ಚಿಕ್ಕಬಳ್ಳಾಪುರ: ಬೆಂಗಳೂರಿನ ಖಾಸಗಿ ಆಸ್ಪತ್ರೆಯಿಂದ ನಾಪತ್ತೆಯಾಗಿದ್ದ ಕೊರೊನಾ ಸೋಂಕಿತ ವೃದ್ಧೆ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟದಲ್ಲಿ ಪತ್ತೆಯಾಗಿದ್ದಾರೆ. ವೃದ್ಧೆಯ ಮನೆ, ಸುತ್ತಮುತ್ತಲಿನ ಮನೆಗಳನ್ನು ಅಧಿಕಾರಿಗಳು ಸೀಲ್ಡೌನ್ ಮಾಡಿದ್ದಾರೆ. ಅಲ್ಲದೆ, ಸೋಂಕಿತ ವೃದ್ಧೆಯ ಕುಟುಂಬದ ನಾಲ್ವರನ್ನು ಕ್ವಾರಂಟೈನ್ ಮಾಡಲಾಗಿದೆ.
ಸೋಂಕು ದೃಢವಾಗ್ತಿದ್ದಂತೆ ಎಸ್ಕೇಪ್:
ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಕ್ಯಾನ್ಸರ್ ಕಾಯಿಲೆಗೆ ಚಿಕಿತ್ಸೆ ಪಡೆಯುತ್ತಿದ್ರು. ಖಾಸಗಿ ಆಸ್ಪತ್ರೆಯಿಂದ ವಿಕ್ಟೋರಿಯಾಗೆ ವೃದ್ಧೆಯನ್ನು ಕಳುಹಿಸಬೇಕಿತ್ತು. ಸೋಂಕು ದೃಢವಾಗ್ತಿದ್ದಂತೆ ವೃದ್ಧೆಗಾಗಿ ಖಾಸಗಿ ಆಸ್ಪತ್ರೆ ಸಿಬ್ಬಂದಿ ಹುಡುಕಾಟ ನಡೆಸಿದ್ದರು. ಆದ್ರೆ ನಿನ್ನೆ ಹೆಲ್ತ್ ಬುಲೆಟಿನ್ನಲ್ಲಿ ಸೋಂಕು ದೃಢಪಡುತ್ತಿದ್ದಂತೆ ಆಸ್ಪತ್ರೆಯಿಂದ ವೃದ್ಧೆ ಪರಾರಿಯಾಗಿದ್ದಾರೆ.
8209ನೇ ಕೊರೊನಾ ಸೋಂಕಿತ ವೃದ್ಧೆಯನ್ನು ಶಿಡ್ಲಘಟ್ಟದಿಂದ ವಿಕ್ಟೋರಿಯಾ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಬೆಂಗಳೂರಿನ ಖಾಸಗಿ ಆಸ್ಪತ್ರೆಯ ಮಾಹಿತಿ ಮೇರೆಗೆ ಆರೋಗ್ಯ ಇಲಾಖೆ ಸಿಬ್ಬಂದಿ ವೃದ್ಧೆಗಾಗಿ ಹುಡುಕಾಟ ನಡೆಸಿದ್ದರು. ತಾಲೂಕು ಆರೋಗ್ಯಾಧಿಕಾರಿ ವೆಂಕಟೇಶ ಮೂರ್ತಿ ಮತ್ತು ತಂಡ ತಲಾಶ್ ನಡೆಸಿತ್ತು.
ವೃದ್ಧೆ ವಿಕ್ಟೋರಿಯಾ ಆಸ್ಪತ್ರೆಗೆ ಶಿಫ್ಟ್:
ಕೊರೊನಾ ಭೀತಿಯಿಂದ ಬೆಂಗಳೂರು ತೊರೆದು ಸ್ವಂತ ಊರಿಗೆ ಬಂದಿದ್ದಾಗಿ ವೃದ್ಧೆ ಹೇಳಿದ್ದಾರೆ. ಮನೆಯಲ್ಲೇ ಮಾತ್ರೆ ಸೇವಿಸುವುದಾಗಿ ಹೇಳಿ ಮನೆಯಲ್ಲಿ ಉಳಿಯಲು ಯತ್ನಿಸಿದ್ದಾರೆ. ಕೊನೆಗೂ ಹರಸಾಹಸ ಪಟ್ಟು ವೃದ್ಧೆಯನ್ನು ಶಿಡ್ಲಘಟ್ಟದಿಂದ ಆ್ಯಂಬುಲೆನ್ಸ್ ಮೂಲಕ ವಿಕ್ಟೋರಿಯಾ ಆಸ್ಪತ್ರೆಗೆ ಶಿಫ್ಟ್ ಮಾಡಿದ್ದಾರೆ.