ಆಂಡ್ರಾಯಿಡ್ ಆಪರೇಟಿಂಗ್ ಸಿಸ್ಟಮ್ ಬಳಕೆಯಲ್ಲಿ ಇರುವ ಮೊಬೈಲ್ ಫೋನ್ಗಳು ವಿಶ್ವದಾದ್ಯಂತ ಹೆಚ್ಚು ಬಳಕೆಯಲ್ಲಿವೆ. ಇದೇ ಕಾರಣಕ್ಕೋ ಏನೋ ಹ್ಯಾಕರ್ಗಳು, ವಂಚಕರು ಹಾಗೂ ಜಾಹೀರಾತುದಾರರಿಗೂ ಈ ಆಪರೇಟಿಂಗ್ ಸಿಸ್ಟಮ್ ಇರುವ ಮೊಬೈಲ್ ಫೋನ್ಗಳು ಬಲು ಅಚ್ಚುಮೆಚ್ಚು. ಒಂದು ಕಡೆ ಮಾಲ್ವೇರ್ ಆಯಿತು. ಇದನ್ನು ಹೊರತುಪಡಿಸಿದಂತೆ ನಿರಂತರವಾಗಿ ಜಾಹೀರಾತುಗಳನ್ನು ತೋರಿಸುತ್ತಾ ಹಲವು ಅಪ್ಲಿಕೇಷನ್ಗಳು ಹಣ ಮಾಡುತ್ತಿವೆ. ಇದರಿಂದ ಆಂಡ್ರಾಯಿಡ್ ಫೋನ್ಗಳ ಕಾರ್ಯ ನಿರ್ವಹಣೆ ನಿಧಾನ ಆಗುತ್ತದೆ. ಒಂದು ವೇಳೆ ನೀವು ಅಂಡ್ರಾಯಿಡ್ ಮೊಬೈಲ್ ಫೋನ್ ಬಳಸುವವರಾಗಿದ್ದರೆ ಬಳಕೆ ಬಗ್ಗೆ ಮೈಯೆಲ್ಲಾ ಕಣ್ಣಾಗಿರಬೇಕು.
ಇನ್ನು ಇದರ ಜತೆಗೆ ನಿಮ್ಮ ಮೊಬೈಲ್ಪೋನ್ನಲ್ಲಿ ಸ್ಪೈ ಅಪ್ಲಿಕೇಷನ್ಗಳು ಅಡಗಿ ಕುಳಿತು, ಎಲ್ಲೆಲ್ಲಿ ಹೋಗ್ತೀರಿ ಅನ್ನೋದನ್ನೆಲ್ಲ ಟ್ರ್ಯಾಕ್ ಮಾಡುತ್ತವೆ. ಸಾಮಾನ್ಯವಾಗಿ ಆಂಡ್ರಾಯಿಡ್ ಮೊಬೈಲ್ ಫೋನ್ ಬಳಕೆದಾರರು ಎಸಗುವ 15 ಪ್ರಮಾದಗಳ ಪಟ್ಟಿಯನ್ನು ಇಲ್ಲಿ ನೀಡಲಾಗಿದೆ. ನೀವು ಇವುಗಳನ್ನು ಮಾಡಬೇಡಿ.
ಫೋನ್ ಲಾಕ್ ಮಾಡಲು ಬಲವಾದ ಪಾಸ್ವರ್ಡ್ ಬಳಕೆ ಮಾಡದಿರುವುದು
ಕೈ ಬೆರಳು (ಫಿಂಗರ್ ಪ್ರಿಂಟ್) ಮತ್ತು ಫೇಸ್ ಅನ್ಲಾಕ್ ಮಾಡುವುದು ಅನುಕೂಲಕರವಾದ ಮಾರ್ಗ. ನಾಲ್ಕು ಅಂಕಿಯ ಪಾಸ್ಕೋಡ್ ಬಳಸುವ ಬದಲಿಗೆ ಪಾಸ್ವರ್ಡ್ ಬಳಸಿ. ಫೇಸ್ ಅನ್ಲಾಕ್, ಬೆರಳಚ್ಚು, ಪ್ಯಾಟರ್ನ್ ಹಾಗೂ ಕೋಡ್ ಅನ್ನು ಕೂಡ ಭೇದಿಸಬಹುದು. ಆದರೆ ವಿಶಿಷ್ಟ ಹಾಗೂ ಪ್ರಬಲ ಪಾಸ್ವರ್ಡ್ ಮೂಲಕ ನಿಮ್ಮ ಮೊಬೈಲ್ ಫೋನ್ ಅನ್ನು ಸುರಕ್ಷಿತವಾಗಿ ಇರಿಸಿಕೊಳ್ಳಬಹುದು.
