ದಾವಣಗೆರೆ, ಆಗಸ್ಟ್ 29: ಕಾಂಗ್ರೆಸ್ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮೀ ಯೋಜನೆಯನ್ನು (Gruha Lakshmi Scheme) ಆಗಸ್ಟ್ 30 ರಂದು ಜಾರಿಗೊಳಿಸಲಾಗುತ್ತಿದೆ. ಮೈಸೂರಿನಲ್ಲಿ ನಡೆಯುವ ಈ ಕಾರ್ಯಕ್ರಮಕ್ಕೆ ಸಕಲ ಸಿದ್ಧತೆಗಳು ನಡೆಯುತ್ತಿವೆ. ಈ ನಡುವೆ ಐದನೇ ಗ್ಯಾರಂಟಿ ಯೋಜನೆಯಾಗಿರುವ ಯುವ ನಿಧಿ ಯೋಜನೆಯ (Yuva Nidhi Scheme) ಬಗ್ಗೆ ಸಚಿವ ಕೆ.ಹೆಚ್.ಮುನಿಯಪ್ಪ (K.H.Muniyappa) ಅವರು ಸುಳಿವು ನೀಡಿದ್ದು, ಡಿಸೆಂಬರ್ ತಿಂಗಳಿನಲ್ಲಿ ಜಾರಿಗೊಳಿಸಲಾಗುವುದು ಎಂದಿದ್ದಾರೆ.
ಐದನೇ ಗ್ಯಾರಂಟಿ ‘ಯುವ ನಿಧಿ’ ಯೋಜನೆಯನ್ನು ಈ ವರ್ಷದ ಡಿಸೆಂಬರ್‌ನಿಂದ ಜಾರಿಗೊಳಿಸಲಾಗುವುದು ಎಂದು ಮುನಿಯಪ್ಪ ಹೇಳಿದರು. ಕರ್ನಾಟಕ ಕಾಂಗ್ರೆಸ್ ಘೋಷಿಸಿದ ಐದು ಯೋಜನೆಗಳ ಪೈಕಿ ಮೂರು ಯೋಜನೆಗಳನ್ನು ಈಗಾಗಲೇ ಜಾರಿಗೊಳಿಸಲಾಗಿದೆ. ನಾಲ್ಕನೇ ಯೋಜನೆ ಗೃಹಲಕ್ಷ್ಮೀ ಯೋಜನೆಯನ್ನು ಆಗಸ್ಟ್ 30 ರಂದು ಜಾರಿಗೆ ತರಲಾಗುವುದು ಎಂದರು.
ದಾವಣಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಪ್ರಣಾಳಿಕೆಯಲ್ಲಿ ನೀಡಿರುವ ಭರವಸೆಯಂತೆ ನಾಲ್ಕನೇ ಭರವಸೆಯಾಗಿರುವ ಗೃಹಲಕ್ಷ್ಮೀ ಯೋಜನೆಯನ್ನು ನಾಳೆ ಜಾರಿಗೊಳಿಸುತ್ತಿದ್ದೇವೆ. ಉದ್ಘಾಟನಾ ಕಾರ್ಯಕ್ರದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸಂಸದ ರಾಹುಲ್ ಗಾಂಧಿ ಭಾಗವಹಿಸಲಿದ್ದಾರೆ. ಡಿಸೆಂಬರ್‌ನಲ್ಲಿ ಯುವ ನಿಧಿ ಯೋಜನೆಯೂ ಜಾರಿಯಾಗಲಿದೆ’ ಎಂದರು.
