ವಿಜಯೋತ್ಸವ-ಕರಾಳದಿನವಿಲ್ಲದ ಡಿ.6: ಸುಪ್ರೀಂ ತೀರ್ಪು ಅಂತಿಮ ಎಂದ ಹಿಂದೂ-ಮುಸ್ಲಿಮರು

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Dec 06, 2020 | 4:50 PM

ಎರಡೂ ಸಮುದಾಯಗಳು ಸುಪ್ರೀಂಕೋರ್ಟ್​ ನೀಡಿದ ತೀರ್ಪು ಒಪ್ಪಿಕೊಂಡು, ಶಾಂತಿ ಕಾಪಾಡಲು ಮುಂದಾಗಿರುವುದರ ಹಿನ್ನೆಲೆಯಲ್ಲಿ ಈ ವರ್ಷ ಕರಾಳ ದಿನಾಚರಣೆಯಾಗಲೀ, ವಿಜಯೋತ್ಸವವಾಗಲೀ ಅಯೋಧ್ಯೆ ಸೇರಿದಂತೆ ದೇಶದ ಯಾವುದೇ ನಗರ-ಗ್ರಾಮಗಳಿಂದ ವರದಿಯಾಗಿಲ್ಲ.

ವಿಜಯೋತ್ಸವ-ಕರಾಳದಿನವಿಲ್ಲದ ಡಿ.6: ಸುಪ್ರೀಂ ತೀರ್ಪು ಅಂತಿಮ ಎಂದ ಹಿಂದೂ-ಮುಸ್ಲಿಮರು
Follow us on

ಅಯೋಧ್ಯೆ: ಪ್ರತಿವರ್ಷ ಡಿಸೆಂಬರ್​ 6ರಂದು ಅಯೋಧ್ಯೆಯಲ್ಲಿ ಹಿಂದೂಗಳು ವಿಜಯೋತ್ಸವವನ್ನು, ಮುಸ್ಲಿಮರು ಕರಾಳ ದಿನವನ್ನು ಆಚರಿಸಲು ಮುಂದಾಗುತ್ತಿದ್ದರು. ಆದರೆ ಈ ವರ್ಷ ಪರಿಸ್ಥಿತಿ ಭಿನ್ನವಾಗಿದೆ. ಎರಡೂ ಸಮುದಾಯಗಳು ಸುಪ್ರೀಂಕೋರ್ಟ್​ ನೀಡಿದ ತೀರ್ಪು ಒಪ್ಪಿಕೊಂಡು, ಶಾಂತಿ ಕಾಪಾಡಲು ಮುಂದಾಗಿರುವುದರ ಹಿನ್ನೆಲೆಯಲ್ಲಿ ಈ ವರ್ಷ ಕರಾಳ ದಿನಾಚರಣೆಯಾಗಲೀ, ವಿಜಯೋತ್ಸವವಾಗಲೀ ಅಯೋಧ್ಯೆ ಸೇರಿದಂತೆ ದೇಶದ ಯಾವುದೇ ನಗರ-ಗ್ರಾಮಗಳಿಂದ ವರದಿಯಾಗಿಲ್ಲ.

ಸುಪ್ರೀಂಕೋರ್ಟ್​ ತೀರ್ಪಿನ ನಂತರ ಅಯೋಧ್ಯೆ ರಾಮಜನ್ಮಭೂಮಿಯಲ್ಲಿ ಮಂದಿರ ನಿರ್ಮಾಣಕ್ಕೆ ಸ್ವತಃ ಪ್ರಧಾನಿ ನರೇಂದ್ರ ಮೋದಿ ಭೂಮಿಪೂಜೆ ನೆರವೇರಿಸಿದ್ದರು. ಅಯೋಧ್ಯೆಯಲ್ಲಿ ಮಸೀದಿ ನಿರ್ಮಿಸಲು ಮುಸ್ಲಿಮರಿಗೂ ಭೂಮಿ ನೀಡಬೇಕೆಂದು ನ್ಯಾಯಾಲಯ ಆದೇಶಿಸಿತ್ತು.

ಬಾಬರಿ ಮಸೀದಿ ಧ್ವಂಸದ ನಂತರ ಅಯೋಧ್ಯೆಯಲ್ಲಿ ಮುಸ್ಲಿಮರು ಪ್ರತಿ ವರ್ಷ ಡಿಸೆಂಬರ್ 6ರಂದು ಕಪ್ಪು ಬಾವುಟ ಪ್ರದರ್ಶಿಸಿ, ಅಂಗಡಿ-ಮುಂಗಟ್ಟುಗಳನ್ನು ಮುಚ್ಚಿ ಕರಾಳ ದಿನ ಆಚರಿಸುತ್ತಿದ್ದರು. ಸ್ಥಳೀಯ ಮುಖಂಡರಾದ ಹಾಜಿ ಮೆಹಬೂಬ್​ರ ಟೆಡಿ ಬಜಾರ್ ನಿವಾಸದಲ್ಲಿ ಸಭೆ ಸೇರುತ್ತಿದ್ದರು. ನಂತರ ಬಾಬರಿ ಮಸೀದಿಯನ್ನು ಅದು ಇದ್ದ ಸ್ಥಳದಲ್ಲಿಯೇ ಸ್ಥಾಪಿಸಬೇಕೆಂದು ಜಿಲ್ಲಾಧಿಕಾರಿ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಲಾಗುತ್ತಿತ್ತು. ಆದರೆ ಇಂದು ಇಂಥ ಯಾವ ಬೆಳವಣಿಗೆಗಳೂ ಕಂಡು ಬರಲಿಲ್ಲ. ಹಿಂಸಾಚಾರದಲ್ಲಿ ಅಸು ನೀಗಿದವರ ಸ್ಮರಣಾರ್ಥ ಬಜಾರ್ ಮಸೀದಿಯಲ್ಲಿ ಕುರಾನ್ ಪಠಣಕ್ಕೆ ವ್ಯವಸ್ಥೆ ಮಾಡಲಾಗಿತ್ತು.