ಆಂಡ್ರಾಯಿಡ್ ಫೋನ್ನಲ್ಲಿ ಆ್ಯಂಟಿ ವೈರಸ್ ಬಳಕೆ ಮಾಡದಿರುವುದು
ಮಾಲ್ವೇರ್, ಆ್ಯಡ್ವೇರ್, ಸ್ಪೈ ವೇರ್ ಮತ್ತು ಇತರ ಅಪಾಯಕಾರಿ ಅಪ್ಲಿಕೇಷನ್ಗಳು ಫೋನ್ ಮೇಲೆ ದಾಳಿ ಮಾಡಲು ಕಾಯುತ್ತಿದ್ದರೂ ಕೆಲವೇ ಕೆಲವು ಆಂಡ್ರಾಯಿಡ್ ಫೋನ್ ಬಳಕೆದಾರರು ಹಣ ಪಾವತಿ ಮಾಡಿದ ಆ್ಯಂಟಿವೈರಸ್ ಅಥವಾ ಮಾಲ್ವೇರ್ ಸುರಕ್ಷೆ ಅಪ್ಲಿಕೇಷನ್ ಬಳಸುತ್ತಾರೆ. ಆ ಮೂಲಕ ನಿಮ್ಮ ಮೊಬೈಲ್ಪೋನ್ನಲ್ಲಿಯೇ ಇರುವ ಮಾಲ್ವೇರ್ ಕೂಡ ಪತ್ತೆ ಮಾಡಲು ಸಾಧ್ಯವಾಗದ ಹೊಸ ರೀತಿಯ ಮಾಲ್ವೇರ್ಗಳಿಂದ ಅಥವಾ ಇತರ ಅಪಾಯಗಳಿಂದ ಆ್ಯಂಟಿ ವೈರಸ್ ಆಪ್ಗಳು ಎಚ್ಚರಿಸುತ್ತವೆ ಹಾಗೂ ರಕ್ಷಿಸುತ್ತವೆ.
ಗೊತ್ತಿಲ್ಲದ ಮೂಲಗಳಿಂದ ಥರ್ಡ್ ಪಾರ್ಟಿ ಅಪ್ಲಿಕೇಷನ್ಗಳ ಇನ್ಸ್ಟಾಲ್ಗೆ ಅವಕಾಶ ಮಾಡಿಕೊಡುವುದು
ಅಪರಿಚಿತ ಮೂಲಗಳಿಂದ ಅಪ್ಲಿಕೇಷನ್ ಇನ್ಸ್ಟಾಲ್ ಆಗುವುದನ್ನೇ ನಿಮ್ಮ ಸೆಟ್ಟಿಂಗ್ ಮೆನುವಿನಲ್ಲಿ ಟರ್ನ್ ಆಫ್ ಮಾಡುವುದು ಕ್ಷೇಮ. ಈ ಮೂಲಕವಾಗಿ ಅಪ್ಲಿಕೇಷನ್ಗಳು ನಿಮ್ಮ ಮೊಬೈಲ್ಫೋನ್ನಲ್ಲಿ ರಹಸ್ಯವಾಗಿ ಇನ್ಸ್ಟಾಲ್ ಆಗುವುದು ಹಾಗೂ ಗೂಗಲ್ ಪ್ಲೇ ಹೊರತಾಗಿ ಬೇರೆ ಮೂಲಗಳಿಂದ ಇನ್ಸ್ಟಾಲ್ ಆಗುವುದು ತಪ್ಪಿಸಬಹುದು.