ಇದನ್ನೂ ಓದಿ: ರಾಜ್ಯದಲ್ಲಿ ಯಾವುದೇ ಬಿಪಿಎಲ್ ಕಾರ್ಡ್ ರದ್ದು ಮಾಡುವುದಿಲ್ಲ: ಕೆಹೆಚ್ ಮುನಿಯಪ್ಪ
ಐದು ಗ್ಯಾರಂಟಿಗಳ ಪೈಕಿ ಮೊದಲ ನಾಲ್ಕು ಗ್ಯಾರಂಟಿ ಯೋಜನೆಗಳ ಬಗ್ಗೆ ಅಬ್ಬರದ ಪ್ರಚಾರ ನೀಡುತ್ತಿರುವ ಕಾಂಗ್ರೆಸ್ ಸರ್ಕಾರ, ಐದನೇ ಗ್ಯಾರಂಟಿ ಯುವ ನಿಧಿ ಬಗ್ಗೆ ಮೌನ ವಹಿಸಿದೆ. ಇಲ್ಲಿ ಗಮನಿಸಬೇಕಾದ ಅಂಶವೆಂದರೆ, ಜುಲೈನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್ ಮಂಡನೆ ಸಂದರ್ಭದಲ್ಲಿ ಯುವ ನಿಧಿ ಯೋಜನೆಗೆ ಅನುದಾನವನ್ನು ಮೀಸಲಿಟ್ಟಿಲ್ಲ. ಉಳಿದ ನಾಲ್ಕೂ ಯೋಜನೆಗಳಿಗೆ ಹಣ ಮೀಸಲಿಟ್ಟಿದ್ದಾರೆ.
ಕರ್ನಾಟಕ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಘೋಷಿಸಿರುವ ಯುವ ನಿಧಿ ಯೋಜನೆಯು ಪದವೀಧರರು ಮತ್ತು ಡಿಪ್ಲೋಮಾ ಪೂರ್ಣಗೊಳಿಸಿ ಉದ್ಯೋಗ ಹುಡುಕಾಡುತ್ತಿರುವವರಿಗೆ ಆರ್ಥಿಕ ನೆರವು ನೀಡುವ ಭರವಸೆಯನ್ನು ನೀಡುತ್ತದೆ.
ಪದವಿ ಅಥವಾ ಡಿಪ್ಲೊಮಾ ಪದವಿ ಪಡೆದು 6 ತಿಂಗಳಾದರೂ ಉದ್ಯೋಗ ಸಿಗದ ಯುವಕರಿಗೆ ಈ ಯೋಜನೆ ಅನ್ವಯವಾಗಲಿದೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ. ಅದರಂತೆ ನಿರುದ್ಯೋಗಿ ಪದವೀಧರರಿಗೆ ತಿಂಗಳಿಗೆ 3,000 ರೂ. ಮತ್ತು ನಿರುದ್ಯೋಗಿ ಡಿಪ್ಲೊಮಾ ಹೊಂದಿರುವವರಿಗೆ 1,500 ರೂ. ನೀಡಲಾಗುತ್ತದೆ. ಫಲಾನುಭವಿಗಳ ಬ್ಯಾಂಕ್ ಖಾತೆಗಳ ಮೂಲಕ ನೇರವಾಗಿ ಈ ಹಣವನ್ನು ವರ್ಗಾಯಿಸಲಾಗುತ್ತದೆ.
ಈ ಯೋಜನೆಗೆ ಎರಡು ವರ್ಷದ ವಾರಂಟಿ ಇದೆ. ಇಬ್ಬ ನಿರುದ್ಯೋಗಿ ಪದವೀಧರನಿಗೆ 2 ವರ್ಷಗಳ ವರೆಗೆ ಮಾತ್ರ ಈ ಪ್ರೋತ್ಸಾಹ ಧನ ಲಭ್ಯವಾಗುತ್ತದೆ. ಒಂದೊಮ್ಮೆ 2 ವರ್ಷಕ್ಕೂ ಮುನ್ನವೇ ಉದ್ಯೋಗ ಲಭ್ಯವಾದರೆ ಯೋಜನೆ ಹಣ ಸ್ಥಗಿತಗೊಳ್ಳುತ್ತದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