. ಈ ಬಾರಿ ರಾಜ್ಯ ಸರ್ಕಾರ ಇಡೀ ರಾಜ್ಯಕ್ಕೆ ಅನ್ವಯವಾಗುವಂತೆ ಒಂದೇ ರಾಜ್ಯಮಟ್ಟದ ಕೇಂದ್ರೀಕೃತ ಟೆಂಡರ್ ಕರೆದಿದೆ. ಈ ಬೃಹತ್ ಟೆಂಡರ್ ಪ್ರಕ್ರಿಯೆಯಲ್ಲಿ ಉಂಟಾಗಿರುವ ತಾಂತ್ರಿಕ ಹಾಗೂ ಆಡಳಿತಾತ್ಮಕ ವಿಳಂಬವೇ ಪ್ರಸ್ತುತ ಮಕ್ಕಳಿಗೆ ಶೂ-ಸಾಕ್ಸ್ ಸಿಗದಿರಲು ಮುಖ್ಯ ಕಾರಣ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: ಉತ್ತರಾಖಂಡದ ಚಮೋಲಿ ಸುರಂಗಕ್ಕೆ ದಿಢೀರ್ ನೀರು-ತ್ಯಾಜ್ಯ ಪ್ರವಾಹ: 7ಕಾರ್ಮಿಕರ ದಾರುಣ ಸಾವು, 14 ಗಾಯಾಳುಗಳು

ಪ್ರಸ್ತುತ ಮೊದಲ ಸೆಮೆಸ್ಟರ್ (ಅರ್ಧವಾರ್ಷಿಕ) ಪರೀಕ್ಷೆಗಳು ಹತ್ತಿರವಾಗುತ್ತಿದ್ದರೂ ಶೂ-ಸಾಕ್ಸ್ ಸುಳಿವೇ ಇಲ್ಲ. “ಕೊಡುತ್ತೇವೆ ಎಂದು ಹೇಳಿದ್ದಾರೆ, ಆದರೆ ಇನ್ನು ಕೊಟ್ಟಿಲ್ಲ” ಎಂದು ಶಾಲಾ ವಿದ್ಯಾರ್ಥಿನಿ ಸಾವಿತ್ರಿ ಹಾಗೂ ಸಹಪಾಠಿಗಳು ಬೇಸರ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಸಮಾನತೆ ತರಲು ರೂಪಿಸಿದ ಒಳ್ಳೆಯ ಯೋಜನೆಯೊಂದು, ಶಿಕ್ಷಣ ಇಲಾಖೆಯ ಸಮಯಪ್ರಜ್ಞೆಯಿಲ್ಲದ ಆಡಳಿತ ವೈಖರಿಯಿಂದಾಗಿ ವಿದ್ಯಾರ್ಥಿಗಳಿಗೆ ಕಿರಿಕಿರಿಯಾಗಿ ಪರಿಣಮಿಸಿರುವುದು ದುರದೃಷ್ಟಕರ ಸಂಗತಿಯಾಗಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಅಕ್ಷಯ್​ ಪಲ್ಲಮಜಲು​​

ಅಕ್ಷಯ್ ಕುಮಾರ್ ಪಲ್ಲಮಜಲು ಅವರು ದಕ್ಷಿಣ ಕನ್ನಡ ಜಿಲ್ಲೆ, ಬಂಟ್ವಾಳ ತಾಲ್ಲೂಕಿನವರು. ಡಿಜಿಟಲ್ ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇದೆ. ಇದರ ಜತೆಗೆ ಸೋಶಿಯಲ್ ಮೀಡಿಯಾದ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದಾರೆ, ಪ್ರಸ್ತುತ ಟಿವಿ9 ಕನ್ನಡದಲ್ಲಿ ಸೋಶಿಯಲ್​​​ ಮೀಡಿಯಾವನ್ನು ನೋಡಿಕೊಳ್ಳುತ್ತಿದ್ದಾರೆ. ಡಿಜಿಟಲ್ ಕ್ಷೇತ್ರದಲ್ಲಿ ಆಸಕ್ತಿಯನ್ನು ಹೊಂದಿದ್ದು, ಸೋಶಿಯಲ್​​​ ಮೀಡಿಯಾದಲ್ಲಿ ಇನ್ನೂ ಹೆಚ್ಚಿನ ವಿಚಾರಗಳನ್ನು ತಿಳಿದುಕೊಳ್ಳವ ಆಸಕ್ತಿ ಇದೆ. ಇದರ ಜತೆಗೆ ರಾಷ್ಟ್ರೀಯ ಸುದ್ದಿ ಮತ್ತು ಬ್ರೇಕಿಂಗ್​ ಸುದ್ದಿಗಳನ್ನು ಬರೆಯುತ್ತಾರೆ.

Read More
Loading...
Unable to load recommendations.
Follow Us