ನಿಮ್ಮ ಮೊಬೈಲ್ಫೋನ್ನಲ್ಲಿ ಆಂಡ್ರಾಯಿಡ್ನ ಹೊಸ ವರ್ಷನ್ ಅಪ್ಡೇಟ್ ಮಾಡದಿರುವುದು
ಒಂದು ವೇಳೆ ನಿಮ್ಮ ಫೋನ್ಗೆ ಸೆಕ್ಯೂರಿಟಿ ಅಪ್ಡೇಟ್ಗಳು ಅಥವಾ ಆಂಡ್ರಾಯಿಡ್ ವರ್ಷನ್ ಅಪ್ಡೇಟ್ಗಳು ಬರುತ್ತಿದ್ದಲ್ಲಿ ಅವುಗಳನ್ನು ನಿರ್ಲಕ್ಷ್ಯ ಮಾಡಬೇಡಿ. ಅವುಗಳ ಇನ್ಸ್ಟಾಲ್ ಮತ್ತು ಅಪ್ಡೇಟ್ಗೆ ಸ್ವಲ್ಪ ಸಮಯ ತೆಗೆದುಕೊಳ್ಳಬಹುದು. ಆದರೆ ಅದು ಖಂಡಿತಾ ಮಾಡಬೇಕು. ಏಕೆಂದರೆ ತಮಗೆ ಈಗಾಗಲೇ ಗೊತ್ತಿರುವ ದೌರ್ಬಲ್ಯಗಳನ್ನು ಅನುಕೂಲಕ್ಕೆ ಬಳಸಿಕೊಳ್ಳುವಲ್ಲಿ ಹ್ಯಾಕರ್ಗಳು ಚತುರರಾಗಿರುತ್ತಾರೆ.
ಅಪ್ಲಿಕೇಷನ್ಗಳನ್ನು ಇನ್ಸ್ಟಾಲ್ ಮಾಡುವುದಕ್ಕೆ ಎಪಿಕೆ ಫೈಲ್ಗಳನ್ನು ಬಳಸುವುದು
ಎಪಿಕೆ ಫೈಲ್ಗಳು ಹೇಗೆ ಕಾರ್ಯ ನಿರ್ವಹಿಸುತ್ತವೆ ಎಂಬುದು ನಿಮಗೆ ಅರ್ಥವಾಗದಿದ್ದಲ್ಲಿ ಗೂಗಲ್ ಪ್ಲೇ ಸ್ಟೋರ್ಸ್ನಿಂದ ಮಾತ್ರ ಅಪ್ಲಿಕೇಷನ್ಗಳ ಡೌನ್ಲೋಡ್ ಮಾಡಿಕೊಳ್ಳಿ. ಹಲವು ಅಪ್ಲಿಕೇಷನ್ಗಳು ಗೂಗಲ್ ಪ್ಲೇನಲ್ಲಿ ಸಿಗುವುದಿಲ್ಲ. ಎಪಿಕೆ ಫೈಲ್ ಡೌನ್ಲೋಡ್ ಮಾಡುವುದರೊಂದಿಗೆ ಇನ್ಸ್ಟಾಲ್ ಮಾಡಬೇಕಾಗುತ್ತದೆ. ಆದರೆ ಇದರಲ್ಲಿ ಕೆಲವು ಅಪಾಯಗಳಿವೆ. ಇವುಗಳನ್ನು ಗೂಗಲ್ ಅನುಮತಿಸಿರುವುದಿಲ್ಲ.