ಬಾಬರಿ ಮಸೀದಿ ಧ್ವಂಸದ ನೆನಪಿಗೆ ಪ್ರತಿವರ್ಷ ಡಿ.6ರಂದು ವಿಜಯೋತ್ಸವ ಆಚರಿಸುತ್ತಿದ್ದ ಹಿಂದೂಗಳೂ ಈ ಬಾರಿ ಶಾಂತಿ ಕಾಪಾಡಲು ಮುಂದಾದರು. ‘ಈ ವರ್ಷ ವಿಜಯೋತ್ಸವದ ಆಚರಣೆ ಬೇಡ’ ಎಂದು ಶ್ರೀ ರಾಮ ಜನ್ಮಭೂಮಿ ತಿರತ್ ಕ್ಷೇತ್ರ ಟ್ರಸ್ಟ್​ನ ಅಧ್ಯಕ್ಷರಾಗಿರುವ ಮಹಂತ್ ನೃತ್ಯ ಗೋಪಾಲ್ ದಾಸ್​ರ ಉತ್ತರಾಧಿಕಾರಿ ಮಹಂತ್ ಕಮಲ್ ನಯನ್ ದಾಸ್ ಮನವಿ ಮಾಡಿದ್ದರು.

ರಾಮ ಮಂದಿರದ ಪರವಾಗಿ ಸುಪ್ರೀಂಕೋರ್ಟ್​ ತೀರ್ಪು ನೀಡಿದ ಮೇಲೆಯೂ ವಿಜಯೋತ್ಸವ ಆಚರಿಸುವುದರಲ್ಲಿ ಅರ್ಥವಿಲ್ಲ. ರಾಮ ಮಂದಿರ ನಿರ್ಮಾಣದ ಕೆಲಸಗಳು ಈಗಾಗಲೇ ನಡೆಯುತ್ತಿವೆ ಎಂದು ಅಯೋಧ್ಯೆ ಕಾರಸೇವಕಪುರಂನಲ್ಲಿ ಕಾರ್ಯನಿರ್ವಹಿಸುತ್ತಿರುವ ವಿಶ್ವ ಹಿಂದೂ ಪರಿಷತ್ (ವಿಎಚ್​ಪಿ) ಪ್ರಾದೇಶಿಕ ವಕ್ತಾರ ಶರದ್ ಶರ್ಮಾ ಹೇಳಿದ್ದಾರೆ.

ಕಳೆದ ವರ್ಷ ನವೆಂಬರ್ 9ರಂದು ಸುಪ್ರೀಂ ಕೋರ್ಟ್​ನ ಸಂವಿಧಾನ ಪೀಠವು ದಶಕಗಳಷ್ಟು ಹಳೆಯದಾದ ರಾಮ ಮಂದಿರ-ಬಾಬರಿ ಮಸೀದಿ ವಿವಾದಕ್ಕೆ ಸಂಬಂಧಿಸಿದ ತೀರ್ಪು ನೀಡಿತ್ತು.

ಬಹಳ ಹಿಂದೆಯೇ ನಾನು ಕರಾಳದಿನದ ಆಚರಣೆ ನಿಲ್ಲಿಸಿದ್ದೆ. ಈಗ ಸುಪ್ರೀಂಕೋರ್ಟ್ ತೀರ್ಪು ಬಂದಿದೆ. ಯಾವುದೇ ಮುಸ್ಲಿಮರು ಈ ದಿನವನ್ನು ಕರಾಳ ದಿನವನ್ನಾಗಿ ಆಚರಿಸುವುದರಲ್ಲಿ ಅರ್ಥವಿಲ್ಲ ಎಂದು ರಾಮ ಮಂದಿರ- ಬಾಬರಿ ಮಸೀದಿ ವಿವಾದದ ಮೂಲ ದಾವೆ ಹೂಡಿರುವ ದಿವಂಗತ ಹಸೀಮ್ ಅನ್ಸಾರಿ ಪತ್ರ ಇಕ್ಬಾಲ್ ಅನ್ಸಾರಿ ಹೇಳಿದರು.

Published On - 4:41 pm, Sun, 6 December 20