ಅಪ್ಲಿಕೇಷನ್ಗಳನ್ನು ಡೌನ್ಲೋಡ್ ಮಾಡುವ ಮುನ್ನ ನಿಯಮ, ನಿಬಂಧನೆ ಮತ್ತು ಅನುಮತಿಗಳನ್ನು ಓದದಿರುವುದು
ಯಾವುದೇ ಅಪ್ಲಿಕೇಷನ್ ಡೌನ್ಲೋಡ್ ಮುಂಚೆ ಅಗತ್ಯ ಇರುವ ಅನುಮತಿ ಮತ್ತು ನಿಬಂಧನೆಗಳನ್ನು ಓದುವ ಹವ್ಯಾಸ ರೂಢಿಸಿಕೊಳ್ಳಿ. ಯಾವಾಗ ಅಪ್ಲಿಕಷನ್ಗಳು ಹೆಚ್ಚಾಗಿ ಅನುಮತಿ ಕೇಳುತ್ತದೋ ಆಗ ಆ ಅಪ್ಲಿಕೇಷನ್ ವ್ಯಾಪ್ತಿಯನ್ನು ಪ್ರಶ್ನಿಸಿಕೊಳ್ಳಬೇಕು. ಉದಾಹರಣೆಗೆ, ವಾಲ್ಪೇಪರ್ಗೆ ನಿಮ್ಮ ಕಾಂಟ್ಯಾಕ್ಟ್ ಬುಕ್ ಅಥವಾ ಮೈಕ್ ಸಂಪರ್ಕದ ಅಗತ್ಯ ಇಲ್ಲ. ಆದರೆ ಅದಕ್ಕೆ ನಿಮ್ಮ ಗ್ಯಾಲರಿಯ ಸಂಪರ್ಕ ಬೇಕಾಗಬಹುದು.
ಕಳುವಿನಿಂದ ರಕ್ಷಿಸಿಕೊಳ್ಳುವಷ್ಟು ಸುರಕ್ಷಿತ ಅಲ್ಲದಿರುವುದು
ನೀವು ಆಂಡ್ರಾಯಿಡ್ ಫೋನ್ ಖರೀದಿ ಮಾಡಿದ ಮೇಲೆ ಅದರಲ್ಲಿ ಗೂಗಲ್ ಫೈಂಡ್ (ಹುಡುಕು) ಸೇವೆಯನ್ನು ಎನೇಬಲ್ (ಚಾಲನೆ) ಮಾಡಿ. ಹೀಗೆ ಮಾಡುವುದರಿಂದ, ಒಂದು ವೇಳೆ ನಿಮ್ಮ ಫೋನ್ ಕಳೆದುಹೋದರೂ ಅಥವಾ ಕಳ್ಳತನವಾದರೂ ಹುಡುಕುವುದು ಕಷ್ಟವಲ್ಲ. ಜತೆಗೆ ಲಾಕ್ಸ್ಕ್ರೀನ್ ರಕ್ಷಣೆಗೂ ಆದ್ಯತೆ ನೀಡಿ. ಆ ಮೂಲಕ ಪಾಸ್ವರ್ಡ್ ಸಹಾಯ ಇಲ್ಲದೆ ಮೊಬೈಲ್ ಡೇಟಾವನ್ನಾಗಲೀ ಅಥವಾ ಮೊಬೈಲ್ ಫೋನ್ನೇ ಆಗಲಿ ಆಫ್ ಮಾಡಲು ಸಾಧ್ಯವಾಗಲ್ಲ.
ಫೋನ್ ಚಾರ್ಜ್ ಮಾಡುವುದಕ್ಕೆ ಯಾವುಯಾವುದೋ ಅಡಾಪ್ಟರ್ ಬಳಸುವುದು
ಯಾವಾಗಲೂ ಉತ್ತಮ ಗುಣಮಟ್ಟದ ಅಡಾಪ್ಟರ್ಗಳನ್ನೇ ಬಳಸಿ ಅಥವಾ ನಿಮ್ಮ ಫೋನ್ ಚಾರ್ಜರ್ ಅನ್ನು ಬೇರೆಯವರಿಗೆ ನೀಡದಿರಿ. 5000mAh ಬ್ಯಾಟರಿ ಸಾಮಾನ್ಯ ಎಂಬಂತಾಗಿದೆ. ಇಂಥ ದೊಡ್ಡ ಬ್ಯಾಟರಿ ಫೋನ್ಗಳಿಗೆ ಯಾವುದೆಂದರೆ ಆ ಚಾರ್ಜರ್ ಬಳಸುವುದು ಅಪಾಯಕಾರಿ.
ವೈಯಕ್ತಿಕ ಮಾಹಿತಿ ಬ್ಯಾಕ್ಅಪ್ ಇಟ್ಟುಕೊಳ್ಳದಿರುವುದು
ನಿಮ್ಮ ಫೋನ್ ಕಳೆದುಹೋಗಬಹುದು, ಕಳುವಾಗಬಹುದು ಅಥವಾ ಮುರಿದುಹೋಗಬಹುದು. ಅದರೊಳಗಿದ್ದ ಮಾಹಿತಿಯನ್ನು ಮೊದಲೇ ಸಂಗ್ರಹಿಸಿ, ಒಂದು ಕಡೆ ಇಡದಿದ್ದಲ್ಲಿ ಅಂಥ ಸಮಯದಲ್ಲಿ ಸಿಗುವುದಿಲ್ಲ. ವೈಯಕ್ತಿಕ ಮಾಹಿತಿಯನ್ನು ಬ್ಯಾಕ್ಅಪ್ ತೆಗೆದಿಡುವುದು ಆದ್ಯತೆಯಾಗಿರಲಿ.
ಡೌನ್ಲೋಡ್ ಆದ ಅಪ್ಲಿಕೇಷನ್ಗಳು ಯಾವುವು ಎಂದು ಸೆಟ್ಟಿಂಗ್ಸ್ನಲ್ಲಿ ಪರೀಕ್ಷಿಸದಿರುವುದು
ಡೌನ್ಲೋಡ್ ಆಗರುವಂಥ ಅಪ್ಲಿಕೇಷನ್ಗಳನ್ನು ಸೆಟ್ಟಿಂಗ್ಸ್ನಲ್ಲಿ ಪರೀಕ್ಷಿಸುವ ಪರಿಪಾಠ ಬೆಳೆಸಿಕೊಳ್ಳಿ. ಹಲವು ಮಾಲ್ವೇರ್ ಅಥವಾ ಸ್ಪೈವೇರ್ಗಳು ಐಕಾನ್ ಸೃಷ್ಟಿಸುವುದಿಲ್ಲ, ಬದಲಿಗೆ ನಿಮ್ಮ ಫೋನ್ನೊಳಗೆ ಅವಿತುಕೊಂಡಿರುತ್ತವೆ. ಒಟ್ಟಾರೆಯಾಗಿ ಡೌನ್ಲೋಡ್ ಆದ ಅಪ್ಲಿಕೇಷನ್ಗಳ ಪಟ್ಟಿಯನ್ನು ಪರಿಶೀಲಿಸುವುದರಿಂದ ಅಪರಿಚಿತ ಆಪ್ಗಳನ್ನು ಪತ್ತೆ ಹಚ್ಚಲು ಸಹಾಯ ಆಗುತ್ತದೆ.
ಹಳೆಯ ಅಥವಾ ಬಳಕೆ ಮಾಡದ ಅಪ್ಲಿಕೇಷನ್ಗಳನ್ನು ಡಿಲೀಟ್ ಮಾಡದಿರುವುದು
ಬಹಳ ಸಮಯದಿಂದ ನಿಮ್ಮ ಮೊಬೈಲ್ನಲ್ಲಿ ಬಳಕೆಯಾಗದ ಅಪ್ಲಿಕೇಷನ್ ಇದ್ದಲ್ಲಿ ಅದನ್ನು ಡಿಲೀಟ್ ಮಾಡಿ. ಜತೆಗೆ ನಿರುಪಯುಕ್ತ ಅಪ್ಲಿಕೇಷನ್ಗಳು ಇದ್ದರೂ ಅವುಗಳನ್ನು ಸಹ ಡಿಲೀಟ್ ಮಾಡಿ. ಹಳೆಯ ಅಥವಾ ನಿರುಪಯುಕ್ತ ಅಪ್ಲಿಕೇಷನ್ಗಳನ್ನು ಇರಿಸಿಕೊಂಡರೆ ಫೋನ್ನ ಮೆಮೊರಿಯನ್ನು ಕಬಳಿಸುತ್ತದೆ. ಇದರಿಂದ ಮಾಲ್ವೇರ್ಗಳ ದಾಳಿ ಕೂಡ ಆಗುವ ಸಾಧ್ಯತೆ ಇದೆ.
ಗೂಗಲ್ ಖಾತೆ ಪಾಸ್ವರ್ಡ್ ಅಪ್ಡೇಟ್ ಮಾಡದಿರುವುದು
ನಿಮ್ಮ ಗೂಗಲ್ ಖಾತೆಯ ಪಾಸ್ವರ್ಡ್ ಅನ್ನು ನಿಯಮಿತವಾಗಿ ಬದಲಾವಣೆ ಮಾಡುತ್ತಿರಿ. ಖಾಸಗಿತನದ ಮಾಹಿತಿಗೆ ಕನ್ನ ಹಾಕುವ ಸಾಧ್ಯತೆಯಿಂದ ತಪ್ಪಿಸಿಕೊಳ್ಳುವುದಕ್ಕೆ ಇದು ಉತ್ತಮ ದಾರಿ.
ಆಗಾಗ ಬಳಸುವ ಆ್ಯಪ್ಗಳ ಕ್ಯಾಚೆ ಸ್ವಚ್ಛಗೊಳಿಸದಿರುವುದು
ನೀವು ಆಗಾಗ ಬಳಸುವ ಅಪ್ಲಿಕೇಷನ್ಗಳ ಕ್ಯಾಚೆಯನ್ನು ಸ್ವಚ್ಛಗೊಳಿಸುತ್ತಿದ್ದಲ್ಲಿ ಫೋನ್ ವೇಗವಾಗಲು ಸಹಾಯ ಆಗುತ್ತದೆ.
ಹೊಸ ಆಂಡ್ರಾಯಿಡ್ ಫೋನ್ ಜತೆಗೆ ಬರುವ ಬ್ಲೋಟ್ವೇರ್ ಅನ್ ಇನ್ಸ್ಟಾಲ್ ಮಾಡದಿರುವುದು
ಬ್ಲೋಟ್ವೇರ್ಗಳು ಅನಗತ್ಯವಾಗಿ ಸ್ಥಳಾವಕಾಶ ಕಬಳಿಸುತ್ತವೆ. ಇದರ ಜತೆಗೆ ಸ್ಥಿರತೆ ಸಮಸ್ಯೆಗಳು ಎದುರಾಗುತ್ತವೆ. ಅವುಗಳನ್ನು ಅನ್ಇನ್ಸ್ಟಾಲ್ ಮಾಡಿ. ಹೊಸ ಫೋನ್ ಖರೀದಿ ಮಾಡಿದ ತಕ್ಷಣ ಇದನ್ನು ಮಾಡಬೇಕು.
ಫೋನ್ ಸ್ವಿಚ್ಛ್ ಆಫ್ ಮಾಡದಿರುವುದು
ಆಗಾಗ ನಿಮ್ಮ ಫೋನ್ ರೀಸ್ಟಾರ್ಟ್ ಮಾಡದಿದ್ದಲ್ಲಿ ಫೋನ್ ವೇಗ ಕಡಿಮೆ ಆಗುತ್ತದೆ ಅಥವಾ ಕೆಲವು ಸಲ ಒಟಿಪಿ ಅಥವಾ ಸಂದೇಶಗಳು ಬರುವುದು ತಡವಾಗುತ್ತದೆ. ಆದ್ದರಿಂದ ದಿನಕ್ಕೊಮ್ಮೆ ಫೋನ್ ರೀಸ್ಟಾರ್ಟ್ ಮಾಡುವುದು ಉತ್ತಮ ಅಭ್ಯಾಸ.
ಇದನ್ನೂ ಓದಿ:Redmi Note 10 ಸೀರಿಸ್ ಮೊಬೈಲ್ಗೆ 103 MP ಕ್ಯಾಮೆರಾ! ಕೈಗೆಟುಕುವ ದರ